ಕರ್ನಾಟಕ

karnataka

ಟಿಕೆಟ್ ಬೇಡಿಕೆ ವೇಳೆ ತಳ್ಳಾಟ... ಕಾರ್ಯಕರ್ತನಿಗೆ ಸಿದ್ದರಾಮಯ್ಯರಿಂದ ಕಪಾಳಮೋಕ್ಷ

By

Published : Mar 24, 2023, 4:15 PM IST

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.

ಕಾರ್ಯಕರ್ತನಿಗೆ ಕಪಾಳಮೋಕ್ಷ  ಮಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಟಿಕೆಟ್​ಗಾಗಿ ಆಕಾಂಕ್ಷಿಗಳ ಬೆಂಬಲಿಗರು ಸಿದ್ದರಾಮಯ್ಯ ನಿವಾಸದ ಮುಂದೆ ಜಮಾಯಿಸಿದ್ದರು. ಈ ವೇಳೆ ಉಂಟಾದ ತಳ್ಳಾಟದಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಕಪಾಳ ಮೋಕ್ಷ ಮಾಡಿದ ಘಟನೆ ನಡೆಯಿತು. ಟಿಕೆಟ್ ಲಾಬಿಗಾಗಿ ಹಾಲಿ ಶಾಸಕ ಹರಿಹರ ರಾಮಪ್ಪ ಹಾಗೂ ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್ ಶಂಕರ್ ಪರವಾಗಿ ಕಾರ್ಯಕರ್ತರು ಜಮಾಯಿಸಿದ್ದರು. ಸಿದ್ದರಾಮಯ್ಯ ಆಗಮಿಸಿದ ಸಂದರ್ಭದಲ್ಲಿ ನಡೆದ ತಳ್ಳಾಟದಿಂದ ಗರಂ ಆದ ಸಿದ್ದರಾಮಯ್ಯ, ಕಾರ್ಯಕರ್ತರೊಬ್ಬರ ಕಪಾಳಕ್ಕೆ ಬಾರಿಸಿದ ಪ್ರಸಂಗ ನಡೆಯಿತು.

ಕಾರ್ಯಕರ್ತನಿಗೆ ಕಪಾಳ ಮೋಕ್ಷ :ಶುಕ್ರವಾರ ಬೆಳಗ್ಗೆ ಶಿವಾನಂದ ಸರ್ಕಲ್ ಬಳಿ ಇರುವ ಸಿದ್ದರಾಮಯ್ಯ ನಿವಾಸದಲ್ಲಿ ಈ ಘಟನೆ ನಡೆಯಿತು‌. ಹಾಲಿ ಶಾಸಕ ರಾಮಪ್ಪ ‌ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಬಲಿಗರು ಜಮಾಯಿಸಿ ಟಿಕೆಟ್ ‌ನೀಡುವಂತೆ ಆಗ್ರಹಿಸಿದರು. ಮತ್ತೊಂದು ‌ಕಡೆಯಲ್ಲಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆರ್ ಶಂಕರ್ ಬೆಂಬಲಿಗರು ಕೂಡಾ ಆಗಮಿಸಿದ್ದರು. ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ನೀಡುವಂತೆ ಕಾರ್ಯಕರ್ತರು ಸಿದ್ದರಾಮಯ್ಯ ಬಳಿ ಒತ್ತಾಯಿಸಿದರು. ಈ ವೇಳೆ ಉಂಟಾದ ತಳ್ಳಾಟದದಿಂದಾಗಿ ಕಾರ್ಯಕರ್ತನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಕಾಂಗ್ರೆಸ್​ನಲ್ಲಿ ಟಿಕೆಟ್​ಗಾಗಿ ಅಂತಿಮ ಹಂತದ ಲಾಬಿ‌ ನಡೆಯುತ್ತಿದೆ. ಅದರಲ್ಲೂ ರಾಣೆಬೆನ್ನೂರು ಟಿಕೆಟ್​ಗಾಗಿ ಆರ್ ಶಂಕರ್ ಬೆಂಬಲಿಗರು ಸಿದ್ದರಾಮಯ್ಯ ಮನೆಗೆ ಬಂದಿರುವುದು ಕುತೂಹಲ ಕೆರಳಿಸಿದೆ. ಆರ್ ಶಂಕರ್ ಕಾಂಗ್ರೆಸ್ ಸೇರ್ಪಡೆಗೆ ಪ್ರಯತ್ನಿಸಿದ್ದರು. ಆದರೆ ಅದಕ್ಕೆ ಸಿದ್ದರಾಮಯ್ಯ ‌ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಇದೆ. ಈ‌ ನಡುವೆ ಅವರ ಬೆಂಬಲಿಗರು ಸಿದ್ದರಾಮಯ್ಯ ಮನೆಯಲ್ಲಿ ಜಮಾಯಿಸಿ ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದಾರೆ.

ಘಟನೆಯ ವಿಡಿಯೋ ಶೇರ್ ಮಾಡಿದ ಬಿಜೆಪಿ:ತಳ್ಳಾಟದ ಸಂದರ್ಭದಲ್ಲಿ ಕಸಿವಿಸಿಗೊಂಡ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತಮ್ಮ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡು ಬಿಜೆಪಿ ಟ್ವೀಟ್​ ಮಾಡಿದೆ. ಶಾದಿ ಭಾಗ್ಯದ ನಾಯಕ ಸಿದ್ದರಾಮಯ್ಯ ಅವರಿಂದ ಕಪಾಳಮೋಕ್ಷ ಭಾಗ್ಯ ಎಂದು ಟ್ವೀಟ್​ ಮಾಡಿ ಬಿಜೆಪಿ ವ್ಯಂಗ್ಯವಾಡಿದೆ.

ಬಿಎಸ್​ವೈ ಸೈಡ್​​ಲೈನ್ ಮಾಡಿರುವುದು ಸತ್ಯ:ಅಮಿತ್ ಶಾ ಅವರು ಯಡಿಯೂರಪ್ಪರನ್ನು ಭೇಟಿಯಾಗಿರುವುದು ನನಗೆ ಗೊತ್ತಿಲ್ಲ. ಆದರೆ ಯಡಿಯೂರಪ್ಪ ಅವರನ್ನು ಸೈಡ್​​ಲೈನ್​ ಮಾಡಿರುವುದು ಸತ್ಯ. ಈಗ ಯಡಿಯೂರಪ್ಪ ಅವರನ್ನು ಸಮಾಧಾನ ಮಾಡಲು ಹೋಗಿರಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬಲತ್ಕಾರದಿಂದ ತೆಗೆದು ಹಾಕಿದ್ರು. ಪಕ್ಷದಲ್ಲೂ ಸಹ ಸೈಡ್​ಲೈನ್ ಮಾಡ್ತಾರೆ. ಚುನಾವಣಾ ಪ್ರಚಾರ ಜವಾಬ್ದಾರಿ ಸಹ ಕೊಟ್ಟಿಲ್ಲ. ಬದಲಾಗಿ ಸಿಎಂ ಬಸವರಾಜ ಬೊಮ್ಮಾಯಿ‌ಗೆ ನೀಡಿದ್ದಾರೆ. ಶೋಭಾ ಅವರನ್ನು ಸಂಚಾಲಕಿಯನ್ನಾಗಿ ಮಾಡಿದ್ದಾರೆ. ಇದೆಲ್ಲವೂ ಸೈಡ್​ಲೈನ್ ಮಾಡಿರುವುದು ಸ್ಪಷ್ಟಪಡಿಸುತ್ತದೆ ಎಂದರು.

ಬಾದಾಮಿಗೆ ಕಾರ್ಯಕ್ರಮ ನಿಮಿತ್ತ ಹೋಗುತ್ತಿದ್ದೇನೆ. ಕುಡಿಯುವ ನೀರಾವರಿ ಯೋಜನೆ ಉದ್ಘಾಟನೆಗಾಗಿ ಹೋಗ್ತಾ ಇದ್ದೇನೆ. ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ :ಕಾಂಗ್ರೆಸ್‌ ರಾಜಭವನ ಚಲೋ : ಸಿದ್ದರಾಮಯ್ಯ, ಡಿಕೆಶಿ ಪೊಲೀಸ್ ವಶಕ್ಕೆ

ABOUT THE AUTHOR

...view details