ಕರ್ನಾಟಕ

karnataka

ಬೆಂಗಳೂರು: ಜನಮನ ಸೆಳೆದ 'ಸಿರಿಧಾನ್ಯ ಮೇಳ'

By ETV Bharat Karnataka Team

Published : Jan 7, 2024, 7:27 AM IST

ಸಿರಿಧಾನ್ಯಗಳ ಮಾಹಿತಿ, ಸಾವಯವ ಉತ್ಪನ್ನಗಳಿಂದ ತಯಾರಿಸಲಾದ ವಿವಿಧ ಖಾದ್ಯಗಳ ರುಚಿ ಸವಿಯುವ ಅವಕಾಶ ಬೆಂಗಳೂರಿನ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಜನರಿಗೆ ದೊರೆಯಿತು.

millets, organic fair held in Bangalore
ಬೆಂಗಳೂರಿನಲ್ಲಿ ನಡೆದ ಸಿರಿಧಾನ್ಯ, ಸಾವಯವ ಮೇಳ

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ವಿವಿಧ ಖಾದ್ಯಗಳನ್ನು ಸವಿದರು. ಕೃಷಿ ಸಚಿವ ಚೆಲುವರಾಯ ಸ್ವಾಮಿ ಹಾಗೂ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಶನಿವಾರ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ಪ್ರದರ್ಶನಕ್ಕಿಟ್ಟ ವಿವಿಧ ಉತ್ಪನ್ನಗಳು, ಮಾರಾಟದ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಿರಿಧಾನ್ಯ ಆರೋಗ್ಯಕರ ಜೀವನಕ್ಕೆ ಅತ್ಯುಪಯುಕ್ತವಾಗಿರುವ ಕುರಿತು ಜಾಗೃತಿ ಮೂಡಿಸುವ ಹಾಗೂ ಸಿರಿಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕೃಷಿ ಇಲಾಖೆಯು ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳವನ್ನು ಈ ಬಾರಿ ಅದ್ಧೂರಿಯಾಗಿ ಆಯೋಜಿಸಿದೆ.

ಜೇನು ತುಪ್ಪ

ಬೆಂಗಳೂರು ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜನರು ಸಿರಿಧಾನ್ಯಗಳ ಮಾಹಿತಿ ಪಡೆದರು. ಪ್ರತಿ ಮಳಿಗೆಯೆದುರು ನಿಂತು ಖಾದ್ಯಗಳ ರುಚಿ ಸವಿದರು. ಸಿರಿಧಾನ್ಯಗಳಾದ ನವಣೆ, ಸಜ್ಜೆ, ಆರ್ಕ, ಬರಗು, ರಾಗಿಯಿಂದ ತಯಾರಿಸಿದ ವೈವಿಧ್ಯಮಯ ತಿಂಡಿ ತಿನಿಸುಗಳು, ನವಣೆ ಮಸಾಲೆ ಬ್ರೆಡ್, ರಾಗಿ ಬ್ರೆಡ್, ಫಿಜ್ಜಾ, ಬರ್ಗರ್, ನೂಡಲ್ಸ್, ವಿವಿಧ ರೀತಿಯ ಬಿಸ್ಕತ್ತು, ಚಕ್ಕುಲಿ, ಚಿಕ್ಕಿ. ಅಲ್ಲದೇ ವಿಶೇಷವಾಗಿ ಯುವ ಪೀಳಿಗೆ ಇಷ್ಟ ಪಡುವ ಆಧುನಿಕ ಸಿರಿಧಾನ್ಯ ಬ್ರೌನಿ, ಬಫ್ತಿನ್ಸ್, ರಾಗಿ ಚಾಕಲೆಟ್, ಜಾಮೂನು ಗ್ರಾಹಕರನ್ನು ಮನಸೂರೆಗೊಳಿಸಿದವು.

ಸಾವಯವ ಉತ್ಪನ್ನಗಳು:ಪ್ರತಿ ಮಳಿಗೆಯಲ್ಲಿ ಸಾವಯವ ಕೃಷಿಯಲ್ಲಿ ಬೆಳೆದ ವಿವಿಧ ಉತ್ಪನ್ನಗಳ ಬಗ್ಗೆ ಪ್ರತಿನಿಧಿಗಳಿಂದ ಜನರು ಮಾಹಿತಿ ಪಡೆದು, ಖರೀದಿಸಿದರು. ಸಾವಯವ ಪದ್ಧತಿಯಲ್ಲಿ ಬೆಳೆದ ದ್ರಾಕ್ಷಿ, ಗೋಡಂಬಿ, ಜೇನುತುಪ್ಪ, ವಿವಿಧ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಬಹಳ ಮಂದಿ ಕುಟುಂಬ ಸಮೇತರಾಗಿ ಆಗಮಿಸಿದ್ದರು.

ಸಾವಯವ ಉತ್ಪನ್ನ

ಸಿರಿಧಾನ್ಯ ಬಳಕೆ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದ್ದು, ಖರೀದಿಗೆಂದು ಬಂದಿದ್ದೇನೆ ಎಂದು ಬೆಂಗಳೂರಿನ ಗ್ರಾಹಕಿ ಸುಮಲತಾ 'ಈಟಿವಿ ಭಾರತ'ಕ್ಕೆ ತಿಳಿಸಿದರು. ಭಾನುವಾರವೂ ಮೇಳ ಇರುವುದರಿಂದ ಅಪಾರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ.

ಇದನ್ನೂಓದಿ:ಸಿರಿಧಾನ್ಯ, ಸಾವಯವ ಮೇಳ: ಬಾಳೆ ನಾರಿನಿಂದ ತಯಾರಾಯ್ತು ವ್ಯಾನಿಟಿ ಬ್ಯಾಗ್, ಟೇಬಲ್ ಮ್ಯಾಟ್, ಪರ್ಸ್

ABOUT THE AUTHOR

...view details