ಕರ್ನಾಟಕ

karnataka

ಗೊರಗುಂಟೆ ಪಾಳ್ಯ-ಅಂಚೆಪಾಳ್ಯ ಮೇಲ್ಸೇತುವೆ ದುರಸ್ತಿ: ಜ.14ರವರೆಗೆ ಸಂಚಾರ ಸ್ಥಗಿತ

By

Published : Jan 7, 2022, 7:02 PM IST

ತುಮಕೂರು ರಾಷ್ಟ್ರೀಯ ಹೆದ್ದಾರಿ ಗೊರಗುಂಟೆ ಪಾಳ್ಯದಿಂದ ಅಂಚೆಪಾಳ್ಯದವರೆಗೆ ನಿರ್ಮಾಣವಾಗಿರುವ ಮೇಲ್ಸೇತುವೆಯಲ್ಲಿ ದೋಷ ಕಂಡುಬಂದಿದ್ದು, ಮತ್ತೆ ಜ.14ರವರೆಗೆ ಬಂದ್​ ಆಗಿರಲಿದೆ.

Tumkur National Highway bundh
ತುಮಕೂರು ರಾಷ್ಟ್ರೀಯ ಹೆದ್ದಾರಿ ಜ.14ರ ವರೆಗೆ ಬಂದ್​​

ಬೆಂಗಳೂರು:ತುಮಕೂರು ರಾಷ್ಟ್ರೀಯ ಹೆದ್ದಾರಿ ಗೊರಗುಂಟೆ ಪಾಳ್ಯದಿಂದ ಅಂಚೆಪಾಳ್ಯದವರೆಗೆ ನಿರ್ಮಾಣವಾಗಿರುವ ಮೇಲ್ಸೇತುವೆಯಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯಕ್ಕಾಗಿ ಮಾಡಲಾಗಿದ್ದ ಸಂಚಾರ ಸ್ಥಗಿತ ನಿರ್ಧಾರವನ್ನು ಜನವರಿ 14ರವರೆಗೆ ಮುಂದುವರಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲು ಡಿಸೆಂಬರ್ 25 ರಿಂದ ಡಿ. 31 ರವರೆಗೆ ಒಂದು ವಾರ ಮಾತ್ರ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್​ ಮಾಡಲಾಗಿತ್ತು. ಹೊಸ ವರ್ಷ ಆರಂಭವಾಗಿ ವಾರ ಕಳೆಯುತ್ತಾ ಬಂದರೂ ಫ್ಲೈ ಓವರ್ ಸಾರ್ವಜನಿಕರ ಬಳಕೆಗೆ ಮುಕ್ತವಾಗುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಇದೇ ಸಂದರ್ಭದಲ್ಲಿ ಜನವರಿ 14 ರವರೆಗೆ ಫ್ಲೈ ಓವರ್ ಬಂದ್ ಮುಂದುವರೆಯಲಿದೆ ಎಂದು ಪೀಣ್ಯ ಸಂಚಾರಿ ಪೊಲೀಸರು ಸಹ ಮಾಹಿತಿ ನೀಡಿದ್ದಾರೆ.

ತುಮಕೂರು ರಾಷ್ಟ್ರೀಯ ಹೆದ್ದಾರಿ ಜ.14ರ ವರೆಗೆ ಬಂದ್​​

ಶುಕ್ರವಾರದಿಂದ ವೀಕೆಂಡ್ ಕರ್ಫ್ಯೂ ಆರಂಭವಾಗಲಿದ್ದು, ಸಾಕಷ್ಟು ಸಂಚಾರ ದಟ್ಟಣೆ ಕಂಡು ಬರುತ್ತಿದೆ. ಹತ್ತು ನಿಮಿಷದ ಹಾದಿಗೆ ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯದ ಸುಮಾರು 20 ಜಿಲ್ಲೆಗಳಿಗೆ ರಾಜಧಾನಿಯಿಂದ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ದುರಸ್ಥಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಇದನ್ನೂ ಓದಿ: Weekend Curfew : ಇಂದು ರಾತ್ರಿಯಿಂದ ವಾರಾಂತ್ಯದ ಕರ್ಫ್ಯೂ.. ರಾಜ್ಯಾದ್ಯಂತ ಏನಿರುತ್ತೆ, ಏನಿರಲ್ಲ?

116 ಪಿಲ್ಲರ್​ಗಳ ಮೇಲ್ಸೇತುವೆ:

ಕಳೆದ 10 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಮೇಲ್ಸೇತುವೆ 116 ಪಿಲ್ಲರ್​ಗಳ ಮೇಲೆ ನಿಂತಿದ್ದು, 101 ಮತ್ತು 102 ನೇಯ ಪಿಲ್ಲರ್​ಗಳ ನಡುವಿನ ಸ್ಲಾಬ್​ಗಳ ನಡುವೆ ದೋಷ ಕಂಡು ಬಂದಿತ್ತು. ಅದಕ್ಕಾಗಿ ಫ್ಲೈ ಓವರ್​ನಲ್ಲಿ 16 ರೋಪ್ ಗಳನ್ನು ಹಾಕಲಾಗಿದೆ. 15 ರೋಪ್​ಗಳು ಸುಭದ್ರವಾಗಿವೆ. ಆದ್ರೆ ಒಂದರಲ್ಲಿ ಮಾತ್ರ ತೊಂದರೆ ಕಂಡು ಬಂದಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

15 ದಿನಗಳಾದರೂ ದುರಸ್ಥಿ ಕೆಲಸ ಮುಗಿದಿಲ್ಲ:

15 ದಿನ ಕಳೆದರೂ ಒಂದೇ ಒಂದು ರೋಪ್​ನಲ್ಲಿ ಆದ ದೋಷವನ್ನು ಸರಿಪಡಿಸಲು ಆಗಿಲ್ಲ ಎನ್ನುವುದು ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದೀಗ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದುರಸ್ಥಿಯನ್ನು ಮಾಡಲು ಜನವರಿ 14 ರವರೆಗೆ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಸಂಚಾರ ಸ್ಥಗಿತದಿಂದ ಸಾರ್ವಜನಿಕರು ಹೈರಾಣಾಗಿದ್ದು, ಪ್ರಯಾಣಿಕರ ಪರದಾಟ ಮುಂದುವರೆದಿದೆ.

ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಲು ಹಿಂದೇಟು:

ಫ್ಲೈ ಓವರ್ ಬದಲಿಗೆ ನೈಸ್ ರಸ್ತೆಯ ಮೂಲಕ ಮಾಗಡಿ ರಸ್ತೆಯನ್ನು ಬಳಸಲು ಈಗಾಗಲೇ ತಿಳಿಸಲಾಗಿದೆ. ಆದರೆ ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಿ ಪ್ರಯಾಣಿಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸರ್ವಿಸ್ ರಸ್ತೆಯನ್ನು ಅವಲಂಬಿಸಿದ್ದಾರೆ. ಸಂಚಾರ ದಟ್ಟಣೆ ಮಿತಿ ಮೀರಿದ್ದು, ವಾಹನ ಸವಾರರ ಅಳಲು ಕೇಳುವ ಹಾಗಿಲ್ಲ ಎನ್ನುವಂತಾಗಿದೆ. ಆ್ಯಂಬುಲೆನ್ಸ್ ಗಳು ಸಹ ರಸ್ತೆಯಲ್ಲಿ ಸಿಲುಕಿ ರೋಗಿಗಳು ಜೀವನ್ಮರಣ ಹೋರಾಟ ನಡೆಸುವಂತಾಗಿದೆ.

ABOUT THE AUTHOR

...view details