ಕರ್ನಾಟಕ

karnataka

ಆಪ್ತನನ್ನು ಗೆಲ್ಲಿಸಿಕೊಂಡ ಬಿಎಸ್​​​ವೈ: ಹೈಕಮಾಂಡ್​ಗೆ ಹೆಚ್ಚುವರಿ ಸ್ಥಾನದ ಉಡುಗೊರೆ ನೀಡಿದ ರಾಜ್ಯ ಬಿಜೆಪಿ..!

By

Published : Jun 11, 2022, 10:38 AM IST

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ತಮ್ಮ ಆಪ್ತನನ್ನು ಗೆಲ್ಲಿಸಿಕೊಡುವ ಮೂಲಕ ರಾಜ್ಯ ಬಿಜೆಪಿಯಿಂದ ಹೈಕಮಾಂಡ್​ಗೆ ಹೆಚ್ಚುವರಿ ಸ್ಥಾನದ ಉಡುಗೊರೆ ಕೊಟ್ಟಿದ್ದಾರೆ.

Rajya Sabha result, state BJP gave extra seat to High Command, Former CM BS Yediyurappa news, Rajya Sabha election 2023 news, ರಾಜ್ಯಸಭಾ ಫಲಿತಾಂಶ, ರಾಜ್ಯ ಬಿಜೆಪಿ ಹೈಕಮಾಂಡ್‌ಗೆ ಹೆಚ್ಚುವರಿ ಸ್ಥಾನ ನೀಡಿದೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸುದ್ದಿ, ರಾಜ್ಯಸಭಾ ಚುನಾವಣೆ 2023 ಸುದ್ದಿ,
ಆಪ್ತನನ್ನು ಗೆಲ್ಲಿಸಿಕೊಂಡ ಬಿಎಸ್ವೈ

ಬೆಂಗಳೂರು:ಆಪ್ತನನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಫಲರಾಗಿದ್ದಾರೆ. ಬಿಎಸ್​ವೈ ಲೆಕ್ಕಾಚಾರ, ಮಾಧುಸ್ವಾಮಿ ತಂತ್ರಗಾರಿಕೆ ಫಲ ನೀಡಿದ್ದು, ಹೈಕಮಾಂಡ್​ಗೆ ಬೋನಸ್ ರೂಪದಲ್ಲಿ ಒಂದು ಹೆಚ್ಚುವರಿ ರಾಜ್ಯಸಭೆ ಸ್ಥಾನವನ್ನು ಉಡುಗೊರೆಯಾಗಿ ನೀಡಿದ್ದಾರೆ.

ನಂಬಿ ಬಂದವರನ್ನು ಯಡಿಯೂರಪ್ಪ ಎಂದಿಗೂ ಕೈಬಿಡುವುದಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ಆಪ್ತ ಲೆಹರ್ ಸಿಂಗ್ ಅವರನ್ನು ಎರಡು ಬಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದ ಯಡಿಯೂರಪ್ಪ ಈಗ ರಾಜ್ಯಸಭೆಗೆ ಕಳುಹಿಸಿ ಕೊಡುತ್ತಿದ್ದಾರೆ. ಸಂಖ್ಯಾ ಬಲದ ಆಧಾರದಲ್ಲಿ ಬಿಜೆಪಿ ಹೈಕಮಾಂಡ್ ಇಬ್ಬರ ಹೆಸರನ್ನು ಪ್ರಕಟಿಸಿತ್ತು. ಆದರೆ, ಹೆಚ್ಚುವರಿ ಮತಗಳನ್ನು ಬಳಸಿಕೊಂಡು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳುತ್ತೇವೆ ಎನ್ನುವ ವಾಗ್ದಾನವನ್ನು ರಾಜ್ಯ ಬಿಜೆಪಿ ಮಾಡಿತ್ತು. ಅದರಂತೆ ಮೂರನೇ ಅಭ್ಯರ್ಥಿ ಕಣಕ್ಕಿಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಯಡಿಯೂರಪ್ಪ ಅಂದು ಕೊಂಡಂತೆ ತಮ್ಮ ಆಪ್ತನನ್ನು ದೆಹಲಿ ವಿಮಾನ ಹತ್ತಿಸಿದ್ದಾರೆ.

ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಯಡಿಯೂರಪ್ಪ ಮತ್ತು ಹೈಕಮಾಂಡ್ ನಾಯಕರ ದೆಹಲಿ ಕೊಂಡಿಯಾಗಿ ಕೆಲಸ ಮಾಡಿದ್ದ ಲೆಹರ್ ಸಿಂಗ್ ಅವರಿಗೆ ಪರಿಷತ್ ಸ್ಥಾನ ನೀಡಿದ್ದ ಯಡಿಯೂರಪ್ಪ ಎರಡನೇ ಬಾರಿಯೂ ಅವಕಾಶ ಕಲ್ಪಿಸಿದ್ದರು.‌ 12 ವರ್ಷ ಪರಿಷತ್ ಸದಸ್ಯರಾಗಿದ್ದ ಲೆಹರ್ ಸಿಂಗ್ ಅವರನ್ನು ಅವರ ಅಪೇಕ್ಷೆಯಂತೆ ಯಡಿಯೂರಪ್ಪ ದೆಹಲಿಗೆ ಕಳುಹಿಸಿಕೊಡುತ್ತಿದ್ದಾರೆ. ಆ ಮೂಲಕ ಆಪ್ತರನ್ನು ಕೈಬಿಡುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ.

ಓದಿ:ರಾಜ್ಯಸಭೆ ಫಲಿತಾಂಶ: ಬಿಜೆಪಿಗೆ ಸಿಂಹಪಾಲು, ಕಾಂಗ್ರೆಸ್​ಗೆ ಮತ್ತೆ ನಿರಾಶೆ

122 ಸದಸ್ಯ ಬಲದ ಬಿಜೆಪಿ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್​ಗೆ ತಲಾ 45 ಮತಗಳನ್ನು ಹಾಕಬೇಕು. ಉಳಿದ 32 ಹೆಚ್ಚುವರಿ ಮತಗಳನ್ನು ಲೆಹರ್ ಸಿಂಗ್ ಅವರಿಗೆ ಹಾಕಬೇಕು. ಮೊದಲೆರಡು ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕಿದವರು ಲೆಹರ್ ಸಿಂಗ್ ಅವರಿಗೆ ಎರಡನೇ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಆದರೆ, ಹೈಕಮಾಂಡ್ ನಿರ್ಮಲಾ ಸೀತಾರಾಮನ್ ಅವರಿಗೆ ಒಂದು ಹೆಚ್ಚುವರಿ ಮತ ಹಂಚಿಕೆ ಮಾಡುವಂತೆ ಸೂಚಿಸಿತ್ತು. ಅದರಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ 46, ಜಗ್ಗೇಶ್​​ಗೆ 45 ಮತ್ತು ಲೆಹರ್ ಸಿಂಗ್ ಗೆ 31 ಮತಗಳ ಹಂಚಿಕೆ ಮಾಡಿ ಮೊದಲೆರಡು ಅಭ್ಯರ್ಥಿಗಳ ಪರ ಮತ ಚಲಾಯಿಸುವ ಶಾಸಕರು ಎರಡನೇ ಪ್ರಾಶಸ್ತ್ಯದ ಮತವನ್ನು ಲೆಹರ್ ಸಿಂಗ್ ಪರ ಚಲಾಯಿಸುವಂತೆ ಶಾಸಕಾಂಗ ಸಭೆಯಲ್ಲಿ ಸೂಚಿಸಿ ವಿಪ್ ಜಾರಿಗೊಳಿಸಲಾಯಿತು.

ಅಂದಿನ ಸಭೆಗೆ ಗೈರಾಗಿದ್ದ ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ‌ಸಿ ಮಾಧುಸ್ವಾಮಿ ಮೂಲಕ ಮತಗಳ ಹಂಚಿಕೆ ವಿವರ ಪಡೆದುಕೊಂಡು ತಾಂತ್ರಿಕ ಸಮಸ್ಯೆ ಪ್ರಶ್ನೆ ಎದುರಾಗುವ ಮಾಹಿತಿ ಪಡೆದುಕೊಂಡರು. ತಕ್ಷಣವೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಸೂಚನೆ ನೀಡಿ ಮುಖ್ಯ ಸಚೇತಕರ ಮೂಲಕ ವಿಪ್ ವಾಪಸ್ ಪಡೆದುಕೊಳ್ಳುವಂತೆ ಮಾಡಿದರು.

ಕಳೆದ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಗೆ ಯಡಿಯೂರಪ್ಪ ಹಾಜರಾದರು. ಸಿಎಂ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದರು. ತಾಂತ್ರಿಕ ಸಮಸ್ಯೆಗೆ ಪರಿಹಾರಾತ್ಮಕವಾಗಿ ಹೊಸ ಲೆಕ್ಕಾಚಾರದ ಮೂಲಕ ಮತಗಳ ಹಂಚಿಕೆ ಮಾಡಿಕೊಂಡಿರುವ ಮಾಹಿತಿ ಹಂಚಿಕೊಳ್ಳಲಾಯಿತು. ಅದರಂತೆ ಹೈಕಮಾಂಡ್ ಸೂಚಿಸಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ 46 ಮತ, ಜಗ್ಗೇಶ್​​​ಗೆ 44 ಪ್ರಥಮ ಪ್ರಾಶಸ್ತ್ಯದ ಮತ ಮತ್ತು 32 ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಹಂಚಿಕೆ ಮಾಡಲಾಯಿತು.

ಓದಿ:ರಾಜ್ಯಸಭೆ ಚುನಾವಣೆಯಲ್ಲಿ ನಿರ್ಮಲಾ, ಜಗ್ಗೇಶ್‌, ಲೆಹರ್‌ ಸಿಂಗ್‌, ಜೈರಾಂ ರಮೇಶ್‌ಗೆ ಗೆಲುವು

ಮೂರನೇ ಅಭ್ಯರ್ಥಿ ಲೆಹರ್ ಸಿಂಗ್​ಗೆ 32 ಪ್ರಥಮ ಪ್ರಾಶಸ್ತ್ಯದ ಮತಗಳು ಮತ್ತು ನಿರ್ಮಲಾ ಸೀತಾರಾಮನ್ ಹಾಗೂ ಇತರ ಮೂಲಗಳಿಂದ 1.17 ಮತಗಳು ವರ್ಗಾವಣೆಯಾಗುವುದು ಎನ್ನುವ ಲೆಕ್ಕಾಚಾರ ಹಾಕಲಾಗಿತ್ತು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಹೊರತುಪಡಿಸಿ ಯಾವುದೇ ತಂತ್ರ ಎದುರಾದರೂ ಅದನ್ನು ಎದುರಿಸುವಂತೆ ಮಾಸ್ಟರ್ ಪ್ಲಾನ್ ಮಾಡಿ ಮತಗಳ ಹಂಚಿಕೆ ಮಾಡಲಾಯಿತು.

ಯಡಿಯೂರಪ್ಪ ಆಸಕ್ತಿಯಿಂದಲೇ ಮತಗಳ ಹಂಚಿಕೆ ಮೇಲೆ ಹೆಚ್ಚಿನ ಗಮನ ಹರಿಸಿದ್ದರು. ಜೆಡಿಎಸ್​ಗೆ 32 ಮತಗಳು ಬಿದ್ದರೂ ಬಿಜೆಪಿಗೆ ಹಿನ್ನಡೆಯಾಗದಂತೆ ಲೆಹರ್‌ಸಿಂಗ್ ಗೆ 33.17 ಮತಗಳು ಬೀಳುವಂತೆ ಪ್ಲಾನ್ ಮಾಡಿದ್ದು, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾದರು.

ಹೈಕಮಾಂಡ್ ಸೂಚಿಸಿದ್ದ ಜಗ್ಗೇಶ್​ಗೆ 44 ಮತ ಹಂಚಿಕೆ ಮಾಡಿ ರಿಸ್ಕ್ ತೆಗೆದುಕೊಂಡಿದ್ದ ಯಡಿಯೂರಪ್ಪ ಟೀಂ, ಜಗ್ಗೇಶ್ ಗೆಲುವಿಗೆ ಅಡ್ಡಿಯಾಗದಂತೆ ನೋಡಿಕೊಂಡು ಜೊತೆಗೆ ಮೂರನೇ ಸ್ಥಾನ ದಕ್ಕಿಸಿಕೊಳ್ಳುವ ಮೂಲಕ ಹೈಕಮಾಂಡ್​ಗೆ ಹೆಚ್ಚುವರಿ ಸ್ಥಾನದ ಉಡುಗೊರೆ ನೀಡಿ ತಮ್ಮಲ್ಲಿ ಇನ್ನು ತಾಂತ್ರಿಕ ನೈಪುಣ್ಯತೆ ಇದೆ, ರಾಜಕೀಯ ಚದುರಂಗದಾಟದಲ್ಲಿ ಹಿಂದೆ ಬಿದ್ದಿಲ್ಲ ಎನ್ನುವ ಸಂದೇಶವನ್ನು ಯಡಿಯೂರಪ್ಪ ಹೈಕಮಾಂಡ್​ಗೆ ರವಾನಿಸಿದ್ದಾರೆ.

ABOUT THE AUTHOR

...view details