ಕರ್ನಾಟಕ

karnataka

ರಾವಣ, ಭಸ್ಮಾಸುರ ಎಂದು ಟೀಕಿಸಿದ ಪ್ರತಿಪಕ್ಷಗಳಿಗೆ ಗುಜರಾತ್ ಜನತೆಯಿಂದ ಪಾಠ: ಕಟೀಲ್

By

Published : Dec 8, 2022, 6:18 PM IST

ರಾಜ್ಯದ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಸರ್ಕಾರ ರಚಿಸುವುದು ಖಚಿತ ಎಂದು ನಳೀನ್ ಕುಮಾರ್ ಕಟೀಲ್​ ಹೇಳಿದರು.

nalin-kumar-kateel-and-sunil-kumar-reaction-about-gujarat-assembly-election
ರಾವಣ,ಭಸ್ಮಾಸುರ ಎಂದು ಟೀಕಿಸಿದ ವಿಪಕ್ಷಕ್ಕೆ ಗುಜರಾತ್ ಜನತೆ ಪಾಠ ಕಲಿಸಿದ್ದಾರೆ: ಕಟೀಲ್

ಬೆಂಗಳೂರು:ಪ್ರಧಾನಿ ಮೋದಿಯವರನ್ನು ರಾವಣ, ಭಸ್ಮಾಸುರ ಎಂದು ಟೀಕಿಸಿದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಗುಜರಾತ್ ಚುನಾವಣೆಯಲ್ಲಿ ಅಲ್ಲಿನ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಪ್ರತಿಪಕ್ಷದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ನವ ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಲೆ ಇರುವುದನ್ನು ಗುಜರಾತ್ ಅಸೆಂಬ್ಲಿ ಚುನಾವಣೆಯ ಅಭೂತಪೂರ್ವ ಫಲಿತಾಂಶವು ಸಾಬೀತುಪಡಿಸಿದೆ. ಗುಜರಾತ್ ಫಲಿತಾಂಶವು ಅಭೂತಪೂರ್ವ. ಮೋದಿಯವರ ನೇತೃತ್ವದಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿ ಸಾಧಿಸುತ್ತಿದೆ. ಅಲ್ಲದೆ ವಿಶ್ವಗುರು ಆಗುವತ್ತ ಮುನ್ನಡೆ ಸಾಧಿಸಿದೆ. ಇದನ್ನು ಗಮನಿಸಿ ಜನತೆ ಬಿಜೆಪಿಗೆ ಮತ್ತೆ ಅಧಿಕಾರ ನೀಡಿದ್ದಾರೆ ಎಂದು ವಿಶ್ಲೇಷಿಸಿದರು.

ಕರ್ನಾಟಕ ರಾಜ್ಯದ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಸರ್ಕಾರ ರಚಿಸುವುದು ಖಚಿತ. ಪ್ರತಿರೋಧ ಪಕ್ಷದವರು ತಿರುಕನ ಕನಸು ಕಾಣುವುದನ್ನು ಬಿಡಬೇಕು. ಪ್ರಧಾನಿಯವರ ಬಗ್ಗೆ ಸಣ್ಣ ಮಾತನಾಡುವುದನ್ನು ಬಿಟ್ಟು ದೇಶದ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಬೆಂಬಲ ಕೊಡಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ನಡೆದಿದ್ದ ಪಂಚರಾಜ್ಯ ಚುನಾವಣೆಯಲ್ಲೂ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಮತ್ತೆ ಗುಜರಾತ್‍ನಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಪಕ್ಷವು ಅಲ್ಲಿ ಕನಿಷ್ಠ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಆಂತರಿಕ ಜಗಳದಿಂದಾಗಿ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವು ನೆಲಕಚ್ಚುವ ಸ್ಥಿತಿಗೆ ತಲುಪುತ್ತದೆ ಎಂದರು.

ಇದನ್ನೂ ಓದಿ:ಮೋದಿ ಹೆಸರು, ಬಿಜೆಪಿ-ಆಪ್ ಪ್ರಚಾರ ಭರಾಟೆಯ ಮಧ್ಯೆ ಕಂಗೆಟ್ಟು ಕುಸಿದ ಕಾಂಗ್ರೆಸ್!

ರಾಜ್ಯದ ಚುನಾವಣೆಗೆ ಗುಜರಾತ್​ ಫಲಿತಾಂಶ ಸ್ಪೂರ್ತಿ: ಹಿಂದುತ್ವ, ಅಭಿವೃದ್ಧಿ, ಬೂತ್ ಕಾರ್ಯ ಇಡೀ ದೇಶದ ಬಿಜೆಪಿಯ ಮಾಡೆಲ್ ಆಗಿದ್ದು, ರಾಜ್ಯದಲ್ಲಿ ಕೂಡ ಅದೇ ಮಾಡೆಲ್ ಅನುಷ್ಠಾನಕ್ಕೆ ತರಲಿದ್ದೇವೆ. ಕರ್ನಾಟಕದಲ್ಲಿ ಗೆಲುವಿಗೆ ಏನೇನು ಮಾಡಬೇಕು, ಅವೆಲ್ಲವನ್ನೂ ಮಾಡುತ್ತೇವೆ. ಹೊಸಬರಿಗೆ ಅವಕಾಶ, ಹಿರಿಯರಿಗೆ ಮನ್ನಣೆ ನೀಡುವ ಕೆಲಸ ಮಾಡುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಜರಾತ್‍ನಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಜನತೆ ಅಭಿವೃದ್ಧಿ ಪರವಾಗಿ ಮತ ನೀಡಿದ್ದಾರೆ. ಗುಜರಾತ್‍ನಲ್ಲಿ ಏಳನೇ ಬಾರಿಗೆ ಬಿಜೆಪಿ ಅಧಿಕಾರಗಳಿಸಿದೆ. ಚುನಾವಣೆಯಲ್ಲಿ ಗೆಲ್ಲಲು ನಾವು ಬೇರೆ ಏನೇನೋ ತಂತ್ರಗಾರಿಕೆ ಮಾಡಿಲ್ಲ. ಕೇವಲ ಅಭಿವೃದ್ಧಿಯನ್ನು ಕಣ್ಮುಂದೆ ಇಟ್ಟುಕೊಂಡು, ಮುಂದಿನ 5 ವರ್ಷಗಳ ಅಭಿವೃದ್ಧಿಯ ಪರಿಕಲ್ಪನೆಯನ್ನು ಜನರ ಮುಂದೆ ಇಟ್ಟಿದ್ದರಿಂದ ಈ ಅತ್ಯುತ್ತಮ ಫಲಿತಾಂಶ ಲಭಿಸಿದೆ. ಸಹಜವಾಗಿ ಕರ್ನಾಟಕದ ಮುಂದಿನ ಚುನಾವಣೆಗೆ ಇದು ಸ್ಪೂರ್ತಿಯನ್ನು ಕೊಟ್ಟಿದೆ ಎಂದು ತಿಳಿಸಿದರು.

ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಲ್ಪದೊಂದಿಗೆ ನಾವು ಮಾಡಿದ್ದೇವೆ. ಹಿಂದುತ್ವದ ಚಟುವಟಿಕೆಗಳಿಗೆ ಕಾನೂನು ಸ್ವರೂಪ ಕೊಡುವಂಥ ಕಾರ್ಯ ನಡೆದಿದೆ. ನಮ್ಮ ಭಾವನೆಗಳನ್ನು ಗೌರವಿಸುವ ಬೇರೆಬೇರೆ ಯೋಜನೆಗಳನ್ನು ನಾವು ಅನುಷ್ಠಾನಕ್ಕೆ ತಂದಿದ್ದೇವೆ ಎಂದು ವಿವರಿಸಿದರು.

ಅಭಿವೃದ್ಧಿ, ಹಿಂದುತ್ವ, ಪಕ್ಷದ ಬೂತ್ ಕಾರ್ಯವು ಪಕ್ಷದ ಗೆಲುವಿಗೆ ಪೂರಕವಾಗಲಿದೆ. ಇವತ್ತಿನಿಂದಲೇ ಕರ್ನಾಟಕದ ಚುನಾವಣೆ ಆರಂಭವಾಗಿದೆ. ಗುಜರಾತ್ ಗೆಲುವು ಕರ್ನಾಟಕದ ವಿಜಯದಲ್ಲೂ ಮುಂದುವರಿಯಲಿದೆ. ನಾವು ಡಬಲ್ ಎಂಜಿನ್ ಸರಕಾರದ ಮೂಲಕ ಜನರಿಗೆ ಇನ್ನಷ್ಟು ಯೋಜನೆಗಳನ್ನು ಕೊಡಲು ಮುಂದಿನ 5 ವರ್ಷಕ್ಕಾಗಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ ಎಂದರು.

ರಾಜ್ಯದ ಚುನಾವಣಾ ಗೆಲುವಿಗೆ ಅಗತ್ಯವಾದ ಎಲ್ಲಾ ತಂತ್ರಗಾರಿಕೆಯನ್ನು ಪಕ್ಷ ಅನುಸರಿಸಲಿದೆ. ಹಿರಿಯರಿಗೆ ಮನ್ನಣೆ, ಹೊಸಬರಿಗೆ ಅವಕಾಶವನ್ನು ಗಮನದಲ್ಲಿ ಇಟ್ಟುಕೊಂಡು ಚುನಾವಣಾ ತಂತ್ರಗಾರಿಕೆ ರೂಪಿಸುತ್ತೇವೆ. ಈ ಬಾರಿ ಯುವಕರಿಗೆ ಆಧ್ಯತೆ ಸಿಗಲಿದೆ ಎಂದು ಹೇಳಿದರು.

ಹಿಮಾಚಲ ಪ್ರದೇಶದಲ್ಲಿ ಮತದಾರರ ತೀರ್ಪನ್ನು ನಾವು ಗೌರವಿಸುತ್ತೇವೆ. ಅಲ್ಲಿ ನಮಗೆ ಹಿನ್ನಡೆ ಆಗಿದೆ. ಅಲ್ಲಿನ ರಾಜ್ಯ ಘಟಕ ಮತ್ತು ರಾಷ್ಟ್ರೀಯ ತಂಡವು ಈ ಹಿನ್ನಡೆಯ ಕುರಿತ ಅವಲೋಕನ ಮಾಡಲಿದೆ. ನಾವು ಯಾವತ್ತೂ ಸೋಲಿನ ಹೊಣೆಯನ್ನು ಬೇರೆಯವರ ಮೇಲೆ ಹೊರಿಸುವುದಿಲ್ಲ ಎಂದರು.

ಇದನ್ನೂ ಓದಿ:ಮೋದಿ ಮನವಿಗೆ ಗುಜರಾತ್ ಮಣೆ; ಹಿಮಾಚಲದಲ್ಲಿ ನಡೆಯದ ಕೇಸರಿ ಕಮಾಲ್: ಕಾರಣಗಳಿವು..

ABOUT THE AUTHOR

...view details