ಕರ್ನಾಟಕ

karnataka

ಪ್ರತಿಷ್ಠೆಯಾಗಿರುವ ಉಪ ಚುನಾವಣೆ ಗೆಲುವಿಗೆ ಮೂರೂ ಪಕ್ಷಗಳ ನಾಯಕರಿಂದ ಶತಾಯಗತಾಯ ಹೋರಾಟ!

By

Published : Oct 21, 2020, 7:00 AM IST

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಾಂತರಿಗಳ ನೆರವಿನಿಂದ ಕಳೆದ ವರ್ಷ ಅಧಿಕಾರದ ಗದ್ದುಗೆಗೆ ಏರಿದ್ದ ಬಿಜೆಪಿಗೆ ಈ ಉಪ ಚುನಾವಣೆಯಿಂದ ಕಳೆದುಕೊಳ್ಳುವುದೇನೂ ಇಲ್ಲ. ಆದರೂ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಠಕ್ಕರ್ ಕೊಡುತ್ತಿದ್ದರೆ, ಶಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹಣಾಹಣಿಯಲ್ಲಿ ತನ್ನ ಅದೃಷ್ಟದ ಪರೀಕ್ಷೆಗೆ ಬಿಜೆಪಿ ಮುಂದಾಗಿದೆ.

The fight of Karnataka party leaders in by election
ಮೂರು ಪಕ್ಷಗಳ ನಾಯಕರಿಗೆ ಪ್ರತಿಷ್ಠೆಯಾಗಿರುವ ಉಪಚುನಾವಣೆ ಗೆಲುವಿಗೆ ಶತಾಯಗತಾಯ ಹೋರಾಟ!

ಬೆಂಗಳೂರು:ಮುಂಬರುವ ಎರಡು ವಿಧಾನಸಭೆ ಉಪ ಚುನಾವಣೆ ಹಾಗೂ ವಿಧಾನ ಪರಿಷತ್​​​​ನ ನಾಲ್ಕು ಕ್ಷೇತ್ರಗಳ ಚುನಾವಣೆ ಮೂರೂ ಪಕ್ಷಗಳ ನಾಯಕರಿಗೆ ಪ್ರತಿಷ್ಠೆ ಮತ್ತು ದೊಡ್ಡ ಸವಾಲಾಗಿವೆ. ರಾಜ್ಯದ ಮುಂದಿನ ರಾಜಕೀಯ ದಿಕ್ಸೂಚಿಯನ್ನು ಈ ಚುನಾವಣೆಗಳು ಬದಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮೈತ್ರಿ ಸರ್ಕಾರ ಪತನವಾದ ನಂತರ ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯುತ್ತಿರುವುದನ್ನು ಗಮನಿಸಿದರೆ ಉಪ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಕಾಡುತ್ತಿರಬಹುದು. ಇದಕ್ಕೆ ಕಾರಣ ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಹಲವಾರು ಜೆಡಿಎಸ್ ಮುಖಂಡರು ಬಿಜೆಪಿ ಹಾಗೂ ಕಾಂಗ್ರೆಸ್​​ಗೆ ಸೇರ್ಪಡೆಯಾಗಿರುವುದು. ಜೆಡಿಎಸ್​​​ಗೆ ವಿಪಕ್ಷಗಳ ಈ ಬೆಳವಣಿಗೆನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲೇಬೇಕಾಗಿದೆ ಎಂಬ ಕಾರಣಕ್ಕೆ ಜೆಡಿಎಸ್ ವರಿಷ್ಠರು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ.

ಜೆಡಿಎಸ್​​ಗೆ ಈ ಉಪ ಚುನಾವಣೆ ಅಗ್ನಿ ಪರೀಕ್ಷೆ ಜೊತೆಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟವೂ ಆಗಿದೆ. ತಮ್ಮದೇ ಆಗಿದ್ದ ಶಿರಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಜೆಡಿಎಸ್, ರಾಜರಾಜೇಶ್ವರಿ ನಗರದಲ್ಲೂ ದೊಡ್ಡ ಸವಾಲನ್ನೇ ಎದುರಿಸುತ್ತಿದೆ. ಕ್ಷೇತ್ರ ಗೆಲ್ಲುವುದಕ್ಕಿಂತ ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿರುವ ಆಪರೇಷನ್ ತಡೆಯುವುದೇ ಜೆಡಿಎಸ್‍ಗೆ ದೊಡ್ಡ ಸವಾಲಾಗಿದೆ. ನಾಯಕರು ಹೋದರೂ ಕಾರ್ಯಕರ್ತರು ನಮ್ಮ ಬಳಿ ಇದ್ದಾರೆ. ಯಾರು ಬೇಕಾದರೂ ಹೋಗಲೆಂದು ಕುಮಾರಸ್ವಾಮಿ ಹೇಳಿದ್ದರಾದರೂ ವಾಸ್ತವ ಪರಿಸ್ಥಿತಿಯಲ್ಲಿ ಪಕ್ಷದ ನಾಯಕರನ್ನು ಉಳಿಸಿಕೊಳ್ಳಲು ಅವರೂ ಪ್ರಯತ್ನ ನಡೆಸಿದ್ದಾರೆ. ಇನ್ನು ಶಿರಾದಲ್ಲಿ ಬಿ.ಸತ್ಯನಾರಾಯಣ ಅವರ ಪತ್ನಿಗೆ ಟಿಕೆಟ್ ನೀಡಿದ್ದರೂ ಅನುಕಂಪದ ಮತಗಳ ಮೇಲೆ ಅವಲಂಬಿತರಾಗಿರುವುದರಿಂದ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಮುಖ್ಯ ಕಾರಣ ಸರತಿ ಸಾಲಿನಲ್ಲಿ ಸ್ಥಳೀಯ ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿಗೆ ಪಕ್ಷಾಂತರ ಮಾಡುತ್ತಿದ್ದಾರೆ. ಇನ್ನೂ ಕೆಲ ಮುಖಂಡರು ಪಕ್ಷಾಂತರ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಇನ್ನು ಮುಖಂಡರ ವಲಸೆಯಿಂದ ಗೊಂದಲಕ್ಕೆ ಸಿಲುಕಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮುಂದಿನ ಚುನಾವಣೆಗೆ ಪಕ್ಷವನ್ನು ಉಳಿಸಿಕೊಳ್ಳುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಇನ್ನು ರಾಜರಾಜೇಶ್ವರಿ ನಗರದ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ಟಿಕೆಟ್ ಹಂಚಿಕೆ ನಂತರ ಸ್ವತಃ ಕ್ಷೇತ್ರದ ಜೆಡಿಎಸ್ ಘಟಕಾಧ್ಯಕ್ಷರೇ ಪಕ್ಷ ತೊರೆದು ಕಾಂಗ್ರೆಸ್ ಸಖ್ಯ ಬೆಳೆಸಿದ್ದಾರೆ. ಜೊತೆಗೆ ತಮ್ಮ ಬೆಂಬಲಿಗರನ್ನೂ ಗುಳೆ ಎಬ್ಬಿಸಿದ್ದಾರೆ. ಅತ್ತ ಬಿಜೆಪಿ ಕಡೆಗೂ ವಾಲದೇ ಇತ್ತ ಕಾಂಗ್ರೆಸ್ ಸಹವಾಸಕ್ಕೂ ಹೋಗದೇ ಸ್ವತಂತ್ರವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಈಗ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇನ್ನು ಸಿಎಂ ಗದ್ದುಗೆಗೆ ಏರಿದ ದಿನದಿಂದಲೂ ಅಧಿಕಾರ ಅಸ್ಥಿರತೆಯ ಭೀತಿ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೆದ್ದು ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವ ಅನಿವಾರ್ಯತೆಯೂ ಇದೆ.

ಇನ್ನು ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹೀಗಾಗಿ ಅವರಿಗೆ ಚುನಾವಣೆ ಗೆದ್ದು ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾದ ಸವಾಲು ಎದುರಾಗಿದೆ.

ಈ ಉಪ ಚುನಾವಣೆ ಕೇವಲ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ ಮಾತ್ರವಾಗಿಲ್ಲ. ಜೊತೆಗೆ ರಾಜ್ಯದ ಎರಡು ಸಮುದಾಯದ ಮೂವರು ನಾಯಕರ ರಾಜಕೀಯ ಭವಿಷ್ಯ ನಿರ್ಧರಿಸುವ ಫಲಿತಾಂಶ ಕೂಡ ಆಗಿದೆ. ಇಲ್ಲಿ ಯಾರೇ ಗೆದ್ದರೂ ಅಥವಾ ಸೋತರೂ ಮುಂದಿನ ದಿನಗಳಲ್ಲಿ ರಾಜಕೀಯ ಏರಿಳಿತಗಳು ಉಂಟಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೂ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ತಮ್ಮದೇ ಸರ್ಕಾರ, ತಮ್ಮ ತಂದೆಯೇ ಸಿಎಂ ಆಗಿರುವಾಗ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಹೈಕಮಾಂಡ್​​ನಿಂದ ಶಹಬ್ಬಾಶ್​​ಗಿರಿ ಪಡೆದುಕೊಳ್ಳಬೇಕೆಂಬ ಉತ್ಸಾಹದಲ್ಲಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಾಂತರಿಗಳ ನೆರವಿನಿಂದ ಕಳೆದ ವರ್ಷ ಅಧಿಕಾರದ ಗದ್ದುಗೆಗೆ ಏರಿದ್ದ ಬಿಜೆಪಿಗೆ ಈ ಉಪ ಚುನಾವಣೆಯಿಂದ ಕಳೆದುಕೊಳ್ಳುವುದೇನೂ ಇಲ್ಲ. ಆದರೂ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಠಕ್ಕರ್ ಕೊಡುತ್ತಿದ್ದರೆ, ಶಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹಣಾಹಣಿಯಲ್ಲಿ ತನ್ನ ಅದೃಷ್ಟದ ಪರೀಕ್ಷೆಗೆ ಬಿಜೆಪಿ ಮುಂದಾಗಿದೆ.

ABOUT THE AUTHOR

...view details