ಕರ್ನಾಟಕ

karnataka

ಸುಪ್ರೀಂ ತಡೆಯಾಜ್ಞೆ ತಾತ್ಕಾಲಿಕವಾಗಿದ್ದರೂ ಇದೇ ಖಾಯಂ‌ ಆದೇಶ ಆಗುವುದು ಖಂಡಿತ: ಸಿದ್ದರಾಮಯ್ಯ

By

Published : Apr 25, 2023, 11:05 PM IST

ಮುಸ್ಲಿಂ ಮೀಸಲಾತಿ ರದ್ಧತಿಗೆ ತಡೆಯಾಜ್ಞೆ ನೀಡಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಮಾಡಿರುವ ಕಪಾಳಮೋಕ್ಷವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು :ಮುಸ್ಲಿಂ ಮೀಸಲಾತಿ ರದ್ಧತಿ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತಡೆಯಾಜ್ಞೆ ತಾತ್ಕಾಲಿಕವಾದರೂ ಖಾಯಂ ಆದೇಶವಾಗುವುದು ಖಂಡಿತ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮುಸ್ಲಿಂ ರಿಸರ್ವೇಶನ್ ಎಂಬ ಟ್ಯಾಗ್​ಲೈನ್ ಅಡಿ ಟ್ವೀಟ್ ಮಾಡಿರುವ ಅವರು, ಮುಸ್ಲಿಂ ಮೀಸಲಾತಿ ರದ್ಧತಿಗೆ ತಡೆಯಾಜ್ಞೆ ನೀಡಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಾಡಿರುವ ಕಪಾಳ‌ಮೋಕ್ಷವಾಗಿದೆ. ಈ ತಡೆಯಾಜ್ಞೆ ತಾತ್ಕಾಲಿಕವಾಗಿದ್ದರೂ ಇದೇ ಖಾಯಂ‌ ಆದೇಶ ಆಗುವುದು ಖಂಡಿತ. ಭಾರತೀಯ ಜನತಾ ಪಕ್ಷ ಪ್ರಕಟಿಸಿರುವ‌ ಪರಿಷ್ಕೃತ ಮೀಸಲಾತಿ ನೀತಿಯಲ್ಲಿ ಮುಸ್ಲಿಂಮರ ವಿರುದ್ಧದ ದ್ವೇಷದ ರಾಜಕೀಯ ದುರುದ್ದೇಶ ಇತ್ತೇ ಹೊರತು, ಪ್ರಾಮಾಣಿಕತೆ ಇರಲಿಲ್ಲ ಎಂದು ಹೇಳಿದ್ದಾರೆ.

ಯಾವುದೇ ಸಮೀಕ್ಷೆ- ಅಂಕಿ ಅಂಶದ ಆಧಾರವಿಲ್ಲದ ಈ ಮೀಸಲಾತಿ ಸಹಜ ಸಾವಿಗೀಡಾಗುವುದು ಖಂಡಿತ. ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಮುಸ್ಲಿಂ ಮೀಸಲಾತಿ ರದ್ದತಿಯ ಆದೇಶವನ್ನು ಹಿಂತೆಗೆದುಕೊಂಡು ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ಮೀಸಲಾತಿಯನ್ನು ರಾಜಕೀಯದಾಟದ ದಾಳವನ್ನಾಗಿ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

ಏನಾಗಿದೆ ? :ಕರ್ನಾಟಕದಲ್ಲಿ ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಮೇ 9 ರವರೆಗೆ ಈ ಆದೇಶವನ್ನು ಜಾರಿಗೊಳಿಸದಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಹೇಳಿದೆ.

2ಬಿ ಅಡಿ ಮುಸ್ಲಿಮರಿಗಿದ್ದ ಶೇಕಡಾ 4 ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿತ್ತು. ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ. ನ್ಯಾ ಕೆ ಎಂ ಜೋಸೆಫ್‌ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಮೇ 9 ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೂ ಮೀಸಲಾತಿ ಜಾರಿಗೆ ನ್ಯಾಯಾಲಯ ತಡೆ ನೀಡಿದೆ.

ಮುಸ್ಲಿಂ ಮೀಸಲಾತಿ ರದ್ಧತಿಗೆ ಸುಪ್ರೀಂ ಕೋರ್ಟ್ ತಪರಾಕಿ ನಿರೀಕ್ಷಿತ- ಸಿದ್ದರಾಮಯ್ಯ: ಮುಸ್ಲಿಂ ಮೀಸಲಾತಿ ರದ್ದತಿಗಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತವಾಗಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು (ಏಪ್ರಿಲ್ 14-2023)ರಂದು ಅಭಿಪ್ರಾಯಪಟ್ಟಿದ್ದರು. ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ, ಮೀಸಲಾತಿ ಪರಿಷ್ಕರಣೆ ಮಾಡಿದ್ದ ಬಿಜೆಪಿ ಸರ್ಕಾರದ ನಿರ್ಧಾರ ದೋಷಪೂರಿತವಾದುದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ಚುನಾವಣೆಯನ್ನು ಮನಸ್ಸಲ್ಲಿಟ್ಟುಕೊಂಡು ಹಿಂದೂ ಮತಗಳ ಧ್ರುವೀಕರಣದ ದುರುದ್ದೇಶದ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಈಗಲಾದರೂ ವಾಪಸ್ ಪಡೆದು ಮಾನ ಉಳಿಸಿಕೊಳ್ಳಬೇಕು ಎಂದು ಹೇಳಿದ್ದರು. ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ ಕರ್ನಾಟಕ ಸರ್ಕಾರ ಕೈಗೊಂಡಿರುವ ನಿರ್ಧಾರ ‘ದೋಷಪೂರಿತ’ ಮತ್ತು ‘ತಪ್ಪು ಕಲ್ಪನೆ’ಯನ್ನು ಆಧರಿಸಿದೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಬುನಾದಿಯೇ ಅತ್ಯಂತ ಅಸ್ಥಿರವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿರುವುದು ರಾಜ್ಯ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದೆ ಎಂದಿದ್ದರು.

ಇದನ್ನೂ ಓದಿ :ಮುಸ್ಲಿಂ ಮೀಸಲಾತಿ ರದ್ದತಿಗೆ ಸುಪ್ರೀಂ ಕೋರ್ಟ್ ತಪರಾಕಿ ನಿರೀಕ್ಷಿತ: ಸಿದ್ದರಾಮಯ್ಯ

ABOUT THE AUTHOR

...view details