ಕರ್ನಾಟಕ

karnataka

ಕಾಂಗ್ರೆಸ್ ನಾಯಕರಿಂದ ಪಂಚಮಸಾಲಿ ಶ್ರೀಗೆ ಮಾನಸಿಕ ಹಿಂಸೆ: ಬಿಜೆಪಿ ನಾಯಕರ ಆರೋಪ

By

Published : Apr 3, 2023, 5:09 PM IST

ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್​ ನಾಯಕರು ಶ್ರೀಗಳಿಗೆ ಆಗೌರವ ತೋರುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ.

Minister CC Patil and MLA Arvind Bellad
ಸಚಿವ ಸಿಸಿ ಪಾಟೀಲ್ ಹಾಗು ಶಾಸಕ ಅರವಿಂದ ಬೆಲ್ಲದ್

ಬೆಂಗಳೂರು :ಸರ್ಕಾರದ ಮೀಸಲಾತಿ ಒಪ್ಪಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸ್ಥಗಿತಗೊಳಿಸಿದ್ದಕ್ಕಾಗಿ ಕೂಡಲ ಸಂಗಮಪೀಠದ ಬಸವ ಜಯ ಮೃತ್ಯಂಜಯ ಶ್ರೀಗಳಿಗೆ ಕಾಂಗ್ರೆಸ್​ನ ಮೂರ್ನಾಲ್ಕು ನಾಯಕರು ಕರೆ ಮಾಡಿ ನಿಂದನೆ ಮಾಡುತ್ತಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್ ಹಾಗೂ ಶಾಸಕ ಅರವಿಂದ ಬೆಲ್ಲದ್ ಗಂಭೀರ ಆರೋಪ ಮಾಡಿದ್ದಾರೆ. ಕೆಲವರು ಕುಡಿದು ಕರೆ ಮಾಡಿ ಅಗೌರವದಿಂದ ಮಾತನಾಡಿದ್ದಾರೆ. ಈ ಮೂಲಕ ಇಡೀ ಸಮುದಾಯಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ರಾಜಕೀಯಕ್ಕೆ ಮೀಸಲಾತಿ ಅಸ್ತ್ರ ಬಳಸಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್ ನಾಯಕರು ನಿರಾಶರಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಅರವಿಂದ್ ಬೆಲ್ಲದ ಮತ್ತು ಸಚಿವ ಸಿಸಿ ಪಾಟೀಲ್​​ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿಸಿ ಪಾಟೀಲ್ ಹಾಗೂ ಶಾಸಕ ಅರವಿಂದ ಬೆಲ್ಲದ್ ಅವರು, ’’ವೀರಶೈವ ಸಮಾಜ ಎಲ್ಲ ವರ್ಗವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದೆ. ನಮ್ಮ ಹೋರಾಟದ ಮೂಲಕ ಎಲ್ಲರಿಗೂ ಲಾಭವಾಗಿದ್ದು ಖುಷಿ ತಂದಿದೆ. ಆದರೆ, ಹೋರಾಟದಲ್ಲಿ ಭಾವವಹಿಸಿದ್ದ ಕಾಂಗ್ರೆಸ್​ನ ಕೆಲ ನಾಯಕರು ಇದೀಗ ಸಂಜೆ, ರಾತ್ರಿ ಎನ್ನದೇ ಕುಡಿದು ಶ್ರೀಗಳಿಗೆ ಕರೆ ಮಾಡಿ ಅಗೌರವದಿಂದ ಮಾತನಾಡಿ ಸಮಾಜಕಕ್ಕೆ ಅಗೌರವ ತರುವ ಕೆಲಸ ಮಾಡುತ್ತಿದ್ದಾರೆ‘‘ ಎಂದು ಗಂಭೀರವಾಗಿ ಆರೋಪ ಮಾಡಿದರು.

ಈ ವೇಳೆ, ಕರೆ ಮಾಡಿ ಆಗೌರವ ತೊರುತ್ತಿರುವ ನಾಯಕರ ಹೆಸರು ಕೇಳಿದಾಗ, ಕರೆ ಮಾಡುತ್ತಿರುವವರ ಹೆಸರು ಪ್ರಸ್ತಾಪಿಸಲು ಹಿಂದೇಟು ಹಾಕಿದ ಸಿಸಿ ಪಾಟೀಲ್ ಹಾಗೂ ಅರವಿಂದ ಬೆಲ್ಲದ್, ಹೋರಾಟದಲ್ಲಿ ಭಾಗಿಯಾದ ಕಾಂಗ್ರೆಸ್ ಪಕ್ಷದ ನಾಯಕರು ಕರೆ ಮಾಡಿ ಕಿರುಕುಳ ಕೊಡುತ್ತಿದ್ದಾರೆ. ನಾವು ಹೆಸರು ಹೇಳಲ್ಲ , ನಿಮಗೆ ಎಲ್ಲ ಗೊತ್ತಿದೆ. ಭಾಗವಹಿಸಿದ ಮೂರು ನಾಲ್ಕು ಪ್ರಮುಖರು ಕರೆ ಮಾಡಿ ನೋಯಿಸುತ್ತಿದ್ದಾರೆ ಎಂದಷ್ಟೇ ಹೇಳಿದರು.

ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್​ ನಾಯಕರು ಮೀಸಲಾತಿ ವಿರೋಧ :ಇನ್ನು ಇದೇ ಸಂದರ್ಭ ಮಾತನಾಡಿದ ಸಿಸಿ ಪಾಟೀಲ್​, ’’ನಮ್ಮ ಮೀಸಲಾತಿ ಹೋರಾಟದ ವೇಳೆ ಸರ್ಕಾರ ಮೀಸಲಾತಿ ವಿಚಾರದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿತು. ಹೊಸದಾಗಿ ಪ್ರವರ್ಗ 2ಡಿ ಮತ್ತು 2ಸಿ ಫಾರ್ಮುಲಾವನ್ನು ಸಿಎಂ ತಂದರು. ಈ ವೇಳೆ ಶ್ರೀಗಳು ಪಾದಯಾತ್ರೆಯಲ್ಲಿದ್ದು, ನಾನೇ ಅವರನ್ನು ಬೆಳಗಾವಿಗೆ ಸಮೀಪ ಸ್ವಾಗತಿಸಿದ್ದೆ. ಅಂದು ಮೀಸಲಾತಿ ವಿಚಾರದಲ್ಲಿ ಸ್ಪಷ್ಟತೆ ಇರಲಿಲ್ಲ. 2ಎ ಹೋರಾಟಕ್ಕೆ 2ಡಿ ಮಾಡಿದ್ದಾರೆ. ಆದರೆ ಹೆಸರು ಏನೇ ಇರಲಿ 2ಎ ಮೀಸಲಾತಿ ಸೌಲಭ್ಯ ಸಿಗಲಿದೆ ಎನ್ನುವ ಕಾರಣಕ್ಕೆ ಶ್ರೀಗಳ ಸಮ್ಮುಖದಲ್ಲಿ ನಾವು ಕಾಂಗ್ರೆಸ್ ನವರು ಸೇರಿ ಹೋರಾಟದಲ್ಲಿದ್ದ ಎಲ್ಲರೂ ಒಪ್ಪಿಕೊಂಡಿದ್ದರು. ಈಗ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್​ ನಾಯಕರು ಮೀಸಲಾತಿ ವಿಚಾರಕ್ಕೆ ವಿರೋಧ ಮಾಡುತ್ತಿದ್ದು, ಸಿಎಂ ಬಸವರಾಜ್​ ಬೊಮ್ಮಾಯಿ ಸರ್ಕಾರಕ್ಕೆ ಮೀಸಲಾತಿ ಕೊಡಲು ಸಾಧ್ಯವಿಲ್ಲ ಇದನ್ನೇ ಇರಿಸಿಕೊಂಡು ಚುನಾವಣೆಗೆ ಹೋಗೋಣ ಎನ್ನುವ ಲೆಕ್ಕಾಚಾರದಲ್ಲಿದ್ದರು. ಆದರೆ, ಮೀಸಲಾತಿ ಕೊಟ್ಟಿದ್ದೇವೆ ಇದನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ‘‘ ಎಂದು ಟೀಕಿಸಿದರು.

ಮೀಸಲಾತಿಯನ್ನು ಸ್ವಾಗತ ಮಾಡುತ್ತಿದ್ದೇವೆ : ’’ಎಲ್ಲ ನಿರ್ಣಯ ಒಗ್ಗೂಡಿಸಿಕೊಂಡು, ಕೋರ್ಟ್ ನಲ್ಲಿ ತಡೆಯೂ ಬಾರದಂತೆ ಮುನ್ನೆಚ್ಚರಿಕೆ ತೆಗೆದುಕೊಂಡು ಮೀಸಲಾತಿ ಮಾಡಲಾಗಿದೆ. ಚುನಾವಣೆಯಲ್ಲಿ ಸೋಲು ಗೆಲುವು ಇದ್ದಿದ್ದೆ. ಚುನಾವಣಾ ದೃಷ್ಟಿಯಿಂದ ಟೀಕೆ ಮಾಡುವುದರಿಂದ ಕೋಟ್ಯಂತರ ಬಡ ಬಗ್ಗರಿಗೆ ಅನ್ಯಾಯವಾಗಲಿದೆ. ಹಾಗಾಗಿ ನಾವು ಈ ಮೀಸಲಾತಿಯನ್ನು ಸ್ವಾಗತ ಮಾಡುತ್ತಿದ್ದೇವೆ. ಹೋರಾಟದಲ್ಲಿದ್ದ ಕಾಂಗ್ರೆಸ್​​​​ನ ಮುಂಚೂಣಿ ನಾಯಕರು ನಿರಾಶರಾಗಿ ಈ ರೀತಿ ಶ್ರೀಗಳ ಮನಸ್ಸು ನೋಯಿಸುತ್ತಿದ್ದಾರೆ‘‘ ಎಂದು ಸಿಸಿ ಪಾಟೀಲ್​ ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿಸಿ ಪಾಟೀಲ್, ’’ಶಾಸಕಾಂಗ ಸಭೆ ಯಾರು ಮುಖ್ಯಮಂತ್ರಿ ಎಂದು ನಿರ್ಧಾರ ಮಾಡಲಿದೆ. ನಮ್ಮದು ರಾಷ್ಟ್ರೀಯ ಪಕ್ಷ ನಮಗೆ ಹೈಕಮಾಂಡ್ ಇದೆ ಅವರು ನಿರ್ಧಾರ ಮಾಡಲಿದ್ದಾರೆ. ಸಧ್ಯ ನಾವು ಸಿಎಂ ಬಸವರಾಜ್​ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದರು. ಬಳಿಕ ಸಮುದಾಯದಿಂದಲೇ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಹೆಚ್ಚಿದ್ದಾರಲ್ಲ ಎನ್ನುವುದಕ್ಕೆ ಉತ್ತರಿಸಿದ ಸಿಸಿ ಪಾಟೀಲ್, ಬೊಮ್ಮಾಯಿ ಒಳ್ಳೆಯ ಆಡಳಿತ ನೀಡಿದ್ದಾರೆ. ಹಲವಾರು ಭಾಗ್ಯಗಳನ್ನು ಕೊಟ್ಟಿದ್ದಾರೆ. ಈಗ ಚುನಾವಣೆ ಎದುರಿಸುವುದಷ್ಟೇ ನಮ್ಮ ಮುಂದಿರುವ ಗುರಿ’’ಎಂದು ತಿಳಿಸಿದರು.

ಶ್ರೀಗಳು ಕೇವಲ ಪಂಚಮಸಾಲಿಗಳಿಗೆ ಹೋರಾಟ ಮಾಡಿಲ್ಲ :ನಂತರ ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, 2ಡಿಯಲ್ಲಿ 7 ಪರ್ಸೆಂಟ್ ಮೀಸಲಾತಿ ಇದ್ದು, ಪಂಚಮಸಾಲಿಗೆ ಪ್ರತ್ಯೇಕ ಪ್ರಮಾಣಪತ್ರ ಇರಲ್ಲ. ಲಿಂಗಾಯತ, ವೀರಶೈವ ಲಿಂಗಾಯತ, ಹಿಂದೂ ಲಿಂಗಾಯತ ಎಂದು ಇರಲಿದೆ. ಎಲ್ಲ ವೀರಶೈವ ಲಿಂಗಾಯತ ಸಮಾಜಕ್ಕೆ ಅನುಕೂಲವಾಗಲಿದ್ದು, ಜೊತೆಗೆ ಮರಾಠ ಸಮುದಾಯಕ್ಕೂ ಅನುಕೂಲವಾಗಲಿದೆ. ಶ್ರೀಗಳು ಕೇವಲ ಪಂಚಮಸಾಲಿಗೆ ಹೋರಾಟ ಮಾಡಿಲ್ಲ. ಸಮಸ್ತ ವೀರಶೈವ ಲಿಂಗಾಯತ ಪರ ಹೋರಾಟ ಮಾಡಿದ್ದಾರೆ. 2ಎ ನಲ್ಲಿ ನಾವು ಬರಬೇಕು ಎನ್ನುವುದು ಮೊದಲ ಬೇಡಿಕೆಯಾಗಿತ್ತು. ಅದು ಈಗ 2ಡಿ ಮೂಲಕ ಇತ್ಯರ್ಥವಾಗಿದೆ. ಹಾಗೂ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವುದು ಸಹ ಮತ್ತೊಂದು ಬೇಡಿಕೆಯಾಗಿದೆ. ಈಗಾಗಲೇ ನಮ್ಮ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ ಹಾಗಾಗಿ ಚುನಾವಣೆ ನಂತರ ಮತ್ತೊಂದು ಹೋರಾಟದ ಪ್ರಶ್ನೆ ಬರಲ್ಲ ಎಂದರು.

ಇದನ್ನೂ ಓದಿ :ಸಿಎಂ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ಹಿಂದೇಟು; ಸಾರಥಿ ಇಲ್ಲದೇ ಚುನಾವಣೆ ಪ್ರಚಾರ

ABOUT THE AUTHOR

...view details