ಕರ್ನಾಟಕ

karnataka

ಸಿವಿಲ್ ವ್ಯಾಜ್ಯಗಳ ಸೆಟಲ್ಮೆಂಟ್ ಕೇಂದ್ರಗಳಾಗುತ್ತಿರುವ ಪೊಲೀಸ್ ಠಾಣೆಗಳು: ಹೈಕೋರ್ಟ್ ಗರಂ

By ETV Bharat Karnataka Team

Published : Nov 25, 2023, 6:56 AM IST

ಸಿವಿಲ್ ವ್ಯಾಜ್ಯ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸದಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪೊಲೀಸ್ ಠಾಣೆಗಳು ಪದೆ ಪದೇ ಉಲ್ಲಂಘಿಸುತ್ತಿವೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ಸಿವಿಲ್ ವ್ಯಾಜ್ಯಗಳನ್ನು ಸೆಟಲ್‌ಮೆಂಟ್ ಮಾಡುವ ಪೊಲೀಸರ ಧೋರಣೆಯನ್ನು ಹೈಕೋಟ್ ಕಟುವಾಗಿ ಟೀಕಿಸಿದೆ. ಅಲ್ಲದೆ, ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ದಂಧೆಯ ಒಪ್ಪಂದ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಖಾಸಗಿ ವ್ಯಕ್ತಿಗಳು ನನ್ನಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದು, ಅದಕ್ಕೆ ಬಾಣಸವಾಡಿ ಠಾಣಾ ಪೊಲೀಸರು ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಗೆದ್ದಲಹಳ್ಳಿ ನಿವಾಸಿ ಜುವಿತ್ತಾ ರವಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪೊಲೀಸರ ವರ್ತನೆಗೆ ಬೇಸರ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿದಾರರಿಗೆ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಠಾಣೆಗಳು ರಿಯಲ್ ಎಸ್ಟೇಟ್ ವ್ಯವಹಾರಸ್ಥರ ಸೆಟೆಲ್‌ಮೆಂಟ್ ಮಾಡುವ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶ ಮಾಡದಂತೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಪದೇ ಪದೇ ಆದೇಶಿಸಿದ್ದರೂ, ಪೊಲೀಸರು ಮಾತ್ರ ಅದನ್ನು ಉಲ್ಲಂಘಿಸುತ್ತಲೇ ಇದ್ದಾರೆ ಎಂದು ಅಸಮಾಧಾನ ಹೊರಹಾಕಿತು.

ಅಲ್ಲದೆ, ಪ್ರಕರಣ ಕುರಿತಂತೆ ಬಾಣಸವಾಡಿ ಸಹಾಯಕ ಪೊಲೀಸ್ ಆಯುಕ್ತರು ನ.29ರಂದು ಮಧ್ಯಾಹ್ನ 2.30ಕ್ಕೆ ಕೋರ್ಟ್‌ಗೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ ಏನು?ಕೆಲ ಖಾಸಗಿ ವ್ಯಕ್ತಿಗಳು ನನ್ನಿಂದ 12 ಲಕ್ಷ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸರು 2023ರ ನ.21ರಂದು ಠಾಣೆಗೆ ಕರೆದೊಯ್ದು ಹಣ ಪಾವತಿಸಲು ಸೂಚಿಸುತ್ತಿದ್ದರು. ನ.25ರಂದು ಚೆಕ್ ಸಮೇತ ಠಾಣೆಗೆ ಹಾಜರಾಗಿ ಹಣ ಪಾವತಿಸುವಂತೆ ಸೂಚಿಸಿದ್ದಾರೆ. ಇದು ಗಂಭೀರ ಪ್ರಕರಣವಾಗಿದ್ದು, ಪೊಲೀಸರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ಅಲ್ಲದೆ, ಸಿವಿಲ್ ಹಾಗೂ ಹಣಕಾಸಿಗೆ ಸಂಬಂಧಿಸಿದ ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ಸೆಟೆಲ್‌ಮೆಂಟ್ ಮಾಡುವ ಪೊಲೀಸರ ಕಾರ್ಯವೈಖರಿಯಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತಿದೆ. ಆದ್ದರಿಂದ ಪ್ರಕರಣ ಸಂಬಂಧ ನ.22ರಂದು ನೀಡಿರುವ ಮಾಹಿತಿ ಪರಿಗಣಿಸಿ, ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರ ಮತ್ತು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ. ಜೊತೆಗೆ, ಈ ಅರ್ಜಿ ಇತ್ಯರ್ಥವಾಗುವರೆಗೆ ಅರ್ಜಿದಾರರರು ಅಥವಾ ಅವರ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೊಡೇರಿ ಬೀಚ್​ನಲ್ಲಿ ಕಿರು ಬಂದರು ನಿರ್ಮಾಣ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್

ABOUT THE AUTHOR

...view details