ಕರ್ನಾಟಕ

karnataka

ಉಡುಪಿ ಮಠಗಳ ಪರ್ಯಾಯ ಮಹೋತ್ಸವಕ್ಕೆ ಮಾರ್ಗಸೂಚಿ ರಚಿಸಲು ಕೋರಿ ಅರ್ಜಿ: ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಕಾರ

By ETV Bharat Karnataka Team

Published : Jan 8, 2024, 4:20 PM IST

ಉಡುಪಿ ಮಠದ ಭಕ್ತರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಪ್ರವೇಶಿಸಲು ನಿರಾಕರಿಸಿ, ಅರ್ಜಿಯನ್ನು ವಜಾಗೊಳಿಸಿದೆ.

Petition seeking guidelines for Paryaya Mahotsava of Udupi Maths: HC refuses to intervene
ಉಡುಪಿ ಮಠಗಳ ಪರ್ಯಾಯ ಮಹೋತ್ಸವಕ್ಕೆ ಮಾರ್ಗಸೂಚಿ ರಚಿಸಲು ಕೋರಿ ಅರ್ಜಿ: ಮಧ್ಯಪ್ರವೇಶಕ್ಕೆ ನಿರಾಕರಿಸಿದ ಹೈಕೋರ್ಟ್

ಬೆಂಗಳೂರು: ಉಡುಪಿಯ ಅಷ್ಟಮಠಗಳಲ್ಲಿ ಪರ್ಯಾಯ ಮಹೋತ್ಸವಕ್ಕೆ ಮಾರ್ಗಸೂಚಿಗಳು ಅಥವಾ ಬೈಲಾ ರಚನೆಗೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಧ್ಯಪ್ರವೇಶ ಮಾಡಲು ಹೈಕೋರ್ಟ್ ನಿರಾಕರಿಸಿದೆ.

ಉಡುಪಿ ಮಠದ ಭಕ್ತರಾಗಿರುವ ಬೆಂಗಳೂರಿನ ಗುರುರಾಜ್ ಜೀವನ ರಾವ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸಾಗರದಾಜೆ ಪ್ರಯಾಣ ಮಾಡುವವರು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗಲು ಅವಕಾಶ ನೀಡದಂತೆ ಕೋರಿದರು. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಪೀಠ, ಜ್ಞಾನದ ಸಂಪಾದನೆಗಾಗಿ ವಿದೇಶಿ ಪ್ರವೇಶ ಮಾಡಿದರೆ ತಪ್ಪೇನು. ಭೌದ್ಧ ಧರ್ಮ ಪ್ರಚಾರಕ್ಕೆ ಆಶೋಕ ಚಕ್ರವರ್ತಿ ತನ್ನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರ ಅವರನ್ನು ಶ್ರೀಲಂಕಾಕ್ಕೆ ಕಳುಹಿಸಿದ್ದರು. ಶಂಕರಾಚಾರ್ಯ ಅವರು ಸಾಗರವನ್ನು ದಾಟಿ ಇಡೀ ದೇಶವನ್ನು ಸುತ್ತಾಡಿದ್ದರು. ಮುಕ್ತ ಮನಸ್ಸಿನಿಂದ ಹೊರದೇಶಗಳಿಗೆ ಆಧ್ಯಾತ್ಮಿಕ ಜ್ಞಾನ ಪಡೆದುಕೊಳ್ಳುವುದರಲ್ಲಿ ತಪ್ಪೇನು. ಅದಕ್ಕೆ ನಾವು ನಿರ್ಬಂಧ ವಿಧಿಸುವುದಕ್ಕೆ ಅವಕಾಶವಿದೆಯೇ ಎಂದು ಪ್ರಶ್ನಿಸಿತು.

ಈ ವೇಳೆ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ಓ ನನ್ನ ಚೇತನ.. ಆಗು ನೀ ಅನಿಕೇತನ.. ಎಂದಿದೆ. ಸ್ವಾಮೀಜಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು ಎಂದರೆ, ಈ ವಿಚಾರದಲ್ಲಿ ನ್ಯಾಯಾಲಯ ಏನು ಮಾಡಲು ಸಾಧ್ಯ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಪ್ರಕರಣದ ಹಿನ್ನೆಲೆ ಏನು?:ಸಮುದ್ರದಾಟಿ ಪ್ರವಾಸ ಕೈಗೊಂಡವರು ಅಷ್ಟ ಮಠಗಳ ಪೀಠಾಧಿಪತಿಯಾಗುವುದಕ್ಕೆ ಅವಕಾಶವಿರುವುದಿಲ್ಲ. ಅಂತಹವರು ಶ್ರೀಕೃಷ್ಣನ ಮೂರ್ತಿ ಸ್ಪರ್ಷ ಮಾಡುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ನಾಲ್ಕನೇ ಪ್ರತಿವಾದಿಯಾಗಿರುವ ಪುತ್ತಿಗೆ ಮಠದ ಶ್ರೀ ಸುಗಣೇಂದ್ರತೀರ್ಥರು 1997ರಲ್ಲಿ ಅಮೆರಿಕಾ ಪ್ರಯಾಣ ಬೆಳೆಸಲು ಸಾಗರವನ್ನು ದಾಟಿ ಹೋಗಿದ್ದಾರೆ. ಆದ್ದರಿಂದ ಶ್ರೀ ಕೃಷ್ಣನನ್ನು ಸ್ಪರ್ಷಿಸುವುದು ಮತ್ತು ಪೂಜಿಸುವುದಕ್ಕೆ ಅರ್ಹರಾಗಿರುವುದಿಲ್ಲ. ಆದ್ದರಿಂದ ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವುದಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ ಬೈಲಾ ರಚನೆ ಮಾಡಬೇಕು ಎಂದು ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಇದನ್ನೂ ಓದಿ:ಸುತ್ತೂರು ಶ್ರೀಗಳ ಪುತ್ಥಳಿ ಸ್ಥಾಪನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ: ಸರ್ಕಾರಕ್ಕೆ ನೋಟಿಸ್

ABOUT THE AUTHOR

...view details