ಕರ್ನಾಟಕ

karnataka

ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬಿಜೆಪಿ ಸೇರ್ಪಡೆ: ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧೆಗೆ ಸೈ ಎಂದ ಅಪ್ಪಾಜಿಗೌಡ

By

Published : Apr 4, 2023, 2:02 PM IST

ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಿದ್ದು, ಇದೀಗ ಒಬ್ಬರ ಹಿಂದೆ ಒಬ್ಬರಂತೆ ರಾಜಕೀಯ ನಾಯಕರುಗಳು ತಮ್ಮ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ.

Okkaligara Sangh Former President Appajigowda joined BJP today
ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬಿಜೆಪಿ ಸೇರ್ಪಡೆ

ಬೆಂಗಳೂರು: ಪಕ್ಷ ಸೇರಿದ ಎಲ್ಲರಿಗೂ ಅವರವರ ಸ್ಥಾನಮಾನಕ್ಕೆ ಚ್ಯುತಿ ಆಗದಂತೆ ನೋಡಿಕೊಳ್ಳಲಾಗುವುದು. ಕಾರ್ಯಕರ್ತರಾಗಿ ಪಕ್ಷದ ಕಾರ್ಯ ಮಾಡಬೇಕು. ಪಾರ್ಟಿ ಬೆಳೆಸಿ ಗಟ್ಟಿ ಮಾಡಲು ಸಮಯ ವಿನಿಯೋಗಿಸಿ ಎಂದು ನೂತನವಾಗಿ ಪಕ್ಷ ಸೇರಿದ ಇತರ ಪಕ್ಷಗಳ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿವಿಮಾತು ಹೇಳಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಬಿ. ಶ್ರೀರಾಮುಲು, ಸಂಸದ ದೇವೇಂದ್ರಪ್ಪ ಸಮ್ಮುಖದಲ್ಲಿ ನಂದಿಹಳ್ಳಿಯ ಮಾಜಿ ಶಾಸಕ ಹಾಲಪ್ಪ, ಹೂವಿನಹಡಗಲಿಯ ಯೂತ್ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯಕ್, ವಿಜಯನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರಪ್ಪ, ಒಕ್ಕಲಿಗರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ ಅಪ್ಪಾಜಿಗೌಡ ಪಕ್ಷ ಸೇರ್ಪಡೆಯಾದರು. ರಾಜ್ಯ ನಾಯಕರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ನಂತರ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮತ್ತು ಇತರರ ಪಕ್ಷ ಸೇರ್ಪಡೆಯಿಂದ ನಮಗೆ ಭೀಮಬಲ ಬಂದಿದೆ. ವಿಜಯನಗರ ಜಿಲ್ಲೆ ಮಾತ್ರವಲ್ಲದೆ, ಅಪ್ಪಾಜಿ ಗೌಡರ ಮೂಲಕ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬಲ ವೃದ್ಧಿಯಾಗಿದೆ. ಬಿಜೆಪಿ ಸಿದ್ಧಾಂತ- ವಿಚಾರಧಾರೆಯನ್ನು ಒಪ್ಪಿ ಹತ್ತಾರು ಜನರು ಪಕ್ಷ ಸೇರುತ್ತಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತ, ಯಡಿಯೂರಪ್ಪನವರ ಮಾರ್ಗದರ್ಶನದಡಿ ಬಸವರಾಜ ಬೊಮ್ಮಾಯಿಯವರ ಆಡಳಿತವನ್ನು ಮೆಚ್ಚಿಕೊಂಡು ಸಾವಿರಾರು ಜನರು ಬಿಜೆಪಿ ಸೇರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ನುಡಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಿಸಿ ಏರುತ್ತಿದೆ. ಅದರ ನಡುವೆ ಕಲ್ಯಾಣ- ಸಮೃದ್ಧಿಯ ಕರ್ನಾಟಕಕ್ಕಾಗಿ ಬಿಜೆಪಿ ಸೇರಲು ಹಲವರು ಉತ್ಸುಕರಾಗಿದ್ದಾರೆ. ಬಿಜೆಪಿಯೇ ಭರವಸೆ ಎಂಬ ಚಿಂತನೆಯ ಜೊತೆ ನೂರಾರು ಜನರು ಪಕ್ಷ ಸೇರುತ್ತಿದ್ದಾರೆ. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪ್ರಮುಖರಾದ ಕೃಷ್ಣ ನಾಯ್ಕ, ಪರಮೇಶ್ವರಪ್ಪ, ಎನ್. ಕೋಟೆಪ್ಪ, ಬೆಂಗಳೂರಿನ ಖ್ಯಾತ ನೇತ್ರ ತಜ್ಞ- ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ. ಅಪ್ಪಾಜಿ ಗೌಡ ಅವರು ಪಕ್ಷ ಸೇರಿದ್ದಾರೆ. ಇವರನ್ನು ಹೃದಯಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುವುದಾಗಿ ತಿಳಿಸಿದ ಕಟೀಲ್, ಜನಮೆಚ್ಚುಗೆ ವಿಚಾರದಲ್ಲಿ ಬಿಜೆಪಿ ಅತ್ಯಂತ ಮುಂದಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಆಗಲಿದೆ ಎಂದರು.

ಸಚಿವ ಶ್ರೀರಾಮುಲು ಅವರು ಮಾತನಾಡಿ, ಬಿಜೆಪಿ ಸೇರಿದ ಎಲ್ಲರಿಗೂ ಸ್ವಾಗತ ಮತ್ತು ಅಭಿನಂದನೆಗಳು, ನಂದಿಹಳ್ಳಿ ಹಾಲಪ್ಪ ಅವರು 2009ರಲ್ಲಿ ನಮ್ಮ ಜೊತೆಗಿದ್ದವರು. ಅವಳಿ ಜಿಲ್ಲೆಯಲ್ಲಿ 10ಕ್ಕೆ ಹತ್ತೂ ಸ್ಥಾನ ಗೆಲ್ಲಲು ಅವರ ಸೇರ್ಪಡೆ ಸಹಕಾರಿ ಎಂದರು.

ಕನಕಪುರದಲ್ಲೂ ಬದಲಾವಣೆ:ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅಪ್ಪಾಜಿ ಗೌಡ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಸ್ಪರ್ಧೆ ಮಾಡುವ ಅಪೇಕ್ಷೆ ಇದೆ. ಇದರಲ್ಲಿ ತಪ್ಪೇನು ಇಲ್ಲ. ಕಾಲ ಬದಲಾದಾಗ ಎಲ್ಲವೂ ಬದಲಾಗುತ್ತದೆ. ಇಡೀ ಭಾರತ ಕಾಂಗ್ರೆಸ್ ಅನ್ನೋ ಕಾಲ ಇತ್ತು. ಆದರೆ ಈಗ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತು. ಕನಕಪುರದ ಜನರ ಮುಂದೆ ಬಿಜೆಪಿ ಕಾರ್ಯ ಸಾಧನೆಗಳನ್ನು ಮುಂದಿಡುತ್ತೇವೆ. ಕನಕಪುರದಲ್ಲೂ ಬದಲಾವಣೆ ಆಗುತ್ತದೆ. ಜನ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾವುದೇ ಕಾರ್ಯ ಮಾಡಿದರೂ ಅದನ್ನು ಪ್ರಯತ್ನ ಅಂತಾರೆ. ಎಲ್ಲ ಸಮಯದಲ್ಲೂ ಒಂದೇ ಥರ ಇರಲ್ಲ. ಪ್ರತೀ ದಿನ ಸಂಡೇ ಬರಲ್ಲ, ದೇಶದಲ್ಲಿ ಬದಲಾವಣೆ ಆಗಿದೆ. ಕನಕಪುರದಲ್ಲೂ ಬದಲಾವಣೆ ಆಗಲಿದೆ. ಡಿಕೆಶಿ ವಿರುದ್ಧವಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರಯತ್ನ ಮಾಡೋದರಲ್ಲಿ ತಪ್ಪಿಲ್ಲ ಎಂದರು.

ಲೋಕಸಭಾ ಸದಸ್ಯ ದೇವೇಂದ್ರಪ್ಪ, ಸ್ಥಳೀಯ ಪ್ರಮುಖರು ಇದ್ದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಪರಮೇಶ್ವರಪ್ಪ, ವಾಲ್ಮೀಕಿ ಸಮಾಜದ ಮುಖಂಡ ಎನ್. ಕೋಟೆಪ್ಪ, ರಾಜ್ಯ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಬೆಂಗಳೂರಿನ ಖ್ಯಾತ ನೇತ್ರ ತಜ್ಞ ಡಾ. ಅಪ್ಪಾಜಿ ಗೌಡ ಮತ್ತು ಹಲವು ಮುಖಂಡರು ತಮ್ಮ ಬೆಂಬಲಿಗರ ಜೊತೆ ಪಕ್ಷ ಸೇರಿದರು.

ಇದನ್ನೂ ಓದಿ:ಜೆಡಿಎಸ್ ತೊರೆದು ಮಾತೃಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ

ABOUT THE AUTHOR

...view details