ಕರ್ನಾಟಕ

karnataka

ಮುಂಚಿತವಾಗಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಅರೆಯಲು ಅನುಮತಿ: ಸಚಿವ ಶಿವಾನಂದ ಪಾಟೀಲ್

By ETV Bharat Karnataka Team

Published : Oct 17, 2023, 7:32 PM IST

ಬರದಿಂದಾಗಿ ಕಬ್ಬು ಒಣಗುತ್ತಿದೆ. ಈ ವರ್ಷ ಏಳು ಲಕ್ಷ ಹೆಕ್ಟೇರ್ ಬೆಳೆಯ ಪೈಕಿ ಒಂದು ಲಕ್ಷ ಹೆಕ್ಟೇರ್ ಬೆಳೆ ಕಡಿಮೆಯಾಗುವ ಸಾಧ್ಯತೆ ಇದೆ- ಸಕ್ಕರೆ ಸಚಿವ ಶಿವಾನಂದ್ ಪಾಟೀಲ್

Sugar Minister Shivad Patil spoke at a press conference.
ಸಕ್ಕರೆ ಸಚಿವ ಶಿವಾದ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು:ವಿದ್ಯುತ್ ಕೊರತೆ ನೀಗಿಸಲು ಸಕ್ಕರೆ ಕಾರ್ಖಾನೆಗಳಿಗೆ ಮುಂಚಿತವಾಗಿ ಕಬ್ಬು ನುರಿಯುವ ಪ್ರಕ್ರಿಯೆ ಆರಂಭಿಸಲು ಅನುಮತಿಸಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ತಿಳಿಸಿದರು. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮುನ್ನ ಶುಗರ್ ಕ್ರಷಿಂಗ್ ಅ​​ನ್ನು ಮರ್ಜಿಗೆ ಬಂದಂತೆ ಮಾಡುತ್ತಿದ್ದರು. ಆದರೆ ಈ ಬಾರಿ ಏಕಕಾಲದಲ್ಲಿ ಎಲ್ಲಾ ಕಬ್ಬು ಕಾರ್ಖಾನೆಗಳಿಗೆ ಕಬ್ಬು ಅರೆಯಲು ಸೂಚನೆ ನೀಡಲಾಗಿದೆ. ವಿದ್ಯುತ್ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಅಕ್ಟೋಬರ್ 25ರ ನಂತರ ಎಲ್ಲ ಸಕ್ಕರೆ ಕಾರ್ಖಾನೆಯವರಿಗೆ ಕಬ್ಬು ಅರೆಯಲು ಅನುಮತಿ ನೀಡಿದ್ದೇವೆ ಎಂದರು.

ಬರದಿಂದಾಗಿ ಒಣಗುತ್ತಿರುವ ಕಬ್ಬು: ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಕಬ್ಬು ಒಣಗುತ್ತಿದೆ. ಹೀಗಾಗಿ ಕಬ್ಬು ನುರಿಯುವ ಹಂಗಾಮು ಬೇಗ ಮಾಡಲು ರೈತರು ಮನವಿ ಮಾಡಿದ್ದರು. ಉಪಉತ್ಪನ್ನ ಹೆಚ್ಚಿಸುವ ನಿಟ್ಟಿನಲ್ಲಿ ಮುಂಚಿತವಾಗಿ ಕಬ್ಬು ಅರೆಯಲು ಅನುಮತಿ ಕೊಡಲಾಗಿದೆ. ಮುಂಚಿತವಾಗಿ ಕಬ್ಬು ಅರೆದರೆ ಸಕ್ಕರೆ ಇಳುವರಿ ಕಡಿಮೆ ಬರುತ್ತೆ. ನವೆಂಬರ್‌ನಲ್ಲಿ ಮಾಡಿದರೆ ಇಳುವರಿ ಹೆಚ್ಚು. 11-12 ತಿಂಗಳು ಕಳೆದ ಕಬ್ಬು ಫಸಲು ಅರೆಯಲು ಅವಕಾಶ ನೀಡಲಾಗಿದೆ. 3.50-4.50 ಲಕ್ಷ ಟನ್ ಕಬ್ಬು ಅರೆಯಲು ಸಿಗಲಿದೆ. ಸಕ್ಕರೆ ಕಾರ್ಖಾನೆಗಳಿಂದ ಸುಮಾರು 1,800 ಮೆ.ವಾ ವಿದ್ಯುತ್ ದೊರೆಯಲಿದೆ ಎಂದು ಹೇಳಿದರು.

ಸಕ್ಕರೆ ಉತ್ಪಾದನೆ ಕಡಿಮೆ ಸಾಧ್ಯತೆ: ಈ ಬಾರಿ ಒಂದು ಲಕ್ಷ ಹೆಕ್ಟೇರ್ ಕಬ್ಬು ಬೆಳೆ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ. ಏಳು ಲಕ್ಷ ಹೆಕ್ಟೇರ್ ಕಬ್ಬು ಬೆಳೆ ಪೈಕಿ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಕಡಿಮೆಯಾಗುವ ಸಾಧ್ಯತೆ ಗೋಚರಿಸಿದೆ. ಹೀಗಾಗಿ ಸಕ್ಕರೆ ಕೊರತೆ ಎದುರಾಗುವ ಸಂಭವವಿದೆ. ಕಳೆದ ಬಾರಿ ಎಥೆನಾಲ್ 35,000 ಕೋಟಿ ಲೀಟರ್ ಉತ್ಪಾದನೆ ಆಗಿತ್ತು. ಈ ಬಾರಿ 40,000 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆ ಸಾಧ್ಯತೆ ಇದೆ. ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಇಳುವರಿ ತಗ್ಗಲಿದೆ. ಹೀಗಾಗಿ ಈ ಬಾರಿ ಗೃಹ ಬಳಕೆಯ ಸಕ್ಕರೆ ಕೊರತೆ ಎದುರಾಗಲಿದೆ ಎಂದು ತಿಳಿಸಿದರು.

ಸಕ್ಕರೆ ನೀತಿ ಜಾರಿಗೆ ಚಿಂತನೆ: ರಾಜ್ಯದಲ್ಲಿ ಸಕ್ಕರೆ ನೀತಿ ಜಾರಿಗೊಳಿಸುವ ಚಿಂತನೆ ಇದೆ. ಆ ಮೂಲಕ ಅನಾರೋಗ್ಯಕರ ಸ್ಪರ್ಧೆ ತಪ್ಪಿಸಲು ಮಹಾರಾಷ್ಟ್ರ ಮಾದರಿ ಕಠಿಣ ನಿಯಮ ಇರುವ ಸಕ್ಕರೆ ನೀತಿ ಜಾರಿಗೊಳಿಸುವ ಚಿಂತನೆ ಇದೆ. ಮುಂದಿನ ವರ್ಷದಿಂದ ನೀತಿ ರೂಪಿಸುವ ಚಿಂತನೆ ಇದೆ ಎಂದು ಇದೇ ವೇಳೆ ತಿಳಿಸಿದರು.

ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು 25 ಕಿ.ಮೀ ಅಂತರದ ಷರತ್ತಿನೊಂದಿಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ನಿಯಮ ರೂಪಿಸುವ ಚಿಂತನೆ‌ ಇದೆ. ಪ್ರಸ್ತುತ 15 ಕಿ.ಮೀ. ಅಂತರದಲ್ಲಿ ಕಾರ್ಖಾನೆ ಸ್ಥಾಪನೆಯ ಷರತ್ತಿದೆ. ಅನಾರೋಗ್ಯಕರ ಸ್ಪರ್ಧೆ ತಪ್ಪಿಸಲು ಅಂತರ ಹೆಚ್ಚಿಸುತ್ತೇವೆ ಎಂದರು. ಈ ಬಾರಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡುವ ಎಲ್ಲಾ ಬಾಕಿ ಬಿಲ್ ಪಾವತಿಯಾಗಿದೆ. ಎಫ್ಆರ್‌ಪಿ ಬೆಲೆಗಿಂತ ಹೆಚ್ಚಿಗೆ ಪಾವತಿ ಮಾಡಿದ್ದೇವೆ. ಯಾವುದೇ ಬಿಲ್ ಬಾಕಿ ಇಲ್ಲ ಎಂದರು.

65 ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅರ್ಜಿ:65 ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕೋರಿ ಅರ್ಜಿ ಬಂದಿವೆ ಎಂದು ತಿಳಿಸಿದ ಸಚಿವರು, ನಾನು ಅಧಿಕಾರಕ್ಕೆ‌ ಬಂದ ಬಳಿಕ ಸಕ್ಕರೆ ಕಾರ್ಖಾನೆಗಳ ವಿರುದ್ಧ ಮೂರು‌ ಕೇಸ್ ಹಾಕಲಾಗಿದೆ. ಬಸವೇಶ್ವರ್ ಶುಗರ್ ವಿರುದ್ಧ ಕೇಸ್ ಹಾಕಲಾಗಿದೆ.‌ ಬಸವೇಶ್ವರ್ ಶುಗರ್ಸ್ ಏಳು ವರ್ಷದಿಂದ ಕಬ್ಬು ಅರೆಯುತ್ತಿದೆ. ಮಿತಿ‌ಮೀರಿ 7,000 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಿದೆ. ಗೋಡೌನ್ ಇಲ್ಲದೆ ಸಕ್ಕರೆ ಉತ್ಪಾದನೆ ಮಾಡಲಾಗಿದೆ. ಈ ಸಂಬಂಧ ನೊಟೀಸ್ ಜಾರಿ ಮಾಡಿದ್ದೇವೆ. ತನಿಖೆ ನಡೆಸಿದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನೂಓದಿ:’ಭ್ರಷ್ಟಾಚಾರ ಇದೆ, ಇಲ್ಲ ಎಂದರೆ ನನ್ನಂತಹ ಮೂರ್ಖ ಇನ್ನೊಬ್ಬನಿಲ್ಲ‘: ಡಿ.ಕೆಂಪಣ್ಣ

ABOUT THE AUTHOR

...view details