ಕರ್ನಾಟಕ

karnataka

ಜಿಪಂ - ತಾಪಂ ಕ್ಷೇತ್ರ ಮರು ವಿಗಂಡಣೆಗೆ ರಾಜ್ಯ ಸರ್ಕಾರದ ವಿಳಂಬ: 5 ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್

By

Published : Dec 14, 2022, 4:01 PM IST

ರಾಜ್ಯದಲ್ಲಿ ಜಿಪಂ ತಾಪಂ ಕ್ಷೇತ್ರಗಳ ಮರು ವಿಗಂಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಪದೇ ಪದೆ ಕಾಲಾವಕಾಶ ಕೋರಿದ ರಾಜ್ಯ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಹೈಕೋರ್ಟ್​ ಚಾಟಿ ಬೀಸಿದೆ.

high court
ಹೈಕೋರ್ಟ್​

ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಗಂಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಪದೇ ಪದೆ ಕಾಲಾವಕಾಶ ಕೋರಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ 5 ಲಕ್ಷ ರೂ ದಂಡ ವಿಧಿಸಿದೆ.

ಸರ್ಕಾರಕ್ಕೆ ತರಾಟೆ:ಅರ್ಜಿ ಸಲ್ಲಿಕೆಯಾಗಿ ಒಂದು ವರ್ಷ ಕಳೆದಿದೆ. ಈ ವರೆಗೆ ಮೂರನೇ ಬಾರಿ ಕಾಲಾವಕಾಶ ಕೋರಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ಆದೇಶಗಳನ್ನು ಪಾಲಿಸಬೇಕು ಎಂಬ ಉದ್ದೇಶವಿಲ್ಲ. ಇದೇ ಕಾರಣದಿಂದ ಮತ್ತೆ ಮತ್ತೆ ಕಾಲಾವಕಾಶ ಕೋರಿದೆ ಎಂದು ಹೈಕೋರ್ಟ್​ ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಚುನಾವಣಾ ಆಯೋಗ:ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲು ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದಿರುವುದು. ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆ’ಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

ಕಾಲಾವಕಾಶಕ್ಕೆ ಆಕ್ಷೇಪ:ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ ಬಿ ವರಾಲೆ ವಿಭಾಗೀಯ ಪೀಠದ ಎದುರು, ಸರ್ಕಾರದ ಪರ ವಕೀಲರು ಮತ್ತೆ 12 ವಾರ ಕಾಲಾವಕಾಶ ಕೇಳಿದ್ದರು. ಇದಕ್ಕೆ ನ್ಯಾಯಪೀಠ ತೀವ್ರ ಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ ಕಳೆದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಖುದ್ದು ಹಾಜರಾಗಿ 12 ವಾರ ಕಾಲಾವಕಾಶ ಕೋರಿದ್ದಾರೆ.

ಅವರ ಮನವಿ ಮೇರೆಗೆ ಭರವಸೆಯಿಟ್ಟು ನ್ಯಾಯಾಲಯ ಕಾಲಾವಾಶ ನೀಡಿದೆ. ಆದರೂ, ಈ ವರೆಗೂ ಒಂದಿಷ್ಟೂ ಕೆಲಸ ಮಾಡಿಲ್ಲ. ಅರ್ಜಿಗೆ ದಾಖಲೆಗಳನ್ನು ಸೇರಿದಲಾಗುತ್ತಿದೆ. ಮತ್ತೆ ಮತ್ತೆ ಕಾಲಾವಕಾಶ ಕೋರಲಾಗುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ವಿಚಾರಣೆ ಮುಂದೂಡಿಕೆ:ಅಲ್ಲದೇ, 2023ರ ಜನವರಿ 28ರ ಅಂತ್ಯದ ವೇಳೆಗೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದ ನ್ಯಾಯಪೀಠ, ಫೆ.2ಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲದೇ, ಅರ್ಜಿ ತಿದ್ದು ಪಡಿ ಮಾಡಿ ಕ್ಷೇತ್ರ ಮರು ವಿಂಗಡಣೆ ಆಯೋಗವನ್ನು ಪ್ರತಿವಾದಿಯನ್ನಾಗಿಸಲು ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಸೂಚನೆ ನೀಡಿದೆ.

5 ಲಕ್ಷ ರೂ ದಂಡ:ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು ಮನವಿ ಮಾಡಲು ಮುಂದಾದರು, ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರದ ಈ ಕ್ರಮಕ್ಕೆ ದೊಡ್ಡ ಮೊತ್ತದ ದಂಡ ವಿಧಿಸಬೇಕಾಗಿತ್ತು. ಆದರೆ, ಇದು ಅತ್ಯಂತ ಕನಿಷ್ಠ ಮೊತ್ತವಾಗಿದೆ ಎಂದು ಪ್ರತಿಕ್ರಿಯಿಸಿತು. ಜತೆಗೆ, ದಂಡದ ಮೊತ್ತದಲ್ಲಿ 2 ಲಕ್ಷ ರೂ. ಕಾನೂನು ಸೇವಾ ಪ್ರಾಧಿಕಾರಕ್ಕೆ, 2 ಲಕ್ಷ ರೂ ವಕೀಲರ ಸಂಘಕ್ಕೆ ಮತ್ತು 1 ಲಕ್ಷ ರೂಪಾಯಿಗಳನ್ನು ವಕೀಲರ ಗುಮಾಸ್ತರ ಸಂಘಕ್ಕೆ ಪಾವತಿಸಲು ಸರ್ಕಾರಕ್ಕೆ ಸೂಚಿಸಿದೆ.

ಇದೇ ವೇಳೆ, ಕ್ಷೇತ್ರ ಮರು ವಿಂಗಡಣೆ ಆಯೋಗದ ಪರ ವಕೀಲರು ಹಾಜರಾಗಿ ತಮ್ಮನ್ನು ಪ್ರತಿವಾದಿಯನ್ನಾಗಿಸಬೇಕು. ಕ್ಷೇತ್ರ ಪುನರ್‌ವಿಂಗಡಣಾ ಕಾರ್ಯ ಪೂರ್ಣಗೊಳಿಸಲು ಮೂರು ತಿಂಗಳ ಕಾಲ ಕಾಲಾವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿತು.

ಮರು ವಿಂಗಡಣಾ ಆಯೋಗ :ಇದರಿಂದ ಮತ್ತುಷ್ಟು ಅಸಮಾಧಾನಗೊಂಡ ಪೀಠ, ಈ ವರೆಗೂ ರಾಜ್ಯ ಸರ್ಕಾರ ಕಾಲಾವಕಾಶ ಕೋರಿತ್ತು. ಇದೀಗ ಕ್ಷೇತ್ರ ಮರುವಿಂಗಡಣಾ ಆಯೋಗ ಸಮಯ ಕೇಳುತ್ತಿದೆ ಎಂದು ತಿಳಿಸಿದ ಪೀಠ, ಮನವಿಯನ್ನು ತಿರಸ್ಕರಿಸಿತು. ಈ ವೇಳೆ ಆರೋಗದ ಪರ ವಕೀಲರು ವಾದ ಮಂಡಿಸಿ, ರಾಜ್ಯಲ್ಲಿ ಹೊಸದಾಗಿ ಎರಡು ತಾಲೂಕುಗಳು ರಚನೆಯಾಗಿವೆ. ಇದರಿಂದ ಕ್ಷೇತ್ರ ಪುನರ್‌ವಿಂಗಡಣಾ ನಿಯಮಗಳ ತಿದ್ದುಪಡಿ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.

ಕಳೆದ ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹಾಜರಾಗಿ, ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ವಿಗಂಡಣೆ ಮತ್ತು ಮೀಸಲು ನಿಗದಿ ಕೆಲಸವನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ 12 ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.

ಇದನ್ನು ಪುರಸ್ಕರಿಸಿದ್ದ ನ್ಯಾಯಪೀಠ, ಜಿಪಂ ತಾಪಂ ಕ್ಷೇತ್ರಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಇತರ ವರ್ಗಗಗಳಿಗೆ ಮೀಸಲು ಕಲ್ಪಿಸುವ ಮತ್ತು ಕ್ಷೇತ್ರ ಮರು ವಿಂಗಡಣೆ ಕಾರ್ಯವನ್ನು 12 ವಾರಗಳಲ್ಲಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿ ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿತು.


ಅರ್ಜಿಯಲ್ಲಿ ಕೋರಿರುವುದೇನು?:‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ-2021 ಅನ್ನು ಅಸಂವಿಧಾನ ಎಂಬುದಾಗಿ ಘೋಷಿಸಿ ರದ್ದುಪಡಿಸಬೇಕು. ಚುನಾವಣಾ ಆಯೋಗವು ಈಗಾಗಲೇ ಪ್ರಕಟಿಸಿರುವ ಕರಡು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಅಧಿಸೂಚನೆ ಆಧರಿಸಿ ಚುನಾವಣಾ ಪ್ರಕ್ರಿಯೆ ಮುಂದುವರಿಸಬೇಕು. ಅಂತಿಮ ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪಟ್ಟಿ ಪ್ರಕಟಿಸಿ, ಶೀಘ್ರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರರಕ್ಕೆ ನಿರ್ದೇಶಿಸಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.
ದನ್ನೂಓದಿ:ಜನವರಿ 15ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು: ಸಿದ್ದರಾಮಯ್ಯ

ABOUT THE AUTHOR

...view details