ಕರ್ನಾಟಕ

karnataka

ಮಳೆ, ಪ್ರವಾಹದಿಂದಾಗುವ ಬೆಳೆಹಾನಿಗೆ ಪರಿಹಾರ ಹೆಚ್ಚಳ: ಪರಿಷ್ಕೃತ ಪರಿಹಾರ ವಿತರಣೆಗೆ ಕಂದಾಯ ಇಲಾಖೆ ಆದೇಶ

By

Published : Jul 26, 2023, 4:09 PM IST

ಕಂದಾಯ ಇಲಾಖೆ ವಿಪತ್ತು ಪ್ರತಿಕ್ರಿಯೆ ನಿಧಿಯಡಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾಗುವ ಬೆಳೆಗೆ ನೀಡುವ ಇನ್ ಪುಟ್ ಸಬ್ಸಿಡಿಯನ್ನು ಹೆಚ್ಚಿಸಿ, ಫಲಾನುಭವಿಗಳಿಗೆ ಪರಿಷ್ಕೃತ ಪರಿಹಾರದ ಮೊತ್ತ ನೀಡಲು ಆದೇಶಿಸಿದೆ.

revenue-department-ordered-increase-in-compensation-for-crop-damage-due-to-floods
ಮಳೆ, ಪ್ರವಾಹದಿಂದಾಗುವ ಬೆಳೆಹಾನಿಗೆ ಪರಿಹಾರ ಹೆಚ್ಚಳ: ಪರಿಷ್ಕೃತ ಪರಿಹಾರ ವಿತರಣೆಗೆ ಕಂದಾಯ ಇಲಾಖೆ ಆದೇಶ

ಬೆಂಗಳೂರು:ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾಗುವ ಬೆಳೆಗೆ ವಿಪತ್ತು ಪ್ರತಿಕ್ರಿಯೆ ನಿಧಿಯಡಿ ನೀಡುವ ಇನ್ ಪುಟ್ ಸಬ್ಸಿಡಿ ಪರಿಷ್ಕರಿಸಿ ಹೆಚ್ಚವರಿ ಮೊತ್ತದೊಂದಿಗೆ ಪರಿಷ್ಕೃತ ಪರಿಹಾರದ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಸಂದಾಯ ಮಾಡುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಪ್ರತಿವರ್ಷ ಮುಂಗಾರು ಹಾಗೂ ಹಿಂಗಾರು ಋತುವಿನಲ್ಲಿ ಭಾರಿ ಮಳೆಯಿಂದ ಹಾಗೂ ನದಿ ಹರಿವಿನಿಂದ ಉಂಟಾಗುವ ಪ್ರವಾಹದಿಂದ ಜನ-ಜಾನುವಾರು, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳ ಹಾನಿ ಆಗುತ್ತಿದೆ.

ಪ್ರತಿ ವರ್ಷ ಬೆಳೆಹಾನಿ ಆಗುವ ಪ್ರಕರಣಗಳಿಗೆ ವಿಪತ್ತು ಪ್ರತಿಕ್ರಿಯೆ ನಿಧಿಯ ಮಾರ್ಗಸೂಚಿಯಂತೆ ಅರ್ಹ ಪ್ರಕರಣಗಳಿಗೆ ಮಾತ್ರ ಪರಿಷ್ಕೃತ ದರದಲ್ಲಿ ಪರಿಹಾರವನ್ನು(ಇನ್ ಪುಟ್ ಸಬ್ಸಿಡಿ) ಪಾವತಿಸಲಾಗುತ್ತಿದೆ. 2023ನೇ ಸಾಲಿನ ಮುಂಗಾರ ಹಂಗಾಮಿನಲ್ಲಿ ಪ್ರವಾಹ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ, ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರದ ವಿಪತ್ತ ಪ್ರತಿಕ್ರಿಯೆ ನಿಧಿ ಮಾರ್ಗಸೂಚಿಯಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಪರಿಷ್ಕೃತ ದರದಲ್ಲಿ ನೀಡಿರುವ ಪರಿಹಾರದಂತೆ ಬೆಳೆ ಹಾನಿಯಾದ ರೈತರಿಗೆ, ಹೆಚ್ಚಿನ ಆರ್ಥಿಕ ನೆರವು ನೀಡಲು ಇನ್ ಪುಟ್ ಸಬ್ಸಿಡಿ ಮೊತ್ತವನ್ನು ಗರಿಷ್ಠ 2 ಹೆಕ್ಟೇರ್​ಗೆ ಸೀಮಿತಗೊಳಿಸಿ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್​ಗೆ ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ 8500 ರೂ. ಆಗಿದ್ದು, ಇದ್ಕಕೆ ರಾಜ್ಯ ಸರ್ಕಾರ 5100 ರೂ. ಹೆಚ್ಚುವರಿಯಾಗಿ ನಿಗದಿಪಡಿಸಿದ್ದು, ಒಟ್ಟು 13,600 ರೂ. ಪರಿಹಾರವನ್ನು ಪ್ರತಿ ಹೆಕ್ಟೇರ್​ಗೆ ವಿತರಿಸಲಾಗುತ್ತದೆ. ಅದೇ ರೀತಿ ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್​ಗೆ ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ 17,000 ರೂ. ಆಗಿದ್ದು, ಇದ್ಕಕೆ ರಾಜ್ಯ ಸರ್ಕಾರ 8000 ರೂ. ಹೆಚ್ಚುವರಿಯಾಗಿ ನಿಗದಿಪಡಿಸಿದ್ದು, ಒಟ್ಟು 25000 ರೂ. ಪರಿಹಾರವನ್ನು ಪ್ರತಿ ಹೆಕ್ಟೇರ್​ಗೆ ವಿತರಿಸಲಾಗುತ್ತದೆ.

ಬಹು ವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್​ಗೆ ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ 22500 ರೂ. ಆಗಿದ್ದು, ಇದ್ಕಕೆ ರಾಜ್ಯ ಸರ್ಕಾರ 5500 ರೂ. ಹೆಚ್ಚುವರಿಯಾಗಿ ನಿಗದಿಪಡಿಸಿದ್ದು, ಒಟ್ಟು 28,000 ರೂ. ಪರಿಹಾರವನ್ನು ಪ್ರತಿ ಹೆಕ್ಟೇರ್​ಗೆ ವಿತರಿಸಲು ನಿರ್ಧರಿಸಿದ್ದು, ಪರಿಷ್ಕೃತ ದರದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಬೆಳೆಹಾನಿಗೆ ಇನ್ ಪುಟ್ ಸಬ್ಸಿಡಿ ಪಾವತಿ ಮಾಡಲು ಸರ್ಕಾರದ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂ.1 ರಿಂದ ಸೆಪ್ಟೆಂಬರ್ 30ರವರೆಗೆ ಹಾಗೂ ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಅತಿವೃಷ್ಟಿ , ಪ್ರವಾಹದಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಅರ್ಹತೆ ಇರುವ ರೈತರಿಗೆ ಗರಿಷ್ಠ 2 ಹೆಕ್ಟೇರ್ ಜಮೀನಿಗೆ ಸೀಮಿತಗೊಳಿಸಿ ಶೇ.33 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾದಲ್ಲಿ ಇನ್ ಪುಟ್ ಸಬ್ಸಿಡಿ ಪಾವತಿಸಬೇಕು ಎಂದು ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿದೆ.

ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಜಂಟಿ ಸರ್ವೆ ತಂಡ ರಚಿಸಿ ಉಲ್ಲೇಖಿತ ಬೆಳೆ ಹಾನಿ ಸಮೀಕ್ಷೆಯನ್ನು ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಪ್ರತ್ಯೇಕವಾಗಿ ನಡೆಸಿ ಸರ್ಕಾರಕ್ಕೆ ಸಲ್ಲಿಸಿ ಅರ್ಹ ಫಲಾನುಭವಿಗಳ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ನಿಯಮಾನುಸಾರ ದಾಖಲಿಸಬೇಕು ಎಂದು ಸೂಚನೆ ನೀಡಿದೆ. ಪರಿಹಾರ ತಂತ್ರಾಂಶದಲ್ಲಿ ಬೆಳೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ನಮೂದಿಸುವುದರಲ್ಲಿ ಏನಾದರೂ ಲೋಪದೋಷಗಳು ಉಂಟಾದಲ್ಲಿ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟ ಎಚ್ಚರಿಕೆ ನೀಡಿದೆ.

ಅರ್ಹ ಫಲಾನುಭವಿಗಳಿಗೆ ಗ್ರಾಮ ಲೆಕ್ಕಾಧಿಕಾರಿ, ಸಂಬಂಧಪಟ್ಟ ತಹಶೀಲ್ದಾರ್ ದೃಢೀಕರಣದೊಂದಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಡಿಜಿಟಲ್ ಸಿಗ್ನೇಚರ್ ದೃಢೀಕರಣಗೊಂಡ ನಂತರ ನೇರವಗಿ ಫಲಾನುಭವಿಗಳ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ಕೂಡಲೇ ಪರಿಹಾರ ಜಮೆ ಮಾಡಬೇಕು ಮತ್ತು ಫಲಾನುಭವಿಗಳ ಪಟ್ಟಿಯನ್ನು ಜಾಲತಾಣ ಮತ್ತು ತಾಲೂಕು ಕಚೇರಿಗಳಲ್ಲಿ ಪ್ರಕಟಿಸಬೇಕು ಎಂದು ಕಂದಾಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ:G.Parameshwar: ಸತ್ಯಾಂಶ ನೋಡಿ ಕಾನೂನಾತ್ಮಕ ಅವಕಾಶಗಳಿದ್ದರೆ ಕೇಸ್‌ ವಾಪಸ್: ಜಿ.ಪರಮೇಶ್ವರ್‌

ABOUT THE AUTHOR

...view details