ಕರ್ನಾಟಕ

karnataka

ಕತ್ತಲಾದರೂ ಬೆಳಗದ ಬೊಮ್ಮಸಂದ್ರ- ಜಿಗಣಿ ಚತುಷ್ಪಥ ರಸ್ತೆಯ ಬೀದಿ ದೀಪ!

By

Published : May 28, 2020, 4:12 PM IST

ಬೊಮ್ಮಸಂದ್ರ- ಜಿಗಣಿ ಚತುಷ್ಪಥ ರಸ್ತೆಯಲ್ಲಿ ಬೀದಿ ದೀಪಗಳಿದ್ದರೂ ಏನು ಪ್ರಯೋಜನ ಆಗುತ್ತಿಲ್ಲ. ಬೀದಿ ದೀಪಗಳನ್ನು ಸರಿಪಡಿಸಬೇಕಿದ್ದ ಕೆಐಎಡಿಬಿ ಮತ್ತು ಜಿಗಣಿ- ಬೊಮ್ಮಸಂದ್ರ ಪುರಸಭೆ ನಿರ್ಲಕ್ಷ್ಯ ಧೋರಣೆ ತೋರುತ್ತಿವೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.

ಪುರಸಭೆ-ಕೆಐಎಡಿಬಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ಪುರಸಭೆ-ಕೆಐಎಡಿಬಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

ಬೆಂಗಳೂರು (ಆನೇಕಲ್): ಹೊಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೊಮ್ಮಸಂದ್ರ- ಜಿಗಣಿ ಚತುಷ್ಪಥ ರಸ್ತೆಯಲ್ಲಿ ಕಗ್ಗತ್ತಲು ಆವರಿಸಿದೆ. ಬೀದಿ ದೀಪಗಳು ಇದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ವಾಹನ ಸವಾರರು ರಾತ್ರಿ ವೇಳೆ ಪ್ರಾಣದ ಹಂಗು ತೊರೆದು ವಾಹನ ಚಲಾಯಿಸುತ್ತಿದ್ದಾರೆ.

6-7 ಕಿ.ಮೀ. ಉದ್ದದ ವರ್ತುಲ ರಸ್ತೆಯಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ. ವಿದ್ಯುತ್ ದೀಪಗಳಿಗಾಗಿ ನಾಗರಿಕರು ಸಲ್ಲಿಸಿದ ಅರ್ಜಿಗಳು ಕಸದ ಬುಟ್ಟಿಗೆ ಸೇರಿವೆ ಎಂದು ಜಿಗಣಿ ಸ್ಥಳೀಯರು ಆರೋಪಿಸಿದ್ದಾರೆ.

ರಸ್ತೆಯ ವಿದ್ಯುತ್ ದೀಪಗಳ ನಿರ್ವಹಣೆಯನ್ನು ಕೆಐಎಡಿಬಿ ಮತ್ತು ಜಿಗಣಿ-ಬೊಮ್ಮಸಂದ್ರ ಪುರಸಭೆಗಳು ದುರಸ್ತಿ ಮಾಡಬೇಕಿತ್ತು. ಆದರೆ, ಈ ಮೂರೂ ಕಚೇರಿ ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಇಲ್ಲಿಯವರೆಗೂ ಕತ್ತಲಲ್ಲೇ ಸವಾರರು ಸಂಚರಿಸುವಂತಾಗಿದೆ.

ಬೆಳಕು ನೀಡದ ರಸ್ತೆ ಬೀದಿ ದೀಪಗಳು

ಜಿಗಣಿ ಪುರಸಭಾ ಕಂದಾಯ ಅಧಿಕಾರಿ ರಾಜೇಶ್ ಮಾತನಾಡಿ, ಕೆಐಎಡಿಬಿ ಜಮೀನಿನ ಖಾತೆಗಳಿಗೆ ಕಂದಾಯ ತೆರಿಗೆಯನ್ನು ಪುರಸಭೆಗೆ ಕಟ್ಟುತ್ತಿದೆ. ಆದರೆ, ಆ ಸ್ವತ್ತುಗಳನ್ನು ಕೆಐಎಡಿಬಿ ಪುರಸಭೆಗೆ ನೀಡಿಲ್ಲ. ಹೀಗಾಗಿ, ವಿದ್ಯುತ್ ದೀಪಗಳು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕೆಐಎಡಿಬಿ ಅವಕಾಶ ನೀಡುತ್ತಿಲ್ಲ. ಜೊತೆಗೆ 650 ಕಾರ್ಖಾನೆಗಳಿಂದ ಶೇ 25ರಷ್ಟು ಶುಲ್ಕವನ್ನು ಪಡೆಯುತ್ತಿದ್ದು, ಅವರೇ ನಿರ್ವಹಣೆಯನ್ನು ಮಾಡುವ ನಂಬಿಕೆಯಿದೆ ಎಂದರು.

ಕೆಐಎಡಿಬಿ ಕಚೇರಿಗೆ ಮಾಹಿತಿಗಾಗಿ ತೆರಳಿದಾಗ ಅಲ್ಲಿ ಖಾಲಿ ಕುರ್ಚಿ, ಟೇಬಲ್​ಗಳಷ್ಟೇ ಇದ್ದವು. ಯಾವ ಅಧಿಕಾರಿಯೂ ಬರುವುದಿಲ್ಲ ಎಂಬುದು ತಿಳಿದುಬಂತು. ಪಕ್ಕದಲ್ಲಿ ಇರುವ ಜಿಗಣಿ ಪುರಸಭಾ ಅಭಿವೃದ್ದಿ ಮಂಡಳಿಗೂ ಬೀಗ ಜಡಿಯಲಾಗಿದೆ. ಗೋಡೆಯ ಮೇಲೆ ಬರೆದಿರುವ ದೂರವಾಣಿ ಸಂಖ್ಯೆಯೂ ಸ್ವಿಚ್ ಆಫ್ ಆಗಿದೆ. ಉಳಿದಂತೆ ದೊರೆತ ಕೆಐಎಡಿಬಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ 'ನೋಡೋಣ-ಮಾಡೋಣ' ಎಂಬ ಅಸಡ್ಡೆಯ ಉತ್ತರ ನೀಡುತ್ತಿದ್ದಾರೆ.

ಈ ನಡುವೆ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರು ರಸ್ತೆಯ ಕತ್ತಲ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಶ್ವವಿಖ್ಯಾತ ಬಯೋಕಾನ್, ಟೊಯೋಟಾ, ಟಾಟಾ, ಹೆಚ್​ಸಿಎಲ್ ನಂತಹ ಬೃಹತ್ ಕಂಪನಿಗಳು ಇದ್ದರೂ ಅವೆಲ್ಲದರ ಲಾಭದ ಗಳಿಕೆಯ ಭರಾಟೆಯಲ್ಲಿ ರಸ್ತೆ ಸಂಚಾರಿಗಳನ್ನು ಅಕ್ಷರಶಃ ಮರೆತಂತಿದೆ.

ABOUT THE AUTHOR

...view details