ಕರ್ನಾಟಕ

karnataka

ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್ ಹ್ಯಾರಿಸ್ ಅಬ್ಬರಕ್ಕೆ ಗಬ್ಬೆದ್ದ ಟ್ರಿನಿಟಿ ವೃತ್ತ

By

Published : Mar 2, 2022, 8:29 PM IST

ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆ ಶಾಂತಿನಗರ ವಿಧಾನಸಭೆ ಕ್ಷೇತ್ರವನ್ನು ತಲುಪಿದಾಗ, ನಾಯಕರನ್ನು ಮೆಚ್ಚಿಸಲು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ನಡೆಸಿದ ಪ್ರಯತ್ನ ಟ್ರಿನಿಟಿ ವೃತ್ತದಲ್ಲಿ ಸಾಕಷ್ಟು ಅಧ್ವಾನವನ್ನು ಸಹ ಉಂಟು ಮಾಡಿತು.

ಗಬ್ಬೆದ್ದ ಟ್ರಿನಿಟಿ ವೃತ್ತ
ಗಬ್ಬೆದ್ದ ಟ್ರಿನಿಟಿ ವೃತ್ತ

ಬೆಂಗಳೂರು:ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಕಳೆದ 9 ದಿನಗಳಿಂದ ನಡೆಸುತ್ತಿರುವ ಪಾದಯಾತ್ರೆ ಬಹುತೇಕ ಅಂತಿಮ ರೂಪ ಪಡೆದುಕೊಳ್ಳುತ್ತಿದೆ. ನಾಳೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಇಂದು ಬಿಟಿಎಂ ಲೇಔಟ್​ನಿಂದ ಹೊರಟು ಅರಮನೆ ಮೈದಾನಕ್ಕೆ ತೆರಳುವ ಮಾರ್ಗದಲ್ಲಿ ಶಾಂತಿನಗರ ವಿಧಾನಸಭೆ ಕ್ಷೇತ್ರವನ್ನು ತಲುಪಿದಾಗ, ನಾಯಕರನ್ನು ಮೆಚ್ಚಿಸಲು ನಡೆಸಿದ ಪ್ರಯತ್ನ ಸಾಕಷ್ಟು ಅಧ್ವಾನವನ್ನು ಸಹ ಉಂಟು ಮಾಡಿತು.


ಪಾದಯಾತ್ರೆ ಸಾಗಿದ ಸ್ಥಳಗಳಲ್ಲಿ ಬಹುತೇಕ ಸಂಚಾರ ದಟ್ಟಣೆ ಸಾಮಾನ್ಯವಾಗಿತ್ತು. ಆದರೆ ಶಾಂತಿನಗರ ವ್ಯಾಪ್ತಿಯಲ್ಲಿ ಸಾಗಿದ ಸಂದರ್ಭ ಇದು ಕೊಂಚ ಹೆಚ್ಚಾಗಿಯೇ ಗೋಚರಿಸಿತು. ಕಿರಿದಾದ ರಸ್ತೆಗಳು ಹಾಗೂ ಕಾಂಗ್ರೆಸ್ ನಾಯಕರ ವಾಹನಗಳು ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಅಭಿಮಾನಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರನ್ನು ಅಭಿನಂದಿಸಲು ವಿಶೇಷ ವೇದಿಕೆ ಸಿದ್ಧಪಡಿಸಿಕೊಂಡು ನಿಂತಿದ್ದರಿಂದ ಇನ್ನಷ್ಟು ತೊಡಕು ಎದುರಾಯಿತು.

ಟ್ರಿನಿಟಿ ವೃತ್ತ

ಮಾರ್ಗದುದ್ದಕ್ಕೂ ಅಭಿಮಾನಿಗಳು ಹಾರ-ತುರಾಯಿ ಹಿಡಿದು, ರಾಜ್ಯ ನಾಯಕರನ್ನು ಅಭಿನಂದಿಸಲು ಮುಂದಾಗಿದ್ದರಿಂದ ಸಾಕಷ್ಟು ಸಂಚಾರ ದಟ್ಟಣೆ ಹಾಗೂ ಹಲವು ಗೊಂದಲಗಳಿಗೆ ಕಾರಣವಾಯಿತು. ಶಾಂತಿನಗರ ವಿಧಾನಸಭಾ ಕ್ಷೇತ್ರ ಪ್ರವೇಶ ಮಾಡುವಾಗ ಅದ್ಧೂರಿಯಾಗಿ ಬರಮಾಡಿಕೊಳ್ಳುವ ಪ್ರಯತ್ನ ಮಹಮದ್ ನಲಪಾಡ್ ಹಾಗೂ ಸ್ಥಳೀಯ ಶಾಸಕ ಎನ್.ಎ. ಹ್ಯಾರಿಸ್ ಮೂಲಕ ಆಯಿತು. ಅಂತಿಮವಾಗಿ ಟ್ರಿನಿಟಿ ವೃತ್ತದಲ್ಲಿ ಪಾದಯಾತ್ರೆಯನ್ನು ಶಾಂತಿನಗರ ಕ್ಷೇತ್ರದಿಂದ ಬೀಳ್ಕೊಡುವ ಸಂದರ್ಭದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನೂ ಓದಿ:ಧಮ್​ ಇದ್ದರೆ ಮೇಕೆದಾಟು ಯೋಜನೆಗೆ ಏಕೆ ಅನುಮೋದನೆ ಕೊಟ್ಟಿಲ್ಲವೆಂದು ಹೇಳಿ: ಸಿ ಟಿ ರವಿಗೆ ಧ್ರುವನಾರಾಯಣ ಸವಾಲು

ಮೇಕೆದಾಟು ಯೋಜನೆ ಜಾರಿ ಆಶಯಕ್ಕಿಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ರನ್ನ ಮೆಚ್ಚಿಸಲು ವಿಶೇಷ ಪ್ರಯತ್ನ ನಡೆಸಿದ್ದು ಗಮನಕ್ಕೆ ಬಂತು. ತಮ್ಮ ಕ್ಷೇತ್ರವ್ಯಾಪ್ತಿಯುದ್ಧಕ್ಕೂ ಡಿಕೆ ಶಿವಕುಮಾರ್​​ರನ್ನ ಮೆಚ್ಚಿಸಲು ವಿಶೇಷ ಕಾಳಜಿ ವಹಿಸಿದ ಮಹಮದ್ ನಲಪಾಡ್ ಹಾಗೂ ಶಾಸಕರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಡೆ ಗಮನ ಹರಿಸಲಿಲ್ಲ.

ಕ್ಷೇತ್ರವ್ಯಾಪ್ತಿಯಲ್ಲಿ ಅಳವಡಿಸಿದ ಬ್ಯಾನರ್ ಹಾಗೂ ಫ್ಲೆಕ್ಸ್​​ಗಳಲ್ಲಿಯೂ ಸಿದ್ದರಾಮಯ್ಯ ಭಾವಚಿತ್ರವನ್ನು ಕಡೆಗಣಿಸಲಾಗಿತ್ತು. ತಮ್ಮ ನೆಚ್ಚಿನ ನಾಯಕನ ಓಲೈಸಲು ನಡೆಸಿದ ಪ್ರಯತ್ನ ಇಡೀ ಕ್ಷೇತ್ರವನ್ನು ಕಸದರಾಶಿಯನ್ನಾಗಿ ಪರಿವರ್ತಿಸುವಂತೆ ಮಾಡಿತ್ತು.

ಅಂತಿಮವಾಗಿ ಟ್ರಿನಿಟಿ ವೃತ್ತದಲ್ಲಿ ಅಪಾರ ಪ್ರಮಾಣದಲ್ಲಿ ಕಾಗದದ ತುಣಕುಗಳ ಕಸದರಾಶಿ ಹಾಕಿ ಸ್ಥಳವನ್ನು ಕೆಡಿಸುವ ಜೊತೆಗೆ, ಎನ್ಎಸ್ಯುಐ ಕಾರ್ಯಕರ್ತರಿಂದ ವಿಶೇಷ ಕಾರ್ಯಕ್ರಮವನ್ನು ದಿಢೀರ್ ಆಯೋಜಿಸುವ ಮೂಲಕ ಇನ್ನಷ್ಟು ಸಂಚಾರದಟ್ಟಣೆ ಮಾಡಿದರು. ಕಾಂಗ್ರೆಸ್ ಕಾರ್ಯಕರ್ತರು ಕುಡಿದು ಎಸೆದ ಖಾಲಿ ಬಾಟಲಿಗಳು ಹಾಗೂ ಕಸದ ತುಣಕುಗಳು ವೃತ್ತದ ಅರ್ಧ ಕಿಲೋಮೀಟರ್ ವ್ಯಾಪ್ತಿಯವರೆಗೂ ಹರಡಿದ್ದು ಕಂಡುಬಂತು.


ಇದಲ್ಲದೆ ಕಾಂಗ್ರೆಸ್ ರಾಜ್ಯ ನಾಯಕರು ಪಾದಯಾತ್ರೆಯಲ್ಲಿ ಸಹ ಒಟ್ಟಾಗಿ ಸಾಗದೆ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶವನ್ನು ನೀಡುತ್ತಿದ್ದಾರೆ. ಇಂದು ಸಹ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಲ್ಲಿಯೂ ಪಾದಯಾತ್ರೆಯಲ್ಲಿ ಒಟ್ಟಾಗಿ ಗೋಚರಿಸಲಿಲ್ಲ.

ABOUT THE AUTHOR

...view details