ಕರ್ನಾಟಕ

karnataka

ಹೊಸ ಸರ್ಕಾರ ರಚನೆ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ : ಮುರುಗೇಶ್ ನಿರಾಣಿ

By

Published : May 12, 2023, 4:45 PM IST

2023 ರ ಎಕ್ಸಿಟ್ ಪೋಲ್ ಸಮೀಕ್ಷೆಗಳು ಸತ್ಯಕ್ಕೆ ದೂರವಾದವುಗಳು ಎಂದು ಕೈಗಾರಿಕಾ ಸಚಿವ ಮುರುಗೇಶ್​ ನಿರಾಣಿ ಅವರು ತಿಳಿಸಿದ್ದಾರೆ.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು :ಶನಿವಾರದ ಫಲಿತಾಂಶದ ನಂತರ ಹೊಸ ಸರ್ಕಾರ ರಚನೆ ಸಂಬಂಧ ಪಕ್ಷದ ಹೈಕಮಾಂಡ್ ನಾಯಕರ ಜೊತೆ ಕುಳಿತು ಮಾತುಕತೆ ನಡೆಸಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಇಂದು ಪಕ್ಷದ ಹಿರಿಯ ನಾಯಕ ಬಿಎಸ್​ ಯಡಿಯೂರಪ್ಪ ನಿವಾಸಕ್ಕೆ ಅನೌಪಚಾರಿಕ ಸಭೆ ನಡೆಸಿದ್ದೇವೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಬಿಎಸ್​ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಬಂದಿವೆ. ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸೂಚನೆ ನೀಡಿದ್ದು, ಕೆಲವು ಕಾಂಗ್ರೆಸ್ ಮತ್ತೆ ಕೆಲವು ಬಿಜೆಪಿ ಸರ್ಕಾರದ ಸೂಚನೆ ನೀಡಿವೆ. ಆದರೆ ಈ ಹಿಂದಿನ ಸಮೀಕ್ಷೆಗಳೆಲ್ಲಾ ಸುಳ್ಳಾಗಿವೆ. 2018ರಲ್ಲಿಯೂ ಬಿಜೆಪಿಗೆ 100 ಸ್ಥಾನ ಯಾವ ಸಮೀಕ್ಷಾ ವರದಿಗಳೂ ನೀಡಿರಲಿಲ್ಲ. ಆದರೆ ನಾವು 104 ಬಂದಿದ್ದೆವು. ಹಾಗಾಗಿ 2023ರ ಎಕ್ಸಿಟ್ ಪೋಲ್ ಸಮೀಕ್ಷೆಗಳು ಸತ್ಯಕ್ಕೆ ದೂರವಾದವು ಎಂದರು.

13ನೇ ತಾರೀಖಿನ ನಂತರ‌ ಹೊಸ ಸರ್ಕಾರ ರಚನೆ: ಬೂತ್, ಕ್ಷೇತ್ರವಾರು ಮಾಹಿತಿಯಂತೆ ನಾವು ಕನಿಷ್ಟ 108 ಸೀಟ್ ಗೆಲ್ಲುತ್ತೇವೆ. 30 ಕಡೆ 50/50 ಇದೆ. ಹಾಗಾಗಿ ನಮಗೆ 120 ಸೀಟ್ ಗೆಲ್ಲುವ ವಿಶ್ವಾಸ ಇದೆ. 13ನೇ ತಾರೀಖಿನ ನಂತರ‌ ಹೊಸ ಸರ್ಕಾರ ರಚನೆ ಮಾಡುತ್ತೇವೆ. ಹಿರಿಯರ ಜೊತೆ ಕುಳಿತು ಮುಂದಿನ‌ ನಡೆ ಬಗ್ಗೆ ಮಾತನಾಡುತ್ತೇವೆ. ವರಿಷ್ಠರ ಜೊತೆ ಮಾತನಾಡುವ ಮೊದಲು ಪೂರ್ವಭಾವಿಯಾಗಿ ಇಂದು ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.

ಗೆಲ್ಲುವ ಕ್ಷೇತ್ರಗಳ ಪಟ್ಟಿ ಕೊಡಲಿ: ಕಾಂಗ್ರೆಸ್ ಪಕ್ಷದವರು ಇಂದು 140 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಆದರೆ ಗೆಲ್ಲುವ ಕ್ಷೇತ್ರಗಳ ಪಟ್ಟಿ ಕೊಡಲಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಮುರುಗೇಶ್ ನಿರಾಣಿ ಪರೋಕ್ಷವಾಗಿ ತಿರುಗೇಟು ನೀಡಿದರು.

ನಾವು ಮ್ಯಾಜಿಕ್ ನಂಬರ್ ತಲುಪುತ್ತೇವೆ: ನಮಗೆ ಸಂಪೂರ್ಣ ಬಹುಮತ ಸಿಗಲಿದೆ. ನಾವು ಮ್ಯಾಜಿಕ್ ನಂಬರ್ ತಲುಪುತ್ತೇವೆ. ಯಾವುದೇ ಕಾರಣಕ್ಕೂ ಮೈತ್ರಿ ಸಂದರ್ಭ ನಿರ್ಮಾಣವಾಗಲ್ಲ. ಈ ಬಗ್ಗೆ ನಾನೇ ಹೈಕಮಾಂಡ್ ನಾಯಕರಿಗೆ ಫೋನ್ ಮಾಡಿ ಇಲ್ಲಿನ ವಸ್ತುಸ್ಥಿತಿಯ ಬಗ್ಗೆ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಆರ್. ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಕ್ಸಿಟ್ ಪೋಲ್​ನಲ್ಲಿ ಏನೇ ಸಮೀಕ್ಷೆ ಬಂದಿರಲಿ. ಆದರೆ ನಮಗೆ ಗೆಲ್ಲುವ ವಿಶ್ವಾಸ ಇದೆ. ನಾವು ಬಹುಮತದ ಗಡಿ ದಾಟುತ್ತೇವೆ. ನಾನೇ ವರಿಷ್ಠರಿಗೆ ಕರೆ ಮಾಡಿ ಇಲ್ಲಿನ ವಸ್ತುಸ್ಥಿತಿ ತಿಳಿಸಿದ್ದೇನೆ ಎಂದ ಅವರು, ಹೈಕಮಾಂಡ್ ನಾಯಕರು ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದಾರೆ ಎಂದು ತಿಳಿಸಿದರು.

ನಾನು ಮೊದಲಿಂದಲೂ ಒಂದೇ ಮಾತನ್ನು ಹೇಳುತ್ತಾ ಬಂದಿದ್ದೇನೆ. ನಮಗೆ ಸ್ಪಷ್ಟ ಬಹುಮತ ಬರುತ್ತದೆ. ಎಲ್ಲ ಕ್ಷೇತ್ರ, ಬೂತ್​ಗಳಿಂದ ಗ್ರೌಂಡ್ ಮಾಹಿತಿ ತರಿಸಿದ್ದೇವೆ. ನಮಗೆ ವಿಶ್ವಾಸ ಇದೆ. ಮ್ಯಾಜಿಕ್ ನಂಬರ್ ಮುಟ್ಟುತ್ತೇವೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್​ ಪಕ್ಷದವರಿಗೆ ಬಹುಮತ ಬರಲ್ಲ. ಹಾಗಾಗಿ ಬೇರೆ ಪಕ್ಷದವರ ಜೊತೆ ಮಾತಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ನಮ್ಮದೇ ಸರ್ಕಾರ ರಚನೆ, ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಿದ್ದೇನೆ: ಸಿಎಂ ಬೊಮ್ಮಾಯಿ

ABOUT THE AUTHOR

...view details