ಕರ್ನಾಟಕ

karnataka

ಚಿರತೆ ಹಾವಳಿ ತಡೆಗೆ ಇಂದೇ ಕಾರ್ಯಪಡೆ ರಚನೆ: ಸಿಎಂ ಬೊಮ್ಮಾಯಿ

By

Published : Jan 26, 2023, 3:27 PM IST

ಮೈಸೂರು ಭಾಗದಲ್ಲಿ ಚಿರತೆ ಹಾವಳಿ - ಚಿರತೆ ಸೆರೆಗೆ ಕಾರ್ಯಪಡೆ ರಚಿಸುವುದಾಗಿ ಸಿಎಂ ಭರವಸೆ - ಮೈಸೂರಿನಲ್ಲಿ ಬಾಲಕನ ದಾಳಿ ಮಾಡಿದ್ದ ಚಿರತೆ ಸೆರೆ

task-force-for-prevent-leopard-attack-says-cm-basavaraj-bommai
ಚಿರತೆ ಹಾವಳಿ ತಡೆಗೆ ಇಂದೇ ಕಾರ್ಯಪಡೆ ರಚನೆ: ಸಿಎಂ ಬೊಮ್ಮಾಯಿ

ಬೆಂಗಳೂರು : ಮೈಸೂರಿನಲ್ಲಿ ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಿರತೆ ಹಾವಳಿ ನಿಯಂತ್ರಣಕ್ಕೆ ರಾಜ್ಯದಲ್ಲಿ ಚಿರತೆ ಕಾರ್ಯಪಡೆ ರಚಿಸಿ ಇಂದೇ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ. ಮೈಸೂರಿನ ಭಾಗದ ಸಾರ್ವಜನಿಕರಿಗೆ ಭೀತಿಯನ್ನುಂಟು ಮಾಡಿದ್ದ, ನರಭಕ್ಷಕ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿದು, ಸಾರ್ವಜನಿಕರ ನೆಮ್ಮದಿಗೆ ಕಾರಣರಾದ ಅರಣ್ಯ ಅಧಿಕಾರಿಗಳ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಚಿರತೆ ಸೆರೆಗೆ ಕಾರ್ಯಪಡೆ :ರಾಜ್ಯದಲ್ಲಿ ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಚಿರತೆ ಕಾರ್ಯಪಡೆಯನ್ನು ರಚಿಸಲಾಗುವುದು. ಈ ಬಗ್ಗೆ ಇಂದೇ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ಮೈಸೂರಿನಲ್ಲಿ ಚಿರತೆ ದಾಳಿ ಪ್ರಕರಣ : ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಚಿರತೆ ದಾಳಿ ಪ್ರಕರಣಗಳ ಕುರಿತಂತೆ ಅರಣ್ಯ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದೊಂದಿಗೆ ಮಂಗಳವಾರವಷ್ಟೇ ಸಭೆ ನಡೆಸಿ ಚರ್ಚಿಸಿ, ಚಿರತೆ ಟಾಸ್ಕ್ ಫೋರ್ಸ್ ರಚಿಸಲು ಸೂಚಿಸಿದ್ದರು. ತಿ. ನರಸೀಪುರ ತಾಲೂಕಿನಲ್ಲಿ ಸಂಭವಿಸಿದ ಚಿರತೆ ದಾಳಿ ಪ್ರಕರಣಗಳ ಕುರಿತು ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಈ ಕೂಡಲೇ ಚಿರತೆ ಸೆರೆ ಹಿಡಿಯಲು ಎಲ್ಲ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಪ್ರಕರಣ ಸಂಭವಿಸಿದ 3-4 ಕಿ.ಮೀ. ಸುತ್ತಳತೆಯಲ್ಲಿ ಕೋಂಬಿಂಗ್ ಕಾರ್ಯಾಚರಣೆ ನಡೆಸಲು ಸೂಚಿಸಿದ್ದರು.

ಇನ್ನು ಚಿರತೆ ದಾಳಿಯಿಂದಾಗಿ ತಿ. ನರಸೀಪುರ ತಾಲೂಕಿನ 21 ಹಳ್ಳಿಗಳು ಬಾಧಿತವಾಗಿದೆ. ಈ ಹಳ್ಳಿಗಳಲ್ಲಿ ಚಿರತೆ ಸೆರೆ ಹಿಡಿಯಲು ಸ್ಥಳೀಯರ ನೆರವು ಪಡೆಯುವಂತೆ ಸೂಚಿಸಿದ್ದರು. ಅಗತ್ಯವಿದ್ದಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ ನೆರವು ಪಡೆಯಲು ಸಿಎಂ ಬೊಮ್ಮಾಯಿ ಸಭೆಯಲ್ಲಿ ಸೂಚಿಸಿದ್ದರು. ಅದಾದ ಎರಡು ದಿನಗಳ ಒಳಗೆ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಫಲರಾಗಿದ್ದಾರೆ.

ಬಾಲಕನನ್ನು ಬಲಿ ಪಡೆದಿದ್ದ ಚಿರತೆ ಸೆರೆ :ಜನವರಿ 21ರಂದು ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ 11 ವರ್ಷದ ಬಾಲಕ ಜಯಂತ್ ಮನೆಯಿಂದ​ ಬಹಿರ್ದೆಸೆಗೆ ಎಂದು ಹೊರಗೆ ಬಂದಿದ್ದ. ಈ ವೇಳೆ, ಚಿರತೆ ದಾಳಿ ಮಾಡಿ ಬಾಲಕನನ್ನು ಕೊಂದು ಹಾಕಿತ್ತು. ಈ ವಿಷಯ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಬಾಲಕನಿಗಾಗಿ ಇಡೀ ರಾತ್ರಿ ಶೋಧ ಕಾರ್ಯ ನಡೆಸಿದ್ದರು. ಆದರೆ, ಬಾಲಕ ಮೃತದೇಹ ಪತ್ತೆಯಾಗಿರಲಿಲ್ಲ. ಈ ಘಟನೆ ಹಿನ್ನೆಲೆ ಶಾಸಕರು, ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ಬಳಿಕ ಮರುದಿನ ಬಾಲಕನ ಶವ ಪತ್ತೆಯಾಗಿತ್ತು.

ಬಾಲಕನನ್ನು ಬಲಿ ಪಡೆದಿದ್ದ ಚಿರತೆಯನ್ನು ಸೆರೆಹಿಡಿಯಲಾಗಿದೆ. ಗ್ರಾಮ ಹೊರವಲಯದಲ್ಲಿ ಇಂದು ಮುಂಜಾನೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಈ ಸಂದರ್ಭ ಚಿರತೆಯನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ಅಲ್ಲದೇ ಬಾಲಕನ ಕೊಂದು ಹಾಕಿದ ಚಿರತೆಯನ್ನು ಕೊಲ್ಲುವಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಸದ್ಯ ಸೆರೆ ಸಿಕ್ಕ ಚಿರತೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಮೈಸೂರು: ಬಾಲಕನ ಬಲಿ ಪಡೆದ ಚಿರತೆ ಬೋನಿನಲ್ಲಿ ಸೆರೆ

ABOUT THE AUTHOR

...view details