ಕರ್ನಾಟಕ

karnataka

ಪೆಪ್ಪರ್ ಸ್ಪ್ರೆ ಇಟ್ಟುಕೊಳ್ಳುವುದು ತಪ್ಪಾ ? ಅನುಚಿತ ವರ್ತನೆ ತೋರಿದ ಪೊಲೀಸರ ವಿರುದ್ಧ ಟ್ವೀಟ್ ಮಾಡಿ ಅಸಮಾಧಾನ..

By

Published : Jan 11, 2023, 8:06 PM IST

ಕಾರಿನಲ್ಲಿ ಪೆಪ್ಪರ್ ಸ್ಪ್ರೆ ಸಿಕ್ಕಿದ್ದಕ್ಕೆ ಆಡುಗೋಡಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಟ್ವೀಟ್. ಡಿಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ,ಡಿಸಿಪಿ ಸಿ.ಕೆ.ಬಾಬಾ ಅವರ ಟ್ವೀಟರ್ ಅಕೌಂಟ್ ಗೆ ಟ್ಯಾಗ್ ಮಾಡಿ ಅಸಮಾಧಾನ

karnataka police
ಕರ್ನಾಟಕ ಪೊಲೀಸ್

ಬೆಂಗಳೂರು: ಕಾರಿನಲ್ಲಿ ಪೆಪ್ಪರ್ ಸ್ಪ್ರೆ ಸಿಕ್ಕಿದ್ದಕ್ಕೆ ಅನುಚಿತವಾಗಿ ವರ್ತಿಸಿದ ಆಡುಗೋಡಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.ಈ ಟ್ವೀಟ್ ಆಧರಿಸಿ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ನಗರ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು ಮಡಿವಾಳ ವಿಭಾಗದ ಎಸಿಪಿಗೆ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ನಿರ್ದೇಶನ ಮಾಡಿದ್ದಾರೆ.

ಜನವರಿ 8ರಂದು ಕೋರಮಂಗಲ ನೆಕ್ಸಸ್ ಮಾಲ್ ಬಳಿ ಸ್ನೇಹಿತರಿಗಾಗಿ ಕಾಯುವಾಗ ಪೊಲೀಸ್ ಕಾನ್ಸ್​​ಟೇಬಲ್ ಬಂದು ಭದ್ರತಾ ತಪಾಸಣೆಗಾಗಿ ಕಾರನ್ನು ಪರಿಶೀಲಿಸಬೇಕಿದೆ ಎಂದು ಹೇಳಿ ತಪಾಸಣೆ ನಡೆಸಿದ್ದರು. ಅವಾಗ್ಗೆ ನನ್ನ ಕಾರಿನಲ್ಲಿದ್ದ ಪೆಪ್ಪರ್ ಸ್ಪ್ರೆ ಕಂಡು ಪ್ರಶ್ನಿಸಿದ್ದಾರೆ. ಸುರಕ್ಷತೆಗಾಗಿ ಪೆಪ್ಪರ್ ಸ್ಪ್ರೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದಕ್ಕೆ ನನ್ನ ಮೇಲೆ ಪೊಲೀಸರು ಕಿಡಿಕಾರಿದ್ದರು.

ಪೆಪ್ಪರ್​ ಸ್ಟ್ರೇ ಇಡೋದು ಸರಿಯಲ್ಲ - ಅಸಮಾಧಾನ:ಪೆಪ್ಪರ್ ಸ್ಪ್ರೇ ಇಡುವುದು ಸರಿಯಲ್ಲ ಎಂದು ಸಿಬ್ಬಂದಿ ಹೇಳಿದ್ದು ನಂತರ ಇಬ್ಬರ ನಡುವೆ ಮಾತಿನ ಚಕಮಕಿ‌ ನಡೆದಿದೆ.‌ ಈ ವೇಳೆ, ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ಳುವಾಗ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯನ್ನು ಕರೆದು ನನ್ನನ್ನ ಆಡುಗೋಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ಬಲವಂತವಾಗಿ ಸೆರೆ ಹಿಡಿದಿದ್ದ ವಿಡಿಯೊ ಡಿಲೀಟ್ ಮಾಡಿ ಬಿಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಿ ಡಿಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಡಿಸಿಪಿ ಸಿ.ಕೆ.ಬಾಬಾ ಅವರ ಟ್ವೀಟರ್ ಅಕೌಂಟ್​​ಗೆ ಟ್ಯಾಗ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಪಷ್ಟನೆ ನೀಡಿರುವ ಆಗ್ನೇಯ ವಿಭಾಗದ ಪೊಲೀಸರು:ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಗ್ನೇಯ ವಿಭಾಗದ ಪೊಲೀಸರು ಜನವರಿ 8ರಂದು ರಾತ್ರಿ ದೂರು ನೀಡಿರುವ ವ್ಯಕ್ತಿ ಅನುಮಾನಸ್ಪಾದವಾಗಿ ಕಂಡಿದ್ದರ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಆತನನ್ನು ವಿಚಾರಣೆ ನಡೆಸಿದ್ದು, ಈ ಬಗ್ಗೆ ಮಡಿವಾಳ ವಿಭಾಗದ ಎಸಿಪಿ ಅವರು ತನಿಖೆ ನಡೆಸುತ್ತಿದ್ದು ವರದಿ ಬಂದ ಬಳಿಕ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕೇಂದ್ರ ಸರ್ಕಾರದ ಅಧೀನದ ನಕಲಿ‌ ನಂಬರ್ ಫಲಕ ಬಳಕೆ ಪ್ರಕರಣ: ಅಂತಾರಾಷ್ಟ್ರೀಯ ಮಾನವ ಹಕ್ಕು ಮತ್ತು ಅಪರಾಧ ನಿಯಂತ್ರಣ ಆಯೋಗದ ಉಪಾಧ್ಯಕ್ಷ ಎಂದು ಕಾರಿಗೆ ನಂಬರ್ ಫಲಕ ಅಳವಡಿಸಿಕೊಂಡು ಸಂಚರಿಸುತ್ತಿದ್ದ ಜಾಫರ್ ಇಕ್ಬಾಲ್​ನ ವಿರುದ್ಧ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎ 05 ಎಂಎಕ್ಸ್ 0384 ನಂಬರಿನ ಹ್ಯೂಂಡೈ ಕ್ರೆಟಾ ಕಾರಿನ ಎರಡೂ ಕಡೆಗಳಲ್ಲಿ 'ಕೇಂದ್ರ ಸರ್ಕಾರದ ಅಧೀನದ ಅಂತಾರಾಷ್ಟ್ರೀಯ ಮಾನವ ಹಕ್ಕು ಮತ್ತು ಅಪರಾಧ ನಿಯಂತ್ರಣ ಆಯೋಗದ ಉಪಾಧ್ಯಕ್ಷ' ಎಂದು ಫಲಕ ಹಾಕಿಕೊಂಡು ಸಂಚರಿಸುತ್ತಿದ್ದ ಆರೋಪಿಯನ್ನ ಪತ್ತೆ ಹಚ್ಚುವಂತೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಜಯನಗರ ಸಂಚಾರಿ ಠಾಣಾ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

ಜನವರಿ 9ರಂದು 7:30ರಂದು ಎಚ್ಎಸ್ಆರ್ ಲೇಔಟಿನ ಮ್ಯಾನ್ಷನ್ ಅಪಾರ್ಟ್ಮೆಂಟಿನ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಲಾಗಿತ್ತು. ಈ ವೇಳೆ ಕಾರನ್ನ ವಶಕ್ಕೆ ಪಡೆದು ಮಾಲೀಕನನ್ನ ಪ್ರಶ್ನಿಸಿದಾಗ ಪೊಲೀಸರಿಗೆ ಅಸಮರ್ಪಕ ಉತ್ತರ ನೀಡಿದ್ದಾರೆ. ಹೀಗಾಗಿ ಅನುಮಾನಗೊಂಡ ಎಚ್ಎಸ್ಆರ್ ಲೇಔಟ್ ಕಾನೂನು ಸುವ್ಯವಸ್ಥೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಪಶ್ಚಿಮ ವಿಭಾಗದ ಸಂಚಾರಿ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಇದನ್ನೂಓದಿ:ಮೂವರು ಒಡಹುಟ್ಟಿದವರ ಅನುಮಾನಾಸ್ಪದ ಸಾವು.. ಸಾಲದ ಸಮಸ್ಯೆಯಿಂದ ಆತ್ಮಹತ್ಯೆ ಶಂಕೆ

ABOUT THE AUTHOR

...view details