ಬೆಂಗಳೂರು: ನಮ್ಮ ಅಭಿವೃದ್ಧಿ ಕಾರ್ಯಗಳ ಫಲವಾಗಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರಕ್ಕೆ ಮರಳಿದ್ದು, ರಾಜ್ಯದ ಚುನಾವಣೆಯ ಕಾರ್ಯತಂತ್ರವನ್ನು ನಾವೇ ರೂಪಿಸಬೇಕು. ಸಿಎಂ ಬೊಮ್ಮಾಯಿ ಹಾಗೂ ಕಟೀಲ್ ನೇತೃತ್ವದಲ್ಲಿ ನಾವೇ ಚುನಾವಣೆಗೆ ಯೋಜನೆ ರೂಪಿಸಿ ಇಲ್ಲಿಯೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಪಂಚರಾಜ್ಯ ಚುನಾವಣೆಯಲ್ಲಿ ಉಸ್ತುವಾರಿಗಳಾಗಿ ಜವಾಬ್ದಾರಿ ವಹಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಅವರಿಗೆ ನಿನ್ನೆ (ಭಾನುವಾರ) ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈ ಹಿಂದೆ ಅಧಿಕಾರ ಮಾಡಿದವರು ಜನರಿಗೆ ನೀರು ಕುಡಿಸಿ ಹೋಗಿದ್ದರು. ನಾವು 'ಜಲ ಜೀವನ್ ಮಿಷನ್' ಅಡಿ ನೀರು ಕೊಟ್ಟಿದ್ದೇವೆ. ನಮ್ಮ ಕಾರ್ಯಕರ್ತರು ಏಯ್ ಅಂದ್ರೆ ಕೇಳಲ್ಲ. ಅವರ ಮನವೊಲಿಸಬೇಕು. ಬೇರೆ ಪಕ್ಷದ ತರ ನಮ್ಮ ಪಕ್ಷ ಅಲ್ಲ. ನಮ್ಮ ಕಾರ್ಯಕರ್ತರು ಪೇಯ್ಡ್ ವರ್ಕರ್ಸ್ ಅಲ್ಲ. ನಮ್ಮ ಕಾರ್ಯಕರ್ತರು ಪಕ್ಷದ ಜತೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ. ಪಕ್ಷ ನಿಮ್ಮ ಜೊತೆ ಎನ್ನುವ ಸಂದೇಶ ನೀಡಿ, ಅದರಲ್ಲಿ ಸಫಲರಾಗಿದ್ದೇವೆ ಎಂದರು.
ಪ್ರಧಾನಿಯವರ ತಾಕತ್ತು,ದೂರದೃಷ್ಟಿ:ಉತ್ತರಾಖಂಡ ರಾಜ್ಯವನ್ನು ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ ರಚಿಸಲಾಯಿತು. 2001ರಲ್ಲಿ ರಾಜ್ಯ ರಚನೆಯಾದರೂ, 2002ರಲ್ಲಿ ನಾವು ಸೋತೆವು. ಅಧಿಕಾರ ಬದಲಾವಣೆ ಆಗುತ್ತಿತ್ತು. ಈ ಬಾರಿ ಕಾಂಗ್ರೆಸ್ ಬರಲಿದೆ ಎಂಬ ಭಾವನೆ ಜನರಲ್ಲಿತ್ತು. ಆ ಭಾವನೆಯನ್ನು ಬದಲಾಯಿಸಿದ್ದು, ಮೋದಿಯವರ ತಾಕತ್ತು ಮತ್ತು ದೂರದೃಷ್ಟಿ. ನಾವೂ ಕೆಲಸ ಮಾಡಿದ್ದೇವೆ. ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರ ಮಾರ್ಗದರ್ಶನ ಸಿಕ್ಕಿತು. ಪಕ್ಷದ ಮುಖಂಡರು, ಕಾರ್ಯಕರ್ತರ ಜತೆ ಮಾತುಕತೆ ಮಾಡಿ ವಿಶ್ವಾಸ ಮೂಡಿಸಲಾಗಿದೆ. ಅದರ ಫಲವಾಗಿ ಈ ಫಲಿತಾಂಶ ಲಭಿಸಿದೆ ಎಂದರು.
ಅಭಿವೃದ್ಧಿ ಎಂಬುದು ಅಜೆಂಡಾ:ಮೋದಿ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಎಂಬುದು ಅಜೆಂಡಾ ಆಗಿದೆ. ಅದರ ಪರಿಣಾಮವಾಗಿ ಬಿಜೆಪಿ ಪರ ಫಲಿತಾಂಶ ಬಂದಿದೆ. ಉತ್ತರ ಪ್ರದೇಶದಲ್ಲಿ ಇಲ್ಲಿಯವರೆಗೆ ಯಾವೊಬ್ಬ ಮುಖ್ಯಮಂತ್ರಿ ಕೂಡ ಐದು ವರ್ಷ ಮುಗಿಸಿ ಎರಡನೇ ಬಾರಿ ಸಿಎಂ ಆಗಿಲ್ಲ. ಯೋಗಿಯವರ ನೇತೃತ್ವದಲ್ಲಿ ಪ್ರಧಾನಿಗಳ ನೇತೃತ್ವದಲ್ಲಿ ಎರಡನೇ ಬಾರಿ ಸಿಎಂ ಆಗಿರುವುದು ದಾಖಲೆ. ಇಷ್ಟು ವರ್ಷ ಬೇರೆ ಪಕ್ಷಗಳ ಹೊಂದಾಣಿಕೆ ರಾಜಕೀಯ ನಡೆಯುತ್ತಿತ್ತು. ಈಗ ಅಭಿವೃದ್ಧಿ ರಾಜಕೀಯ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಜನ ಸಾಧನೆ ನೋಡಿ ಜನ ಮತ ನೀಡಿದ್ದಾರೆ ಎಂದರು.
ಪರೋಕ್ಷವಾಗಿ ರಾಜ್ಯದ ಸಚಿವರಿಗೂ ಎಚ್ಚರಿಕೆ:ಉತ್ತರಾಖಂಡ ಬಿಜೆಪಿಯೊಳಗಿನ ಆಂತರಿಕ ವಿಚಾರ ಬಿಚ್ಚಿಟ್ಟ ಜೋಶಿ, ಉತ್ತರಾಖಂಡದಲ್ಲಿ ಬಿಜೆಪಿ ಗೆಲ್ಲೋದೇ ಇಲ್ಲ ಎನ್ನುವ ಮಾತಿತ್ತು. ಐದು ಬಾರಿ ಗೆದ್ದಿದ್ದ ಮತ್ತು ಎಲ್ಲೇ ನಿಂತರೂ ಗೆಲ್ಲುವ ಸಾಮರ್ಥ್ಯ ಇದ್ದ ಒಬ್ಬ ಮಂತ್ರಿಯನ್ನು ರಾತ್ರೋರಾತ್ರಿ ಅಮಾನತು ಮಾಡಿದೆವು. ಅವರು ಮಾಧ್ಯಮಗಳಿಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರು. ಅಲ್ಲದೇ ಅವರು ಕೋರ್ ಕಮಿಟಿ ಸಭೆಯನ್ನು ತಪ್ಪಿಸಿದರು.
ಆ ಮಂತ್ರಿ ತಾವು ಎಲ್ಲಿ ಸ್ಪರ್ಧೆ ಮಾಡಿದರೂ ಗೆಲ್ತೀನಿ ಅನ್ನೋ ಹಮ್ಮಿನಲ್ಲಿದ್ರು. ನನ್ನನ್ನು ನಿರಾಕರಿಸಲು ಆಗಲ್ಲ ಅನ್ನೋ ವಿಶ್ವಾಸದಲ್ಲಿದ್ದರು. ಅವರ ಜತೆ ಕೆಲವರು ಶಾಸಕರು ಟಿಕೆಟ್ ಕೊಡದಿದ್ರೆ ರೆಬೆಲ್ ಆಗಿ ನಿಲ್ತೀವಿ ಅಂತಾ ಹೆದರಿಸಿದ್ದರು. ಆ ಮಂತ್ರಿ ನಡವಳಿಕೆ ಬಗ್ಗೆ ನಾನು ನಡ್ಡಾ ಅವರ ಬಳಿ ಹೇಳಿದೆ. ಒಂದು ದಿನ ಆ ಮಂತ್ರಿಯನ್ನು ಸಂಪುಟದಿಂದ ಕೆಳಗಿಳಿಸಿಯೇ ಬಿಟ್ಟರು. ಮೋದಿ ಸೇರಿ ಎಲ್ರೂ ಈ ನಡೆಗೆ ಶಾಕ್ ಆದರು. ಉತ್ತರಾಖಂಡ ಮಂತ್ರಿಯೊಬ್ಬರನ್ನು ವಜಾ ಮಾಡಿದ ಬಗ್ಗೆ ಹೇಳಿದ ಜೋಶಿ ಆ ಮೂಲಕ ಪರೋಕ್ಷವಾಗಿ ರಾಜ್ಯದ ಸಚಿವರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದರು.
ಅದ್ಭುತ ಬಜೆಟ್:ಕರ್ನಾಟಕದಲ್ಲಿ ಚುನಾವಣೆಗೆ ಇನ್ನೂ ಒಂದು ವರ್ಷ ಸಮಯ ಇದೆ. ಬೊಮ್ಮಾಯಿ ಅದ್ಭುತ ಬಜೆಟ್ ಕೊಟ್ಟಿದ್ದಾರೆ. ಕಂದಾಯ ಇಲಾಖೆಯ ಮನೆ ಬಾಗಿಲಿಗೆ ದಾಖಲೆ ತಲುಪಿಸುವ ಯೋಜನೆ ಅದ್ಭುತವಾಗಿದೆ ಎಂದು ಸಿಎಂ ಬೊಮ್ಮಾಯಿ ಆಡಳಿತವನ್ನು ಹೊಗಳಿದರು.
ಇನ್ನು ರಾಜ್ಯದಲ್ಲಿ ಮುಂಬರಲಿರು ಚುನಾವಣೆಗೆ ಕಾರ್ಯತಂತ್ರ ರೂಪಿಸೋಣ. ಬಜೆಟ್ ಅಂಶಗಳನ್ನು ಜನರ ಬಳಿಗೆ ಕೊಂಡೊಯ್ಯಿರಿ. ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ಏನೆಲ್ಲ ಕೆಲಸ ಆಗಿದೆ ಅದನ್ನು ಜನರಿಗೆ ತಲುಪಿಸಬೇಕು. ಇಲ್ಲಿಯೂ ನಾವು ಗೆದ್ದು ತೋರಿಸೋಣ ಎಂದು ಬೊಮ್ಮಾಯಿ ಹಾಗೂ ಕಟೀಲ್ ಅವರಿಗೆ ಜೋಶಿ ಸಲಹೆ ನೀಡಿದರು.
ಸಿಎಂಗೆ ತಮಾಶೆಯಾಗಿ ಕಾಲೆಳೆದ ಜೋಶಿ:ಭಾಷಣದ ವೇಳೆ ಕೇಂದ್ರ ಸಚಿವ ಜೋಶಿ, ಸಿಎಂ ಈಗ ಸಿನಿಮಾಗೆ ಹೋಗಬೇಕು. ಹಾಗಾಗಿ ಈ ಕಾರ್ಯಕ್ರಮ ಪಟ ಪಟ ಅಂತಾ ಹೋಗುತ್ತಿದೆ ಎಂದರು. ಇದಕ್ಕೆ ಪ್ರತಿಯಾಗಿ ನಾನು ಪಕ್ಷದ ಸೂಚನೆ ಮೇರೆಗೆ ಸಿನಿಮಾಗೆ ಹೋಗುತ್ತಿರುವುದು ಎಂದು ಸಿಎಂ ತಿರುಗುತ್ತರ ನೀಡಿದರು. ತಕ್ಷಣವೇ ಮಾತು ಮುಂದುವರೆಸಿದ ಜೋಶಿ, ನೀವು ಇತ್ತೀಚೆಗೆ ಪಕ್ಷದ ಸೂಚನೆಗಳನ್ನು ಹೆಚ್ಚು ಹೆಚ್ಚು ಪಾಲಿಸ್ತಿದೀರ ಅದಕ್ಕಾಗಿ ಅಭಿನಂದನೆ ಎಂದರು.