ಕರ್ನಾಟಕ

karnataka

ಕಬ್ಬಿನ ಎಫ್​ಆರ್​ಪಿ ದರ 3200ಕ್ಕೆ ಏರಿಸಲು ಒತ್ತಾಯ: ಕಬ್ಬು ಬೆಳೆಗಾರರಿಂದ ವಿಧಾನಸೌಧ ಮುತ್ತಿಗೆಗೆ ಯತ್ನ..!

By

Published : Oct 5, 2021, 10:11 PM IST

ಕಬ್ಬಿನ ದರವನ್ನು ಕೇಂದ್ರ 2900 ರೂ. ನಿಗದಿ ಮಾಡಿ ನಮ್ಗೆ ಮೋಸ ಮಾಡಿದೆ. ಈ ಎಫ್​ಆರ್​ಪಿ ದರ ಕನಿಷ್ಟ ಪಕ್ಷ 3500 ಮಾಡಲೇಬೇಕು. ಇಲ್ಲದೇ ಇದ್ರೇ ನಾವು ಹೋರಾಟ ನಿಲ್ಲಿಸೋದಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್​​​ ಸರ್ಕಾರದ ವಿರುದ್ಧ ಕಿಡಿಕಾರಿದರು.ಪ್ರತಿಭಟನಾ ಸ್ಥಳಕ್ಕೆ ಬಂದ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರೊಂದಿಗೆ ರಸ್ತೆಯಲ್ಲೇ ಕುಳಿತು ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

sugarcane-farmers-protest-in-bangalore
ಕಬ್ಬು ಬೆಳೆಗಾರರು

ಬೆಂಗಳೂರು: ಕೃಷಿ ಇಲಾಖೆ ಪ್ರಕಾರವೇ ಕಬ್ಬು ಉತ್ಪಾದನಾ ವೆಚ್ಚ 3,200 ರೂ. ಎಂದು ಅಂದಾಜಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಹತ್ತು ಇಳುವರಿಗೆ ಬರುವ ಕಬ್ಬಿಗೆ 2,900 ನಿಗದಿ ಮಾಡಿರುವುದು ಅವೈಜ್ಞಾನಿಕ. ಅದ್ದರಿಂದ ಕಬ್ಬಿನ ಎಫ್​ಆರ್​ಪಿ ದರ ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ಅಲ್ಲದೇ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು.

ಕಳೆದ ಎರಡು ವರ್ಷದಿಂದ ಕೇಂದ್ರ ಸರ್ಕಾರ ಎಫ್​ಆರ್​ಪಿ ದರ ಏರಿಕೆ ಮಾಡದೇ 21-22 ನೇ ಸಾಲಿಗೆ ಕೇವಲ ಕ್ವಿಂಟಲ್​​ಗೆ 5 ರೂ ಏರಿಕೆ ಮಾಡಿ, ಸಕ್ಕರ ಕಂಪನಿಗಳ ಒತ್ತಡಕ್ಕೆ ಮಣಿದು ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡ್ತಿದೆ. ಕಬ್ಬಿನ ಉತ್ಪಾದನೆ ವೆಚ್ಚ, ಸಾಗಣಿಕೆದಾರ, ಕಟಾವ್ ಕೂಲಿ, ರಸಗೊಬ್ಬರ, ಬೀಜ, ಕೃಷಿ ಕಾರ್ಮಿಕರ ಕೂಲಿ ದುಪ್ಪಟ್ಟು ಏರಿಕೆಯಾಗಿದೆ. ಕೃಷಿ ಇಲಾಖೆ ಪ್ರಕಾರವೇ ಕಬ್ಬು ಉತ್ಪಾದನಾ ವೆಚ್ಚ 3,200 ರೂ. ಎಂದು ಅಂದಾಜಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಇಳುವರಿ ಬರುವ ಕಬ್ಬಿಗೆ 2900 ನಿಗದಿ ಮಾಡಿರುವುದು ಅವೈಜ್ಞಾನಿಕ ಎಂದು ರೈತರು ಆಗ್ರಹಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸಚಿವರು ಒಬ್ಬರೇ ಬಂದ್ರೇ ನಾವು ಸಂಧಾನಕ್ಕೆ ತಯಾರಿಲ್ಲ. ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಸಿಎಂ ಭರವಸೆ ಕೊಟ್ರಷ್ಟೇ ನಮ್ಮ ಹೋರಾಟ ನಿಲ್ಲಿಸುತ್ತೇವೆ. ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ರೇ ತಕ್ಕ ಪಾಠ ಕಲಿಸುತ್ತೇವೆ. ಕಬ್ಬಿನ ದರವನ್ನು ಕೇಂದ್ರ 2,900 ರೂ ನಿಗದಿ ಮಾಡಿ ನಮಗೆ ಮೋಸ ಮಾಡಿದೆ. ಈ ಎಫ್ ಆರ್​ಪಿ ದರ ಕನಿಷ್ಟ ಪಕ್ಷ 3,500 ಮಾಡಲೇಬೇಕು. ಇಲ್ಲದೇ ಇದ್ರೇ ನಾವು ಹೋರಾಟ ನಿಲ್ಲಿಸೋದಿಲ್ಲ ಎಂದು ಕಿಡಿಕಾರಿದರು.

ರೈತರ ಮಾರಣಹೋಮ: ಕೇಂದ್ರ ಸರ್ಕಾರ ಉತ್ತರ ಪ್ರದೇಶದಲ್ಲಿ ರೈತರ ಮಾರಣಹೋಮ ಮಾಡಿದೆ. ಇದನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ. ಅದೇ ಮಾದರಿಯಲ್ಲಿ ಇವತ್ತೇನಾದ್ರೂ ನಮ್ಮ ಹೋರಾಟ ಹತ್ತಿಕ್ಕಿದ್ರೇ ನಾವು ಪಾಠ ಕಲಿಸುತ್ತೇವೆ. ರಾಜ್ಯದ ವಿವಿಧ ಭಾಗಗಳಿಂದ ಕಬ್ಬು ಬೆಳೆಗಾರರು ಬಂದಿದ್ದೇವೆ, ವಿಧಾನಸೌಧ ಮುತ್ತಿಗೆ ಹಾಕ್ತೇವೆ. ಕಬ್ಬಿಗೆ ಬೆಂಬಲ‌ ಬಲೆ ನೀಡ್ಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಸಕ್ಕರೆ ಕಾರ್ಖಾನೆ ವಿಚಾರವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಪ್ರತಿಭಟನೆ ಮಾಡ್ತಾ ಇದ್ದೇವೆ ಎಂದರು.

ಎಲ್ಲಿಗೆ ಹೋಗ್ಬೇಕು ನಾವು: ಮಂತ್ರಿಗಳೇ ಇಲ್ಲಿಗೆ ಬರ್ತಾರೆ ಮಾತನಾಡಿ ಅಂತಾ ಪೊಲೀಸ್ರು ಹೇಳ್ತಾರೆ. ನಾವು ಒಂದು ‌ತಿಂಗಳ ಮುಂಚೆನೆ ಮನವಿ ಕೊಟ್ಟಾಗ ಎಲ್ಲೋಗಿದ್ರು. ನಾವು ಹೋರಾಟ ಮಾಡ್ತಾ ಇದೀವಿ ಅಂತಾ ಬರ್ತಿನಿ ಅಂತಾರೆ. ಇದು ರೈತರ ಪರ ಸರ್ಕಾರವೇ..?, ಕಬ್ಬು ಬೆಳೆದು ಬೆಲೆ ನಿಗದಿ ಮಾಡುವ ಸಮಯದಲ್ಲಿ ನೀವು ಮೋಸ ಮಾಡ್ತಾ ಇದೀರಾ. ಒಂದು ಕಡೆ ಬ್ಯಾಂಕ್ ನವರ ಕಿರುಕುಳ. ಎಲ್ಲಿ ಹೋಗಬೇಕು ನಾವು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಮನವೋಲಿಸಿದ ಕೃಷಿ ಸಚಿವ

ಪ್ರತಿಭಟನಾ ಸ್ಥಳಕ್ಕೆ ಬಂದ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರೊಂದಿಗೆ ರಸ್ತೆಯಲ್ಲೇ ಕುಳಿತು ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಲು ಅವಕಾಶ ಕೊಟ್ಟ ಬಳಿಕ ರೈತರು ಪ್ರತಿಭಟನೆ ವಾಪಸು ಪಡೆದರು. ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಕೃಷ್ಣಾದಲ್ಲಿ ರೈತರು ಸಿಎಂ ಅನ್ನು ಭೇಟಿ ಮಾಡಲು ಹೊರಟರು.

ಈ ಸಂದರ್ಭದಲ್ಲಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮಾತನಾಡಿ, ಈಗಾಗಲೇ 9 ಫ್ಯಾಕ್ಟರಿಗಳಿಗೆ ರೈತರಿಗೆ ಸಂದಾಯವಾಗಬೇಕಾದ ಹಣ ಕೊಡಿಸಲಾಗಿದೆ. 42.18 ಲಕ್ಷ ರೂ. ಬಾಕಿ ಹಣವನ್ನು ಕೊಡಬೇಕಿದೆ. ಯಾವುದೇ ಸಕ್ಕರೆ ಫ್ಯಾಕ್ಟರಿ ರೈತರ ಹಣ ಇಟ್ಟುಕೊಳ್ಳಬಾರದೆಂದು‌ ಕ್ರಮ ಮಾಡಲಾಗಿದೆ.

ಸಕ್ಕರೆ ಕಾರ್ಖಾನೆಗಳು ಪುನರಾರಂಭಗೊಳಿಸಲು ಮನವಿ ಮಾಡಿದ್ದಾರೆ. FRP ದರ ನಿಗದಿ ಮಾಡಲು ರಾಜ್ಯ ಸರ್ಕಾರದಲ್ಲಿ ಅವಕಾಶ ಇದ್ದರೆ, ಸರ್ಕಾರ ರೈತರ ಪರ ಇರಲಿದೆ ಎಂದರು. ಅಲ್ಲದೆ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು 10 ಜನ ರೈತರನ್ನು ಭೇಟಿ ಮಾಡಲು, ಗೃಹಕಚೇರಿ ಕೃಷ್ಣಾದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೇಂದ್ರದ FRP ದರವನ್ನು ಹೆಚ್ಚಳ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಕೇಂದ್ರಕ್ಕೆ ಪತ್ರ ಬರೆಯಲಾಗುವುದು. ಮೈಸೂರು ಜಿಲ್ಲೆಯಲ್ಲಿ ಯೂರಿಯಾ, ಗೊಬ್ಬರದ ತುಂಬಾ ಕೊರತೆಯಾಗಿದೆ. ಕಾಂಪ್ಲೆಕ್ಸ್ ಹೆಚ್ಚು ಸ್ಟಾಕ್ ಇದ್ದು, ಕೊರತೆಯಾಗಿರುವ ಕಡೆ ಇದನ್ನು ಕೊಡಲಾಗುವುದು.

ಅಧಿಕಾರಿಗಳಿಂದಲೂ ಕೆಲವು ತಪ್ಪಾಗಿವೆ. ಗೊಬ್ಬರ ವಿತರಣೆಯಾಗಿದ್ದರೂ, ಅದನ್ನು ನಮೂದಿಸದೇ ಇರುವುದರಿಂದ ಸ್ಟಾಕ್ ಇದೆ ಎಂಬುದಾಗಿಯೇ ಕೇಂದ್ರ ಸರ್ಕಾರಕ್ಕೆ ತೋರಿಸುತ್ತಿದೆ. ಇದನ್ನು ಸರಿಪಡಿಸಬೇಕಿದೆ ಎಂದರು.

ABOUT THE AUTHOR

...view details