ಕರ್ನಾಟಕ

karnataka

ಪುಣ್ಯಕೋಟಿ ಗೋ ದತ್ತು ಯೋಜನೆಗೆ ಇನ್ನೂ ಸಿಗದ ಜನಸ್ಪಂದನೆ: ಯೋಜನೆ ಮೇಲೆ ಶಾಸಕರಿಗೇ ಇಲ್ಲದ ಕಾಳಜಿ!

By

Published : Feb 9, 2023, 4:44 PM IST

Updated : Feb 9, 2023, 5:18 PM IST

ದೇಶಿ ತಳಿಗಳ ಸಂರಕ್ಷಣೆ ಹಾಗೂ ಹಸುಗಳ ಆರೈಕೆಗಾಗಿ ರಾಜ್ಯ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆ ಜಾರಿ - ಹಸು ದತ್ತು ತೆಗೆದುಕೊಳ್ಳಲು ಜನನಾಯಕರ ನಿರಾಸಕ್ತಿ - ಯೋಜನೆ ಅನುಷ್ಠಾನವಾಗಿ ಆರು ತಿಂಗಳು ದತ್ತು ತೆಗೆದುಕೊಳ್ಳಲು ಬಾರದ ಗೋ ಪ್ರಿಯರು

Logo of Punyakoti Go Adoption Scheme
ಪುಣ್ಯಕೋಟಿ ಗೋ ದತ್ತು ಯೋಜನೆ ಲೋಗೊ

ಬೆಂಗಳೂರು: ಗೋ ಸಂಕುಲ ಸಂರಕ್ಷಿಸಲು ಬಿಜೆಪಿ ಸರ್ಕಾರ ಮಹತ್ವಾಕಾಂಕ್ಷೆಯ ಪುಣ್ಯಕೋಟಿ ದತ್ತು ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ. ಆದರೆ, ಯೋಜನೆ ಅನುಷ್ಠಾನಗೊಂಡು ಆರು ತಿಂಗಳು ಕಳೆದರೂ ಇನ್ನೂ ಜನಸ್ಪಂದನೆ ಸಿಕ್ಕಿಲ್ಲ. ವಿಪರ್ಯಾಸ ಅಂದರೆ ಗೋ ಮಾತೆ ಬಗ್ಗೆ ಮಾತನಾಡುವವರೇ ಹಸು ದತ್ತು ತೆಗೆದುಕೊಳ್ಳಲು ನಿರಾಸಕ್ತಿ ತೋರಿಸುತ್ತಿದ್ದಾರೆ.

ಪುಣ್ಯಕೋಟಿ ದತ್ತು ಯೋಜನೆ: ಇದು ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಹಿಂದಿನ ವರ್ಷ ಜುಲೈ 28ಕ್ಕೆ ರಾಜ್ಯ ಸರ್ಕಾರ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ನೀಡಿತ್ತು. ಸ್ಥಳೀಯ ದೇಶಿ ತಳಿಗಳ ಸಂರಕ್ಷಣೆ , ಗೋಶಾಲೆಗಳ ಆರ್ಥಿಕ ಸಬಲೀಕರಣ ಹಾಗೂ ಹಸುಗಳ ಆರೈಕೆಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಸಾರ್ವಜನಿಕ ಸಹಭಾಗಿತ್ವದೊಂದಿಗೆ ದತ್ತು ಪಡೆದ ಹಸುವಿನ ಜತೆಗೆ ಉಂಟಾಗುವ ಭಾವನಾತ್ಮಕ ಬಂಧದಿಂದ ದಾನಿಗಳ ಮನಸ್ಸಿನ ಕ್ಷೇಮ ಸುಧಾರಣೆಯ ಉದ್ದೇಶದೊಂದಿಗೆ ಈ ಯೋಜನೆ ಪ್ರಾರಂಭಿಸಲಾಗಿದೆ.

ಸಿಎಂ ಬೊಮ್ಮಾಯಿ‌ ಅವರು 11 ಹಸುಗಳನ್ನು ದತ್ತು ಪಡೆದು ಯೋಜನೆಗೆ ಚಾಲನೆ‌ ನೀಡಿದ್ದರು. ವಾರ್ಷಿಕ 11 ಸಾವಿರ ಮೊತ್ತಕ್ಕೆ ಗೋವುಗಳನ್ನು ಗೋ ಶಾಲೆಗಳಿಂದ ದತ್ತು ಪಡೆಯುವ ಯೋಜನೆ ಇದಾಗಿದೆ. ರಾಜ್ಯದಲ್ಲಿ ಗೋವುಗಳನ್ನು ಗೋಮಾತೆ ಎಂದು ಪೂಜಿಸುವ ಲಕ್ಷಗಟ್ಟಲೆ ಜನರಿದ್ದಾರೆ. ಗೋವುಗಳ ಸೇವೆ ಪುಣ್ಯದ ಕೆಲಸವೆನ್ನುವ ಭಾವನೆ ನಮ್ಮಲ್ಲಿದೆ. ಈ ಯೋಜನೆಯಿಂದ ಗೋಶಾಲೆ ಹಾಗೂ ಗೋವುಗಳ ನಿರ್ವಹಣೆ ಸಾಧ್ಯವಾಗಲಿದೆ. ವಯಸ್ಸಾದ ಗೋವುಗಳ ನಿರ್ವಹಣೆಗೆ ಪರಿಹಾರ ಒದಗಿಸುವ ಸಕಾರಾತ್ಮಕ ಚಿಂತನೆಯಿಂದ ಈ ಯೋಜನೆಯನ್ನು ಸರ್ಕಾರ ರೂಪಿಸಿದೆ. ಆದರೆ ಇನ್ನೂ ಈ ಯೋಜನೆಗೆ ಜನಸ್ಪಂದನೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.

ಪುಣ್ಯ ಕೋಟಿಗೆ ಸಿಗದ ಜನಸ್ಪಂದನೆ: ಬಹಳ ನಿರೀಕ್ಷೆಯೊಂದಿಗೆ ಜಾರಿ ಮಾಡಲಾಗಿದ್ದ ಪುಣ್ಯಕೋಟಿ ದತ್ತು ಯೋಜನೆಗೆ ಸಾರ್ವಜನಿಕರಿಂದ ಇನ್ನೂ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಯೋಜನೆ ಅನುಷ್ಠಾನವಾಗಿ ಆರು ತಿಂಗಳು ಕಳೆದಿವೆ. ಆದರೆ, ಗೋ ಪ್ರಿಯರು ಮಾತ್ರ ಹಸುಗಳನ್ನು ದತ್ತು ಪಡೆಯಲು ಮುಂದೆ ಬರುತ್ತಿಲ್ಲ. ಪಶು ಸಂಗೋಪನೆ ಇಲಾಖೆ ನೀಡಿದ ಅಂಕಿ- ಅಂಶದ ಪ್ರಕಾರ ಪುಣ್ಯಕೋಟಿ ದತ್ತು ಯೋಜನೆಗೆ ಜನಸ್ಪಂದನೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಈ ಯೋಜನೆ ಜಾರಿಯಾದಾಗಿನಿಂದ ಈ ವರೆಗೆ ಒಟ್ಟು 245 ಹಸುಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಕೆಲವರು ಮೂರು ತಿಂಗಳ ಅವಧಿಗೆ ಹಸು ದತ್ತು ಪಡೆದಿದ್ದು, ಇನ್ನು ಕೆಲವರು ಒಂದು ವರ್ಷದ ಅವಧಿಗೆ ಹಸು ದತ್ತು ಪಡೆದುಕೊಂಡಿದ್ದಾರೆ. ಹಾಗಾಗಿ ಕೆಲ ಹಸುಗಳ ದತ್ತು ಅವಧಿ ಮುಗಿದಿದ್ದು, ಸದ್ಯ 190 ಹಸುಗಳ ದತ್ತು ಅವಧಿ ಚಾಲ್ತಿಯಲ್ಲಿದೆ ಎಂದು ಪಶುಸಂಗೋಪನೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಮಾರು 1,717 ದಾನಿಗಳು ಗೋ ಶಾಲೆಗೆ ದೇಣಿಗೆ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 188 ನೋಂದಾಯಿತ ಗೋ ಶಾಲೆಗಳಿವೆ. ಈ ಗೋಶಾಲೆಗಳಲ್ಲಿ 26,605 ಗೋವುಗಳನ್ನು ನೋಂದಾಯಿಸಲಾಗಿದೆ. ಈ ವರೆಗೆ ದತ್ತು ಹಾಗೂ ದಾನದ ಮೂಲಕ ಸುಮಾರು 30 ಲಕ್ಷ ರೂ. ಮಾತ್ರ ಸ್ವೀಕರಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪುಣ್ಯಕೋಟಿ ಯೋಜನೆಗೆ 26 ಕೋಟಿ ರೂ. ದೇಣಿಗೆ ನೀಡುವ ಮೂಲಕ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಪಶುಸಂಗೋಪನೆ ಇಲಾಖೆ ಮಾಹಿತಿ ನೀಡಿದೆ.

ಪುಣ್ಯಕೋಟಿಗೆ ಶಾಸಕರ ನಿರಾಸಕ್ತಿ: ಸರ್ಕಾರದ ಈ ಮಹಾತ್ವಾಕಾಂಕ್ಷೆಯ ಯೋಜನೆಗೆ ಯಶ ಕಾಣದಿರಲು ಪ್ರಮುಖ ಕಾರಣ ಶಾಸಕರೇ ನಿರಾಸಕ್ತಿ ತೋರಿ. ಬಿಜೆಪಿ ನಾಯಕರು, ಶಾಸಕರು ಗೋ ಮಾತೆ ಬಗೆಗಿನ‌ ತಮ್ಮ ಪ್ರೀತಿ,ಕಾಳಜಿಯನ್ನು ಬರೇ ಭಾಷಣದಲ್ಲಿ ತೋರಿಸುತ್ತಾರೆ. ವಾಸ್ತವದಲ್ಲಿ ಯಾವೊಬ್ಬ ಬಿಜೆಪಿ ಶಾಸಕರು, ನಾಯಕರು ಹಸು ದತ್ತು ತೆಗೆದುಕೊಳ್ಳಲು ಮುಂದಾಗಿಲ್ಲ. ಹಸುಗಳನ್ನು ದತ್ತು ತೆಗೆದುಕೊಳ್ಳುವಂತೆ ಸಿ ಎಂ ಬೊಮ್ಮಾಯಿ‌ ಸ್ವತಃ ಎಲ್ಲ ಶಾಸಕರಿಗೆ ಕಳೆದ ವರ್ಷ ಆಗಸ್ಟ್ ನಲ್ಲಿ ಪತ್ರ ಬರೆದಿದ್ದರು. ಆದರೆ, ಸಿಎಂ ಪತ್ರವನ್ನೂ ಯಾವೊಬ್ಬ ಶಾಸಕರೂ ಗಂಭೀರವಾಗಿ ಪರಿಗಣಿಸಿಲ್ಲವಂತೆ.


ಸಚಿವ ಪ್ರಭು ಚವ್ಹಾಣ್​ 30 ಹಸುಗಳನ್ನು ದತ್ತು:ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌವ್ಹಾಣ್ 30 ಹಸು ದತ್ತು ಪಡೆದಿದ್ದಾರೆ. ಪುಣ್ಯಕೋಟಿ ದತ್ತು ಯೋಜನೆಯಡಿ ಈವರೆಗೆ ಸುಮಾರು 1-2% ಮಂದಿ ಆಸುಪಾಸು ಮಾತ್ರ ಶಾಸಕರು ಹಸುಗಳನ್ನು ದತ್ತು ಪಡೆದಿದ್ದಾರೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಪುಣ್ಯಕೋಟಿ ಯೋಜನೆಗೆ ದೇಣಿಗೆ ನೀಡಲು ಅರಿವು ಮೂಡಿಸಿದರೆ ಯೋಜನೆ ಯಶಸ್ಸು ಕಾಣಲಿದೆ.‌ ಜೊತೆಗೆ ಶಾಸಕರೇ ಹಸು ದತ್ತು ಪಡೆದರೆ ಬಹುತೇಕ ಪುಣ್ಯಕೋಟಿ ಯೋಜನೆ ಯಶ‌ ಕಾಣಲಿದೆ ಎಂದು ಇಲಾಖೆ ಅಧಿಕಾರಿಗಳೇ ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಶಾಕರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಯೋಜನೆ ಪರ ಪ್ರಚಾರದ ಕೊರತೆ: ದತ್ತು ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಮಾಡದಿದ್ದ ಕಾರಣ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ ಎಂದು ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಜನರಿಗೆ ಪುಣ್ಯಕೋಟಿ ದತ್ತು ಯೋಜನೆ ಬಗ್ಗೆ ಅರಿವಿನ ಕೊರತೆ ಇದೆ ಎಂಬುವುದನ್ನು ಮಾಹಿತಿ ನೀಡಿದ್ದಾರೆ.

ದತ್ತು ಹೇಗೆ ಪಡೆಯವುದು?: ದತ್ತು ಪಡೆದರೆ ಸಿಗುವ ಲಾಭಗಳ ಬಗ್ಗೆ ಪ್ರಚಾರ ಕಾರ್ಯ ಮಾಡಿದರೆ ಯೋಜನೆಗೆ ಜನಸ್ಪಂದನೆ ಸಿಗಲಿದೆ. ಆದರೆ, ಅದರಿಂದ ಹೆಚ್ಚಿನ ಜನಸ್ಪಂದನೆ ಸಿಕ್ಕಿಲ್ಲ. ಅವರ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಅಗತ್ಯ ಇದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೋವುಗಳನ್ನು 3 ತಿಂಗಳು, 6 ತಿಂಗಳು, 9 ತಿಂಗಳು ಅಥವಾ ಒಂದು ವರ್ಷದಂತೆ ಐದು ವರ್ಷದ ವರೆಗೆ ದತ್ತು ಪಡೆಯಬಹುದಾಗಿದೆ‌. ದತ್ತು ಪಡೆದವರಿಗೆ ತೆರಿಗೆಯಲ್ಲೂ ವಿನಾಯಿತಿ ಸಿಗಲಿದೆ. ಈ ಎಲ್ಲ ಅಂಶಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಮೂಲಕ ಪುಣ್ಯಕೋಟಿ ದತ್ತು ಯೋಜನೆಗೆ ಹೆಚ್ಚಿನ ಜನಸ್ಪಂದನೆ ಸಿಗುವಂತೆ ಮಾಡುವ ಜವಾಬ್ದಾರಿ ಇಲಾಖೆ ಮುಂದೆಯೂ ಇದೆ.

ಇದನ್ನೂಓದಿ:ಈ ಇಬ್ಬರು ಶಾಸಕರು ಜೆಡಿಎಸ್‌ ಬಿಡ್ತಾರಾ?: ಹಾಸನದಲ್ಲಿ ಇನ್ನೂ ಬಗೆಹರಿಯದ ಟಿಕೆಟ್ ಫೈಟ್

Last Updated : Feb 9, 2023, 5:18 PM IST

ABOUT THE AUTHOR

...view details