ಕರ್ನಾಟಕ

karnataka

ನಿಷೇಧಿತ ಪಿಎಫ್ಐ ಮುಖಂಡರ‌ ಬಂಧನ ಪ್ರಕರಣ: 10,196 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

By

Published : Mar 20, 2023, 6:52 AM IST

ನಿಷೇಧಿತ ಪಿಎಫ್​​ಐ ಮುಖಂಡರ ಬಂಧನ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ವಿಸ್ತೃತ ಚಾರ್ಜ್​ಶೀಟ್​​ ಸಲ್ಲಿಸಿದ್ದಾರೆ.

arrest-of-pfi-leaders-police-submits-charge-sheet
ಪಿಎಫ್ಐ ಮುಖಂಡರ‌ ಬಂಧನ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ‌ ಪೊಲೀಸರು

ಬೆಂಗಳೂರು :ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರನ್ನು ಬಂಧಿಸಿದ್ದ ಪೊಲೀಸರು ಪ್ರಕರಣದ ತನಿಖೆ ಮುಗಿಸಿದ್ದಾರೆ. 15 ಪಿಎಫ್ಐ ಕಾರ್ಯಕರ್ತರ ಕುರಿತು ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ ಪೊಲೀಸರು ಸಂಘಟನೆಯ ಅಧ್ಯಕ್ಷ ನಾಸೀರ್ ಪಾಷಾ ಸೇರಿ 19 ಜನರ ಮೇಲೆ ಎಫ್ಐಆರ್ ದಾಖಲಿಸಿ 15 ಜನರನ್ನು ಬಂಧಿಸಿದ್ದರು. ಇದೀಗ 10,196 ಪುಟಗಳ ಚಾರ್ಜ್‌ಶೀಟ್​ ಅನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ಚಾರ್ಜ್‌ಶೀಟ್‌ನಲ್ಲೇನಿದೆ?: ಪೊಲೀಸರ ವಿವರವಾದ ಚಾರ್ಜ್‌ಶೀಟ್‌ನಲ್ಲಿ ಪಿಎಫ್ಐ ಕಾರ್ಯಕರ್ತರ ತರಬೇತಿ, ಸಭೆಗಳು, ಫಂಡ್ ಕಲೆಕ್ಷನ್ ಬಗ್ಗೆ ಉಲ್ಲೇಖಿಸಲಾಗಿದೆ. ಬಂಧಿತರಲ್ಲಿ 9 ಮಂದಿಯ ಮೇಲೆ ಯುಎಪಿಎ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದ್ದು, ಉಳಿದ ಆರು ಜನರ ಮೇಲೆ ಐಪಿಸಿ 153A ಅಡಿಯಲ್ಲಿ ಪೊಲೀಸರು ತನಿಖೆ ನಡೆಸಿದ್ದರು.

ಪಿಎಫ್ಐ ಕಾರ್ಯಕರ್ತರ ಹಲವು ಚಟುವಟಿಕೆಗಳ ಬಗ್ಗೆ ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತೂರಿನಲ್ಲಿ ಫ್ರೀಡಂ ಚಾರಿಟೇಬಲ್ ಟ್ರಸ್ಟ್ ಹೆಸರಲ್ಲಿ ನಡೆದ ಸಭೆ, ಕಾರ್ಯಕರ್ತರ ಕಾರ್ಯತಂತ್ರಗಳ ವಿಸ್ತರಣೆ, ಚಟುವಟಿಕೆ ಕುರಿತು ನಡೆದ ಸಭೆ, ಪಿಎಫ್ಐ ಖಾತೆಗೆ ದೇಶದ ಹಲವೆಡೆಗಳಿಂದ ಫಂಡಿಂಗ್ ಇತ್ಯಾದಿಗಳ ಬಗ್ಗೆ ವಿವರವಾದ ಮಾಹಿತಿ ಇದೆ. ಸಂಘಟನೆಯ ಖಾತೆಗೆ ಸುಮಾರು 10 ವರ್ಷದಿಂದ ನಾಲ್ಕೈದು ಕೋಟಿ ರೂಪಾಯಿ ಹಣ ಬಂದಿರುವುದು ಗೊತ್ತಾಗಿದೆ. ಹೀಗೆ ಬಂದ ಹಣದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮಕ್ಕಳ ವಿದ್ಯಾಭ್ಯಾಸಕ್ಕೆ ಪುಸ್ತಕ ಹಾಗೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಹಣ ವಿನಿಯೋಗ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಬೆಂಗಳೂರಿನ ಬೆನ್ಸನ್ ಟೌನ್‌ನಲ್ಲೂ ಪಿಎಫ್ಐ ಕಾರ್ಯಕರ್ತರು ಸಭೆ ನಡೆಸಿದ್ದರು. ತನಿಖೆಯ ವೇಳೆ ಪಿಎಫ್​​ಐ ಕಾರ್ಯಕರ್ತರು ಟ್ರೈನಿಂಗ್ ಪಡೆಯುತ್ತಿದ್ದರು. ಮಾನಸಿಕ ದೃಢತೆ ಹಾಗೂ ಫಿಸಿಕಲ್ ಡಿಫೆನ್ಸ್‌ಗಾಗಿ ಟ್ರೈನಿಂಗ್ ಪಡೆಯುತ್ತಿದ್ದರು. ಯೋಗದ ಹೆಸರಲ್ಲಿ ಪಿಎಫ್ಐ ಕಾರ್ಯಕರ್ತರು ತರಬೇತಿ ಪಡೆಯುತ್ತಿದ್ದರು. ಆಸಕ್ತಿಯುಳ್ಳ ಕೆಲವು ಯುವಕರನ್ನು ಆಯ್ದು ಅವರಿಗೆ ಮಾತ್ರ ಟ್ರೈನಿಂಗ್ ಕೊಡಲಾಗುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ. ಪೊಲೀಸರ ಪರಿಶೀಲನೆ ವೇಳೆ ಯಾವುದೇ ಶಸ್ತ್ರಾಸ್ತ್ರ ಪತ್ತೆಯಾಗಿಲ್ಲ.

ಇದನ್ನೂ ಓದಿ:2047ರ ವೇಳೆಗೆ ದೇಶವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಪಿಎಫ್​ಐ ಸಂಚು: ಎಟಿಎಸ್ ಚಾರ್ಜ್ ಶೀಟ್ ಮಾಹಿತಿ ಬಹಿರಂಗ

ABOUT THE AUTHOR

...view details