ಕರ್ನಾಟಕ

karnataka

ಅನೈತಿಕ ಪೊಲೀಸ್​ಗಿರಿ ನೆಪದಲ್ಲಿ ಕಾನೂನು ಕೈಗೆತ್ತಿಕೊಂಡರೆ ತಕ್ಕ ಕಾನೂನಿನ ಶಾಸ್ತಿ: ಸಿಎಂ

By ETV Bharat Karnataka Team

Published : Sep 8, 2023, 9:38 PM IST

ನಮ್ಮ ಸರ್ಕಾರ ದ್ವೇಷದ ವಾತಾವರಣ ಹರಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಭಾರತದ ಭಾವೈಕ್ಯತಾ ಪರಂಪರೆಯನ್ನು ಕಾಪಾಡಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

strict-action-against-moral-policing-case-cm-siddaramaiah
strict-action-against-moral-policing-case-cm-siddaramaiah

ಬೆಂಗಳೂರು:ಅನೈತಿಕ ಪೊಲೀಸ್ ಗಿರಿ ನೆಪದಲ್ಲಿ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಅವರಿಗೆ ತಕ್ಕ ಕಾನೂನಿನ ಶಾಸ್ತಿ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು. ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್​​​ನಲ್ಲಿ ತಾಯಿ ಮೇರಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಸಿಎಂ, ಸೇಂಟ್ ಮೇರಿಯಮ್ಮನವರ ಬೆಸಿಲಿಕಾ ಚರ್ಚ್ ಅತಿದೊಡ್ಡ ಭಾವೈಕ್ಯತಾ ಕೇಂದ್ರ. ಬೆಸಿಲಿಕಾ ಪ್ರಾರ್ಥನಾ ಮಂದಿರಕ್ಕೆ ಎಲ್ಲ ಜಾತಿ, ಧರ್ಮದವರು ಬರುತ್ತಾರೆ. ಹೀಗಾಗಿ ಇದೊಂದು ಭಾವೈಕ್ಯತಾ ಕೇಂದ್ರವಾಗಿ ರೂಪುಗೊಂಡಿದೆ. ನಾನು ಈ ಜಯಂತ್ಯುತ್ಸವ ಮತ್ತು ಹಬ್ಬಕ್ಕೆ ಪ್ರತಿ ವರ್ಷ ತಪ್ಪದೆ ಹಾಜರಾಗುತ್ತೇನೆ. ಇದು ನನಗೆ ಬಹಳ ಖುಷಿಯ ಸಂಗತಿ ಎಂದರು.

ಭಾರತವೇ ಒಂದು ಭಾವೈಕ್ಯ ಕೇಂದ್ರ. ಇಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯ ದ್ವೇಷಕ್ಕೆ ಜಾಗವಿಲ್ಲ. ಕೆಲವರು ಮನುಷ್ಯ ದ್ವೇಷವನ್ನೇ ಸಂಸ್ಕೃತಿಯನ್ನಾಗಿ ಆಚರಿಸಲು ಪ್ರಯತ್ನಿಸುತ್ತಿದ್ದಾರೆ. ಯಾವ ಧರ್ಮವೂ ಮನುಷ್ಯ ದ್ವೇಷವನ್ನು ಹೇಳುವುದಿಲ್ಲ. ಆದರೆ, ಕೆಲವು ಕಪಟಿಗಳು ಧರ್ಮದ ಹೆಸರಿನಲ್ಲಿ ಮನುಷ್ಯರು, ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸದ್ಯದಲ್ಲೇ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ:ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರೀಸ್ ನಿಲ್ದಾಣ ಎಂದು ಹೆಸರಿಡಬೇಕು ಎನ್ನುವುದೂ ಸೇರಿ ಸಮುದಾಯದ ಮುಖಂಡರು ಮುಂದಿಟ್ಟಿರುವ ಮೂರು ಬೇಡಿಕೆಗಳ ಬಗ್ಗೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು. ಜೊತೆಗೆ, ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ನಾವು ಬಜೆಟ್​ನಲ್ಲೇ ಘೋಷಿಸಿದ್ಸೇವೆ. ಇದಕ್ಕಾಗಿ ನೂರು ಕೋಟಿ ರೂಪಾಯಿ ಮೀಸಲಿಟ್ಟು ಆದಷ್ಟು ಬೇಗ ನಿಗಮ ಸ್ಥಾಪಿಸಿ, ಅದಕ್ಕೆ ಅರ್ಹ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದರು.

ತೊಂದರೆ ಮಾಡೆಂದು ಯಾವ ಧರ್ಮವೂ ಹೇಳಲ್ಲ:ಇದೇ ವೇಳೆ, ಮಾತನಾಡಿದಡಿಸಿಎಂ ಡಿ ಕೆ ಶಿವಕುಮಾರ್,ಮತ್ತೊಬ್ಬರಿಗೆ ತೊಂದರೆ ಮಾಡು ಎಂದು ಯಾವ ಧರ್ಮವೂ ಹೇಳುವುದಿಲ್ಲ. ಎಲ್ಲ ಧರ್ಮದವರು ನೆಮ್ಮದಿಯಾಗಿ ಬದುಕುವಂತೆ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ನಿರ್ಮಿಸಲು ಸರ್ಕಾರ ಶ್ರಮಿಸಲಿದೆ ಎಂದು ತಿಳಿಸಿದರು.

ಕುವೆಂಪು ಅವರ ಕನಸಿನಂತೆ ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ ಬದುಕಬೇಕು. ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಬಲಿಷ್ಠವಾದ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮೆಲ್ಲರ ಶ್ರಮಕ್ಕೆ ಫಲ ಸಿಕ್ಕಿದೆ. ಈ ಹಿಂದೆ ಹಿಂದುಳಿದ ವರ್ಗದ ಸಮುದಾಯಗಳು ಆತಂಕ ಮತ್ತು ಭಯದ ವಾತಾವರಣದಲ್ಲಿ ಜೀವನ ನಡೆಸುವ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಎಲ್ಲರೂ ಕೂಡ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ:ಶಿಕ್ಷಕರು, ಪದವೀಧರರು ನಾಡಿನ ಅಭಿವೃದ್ಧಿ ಪರವಾಗಿ ಇದ್ದಾರೆ, ನಮ್ಮನ್ನು ಬೆಂಬಲಿಸುತ್ತಾರೆ: ಸಿಎಂ ಸಿದ್ದರಾಮಯ್ಯ ವಿಶ್ವಾಸ

ABOUT THE AUTHOR

...view details