ಕರ್ನಾಟಕ

karnataka

ಪಿಯು ವಿಜ್ಞಾನ, ವಾಣಿಜ್ಯ ಪಠ್ಯದಲ್ಲಿ ಕಡಿತ: ಯಾವೆಲ್ಲ ವಿಷಯದಲ್ಲಿ ಕತ್ತರಿ?

By

Published : Apr 6, 2023, 5:13 PM IST

ಪದವಿ ಪೂರ್ವ ಕಾಲೇಜಿನ ಪಿಸಿಎಂಬಿ ಹಾಗೂ ವಾಣಿಜ್ಯ ವಿಭಾಗದ ಎರಡು ವಿಷಯಗಳ ಪಠ್ಯವನ್ನು ಕಡಿತ ಮಾಡಲಾಗಿದೆ.

PU Science, Commerce text revised in Karnataka
ಪಿಯು ವಿಜ್ಞಾನ, ವಾಣಿಜ್ಯ ಪಠ್ಯ ಕಡಿತ

ಬೆಂಗಳೂರು:ನೂತನ ಸಾಲಿನ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜಿನ ಏಳು ವಿಷಯಗಳ ಪಠ್ಯದಲ್ಲಿ ಅಲ್ಪ ಪ್ರಮಾಣದ ಕಡಿತ ಮಾಡಿದ್ದು, ಪರಿಷ್ಕೃತ ಪಠ್ಯದಂತೆ ಬೋಧನೆ ನಡೆಸಲಾಗುತ್ತದೆ. ಹಳೆ ಪಠ್ಯ ಪುಸ್ತಕದಲ್ಲಿನ ಅಲ್ಪ ಭಾಗ ಮಾತ್ರ ಕಡಿತ ಮಾಡಿದ್ದು, ಹೊಸದಾಗಿ ಏನೂ ಸೇರ್ಪಡೆ ಮಾಡಿಲ್ಲ. ಹಾಗಾಗಿ ಇರುವ ಪಠ್ಯ ಪುಸ್ತಕಗಳನ್ನೇ ಬಳಕೆ ಮಾಡಬಹುದಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಬಾರದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರಾಂತೀಯ ಸರ್ಕಾರಗಳಿಗೆ ಸಲಹೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ಥಾಪಿಸಿದ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು 2023-24ನೇ ಸಾಲಿನ ಪಠ್ಯ ವಸ್ತುವಿನಲ್ಲಿ ಕಡಿತ ಮಾಡಿದೆ. ಈ ಪರಿಷತ್ತು ಅಳವಡಿಸಿಕೊಂಡ ವಿಜ್ಞಾನ ಸಂಯೋಜನೆಯಲ್ಲಿನ ಪಿಸಿಎಂಬಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ) ಹಾಗೂ ವಾಣಿಜ್ಯ ವಿಷಯದ ಲೆಕ್ಕಶಾಸ್ತ್ರ ವ್ಯವಹಾರ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಕಡಿತ ಮಾಡಲಾಗಿದೆ. ಇದನ್ನು ರಾಜ್ಯ ಕೂಡ ಅನುಸರಿಸಲಿದ್ದು, ಈ ಎಲ್ಲ ಏಳು ವಿಷಯಗಳಲ್ಲಿ ಸ್ವಲ್ಪ ಪ್ರಮಾಣದ ಪಠ್ಯ ಕಡಿತವಾಗಿದೆ. ಆದ್ದರಿಂದ 2023-24ನೇ ಸಾಲಿಗೆ ಏಳು ವಿಷಯಗಳ ಪರಿಷ್ಕೃತ ಪಠ್ಯ ವಸ್ತುವನ್ನು ಪರಿಗಣಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಪರಿಷ್ಕೃತ ಪಠ್ಯ ವಸ್ತುವನ್ನು ಆಧರಿಸಿದ ಪಠ್ಯ ಪುಸ್ತಕವನ್ನು ಬಳಸಲಾಗುತ್ತದೆ. ಆದರೆ, ವಿದ್ಯಾರ್ಥಿಗಳು ಈಗಾಗಲೇ ಪಠ್ಯ ಪುಸ್ತಕಗಳನ್ನು ಖರೀದಿಸಿದ್ದರೆ, ಕಡಿತಗೊಳಿಸಲಾಗಿರುವ ಪಠ್ಯ ವಸ್ತುವಿನ ಅಂಶಗಳು, ಅಧ್ಯಾಯಗಳನ್ನು ಹೊರತುಪಡಿಸಿ ಬಳಕೆ ಮಾಡಬಹುದಾಗಿರುತ್ತದೆ. ಜೊತೆಗೆ ಕಡಿತವಾಗಿರುವ ಪಠ್ಯ ವಸ್ತುವನ್ನು ಇಲಾಖೆಯ ಜಾಲತಾಣದಲ್ಲಿ ಅಳವಡಿಸಲಾಗುತ್ತದೆ. ಯಾವುದೇ ಕಾರಣದಿಂದ ವಿದ್ಯಾರ್ಥಿಗಳು ವಿನಾ ಕಾರಣ ಗೊಂದಲಕ್ಕೆ ಒಳಗಾಗಬಾರದು ಎಂದು ನಿರ್ದೇಶಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು:ಇಡೀ ಶಿಕ್ಷಣ ಕ್ಷೇತ್ರದಲ್ಲಿರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್​ಸಿಇಆರ್​ಟಿ) ಸಂಶೋಧನೆಗಳನ್ನು ಬೆಂಬಲಿಸುವುದು ಮತ್ತು ಪ್ರೋತ್ಸಾಹಿಸುವುದು ಮಾಡುತ್ತದೆ. ಉನ್ನತ ಶಿಕ್ಷಣದಲ್ಲಿ ತರಬೇತಿ ಹಾಗೂ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳು ಮತ್ತು ಅಭಿವೃದ್ಧಿಯನ್ನು ಜಾರಿಗೆ ತರುವಲ್ಲಿ ಶ್ರಮಿಸುತ್ತದೆ. ಶಾಲಾ ಶಿಕ್ಷಣದ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಸಲಹೆ ಇತ್ಯಾದಿಗಳನ್ನು ನೀಡಲು ಮತ್ತು ಪ್ರಕಟಣೆ ಸಾಮಗ್ರಿಗಳು ಮತ್ತು ಇತರ ವಸ್ತುಗಳನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ.

ಕಡಿತದ ಬಗ್ಗೆ ಮಾಹಿತಿ ನೀಡಿದ್ದ ನಿರ್ದೇಶಕರು:ಎನ್​ಸಿಇಆರ್​ಟಿನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಪಠ್ಯದ ಕಡಿತದ ಬಗ್ಗೆ ಮಾಹಿತಿ ನೀಡಿದ್ದರು. ಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಪಠ್ಯಕ್ರಮದಿಂದ ಮೊಘಲರು, ಆರ್​ಎಸ್​ಎಸ್​, ಗಾಂಧೀಜಿ ಮತ್ತು ಹಿಂದು- ಮುಸ್ಲಿಂ ಐಕ್ಯತೆಯ ಪಾಠಗಳನ್ನು ಕೈಬಿಡಲಾಗಿದೆ. ಇವೆಲ್ಲವನ್ನೂ ತಜ್ಞರ ಶಿಫಾರಸಿನ ಮೇರೆಗೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಎನ್​ಸಿಇಆರ್​ಟಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾಗಿದೆ. ಪಠ್ಯ ಪುಸ್ತಕಗಳಲ್ಲಿ ಇತ್ತೀಚಿಗೆ ಮಾಡಲಾದ ಬದಲಾವಣೆಗಳನ್ನು ಯಾರನ್ನೂ ಮೆಚ್ಚಿಸಲು ಅಥವಾ ಯಾರದ್ದೋ ಮನವಿಯ ಮೇರೆಗೆ ಮಾಡಲಾಗಿಲ್ಲ. ಬದಲಿಗೆ ಇವು ಸಂಪೂರ್ಣವಾಗಿ ಶಿಕ್ಷಣ ತಜ್ಞರು ಮಾಡಿದ ಶಿಫಾರಸುಗಳನ್ನು ಆಧರಿಸಿ ಕತ್ತರಿ ಹಾಕಲಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ:ಒತ್ತಡ, ಮನವಿಗೆ ಪಠ್ಯ ಪರಿಷ್ಕರಣೆ ಮಾಡಿಲ್ಲ: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್

ABOUT THE AUTHOR

...view details