ಕರ್ನಾಟಕ

karnataka

ಭೌತಿಕ ತರಗತಿಗಳು ಬೇಕೋ, ಬೇಡ್ವಾ? ಶಿಕ್ಷಣ ಸಚಿವರ ಪ್ರಶ್ನೆಗೆ ವಿದ್ಯಾರ್ಥಿನಿಯರು ಹೇಳಿದ್ದು ಹೀಗೆ..

By

Published : Jan 13, 2022, 5:59 PM IST

ಬೆಂಗಳೂರಿನ ಬಸವನಗುಡಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಹಾಗೂ ಬಾಲಕಿಯರ ಪ್ರೌಢಶಾಲೆಗೆ ಸಚಿವ ಬಿ.ಸಿ. ನಾಗೇಶ್ ದಿಢೀರ್​​ ಭೇಟಿ ನೀಡಿದ್ದಾರೆ. ಧೈರ್ಯವಾಗಿ ವ್ಯಾಕ್ಸಿನ್ ತಗೊತಿದ್ದಿರಲ್ವಾ ಎಂದು ಸಚಿವರು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದಾರೆ.

Education minister who visited schools
ಶಾಲೆಗಳಿಗೆ ಸಡನ್​​ ಭೇಟಿ ಕೊಟ್ಟ ಶಿಕ್ಷಣ ಸಚಿವರು

ಬೆಂಗಳೂರು:ರಾಜ್ಯಾದ್ಯಂತ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾಕರಣ ಜನವರಿ 3 ರಿಂದ ನಡೆಯುತ್ತಿದೆ. ಹೀಗಾಗಿ ಇಂದು ಬೆಂಗಳೂರಿನ ಬಸವನಗುಡಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಹಾಗೂ ಬಾಲಕಿಯರ ಪ್ರೌಢಶಾಲೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಕ್ಕಳು ಮತ್ತು ಸಿಬ್ಬಂದಿ ಜೊತೆ ಮಾತುಕತೆ ನಡೆಸಿ, ಧೈರ್ಯವಾಗಿ ವ್ಯಾಕ್ಸಿನ್ ತಗೊತಿದ್ದಿರಲ್ವಾ ಎಂದು ಕೇಳಿದರು. ಇದೇ ವೇಳೆ ಭೌತಿಕ ತರಗತಿ ಸ್ಥಗಿತಕ್ಕೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲೆಗಳನ್ನು ನಡೆಸೋದಾ ಅಥವಾ ಬೇಡ್ವಾ ಎಂದು ವಿದ್ಯಾರ್ಥಿಗಳನ್ನು ಸಚಿವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿರುವ ವಿದ್ಯಾರ್ಥಿನಿಯರು ಕಾಲೇಜು ಬೇಕು ಸರ್, ನಾವು ಮಾಸ್ಕ್ ಹಾಕಿಕೊಂಡು ಹುಷಾರಾಗಿ ಬರ್ತೀವಿ ಎಂದಿದ್ದಾರೆ.

ಶಾಲೆಗಳಿಗೆ ದಿಢೀರ್​​​ ಭೇಟಿ ಕೊಟ್ಟ ಶಿಕ್ಷಣ ಸಚಿವರು

ಬಳಿಕ ಮಾತನಾಡಿದ ಸಚಿವರು, ಇಂದು ಎರಡು ಕಾರಣದಿಂದಾಗಿ ಪರಿಶೀಲನೆ ನಡೆಸಲು ಬಂದೆ. ವ್ಯಾಕ್ಸಿನೇಷನ್‌ ಹೇಗೆ ನಡೆಯುತ್ತಿದೆ ಹಾಗೂ ಹೆಚ್ಚಿನ ಮಕ್ಕಳು ಇರುವುದರಿಂದ ಕೊರೊನಾ ರೂಲ್ಸ್ ಹೇಗೆ ಫಾಲೋ‌ ಆಗ್ತಿದೆ ಎಂಬುದನ್ನು ನೋಡೋಕೆ ಭೇಟಿ ನೀಡಿದೆ. ಹೈಸ್ಕೂಲ್​​ನಲ್ಲಿ ಹಾಜರಾತಿ ಇಲ್ಲ. ಪಿಯುನಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಇದ್ದಾರೆ. ಎಲ್ಲ ವ್ಯವಸ್ಥೆ ಇದ್ರೂ ವಿಜ್ಞಾನ ವಿಭಾಗಕ್ಕೆ ಯಾಕೆ ಮಕ್ಕಳು ಸರ್ಕಾರಿ ಶಾಲೆಗೆ ಬರ್ತಾ ಇಲ್ಲ? ನಾವು ಪ್ರಚಾರ ಮಾಡೋದ್ರಲ್ಲಿ ಹಿಂದೆ ಇದ್ದೀವಾ ಅಥವಾ ಖಾಸಗಿ ಶಾಲೆಯ ಮಟ್ಟಕ್ಕೆ ನಮ್ಮಲ್ಲಿ ವಾತಾವರಣ ಇಲ್ವಾ ಅನ್ನೋದು ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ವಿಜ್ಞಾನ ವಿಭಾಗಕ್ಕೆ ಓದುವ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಲಾಗುತ್ತೆ. ಈ ಬಗ್ಗೆ ಶಾಲೆಯ ಸಿಬ್ಬಂದಿ ಜೊತೆಗೆ ಮಾತುಕತೆ ನಡೆಸಲಾಗಿದೆ ಎಂದರು.

ಮಕ್ಕಳು ಎಲ್ಲಿ ಇರ್ತಾರೋ ಅಲ್ಲಿ ಉಪನ್ಯಾಸಕರು ಇರಲ್ಲ, ಇದರ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತೆ. ಕೆಲವು ಕಡೆ ಉಪನ್ಯಾಸಕರು ಇರ್ತಾರೆ ಮಕ್ಕಳು ಇರಲ್ಲ. ಖಾಸಗಿ ಶಾಲೆಯ ರೀತಿಯಲ್ಲಿ ನಮ್ಮ ಕಟ್ಟಡಗಳನ್ನು ಅಭಿವೃದ್ಧಿಪಡಿಸಬೇಕು. ಕಟ್ಟಡ ನೋಡಿ, ಶಾಲೆಗೆ ಬರುವ ರೀತಿ ನಮ್ಮಲ್ಲಿ‌ ಇಲ್ಲ. ಹೀಗಾಗಿ ಸ್ವಲ್ಪ ಮಟ್ಟಿಗಿನ ಕಟ್ಟಡ ಅಭಿವೃದ್ಧಿ ಮಾಡೋದು ಇದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಹಬ್ಬದಲ್ಲಿ ಮೈಮರೆಯುವುದು ಬೇಡ, ಕೋವಿಡ್​ ನಿಯಮ ಪಾಲಿಸೋಣ: ಜನತೆಗೆ ಬಿಎಸ್​ವೈ ಕರೆ

ಬೆಂಗಳೂರು, ಬೆಳಗಾವಿ, ಮೈಸೂರಿನಲ್ಲಿ ಕೊರೊನಾ ಕಾರಣಕ್ಕೆ ಕೆಲ ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿಯನ್ನ ಸ್ಥಗಿತ ಮಾಡಲಾಗಿದೆ. ಕೇವಲ ಆನ್ ಲೈನ್ ಪಾಠಕ್ಕೆ ಅವಕಾಶ ನೀಡಲಾಗಿದೆ‌. ಈ ಮಧ್ಯೆಯು 1-9ನೇ ತರಗತಿಯನ್ನ ಖಾಸಗಿ ಶಾಲೆಗಳು ಆರಂಭ ಮಾಡಿವೆ. ಈ ಬಗ್ಗೆ ಮಾಹಿತಿ ಸಿಕ್ಕರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತೆ ಎಂದರು.‌

ಮೇಕೆದಾಟು ಪಾದಯಾತ್ರೆಯಲ್ಲಿ ಮಕ್ಕಳ ಬಳಕೆ:

ಮೇಕೆದಾಟು ಪಾದಯಾತ್ರೆಯಲ್ಲಿ ಮಕ್ಕಳನ್ನ ಬಳಕೆ ಮಾಡ್ತಿರೋ ವಿಚಾರವಾಗಿ ಮಾತನಾಡಿದ ಸಚಿವರು, ಬಿಇಎ, ಡಿಡಿಪಿಐಗೆ ತಕ್ಷಣವೇ ಹೋಗಿ ರೀಪೋರ್ಟ್ ಕೊಡಿ ಅಂತಾ ಹೇಳಿದ್ದೀವಿ. ಇವತ್ತು ಅವ್ರು ಕೊಡಲಿದ್ದು, ಎಲ್ಲ ಮಕ್ಕಳಿಗೂ ಕೊರೊನಾ ಟೆಸ್ಟಿಂಗ್ ಮಾಡಲಾಗುತ್ತೆ. ಅದು ಡಿಕೆ ಶಿವಕುಮಾರ್ ಅವರ ಅಂಡರ್​ನಲ್ಲಿರೋ ಎಡೆಡ್ ಶಾಲೆ, ಅಲ್ಲಿನ ಮುಖ್ಯೋಪಾಧ್ಯಾಯರು ಮಾಡಿರುವ ತಪ್ಪಾಗಿದೆ. ವಿದ್ಯಾರ್ಥಿಗಳನ್ನ ರಾಜಕೀಯವಾಗಿ ಬಳಸಿಕೊಳ್ಳಬಾರದು ಅಂತಾ ಇದೆ, ಆ ತರ ಮಾಡಿದ್ದು ತಪ್ಪು. ಏನಾಗಿದೆ ಅನ್ನೋದನ್ನ ನೋಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದರು.

ABOUT THE AUTHOR

...view details