ಕರ್ನಾಟಕ

karnataka

ದೇವರು ಭೂಮಿಗೆ ಕಳುಹಿಸಿದ್ದ ದೇವರ ಮಗ ಅಂಬರೀಶ್​: ಅಂಬಿ ನೆನೆದು ಕಣ್ಣೀರು ಹಾಕಿದ ಸುಮಲತಾ

By

Published : Mar 27, 2023, 9:17 PM IST

Updated : Mar 27, 2023, 10:34 PM IST

ಅಂಬರೀಶ್ ಅವರ ಹೆಸರಿನಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲ. ಅದನ್ನೇ ನಾನು ಉಳಿಸಿಕೊಂಡು ಹೋಗಬೇಕಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಹೇಳಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್​
ಸಂಸದೆ ಸುಮಲತಾ ಅಂಬರೀಶ್​

ಸಂಸದೆ ಸುಮಲತಾ ಅಂಬರೀಶ್​

ಬೆಂಗಳೂರು :ದೇವರು ಮೆಚ್ಚಿ ಭೂಮಿಗೆ ಕಳುಹಿಸಿದ್ದ ದೇವರ ಮಗ ಅಂಬರೀಶ್​. ಎಂದಿಗೂ ಅವರದ್ದು ಕೊಟ್ಟ ಕೈ ಹೊರತು ಪಡೆದ ಕೈ ಅಲ್ಲ. ಅವರಿಗೆ ತೆಗೆದುಕೊಳ್ಳುವುದರಲ್ಲಿ ಇಷ್ಟವಿರಲಿಲ್ಲ. ಅವರು ಇದ್ದಾಗ ಅಷ್ಟೇ ಪ್ರೀತಿಸಿದ್ದೀರಿ. ಅವರ ಕೊನೆಯ ಪ್ರಯಾಣದಲ್ಲಿ ಅಷ್ಟೇ ಪ್ರೀತಿಯಿಂದ ಕಳುಹಿಸಿಕೊಟ್ಟಿರಿ ಎಂದು ಭಾವುಕರಾದ ಸುಮಲತಾ, ಅಂಬರೀಶ್​​ಗೆ ನೀಡಿದ ಪ್ರೀತಿಯ ಋಣ ತೀರಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ರಾಜಕೀಯದಲ್ಲಿ ನನಗೆ ಮತ್ತಿನ್ನೇನು ಬೇಕಿಲ್ಲ. ಒಳ್ಳೆಯ ಹೆಸರನ್ನು ಗಳಿಸಿ ಉಳಿಸಿಕೊಂಡು ಹೋದರೆ ಸಾಕು ಎಂದು ಅಂಬರೀಶ್​ ಪತ್ನಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ತಿಳಿಸಿದ್ದಾರೆ.

ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್​ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬರೀಶ್​ ಈ ವರ್ಷಕ್ಕೆ ಚಿತ್ರರಂಗದಲ್ಲಿ 50 ವರ್ಷ ತುಂಬುವ ವರ್ಷ. ಆ ನಿಟ್ಟಿನಲ್ಲಿ ನೋಡಿದಲ್ಲಿ ಇಂದು ಮಹತ್ವದ ದಿನ. ಚಿತ್ರರಂಗ, ಅಭಿಮಾನಿಗಳಿಗೆ ಮಹತ್ವದ ದಿನ. ಎಲ್ಲರೂ ಈ ದಿನ ಯಾವಾಗ ಬರಲಿದೆ ಎಂದು ಕಾಯುತ್ತಿದ್ದೆವು. ಕೆಲವರು ಸ್ಮಾರಕ ವಿಳಂಬಕ್ಕೆ ಬೇಸರದಿಂದ ಮಾತನಾಡಿದ್ದರು. ಆದರೂ ನಾನು ಅವರನ್ನು ಸಮಾಧಾನಪಡಿಸುತ್ತಿದ್ದೇನೆ. ಕರ್ನಾಟಕ ಸರ್ಕಾರದ ಸಹಕಾರ, ಅನುದಾನದ ಅಡಿಯಲ್ಲಿ ಸುಂದರ ಸ್ಮಾರಕ ಇಂದು ಆಗಿದೆ ಎಂದು ಹೇಳಿದರು.

ಚಿತ್ರರಂಗ, ಅಭಿಮಾನಿಗಳು, ಸ್ನೇಹಿತರ ಮನವಿಗೆ ಸ್ಪಂದಿಸಿ ಎರಡು ನಿಮಿಷವೂ ಕಾಲ ಪಡೆಯದೆ ಮಾಜಿ ಸಿಎಂ ಯಡಿಯೂರಪ್ಪ ಸ್ಮಾರಕಕ್ಕೆ ಮಂಜೂರಾತಿ ನೀಡಿದ್ದರು. ಅವರಿಗೆ ಧನ್ಯವಾದ ಸಲ್ಲಿಸಲಿದ್ದೇನೆ. ಸಚಿವ ಸಂಪುಟದಲ್ಲಿ ಈ ಪ್ರಸ್ತಾವನೆ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಚಿಸದೆ 12 ಕೋಟಿ ರೂಪಾಯಿಯನ್ನು ಸ್ಮಾರಕಕ್ಕೆ ಅನುದಾನವಾಗಿ ಮಂಜೂರಾತಿ ಕೊಟ್ಟು ಸ್ಮಾರಕ ಉದ್ಘಾಟನೆ ಮಾಡುತ್ತಿದ್ದಾರೆ. ಇದು ಕರ್ನಾಟಕಕ್ಕೆ ಸಂಭ್ರಮವಾಗಿದೆ ಎಂದು ಸುಮಲತಾ ತಿಳಿಸಿದರು.

ಸ್ಮಾರಕ ನಿರ್ಮಾಣಕ್ಕಾಗಿ ಎಷ್ಟೋ ಸವಾಲುಗಳನ್ನು ನಾವು ಎದುರಿಸಬೇಕಾಯಿತು. ಎರಡು ವರ್ಷ ಕೋವಿಡ್ ಬಂದಿದ್ದರಿಂದ ಕೆಲಸ ವಿಳಂಬವಾಯಿತು. ಸಚಿವ ಗೋಪಾಲಯ್ಯ ನಮ್ಮ ಜೊತೆ ನಿಂತು ಸ್ಮಾರಕ ನಿರ್ಮಾಣದ ಉಸ್ತುವಾರಿ ನೋಡಿಕೊಂಡರು. ಅಂಬರೀಶ್​ ಅವರ ಜರ್ನಿ ಬಗ್ಗೆ ಮಾತನಾಡುವುದಾದರೆ ಅಂಬಿ ತಮ್ಮ ಜೀವನದಲ್ಲಿ ತನಗಾಗಿ ಏನೂ ಬೇಕು ಎಂದು ಎಂದೂ ಆಸೆ ಪಟ್ಟಿಲ್ಲ ಎಂದರು.

ರಾಜಕಾರಣಿಯಾಗಿ-ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ: ಚಿತ್ರರಂಗ, ರಾಜಕಾರಣಿಯಾಗಿ ಮೂರು ಬಾರಿ ಸಂಸದ, ಶಾಸಕ, ಎರಡು ಬಾರಿ ಸಚಿವರಾಗಿದ್ದರು. ಯಾವಾಗಲೂ ಅವರು ನಾನು ದೊಡ್ಡಮಂತ್ರಿ ಎಂದು ಯೋಚನೆ ಮಾಡಲೇ ಇಲ್ಲ. ಯಾರನ್ನೂ ಸಣ್ಣ ವಿಷಯಕ್ಕೂ ಕೈ ಚಾಚಿ ಪಡೆದಿಲ್ಲ. ಎಂದಿಗೂ ಅವರದ್ದು ಕೊಟ್ಟ ಕೈ. ಅವರಿಗೆ ತೆಗೆದುಕೊಳ್ಳುವುದರಲ್ಲಿ ಇಷ್ಟವಿರಲಿಲ್ಲ. ಕೊಟ್ಟಾಗ ಖುಷಿಯಾಗುತ್ತಿತ್ತು. ಕೇಂದ್ರ ಸಚಿವರಾಗಿ ಅವರು ಬೆಂಗಳೂರಿಗೆ ಬಂದಾಗ ಕೆಂಪುದೀಪದ ಕಾರನ್ನು ಮನೆಗೆ ಕಳುಹಿಸಿದ್ದರು. ಕೂಡಲೇ ಅವರ ಪಿಎ ಕರೆಸಿ ಆ ಲೈಟ್ ಅನ್ನು ತೆಗೆಸಿದರು. ಅವರು ಒಂದು ದಿನವನ್ನೂ ಕೆಂಪು ದೀಪ ಬಳಸಲಿಲ್ಲ. ನನಗೆ ಬೇಕಿರುವುದು ಅಧಿಕಾರವಲ್ಲ ಜನರ ಪ್ರೀತಿ, ಜನರ ಪ್ರೀತಿಗಾಗಿ ಮಾತ್ರ ಎಂದು ಅವರ ಆಸೆ ಪಟ್ಟರು. ಅವರು ರಾಜಕಾರಣಿಯಾಗಿ, ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ.

ಮಂಡ್ಯಕ್ಕೆ ಹೋದರೆ ಅಲ್ಲಿ ಅಂಬರೀಶ್​ ಏನು ಮಾಡಿದ್ದಾರೆ ಎನ್ನುವುದು ಗೊತ್ತಾಗಲಿದೆ. ಅವರು ಹೆಸರಿಗಾಗಿ ಏನನ್ನೂ ಮಾಡಲಿಲ್ಲ. ಕಡೆಯ ದಿನದವರೆಗೂ ಪ್ರೀತಿಯಿಂದ ಜನ ನೋಡಿಕೊಳ್ಳುತ್ತಿದ್ದರು. ಅದನ್ನೇ ಅವರು ನಂಬಿದ್ದರು. ಅವರು ಇದ್ದಾಗ ಅಷ್ಟೇ ಪ್ರೀತಿಸಿದ್ದಿರಿ. ಅವರ ಕೊನೆಯ ಪ್ರಯಾಣದಲ್ಲಿ ಅಷ್ಟೇ ಪ್ರೀತಿಯಿಂದ ಕಳುಹಿಸಿಕೊಟ್ಟಿರಿ ಎಂದು ಭಾವುಕರಾದರು. ಅಂಬಿ ನೆನೆದು ಕಣ್ಣೀರು ಹಾಕಿದ ಸುಮಲತಾ, ಅಂಬಿ ಬಗ್ಗೆ ಮಾತನಾಡುವಾಗ ಅವರ ಕಣ್ಣಾಲಿಗಳು ಒದ್ದೆಯಾದವು. ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಳ್ಳುತ್ತಾ ಮಾತು ಮುಂದುವರೆಸಿದರು.

ದೇವರ ಮಗ ಅಂಬರೀಶ್​ ಎಂದು ನಾನು ನಂಬಿದ್ದೇನೆ: ಚಿತ್ರರಂಗದಲ್ಲಿ ಖಳ ನಾಯಕ, ನಾಯಕನಾಗಿ ಅವರು ಬೆಳೆದು ಬಂದರು. ಅದು ಚಿತ್ರರಂಗದವರಿಗೆ ಚನ್ನಾಗಿ ಗೊತ್ತಿದೆ. ಮಾಧ್ಯಮದವರ ಜೊತೆಯಲ್ಲಿಯೂ ಅತ್ಯುತ್ತಮ ಒಡನಾಟ ಹೊಂದಿದ್ದರು. ದೇವರು ಮೆಚ್ಚಿ ಭೂಮಿಗೆ ಕಳುಹಿಸಿದ್ದ ದೇವರ ಮಗ ಅಂಬರೀಶ್​ ಎಂದು ನಾನು ನಂಬಿದ್ದೇನೆ. ದೇವರ ಮಗನ ಜೊತೆ 27 ವರ್ಷ ಧರ್ಮಪತ್ನಿಯಾಗಿ ಜೀವನ ಸಾಗಿಸುವ ಪುಣ್ಯ ಸಿಕ್ಕಿತ್ತು. ಅದೇ ಪ್ರೀತಿ ಈಗ ನನಗೆ ಸಂಸದ ಸ್ಥಾನವನ್ನು ಆಶೀರ್ವಾದದ ರೂಪದಲ್ಲಿ ಕೊಟ್ಟಿದ್ದೀರಿ. ಅಂಬರೀಶ್​ಗೆ ನೀಡಿದ ಪ್ರೀತಿಯ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಅಂಬಿ ಜೀವನವೇ ಸಂದೇಶ ಎಂದು ತಿಳಿದಿದ್ದೇನೆ: ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಆಗಮಿಸುವ ಅಪೇಕ್ಷೆ ಇತ್ತು. ಹಗಲು ಸಮಯ ಈ ಕಾರ್ಯಕ್ರಮ ಮಾಡಿದ್ದರೆ ಸಾವಿರಾರು ಜನ ಬರುತ್ತಿದ್ದರು. ಅವರೆಲ್ಲರಿಗೂ ಕ್ಷಮೆ ಯಾಚಿಸುತ್ತೇನೆ. ಆದರೆ ಹಗಲು ವೇಳೆ ಬಂದು ನೋಡಿ. ಮುಂದೆ ಮ್ಯೂಸಿಯಂ ಬರಲಿದೆ. ಅಂಬರೀಶ್​ ಸಿನಿಮಾ ನೆನಪು ಇಲ್ಲಿ ಬರಲಿದೆ. ಅಂಬಿಗೆ ಸೇರಿದ ವಿಷಯಗಳನ್ನು ಮ್ಯೂಸಿಯಂನಲ್ಲಿ ಇರಿಸಲಾಗುತ್ತದೆ. ಅಂಬಿ ಜೀವನವೇ ಸಂದೇಶ ಎಂದು ತಿಳಿದಿದ್ದೇನೆ. ಬಂದವರು ಅಂಬಿ ರೀತಿ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ಮನಸ್ಸು ಇಲ್ಲಿಗೆ ಬಂದರೆ ಬರಲಿದೆ ಎಂದರು. ಇದೇ ವೇಳೆ ಸಿಎಂ ಹಾಗೂ ಸಚಿವ ಸಂಪುಟಕ್ಕೆ ಸಂಸದೆ ಸುಮಲತಾ ಧನ್ಯವಾದ ತಿಳಿಸಿದರು.

ಇದನ್ನೂ ಓದಿ:ನಾಳೆ ಸಂಜೆ ಅಂಬರೀಶ್ ಸ್ಮಾರಕ ಲೋಕಾರ್ಪಣೆ; ಸಿಎಂ ಸೇರಿ ಹಲವು ಗಣ್ಯರ ಉಪಸ್ಥಿತಿ

Last Updated : Mar 27, 2023, 10:34 PM IST

ABOUT THE AUTHOR

...view details