ಕರ್ನಾಟಕ

karnataka

ಬೆಂಗಳೂರಿನಲ್ಲಿ ಸೆರೆಸಿಕ್ಕ ಪಾಕ್ ಯುವತಿ ಎಫ್​ಆರ್​ಆರ್​ಓ ಕಚೇರಿಗೆ ಹಸ್ತಾಂತರ, ಪ್ರಿಯತಮ ಅರೆಸ್ಟ್

By

Published : Jan 23, 2023, 9:17 AM IST

Updated : Jan 23, 2023, 1:20 PM IST

pakistani woman arrest

ದೇಶದೊಳಗೆ ಅಕ್ರಮವಾಗಿ ನುಸುಳಿ ಬೆಂಗಳೂರಿನಲ್ಲಿ ವಾಸವಿದ್ದ ಪಾಕಿಸ್ತಾನ ಮೂಲದ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು, ಆಕೆಯನ್ನು ಎಫ್​ಆರ್​ಆರ್​ಒ ಕಚೇರಿಗೆ ಹಸ್ತಾಂತರಿಸಿದ್ದಾರೆ. ಪ್ರಿಯತಮನನ್ನು ಬಂಧಿಸಿದ್ದಾರೆ.

ಬೆಂಗಳೂರು: ನೇಪಾಳದ ಮೂಲಕ ಭಾರತ ಗಡಿ ದಾಟಿ ಬೆಂಗಳೂರಿಗೆ ಬಂದು ಕಾನೂನುಬಾಹಿರವಾಗಿ ವಾಸಿಸುತ್ತಿದ್ದ ಪಾಕಿಸ್ತಾನ ಮೂಲದ ಯುವತಿಯನ್ನು ಬೆಳ್ಳಂದೂರು ಪೊಲೀಸರು ವಶಕ್ಕೆ ಪಡೆದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ(ಎಫ್​ಆರ್​ಆರ್​ಒ) ಒಪ್ಪಿಸಿದ್ದಾರೆ. ಯುವತಿಯ ಪ್ರಿಯಕರನನ್ನು ಬಂಧಿಸಲಾಗಿದೆ. ಇಕ್ರಾ ಜೀವನಿ (19) ಹಾಗೂ ಮುಲಾಯಂ ಸಿಂಗ್ (26) ಬಂಧಿತರು.

ಗೇಮಿಂಗ್ ಆ್ಯಪ್ ಮೂಲಕ ಪಾಕ್ ಮೂಲದ ಯುವತಿ ಇಕ್ರಾ ಮತ್ತು ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಮಧ್ಯೆ ಪರಿಚಯವಾಗಿತ್ತು. ಇಬ್ಬರೂ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಅಂತೆಯೇ ನಗರದ ಹೆಚ್‌ಎಸ್‌ಆರ್ ಲೇಔಟ್‌ನ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಮುಲಾಯಂ ಸಿಂಗ್ ಕೆಲಸ ಮಾಡುತ್ತಿದ್ದುದರಿಂದ ಯುವತಿಯನ್ನು ಬೆಂಗಳೂರಿಗೆ ಕರೆಸಿದ್ದ. ಇಬ್ಬರೂ ಇಲ್ಲೇ ಒಟ್ಟಿಗೆ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ತಾಯಿಯನ್ನು ಸಂಪರ್ಕಿಸಲು ಇಕ್ರಾ ಜೀವನಿ ಯತ್ನಿಸಿದ್ದಾಳೆ. ಈ ವಿಚಾರ ಪತ್ತೆ ಮಾಡಿದ್ದ ಕೇಂದ್ರ ಗುಪ್ತಚರ ಇಲಾಖೆಯು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಿತ್ತು. ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಕ್ರಾ ಜೀವನಿ ಹಾಗೂ ಮುಲಾಯಂ ಸಿಂಗ್​ಗೆ ಬಲೆ ಬೀಸಿದ್ದರು.

ಇಬ್ಬರೂ ಮದುವೆಯಾಗಲು ಯೋಜಿಸಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ನೇಪಾಳದ ಕಠ್ಮಂಡು ಮೂಲಕ ಇಕ್ರಾ ಭಾರತಕ್ಕೆ ಬಂದಿದ್ದಳು. ಬಳಿಕ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಲೇಬರ್ ಕ್ವಾರ್ಟರ್ಸ್‌ನಲ್ಲಿ ನೆಲೆಸಿದ್ದರು. ಸದ್ಯ ಇಕ್ರಾಳನ್ನು ಎಫ್‌ಆರ್‌ಆರ್‌ಒಗೆ ಹಸ್ತಾಂತರಿಸಲಾಗಿದೆ. ಮುಲಾಯಂ ಸಿಂಗ್ ಯಾದವ್​ನನ್ನು ಬಂಧಿಸಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಸದ್ಯಕ್ಕೆ ಆರೋಪಿ ಯುವತಿಯನ್ನು ವಿಚಾರಣೆ ನಡೆಸಿದಾಗ ಆಕೆ ರಾವಾ ಯಾದವ್ ಎಂದು ಹೆಸರು ಬದಲಿಸಿಕೊಂಡು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದ ಸಂಗತಿ ಗೊತ್ತಾಗಿದೆ. ಈ ಕುರಿತು ಎಫ್ ಆರ್ ಆರ್ ಓ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಆಂಧ್ರದಿಂದ ಖೋಟಾ ನೋಟು ತಂದು ಬೆಂಗಳೂರಿನಲ್ಲಿ ಚಲಾವಣೆ ಯತ್ನ; ಮಹಿಳೆ ಸೇರಿ ಇಬ್ಬರು ಸೆರೆ

Last Updated :Jan 23, 2023, 1:20 PM IST

ABOUT THE AUTHOR

...view details