ಕರ್ನಾಟಕ

karnataka

ರಾಜ್ಯೋತ್ಸವ ದಿನದಂದೇ ನಾಡಿನ ಗಡಿಯಲ್ಲಿ ಮಹಾರಾಷ್ಟ್ರದ ಕರಾಳದಿನದ ಆಚರಣೆಗೆ ಜಿ.ಸಿ. ಚಂದ್ರಶೇಖರ್ ಖಂಡನೆ

By

Published : Oct 31, 2020, 11:34 PM IST

ಕರ್ನಾಟಕದಲ್ಲಿ ವಾಸಿಸುತ್ತಿರುವ ಎಲ್ಲ ಭಾಷಿಗರು ಕನ್ನಡಿಗರೇ ಅದನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳದೆ ನಿಷ್ಟುರತೆಯಿಂದ ಮಾತನಾಡುವ ಸ್ವಾಭಿಮಾನಿ ರಾಜಕಾರಣಿಗಳ ಅವಶ್ಯಕತೆ ಇದೆ ಎಂದು ಜಿ.ಸಿ. ಚಂದ್ರಶೇಖರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Rajya Sabha member G.C. Chandrashekhar
ಜಿ.ಸಿ. ಚಂದ್ರಶೇಖರ್

ಬೆಂಗಳೂರು: ನೆರೆ ರಾಜ್ಯಗಳ ಸರ್ಕಾರಗಳಂತೆ ಭಾಷೆ, ಗಡಿಯ ಬಗ್ಗೆ ನಿರ್ಧಾರ ಕೈಗೊಳ್ಳಲು ಕರ್ನಾಟಕವನ್ನಾಳುವ ಸರ್ಕಾರಗಳಿಗೂ ಇಚ್ಛಾ ಶಕ್ತಿ ಬೇಕು ಎಂದು ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಶಿವಸೇನೆ ಮತ್ತೆ ಕ್ಯಾತೆ ತೆಗೆದಿದೆ. ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಸರ್ಕಾರ ಬೆಂಬಲ ನೀಡಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಬೆಂಬಲ ವ್ಯಕ್ತವಾಗಿದೆ, ರಾಜಕೀಯದ ಮೇಲಾಟದದಲ್ಲಿ ಭಾಷೆಯನ್ನು ಸಹ ರಾಜಕೀಯದ ಸರಕು ಮಾಡಿ ನೆರೆ ರಾಜ್ಯಗಳ ಗಡಿ ತಂಟೆಗೆ ಉಪ್ಪು ಸುರಿಯುವ ಕೆಲಸ ಮಹಾರಾಷ್ಟ್ರ ಸರ್ಕಾರ ಹಿಂದಿನಿಂದ ಮಾಡುತ್ತಾ ಬಂದಿದೆ, ರಾಜಕೀಯ ನಾಯಕರಲ್ಲಿ ನಾಡ, ಗಡಿಯ ಬಗ್ಗೆ ಅಭಿಮಾನ್ಯ ಶೂನ್ಯತೆ ಎದ್ದು ಕಾಣುತ್ತಿದೆ. ತನ್ನ ಹಳಮೆಯನ್ನು ಮರೆತು ಕೇವಲ 'ನಾನು ಕನ್ನಡಿಗ' ಎಂದು ಹೇಳಿಕೊಂಡು ಒಂದು ದಿನದ ರಾಜ್ಯೋತ್ಸವ ಸಂಭ್ರಮ ಮಾಡಿಬಿಟ್ಟರೆ ಸಾಕೆ? ಈ ನಾಡಿಗೆ ಇದಕ್ಕಿಂತ ದೌರ್ಭಾಗ್ಯ ಬೇರೊಂದಿಲ್ಲ, ಇತಿಹಾಸ ತಿಳಿಯದ ಮನುಷ್ಯ ಇಂದಿಗೂ ಇತಿಹಾಸ ಸೃಷ್ಟಿಸಲಾರ ಅಷ್ಟಕ್ಕೂ ಈ ಗಡಿ ತಂಟೆಯ ಬಗೆಗಿನ ಇತಿಹಾಸ ಕೆದಕುತ್ತಾ ಹೋದಂತೆ ಕನ್ನಡ ನಾಡ ವೀರರ ಶೂರರ, ಪರಾಕ್ರಮಗಳ ಹೆಜ್ಜೆ ಗುರುತುಗಳೇ ಈಗಿನ ಮಹಾರಾಷ್ಟ್ರ ತುಂಬೆಲ್ಲಾ ನಮಗೆ ಕಾಣ ಸಿಗುತ್ತವೆ ಎಂದಿದ್ದಾರೆ.

ಸುದೀರ್ಘ ಪ್ರಕಟಣೆ ಹೊರಡಿಸುವ ಅವರು, ಚಾಲುಕ್ಯರ ಕಾಲದಿಂದಲೂ ಬೆಳಗಾವಿ ಕನ್ನಡಿಗರದ್ದೇ! ಈ ವಿಚಾರದಲ್ಲಿ ನಾವು ಇತಿಹಾಸದ ಪುಟಗಳನ್ನು ತಿರುವಿ ಹಾಕುವುದಾದರೆ, ಏಳನೇ ಶತಮಾನದಲ್ಲಿ ಆಳ್ವಿಕೆ ಗೈದ ಬಾದಾಮಿ ಚಾಲುಕ್ಯರ ಕಾಲದಿಂದಲೂ ಬೆಳಗಾವಿ ಕನ್ನಡಿಗರಿಗೇ ಸೇರಿದ್ದಾಗಿದೆ. ಮುಂದೆ ಬಂದಂಥ 12ನೇ ಶತಮಾನದ ಕಳಚೂರ್ಯರ ಕಾಲದಲ್ಲೂ ಇಲ್ಲಿ ಕನ್ನಡಿಗರೆ ವಾಸವಾಗಿದ್ದರು ಅನ್ನುವುದಕ್ಕೆ ಆಧಾರವಾಗಿ ಶಾಸನಗಳಿವೆ! ಬೆಳಗಾವಿಯಲ್ಲಿ ಕನ್ನಡಿಗರನ್ನು ಕಡೆಗಣಿಸಿ ಮರಾಠಿಗರ ಪಾರುಪತ್ಯ ಶುರುವಾಗಿದ್ದೇ ಪೇಶ್ವೆಯರ ಆಳ್ವಿಕೆಯಲ್ಲಿ. ಬಾಜೀರಾಯನ ಕಾಲದಲ್ಲಿ ಪೇಶ್ವೆ ಆಡಳಿತ ಪರಾಕಾಷ್ಟೆ ತಲುಪಿತ್ತು ಅಂತಾ ಇತಿಹಾಸದಿಂದ ಗೊತ್ತಾಗುತ್ತದೆ. ಈ ವೇಳೆ, ಉತ್ತರ ಕರ್ನಾಟಕದ ಕೆಲ ಭಾಗಗಳು ಮರಾಠರ ಕೈ ವಶವಾಗುತ್ತವೆ. ಪೇಶ್ವೆಯವರ ವಶವಾದ ಪ್ರದೇಶಗಳಲ್ಲಿ ಬೆಳಗಾವಿಯೂ ಒಂದು. ಯಾವಾಗ 18ನೇ ಶತಮಾನದಲ್ಲಿ ಇದು ಬ್ರಿಟೀಷರ ಆಡಳಿತಕ್ಕೊಳಪಟ್ಟಿತೋ ಆಗ ಬೆಳಗಾವಿ ಮರಾಠಾ ಜಹಾಗೀರುದಾರರ ಉಸ್ತುವಾರಿಯಲ್ಲಿರುತ್ತದೆ. ಆಡಳಿತಾತ್ಮಕವಾಗಿ ಏನೇ ಬದಲಾವಣೆಯಾದರೂ ಆಗಲೂ ಇಲ್ಲಿನವರು ಮಾತನಾಡುತ್ತಿದ್ದುದು ಕನ್ನಡವನ್ನೇ! ಯಾಕೆಂದರೆ, ಅವರೆಲ್ಲ ಅಪ್ಪಟ ಕನ್ನಡಿಗರೇ! ಎಂದಿದ್ದಾರೆ.

ಮಹಾಜನ್ ವರದಿ ಪ್ರಸ್ತಾಪ: ಕೇಂದ್ರ ಸರ್ಕಾರ ತಮಗೆ ವಹಿಸಿದ ಕೆಲಸವನ್ನು ಶಿರಸಾವಹಿಸಿ ಮಾಡಲು ಮಹಾಜನ್ ಅವರು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಎರಡೂ ರಾಜ್ಯದಲ್ಲಿ ತಿರುಗಿದ್ದಾರೆ. 7572 ಮನೆಗಳ ಬಾಗಿಲು ತಟ್ಟಿದ್ದಾರೆ! 2240 ಮನವಿಗಳನ್ನು ಪರಿಶೀಲಿಸಿದ್ದಾರೆ. 814 ಗ್ರಾಮಗಳಿಗೆ ಭೇಟಿ ಕೊಟ್ಟಿದ್ದಾರೆ. ಸಹಸ್ರ ಸಹಸ್ರ ಜನರೊಂದಿಗೆ ಮಾತನಾಡಿ ಸತ್ಯ ಶೋಧಿಸಿದ್ದಾರೆ. ಪಂಜಾಬ್ ಮೂಲದ ನಿವೃತ್ತ ನ್ಯಾಯಮೂರ್ತಿಗಳಾದ ಎಂ.ಸಿ. ಮಹಾಜನ್ ಅವರು ಕರ್ನಾಟಕದ ಪರವಾಗಿ ವರದಿ ನೀಡಲು ಅವರೇನು ಕರ್ನಾಟಕದ ನೆಂಟರೇನಲ್ಲ! ಇನ್ನು ಧರ್, ನೆಹರು ಮತ್ತು ಫಜಲ್ ಅಲಿ ನೀಡಿದ ವರದಿಗಳಲ್ಲೂ ಬೆಳಗಾವಿ ಕರ್ನಾಟಕದ್ದೇ ಅನ್ನುವುದು ಗಮನಾರ್ಹ! ಮಹಾಜನ್ ವರದಿ ಜಾರಿಯಾಗಿದ್ದೇಯಾದರೆ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ್, ಸೊಲ್ಲಾಪುರಗಳೂ ಕರ್ನಾಟಕ್ಕೆ ಸೇರಬೇಕಾಗುತ್ತದೆ! ಅತ್ತ ಕೇರಳದ ಕಾಸರಗೋಡು ಕೂಡ ಕರ್ನಾಟಕದ್ದೇ ಆಗುತ್ತದೆ ಎಂದು ಬೇರೆ ಹೇಳಬೇಕಿಲ್ಲ! ಯಾಕೆಂದರೆ, ಬೆಳಗಾವಿ ಕರ್ನಾಟಕದ್ದು ಅಂತಾ ಬರೀ ಮಹಾಜನ್ ರು ಹೇಳಿದ್ದಲ್ಲ! ಅವರಿಗಿಂತಲೂ ಮುನ್ನ ಅಂದರೆ 85 ವರ್ಷಗಳ ಹಿಂದೆನೇ ಬೆಳಗಾವಿ ಕರ್ನಾಟಕದ್ದೇ ಎಂದು ಸಾರುವ ಬ್ರಿಟೀಷರ ಗೆಜೆಟಿಯರ್ ದಾಖಲೆಯನ್ನು ಯಾರೂ ಅಳಿಸಲಾಗಲ್ಲ! ಎಂದು ವಿವರಿಸಿದ್ದಾರೆ. ಗೆಜೆಟಿಯರ್ ನಲ್ಲಿ ಇರುವ ಎಲ್ಲಾ ಅಂಶಗಳನ್ನು ಸವಿಸ್ತಾರವಾಗಿ ಬಿಚ್ಚಿಟ್ಟಿದ್ದಾರೆ.

ಇಷ್ಟೆಲ್ಲಾ ಗಡಿ ತಂಟೆ ತಕರಾರುಗಳ ನಡುವೆಯೂ ಕರ್ನಾಟಕದ ರಾಜಕಾರಣಿಗಳು ತಮ್ಮ ಸ್ವಾಭಿಮಾನ ಮರೆತು ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತ ತಂಟೆಕೋರರಿಗೆ ಬಾಹ್ಯ ಬೆಂಬಲವನ್ನು ನೀಡುತ್ತಾ ಬಂದಿರುವುದು ವಾಸ್ತವ, ಇನ್ನಾದರೂ ಸತ್ತಂತಿರುವವರನು ಬಡಿದೆಚ್ಚರಿಸುವ ಮಹತ್ತರ ಕಾರ್ಯ ರಾಜ್ಯ ಸರ್ಕಾರದಿಂದ ಆಗಬೇಕಿದೆ, ಅಭಿಮಾನ್ಯ ಶೂನ್ಯ ಕನ್ನಡಿಗರು ಎಚ್ಚೆತ್ತುಕೊಂಡು ತನ್ನ ನೆಲೆ, ಜಲ, ಭಾಷೆಯ ವಿಚಾರಕ್ಕೆ ಬಂದರೆ ಒಬ್ಬ ಕನ್ನಡಿಗ ಕೋಟಿ ಕನ್ನಡಿಗನಾಗಿ ನಾಡರಕ್ಷಣೆಗೆ ಟೊಂಕಕಟ್ಟಿನಿಂತ ಸಿಪಾಯಿಯಾಗಬೇಕಿರುವುದು ಅನಿವಾರ್ಯ ಎಂದಿದ್ದಾರೆ.

ABOUT THE AUTHOR

...view details