ಬೆಂಗಳೂರು : ನಗರದಲ್ಲಿ ಜಾರಿಯಾಗಿರುವ ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೆ ತರಲು ಹಾಗೂ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಜೊತೆ ಜಂಟಿ ಸಭೆ ನಡೆಸಿ ಚರ್ಚೆ ನಡೆಸಿದರು.
ಬಿಬಿಎಂಪಿ ಆಯುಕ್ತರೊಂದಿಗೆ ಜಂಟಿ ಸಭೆ ನಡೆಸಿದ ಪೊಲೀಸ್ ಕಮಿಷನರ್ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮ ಹಾಗೂ ತಯಾರಿಗಳ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಿದರು. ಸಭೆ ಮುಗಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶದ ಅನ್ವಯ ಸಮನ್ವಯತೆ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿದ್ದೇನೆ. ಸಭೆಯಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.
ಬಿಬಿಎಂಪಿ ಆಯುಕ್ತರೊಂದಿಗೆ ಜಂಟಿ ಸಭೆ ನಡೆಸಿದ ಪೊಲೀಸ್ ಕಮಿಷನರ್ ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಶೇ.50ರಷ್ಟು ಮಾತ್ರ ಅವಕಾಶ ಕಲ್ಪಿಸಲಾಗುವುದು. ಇದಕ್ಕೆ ಪೊಲೀಸರ ನೆರವು ಪಡೆಯಲಾಗುವುದು. ಮಹಾಮಾರಿ ತೊಲಗಿಸಲು ಎಲ್ಲರೂ ಕಡ್ಡಾಯ ವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು. ಎಲ್ಲಿಯೂ ಬಹಿರಂಗವಾಗಿ ಸಂಭ್ರಮಾಚರಣೆ ಮಾಡುವಂತಿಲ್ಲ. ಹಾಸ್ಟೆಲ್, ಕಾಲೇಜ್, ವಸತಿ ಗೃಹಗಳಿಗೂ ಮಾರ್ಗ ಸೂಚಿ ಕಳುಹಿಸಲಾಗಿದೆ. ಈ ಹಿನ್ನೆಲೆ ಪೊಲೀಸರ ಸಹಕಾರ ಬೇಕಾಗಿದ್ದು, ಅವರ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಡಿ.31ರಂದು ಪರಿಣಾಮಕಾರಿಯಾಗಿ ಕರ್ಫ್ಯೂ ಜಾರಿ :
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ನಿನ್ನೆ ಮೊದಲ ದಿವಸ ನೈಟ್ ಕರ್ಫ್ಯೂ ನಗರದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದವು. ಬಿಬಿಎಂಪಿ ಜೊತೆ ಜಂಟಿಯಾಗಿ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ. ಡಿ. 31 ರಂದು ಇನ್ನೂ ಪರಿಣಾಮಕಾರಿಯಾಗಿ ಜಾರಿ ಮಾಡುತ್ತೇವೆ. ಅಗತ್ಯಕ್ಕೆ ಅನುಗುಣವಾಗಿ ಕೆಲ ಫ್ಲೈಓವರ್ ಬಂದ್ ಮಾಡಲಾಗುವುದು. ವಾಹನ ಸವಾರರಿಗೆ ತೊಂದರೆ ಆಗದ ರೀತಿಯಲ್ಲಿ ಫ್ಲೈಓವರ್ ಬಂದ್ ಮಾಡಲು ಸೂಚನೆ ನೀಡಲಾಗಿದೆ ಎಂದರು.