ಕರ್ನಾಟಕ

karnataka

ವನ್ಯಜೀವಿ ವಸ್ತುಗಳನ್ನು ಹಿಂತಿರುಗಿಸಲು ಅವಕಾಶ, ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಚಿವ ಈಶ್ವರ್ ಖಂಡ್ರೆ

By ETV Bharat Karnataka Team

Published : Dec 19, 2023, 6:51 PM IST

Updated : Dec 19, 2023, 8:11 PM IST

Opportunity to return the wildlife organs: ತಮ್ಮ ಬಳಿ ಇರುವ ವನ್ಯಜೀವಿ ಅಂಗಾಂಗಗಳ ವಸ್ತುಗಳನ್ನು ಹಿಂತಿರುಗಿಸಿದವರಿಗೆ ಯಾವುದೇ ದಂಡ ಅಥವಾ ಅವರ ಮೇಲೆ ಯಾವುದೇ ಕೇಸ್​ ದಾಖಲಿಸಲಾಗುವುದಿಲ್ಲ ಎಂದು ಸಚಿವ ಈಶ್ವರ್​ ಖಂಡ್ರೆ ತಿಳಿಸಿದ್ದಾರೆ.

Forest Minister Ishwar Khandre
ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ

ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ

ಬೆಂಗಳೂರು: ಹುಲಿ ಉಗುರು ಸೇರಿದಂತೆ ವನ್ಯ ಜೀವಿಗಳ ಅಂಗಾಂಗದ ವಸ್ತುಗಳನ್ನು ಇಟ್ಟುಕೊಳ್ಳಲು ಕಾನೂನಿನಲ್ಲಿ ಅಕಾಶವಿಲ್ಲದ ಕಾರಣ, ಸರ್ಕಾರಕ್ಕೆ ಮರಳಿಸಲು ಅವಕಾಶ ನೀಡಬಹುದು. ಕೇರಳ ಸರ್ಕಾರ ಕೈಗೊಂಡ ನಿರ್ಧಾರ ಮತ್ತು ನಮ್ಮ ಸರ್ಕಾರದ ಉದ್ದೇಶಿತ ನಿರ್ಧಾರ ವಿಭಿನ್ನವಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಕಡತವನ್ನು ಪುನರ್ ಮಂಡಿಸಲು ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಇದಕ್ಕೂ ಮುನ್ನ ವಿಕಾಸಸೌಧದ ಅರಣ್ಯ ಸಚಿವರ ಕಚೇರಿಯಲ್ಲಿ ಇಂದು ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮತ್ತಿತರ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾಹಿತಿ ನೀಡಿದರು. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ, ಕಾನೂನಿನ ಅರಿವಿಲ್ಲದೇ ತಮ್ಮ ಬಳಿ ವನ್ಯ ಜೀವಿಗಳ ಅಂಗಾಂಗದ ವಸ್ತುಗಳನ್ನು ನೋಂದಣಿ ಮಾಡದೇ ಇಟ್ಟುಕೊಂಡಿರುವ ಮುಗ್ಧ ಜನತೆಗೆ ಕಿರುಕುಳ ಆಗದ ರೀತಿಯಲ್ಲಿ ಒಂದು ಬಾರಿ ಕೊನೆಯ ಅವಕಾಶ ನೀಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.

ಮೂರು ತಿಂಗಳ ಕಾಲಾವಕಾಶ ನೀಡಲು ಉದ್ದೇಶಿಸಿದ್ದು, ಈ ವಿಚಾರವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ವನ್ಯಜೀವಿಗಳ ಯಾವುದೇ ಅಂಗಾಂಗವನ್ನು ಯಾರೂ ಇಟ್ಟುಕೊಳ್ಳುವಂತಿಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಪ್ರಸ್ತುತ ವನ್ಯಜೀವಿಗಳ ಅಂಗಾಂಗ ಇಟ್ಟುಕೊಳ್ಳಲು ಪರಾವನಗಿ ನೀಡುವುದಿಲ್ಲ. 1978ರ ಪೂರ್ವದಲ್ಲಿ ಈ ವನ್ಯಜೀವಿಗಳ ಅಂಗಾಂಗಗಳನ್ನು ಇಟ್ಟುಕೊಳ್ಳಲು ನೋಂದಣಿ ಮಾಡಿಕೊಳ್ಳದೇ ಇರುವವವರು, ಅವುಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಮರಳಿಸಿದ ಅಂಗಾಂಗಗಳನ್ನು ಸರ್ಕಾರ ನಾಶ ಮಾಡಲಿದೆ. ಈಗಿರುವ ಕಾನೂನಿನ ಪ್ರಕಾರ ವನ್ಯಜೀವಿಯ ಅಂಗಾಂಗಗಳನ್ನು ಯಾರು ಇಟ್ಟುಕೊಳ್ಳುವಂತಿಲ್ಲ. ಸಾಗಣೆ, ಮಾರಾಟ ಮಾಡುವಂತಿಲ್ಲ. ಕೆಲವರು ಹುಲಿ ಉಗುರು, ಜಿಂಕೆ ಕೊಂಬು ಸೇರಿದಂತೆ ವನ್ಯಜೀವಿಗಳ ಅಂಗಾಂಗಗಳನ್ನು ಕಾನೂನಿನ ಅರವಿಲ್ಲದೇ ಇಟ್ಟುಕೊಂಡಿದ್ದವರಿಗೆ ಒಂದು ಅವಕಾಶ ದೊರೆಯಲಿದೆ. ವನ್ಯಜೀವಿ ಅಂಗಾಂಗಳನ್ನು ಮರಳಿಸಿದವರಿಗೆ ಯಾವುದೇ ದಂಡ ಹಾಕುವುದಿಲ್ಲ, ಕೇಸ್ ಸಹ ದಾಖಲಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಜಾತಿ ಗಣತಿಗೆ ವೀರಶೈವ ಸಮಾಜ ವಿರೋಧವಿಲ್ಲ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯು ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗಿದ್ದು, ಅದಕ್ಕೆ ಏಳು ವರ್ಷ ಕಳೆದಿದೆ. ಸಮೀಕ್ಷೆ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ಮಾಡಿಲ್ಲ. ಒಳಪಂಗಡಗಳು ನಿಖರವಾಗಿ ದಾಖಲಾಗಿಲ್ಲ. ನಮೂದಾಗಿರುವ ಜಾತಿ ಸತ್ಯಾಸತ್ಯತೆ ಪರಾಮರ್ಶೆಯಾಗಿಲ್ಲ. ಈ ರೀತಿಯ ಸಮಸ್ಯೆ ಆತಂಕವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಜಾತಿಗಣತಿಗೆ ವೀರಶೈವ ಸಮಾಜದ ವಿರೋಧವಿಲ್ಲ. ಸಮ ಸಮಾಜ ನಿರ್ಮಾಣವಾಗಬೇಕು ಎಂಬುದು ಸಮಾಜದ ಉದ್ದೇಶ ಎಂದು ಹೇಳಿದರು.

ಇಡೀ ದೇಶದಲ್ಲಿ ಜಾತಿ ಗಣತಿ ಆಗಬೇಕು ಹಾಗೂ ದುರ್ಬಲ ವರ್ಗದವರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದು ನಮ್ಮ ಪಕ್ಷದ ಅಪೇಕ್ಷೆಯಾಗಿದೆ. ಈಗಾಗಲೇ ಆಗಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಬಗ್ಗೆ ಎದ್ದಿರುವ ಅನುಮಾನಗಳನ್ನು ನಿವಾರಿಸುವ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕು ಎಂದು ನುಡಿದರು.

ಮರ ಕಡಿದವರ ವಿರುದ್ಧ ಕ್ರಮ: ಹಾಸನ ಜಿಲ್ಲೆಯ ಗೋಮಾಳದಲ್ಲಿ ಮರ ಕಡಿದಿರುವ ಬಗ್ಗೆ ಮೂರು ದಿನದಲ್ಲಿ ವರದಿ ನೀಡಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿದೆ. ಮರ ಕಡಿದಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಅಂದಾಜು 60 ರಿಂದ 80 ಮರಗಳನ್ನು ಕಡಿದಿರುವ ಮಾಹಿತಿಯಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ಕೇಂದ್ರದ ವಿರುದ್ಧ ವಾಗ್ದಾಳಿ: ಸಂಸತ್‍ನಲ್ಲಿ ದಾಳಿಯಾದ ಬಗ್ಗೆ ಚರ್ಚೆಗೆ ಅವಕಾಶವಿಲ್ಲ ಎಂದರೆ ಹೇಗೆ, ಬಿಜೆಪಿ ಸರ್ವಾಧಿಕಾರ ಧೋರಣೆಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಲೋಕಸಭೆಯಲ್ಲಿ ಯುವಕರು ನುಗ್ಗಿದ ವಿಚಾರ ಚರ್ಚೆಗೆ ಅವಕಾಶವಿಲ್ಲ ಎಂದರೆ ಹೇಗೆ? ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಲೋಕಸಭೆ ಕಲಾಪದಲ್ಲಿ ಭಾಗಿಯಾಗುತ್ತಿಲ್ಲ ಎಂದು ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದರು. ಬಿಜೆಪಿ ಬಡವರಿಗೆ ಸೂರು ಕಲ್ಪಿಸುವ, ಎಲ್ಲ ಮನೆಗಳಿಗೂ ನಲ್ಲಿ ನೀರು ಒದಗಿಸುವ ಭರವಸೆ ಇನ್ನು ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಶರಾವತಿ ಸಂತ್ರಸ್ತರ ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನಿರ್ಧಾರ: ಸಚಿವ ಈಶ್ವರ್ ಖಂಡ್ರೆ

Last Updated : Dec 19, 2023, 8:11 PM IST

ABOUT THE AUTHOR

...view details