ಕರ್ನಾಟಕ

karnataka

ಕೆಪಿಟಿಸಿಎಲ್, ಎಸ್ಕಾಂ ನೌಕರರಿಗೆ ಶೇ.20, ಸಾರಿಗೆ ನೌಕರರಿಗೆ ಶೇ.15 ವೇತನ ಹೆಚ್ಚಳ

By

Published : Mar 16, 2023, 12:23 PM IST

Updated : Mar 16, 2023, 1:28 PM IST

ಕೆಪಿಟಿಸಿಎಲ್, ಎಸ್ಕಾಂ ಮತ್ತು ನೌಕರರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ವೇತನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

basavaraj bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೆಪಿಟಿಸಿಎಲ್ ಹಾಗೂ ಎಸ್ಕಾಂ‌ ನೌಕರರ ಮುಷ್ಕರ ಎಚ್ಚರಿಕೆ ಹಿನ್ನೆಲೆ ಇದೀಗ ರಾಜ್ಯ ಸರ್ಕಾರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ 20% ವೇತನ‌ ಹೆಚ್ಚಿಸಿ ಇಂಧನ ಇಲಾಖೆ ಅಪರ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಸಿಎಂ ಬೊಮ್ಮಾಯಿ ಬೆಳಗ್ಗೆ ಇಂದೇ ವೇತನ‌ ಪರಿಷ್ಕರಣೆ ಸಂಬಂಧ ಆದೇಶ ಹೊರಡಿಸಲಾಗುವುದು ಎಂದಿದ್ದರು. ಇದೀಗ ಇಂಧನ ಇಲಾಖೆ ನೌಕರರ ವೇತನ‌ ಹೆಚ್ಚಿಸಿ ಆದೇಶಿಸಿದೆ.

ಏಪ್ರಿಲ್ 1, 2022ರಿಂದ ಜಾರಿಗೆ ಬರುವಂತೆ ಕವಿಪ್ರನಿನಿ ಮತ್ತು ಎಸ್ಕಾಂ ಸಿಬ್ಬಂದಿಯ ವೇತನ 20% ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕವಿಪ್ರನಿನಿ ಹಾಗೂ ಇತರ ಎಸ್ಕಾಂಗಳ ನೌಕರರ ವೇತನ ಪರಿಷ್ಕರಣೆಯ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಯನ್ನು ಸರ್ಕಾರದಲ್ಲಿ ಪರಿಶೀಲಿಸಿದ ನಂತರ, ಕವಿಪ್ರನಿನಿ ಹಾಗೂ ಎಸ್ಕಾಂಗಳಲ್ಲಿ ಈಗಿರುವ ಅಧಿಕಾರಿ/ನೌಕರರ ವೇತನದ ಮೇಲೆ ಏಪ್ರಿಲ್ 2022 ರಿಂದ ಜಾರಿಗೆ ಬರುವಂತೆ ಶೇ. 20ರಷ್ಟನ್ನು ಹೆಚ್ಚಿಸಿ ಪರಿಷ್ಕರಿಸಲು ಅನುಮೋದಿಸಲಾಗಿದೆ.

"ಕೆಪಿಟಿಸಿಎಲ್ ಮತ್ತು ಎಸ್ಕಾಂ ನೌಕರರಿಗೆ ಶೇ. 20ರಷ್ಟು ಹಾಗೂ ಸಾರಿಗೆ ಇಲಾಖೆ ನೌಕರರಿಗೆ ಶೇ.15 ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಇಂದೇ ಈ ಕುರಿತು ಆದೇಶ ಹೊರಡಿಸಲಾಗುವುದು" ಎಂದು ಇಂದು ಬೆಳಿಗ್ಗೆ ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.

"ಸಾರಿಗೆ ಇಲಾಖೆ ನೌಕರರಿಂದಲೂ ಸಹ ವೇತನ ಹೆಚ್ಚಳದ ಬೇಡಿಕೆ ಇದೆ. ಅದನ್ನು ಕೂಡ ಸಾರಿಗೆ ಸಚಿವರಾದ ಶ್ರೀರಾಮುಲು ಮತ್ತು ಅಧಿಕಾರಿಗಳ ಜೊತೆ ಎರಡು ಮೂರು ಸುತ್ತು ಮಾತುಕತೆ ನಡೆಸಿದ್ದು, ಎಲ್ಲಾ ರೀತಿಯ ಪರಿಶೀಲನೆಯ ನಂತರ ಸಾರಿಗೆ ನಿಗಮಗಳ ನೌಕರರಿಗೆ ಶೇ. 15 ರಷ್ಟು ವೇತನ ಹೆಚ್ಚಿಸುವ ತೀರ್ಮಾನ ಮಾಡಲಾಗಿದೆ. ಎರಡೂ ಆದೇಶಗಳು ಇಂದೇ ಹೊರಬೀಳಲಿವೆ" ಎಂದಿದ್ದರು.

"ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ನಮ್ಮ ರಾಜ್ಯಕ್ಕೆ ಸೇರಿದ ವಿಷಯಕ್ಕೆ ನಿರ್ಣಯ ಮಾಡಿದೆ. ಕರ್ನಾಟಕ ಗಡಿಭಾಗದ ಜನರಿಗೆ ಆರೋಗ್ಯ ಕೊಡುವ ನಿರ್ಧಾರ ಅಕ್ಷಮ್ಯ ಅಪರಾಧ. ಅಮಿತ್ ಶಾ ಜೊತೆಗಿನ ಮಾತುಕತೆ ವೇಳೆ ಸುಪ್ರೀಂ ಕೋರ್ಟ್ ಆದೇಶ ಬರುವವರೆಗೂ ಎರಡೂ ರಾಜ್ಯಗಳು ಕಾಯಬೇಕು ಎನ್ನುವ ಆಜ್ಞೆ ಉಲ್ಲಂಘನೆಯಾಗಿದೆ. ಹಾಗಾಗಿ, ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಕೂಡಲೇ ನಿರ್ಧಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸುತ್ತಿದ್ದೇನೆ" ಎಂದು ಹೇಳಿದ್ದರು.

"ಮಹಾರಾಷ್ಟ್ರ ಸಚಿವ ಸಂಪುಟ ನಿರ್ಣಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೆ ತರುತ್ತೇನೆ. ಈ ರೀತಿಯ ಯೋಜನೆ ನಾವೂ ಪ್ರಕಟಿಸಬಹುದು. ಮಹಾರಾಷ್ಟ್ರ ರಾಜ್ಯ ವ್ಯಾಪ್ತಿಯ ಹಲವಾರು ಗ್ರಾ.ಪಂಗಳು ಕರ್ನಾಟಕ್ಕೆ ಬರುವ ನಿರ್ಣಯ ಮಾಡಿದ್ದಾರೆ. ಇಂತಹ ಪರಿಸ್ಥಿತಿ ಇದ್ದಾಗ ಮಹಾರಾಷ್ಟ್ರ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿಯ ನಿರ್ಧಾರ ಸರಿಯಲ್ಲ, ಮಹಾರಾಷ್ಟ್ರ ಸಂಪುಟ ನಿರ್ಣಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ" ಎಂದು ಸಿಎಂ ತಿಳಿಸಿದ್ದರು.

ಇದನ್ನೂ ಓದಿ:ಗಡಿ ಭಾಗಕ್ಕೆ ಮಹಾರಾಷ್ಟ್ರ ಸರ್ಕಾರ ಹಣ ಬಿಡುಗಡೆ ಮಾಡಿದ್ರೆ ನಾನ್ಯಾಕೆ ರಾಜೀನಾಮೆ ಕೊಡ್ಲಿ: ಸಿಎಂ ಪ್ರಶ್ನೆ

ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿ, "ರಾಷ್ಟ್ರೀಯ ಹೆದ್ದಾರಿ ಟೋಲ್ ರಸ್ತೆ ಎಂದು ಎಲ್ಲರಿಗೂ ಗೊತ್ತಿದೆ. ಇದನ್ನೆಲ್ಲ ಮಾಡುತ್ತಿರುವುದು ಜನಸಾಮಾನ್ಯರಲ್ಲ. ಇದನ್ನು ರಾಜಕೀಯಗೊಳಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುತ್ತಿದ್ದಾರೆ. ಅವರು ಬಳಸುವ ಭಾಷೆ, ಅವರು ನಡೆದುಕೊಂಡ ರೀತಿ ಯಾವುದೇ ಕನ್ನಡಿಗರಿಗೆ ಶೋಭೆ ತರುವಂತದ್ದಲ್ಲ. ನಾವು ಕಾನೂನು ಪ್ರಕಾರ ಮಾಡುತ್ತಿದ್ದೇವೆ, ಕಾನೂನು ಬಿಟ್ಟು ಏನೂ ಮಾಡುವುದಿಲ್ಲ. ಸರ್ವಿಸ್ ರಸ್ತೆಯಲ್ಲೇ ಟೋಲ್ ಫ್ರೀಯಾಗಿ ಸಂಚಾರಕ್ಕೆ ಬಿಟ್ಟಿದ್ದೇವೆ. ಆದರೂ, ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ" ಎಂದು ಕಾಂಗ್ರೆಸ್​ಗೆ ಟಾಂಗ್ ನೀಡಿದ್ದರು.

ಇದನ್ನೂ ಓದಿ:ಕಾನೂನು ತೊಡಕು ಪರಿಹರಿಸಿ ಎಲ್ಲರಿಗೂ ಹಕ್ಕುಪತ್ರ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

"ಬೇಸಿಗೆ ಕಾಲದಲ್ಲಿ ಅಲ್ಲಲ್ಲಿ ಕಾಳ್ಗಿಚ್ಚು ಕಾಣಿಸಲಿದೆ. ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕ್ರಿಯಾಯೋಜನೆ ಸಿದ್ಧಪಡಿಸಿ ಪೂರ್ವ ಯೋಜನೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ತನ್ನದೇ ಆದ ತಾಂತ್ರಿಕ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈವರೆಗೂ ಆಗಿರುವ ಕಾಳ್ಗಿಚ್ಚು ನಂದಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಫಲರಾಗಿದ್ದಾರೆ" ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು.

Last Updated :Mar 16, 2023, 1:28 PM IST

ABOUT THE AUTHOR

...view details