ಕರ್ನಾಟಕ

karnataka

ರಾಮಮೂರ್ತಿಯವರ ಪತ್ನಿ ಕಮಲಮ್ಮನವರನ್ನು ಸಾಂಸ್ಕೃತಿಕ ರೂವಾರಿಯಾಗಿ ನೇಮಿಸಬೇಕು: ಮುಖ್ಯಮಂತ್ರಿ ಚಂದ್ರು

By

Published : Aug 11, 2023, 9:42 PM IST

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಕನ್ನಡದ ಕಟ್ಟಾಳು ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

mukya-mantri-chandru-met-m-ramamurthys-wife-kamalamma-in-bengaluru
ರಾಮಮೂರ್ತಿಯ ಅವರ ಪತ್ನಿ ಕಮಲಮ್ಮನವರನ್ನು ಸಾಂಸ್ಕೃತಿಕ ರೂವಾರಿಯಾಗಿ ನೇಮಿಸಬೇಕು: ಮುಖ್ಯಮಂತ್ರಿ ಚಂದ್ರು

ಬೆಂಗಳೂರು:"ರಾಮಮೂರ್ತಿಯವರ ಜೊತೆಜೊತೆಗೆ ಕನ್ನಡ ಹೋರಾಟವನ್ನು ಕಟ್ಟಿದ ಅವರ ಪತ್ನಿ ಕಮಲಮ್ಮನವರನ್ನೂ ಸಹ ರಾಜ್ಯಸರ್ಕಾರ 'ಸಾಂಸ್ಕೃತಿಕ ರೂವಾರಿ' ಯನ್ನಾಗಿ ನೇಮಿಸಿ ಗೌರವಪೂರ್ವಕವಾಗಿ ನಡೆಸಿಕೊಳ್ಳಬೇಕು" ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ. ಕನ್ನಡದ ಕಟ್ಟಾಳು, ಕನ್ನಡ ಧ್ವಜದ ನಿರ್ಮಾತೃ, ಕನ್ನಡ ಚಳವಳಿಯ ಧೀಮಂತ ನಾಯಕ ದಿವಂಗತ. ಮ. ರಾಮಮೂರ್ತಿ ಅವರ ಧರ್ಮಪತ್ನಿ 101 ವರ್ಷದ ಕಮಲಮ್ಮನರನ್ನು ಮುಖ್ಯಮಂತ್ರಿ ಚಂದ್ರು ನಗರದ ಸೇವಾ ಕ್ಷೇತ್ರ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಕಮಲಮ್ಮನವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ, ಸಹಾಯಧನದ ಚೆಕ್ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, "ಸಾಲುಮರದ ತಿಮ್ಮಕ್ಕನವರಿಗೆ ನೀಡಿರುವ ಗೌರವ ಸವಲತ್ತುಗಳ ರೀತಿಯಲ್ಲಿ ಇವರಿಗೂ ಕೊಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಈ ಕೂಡಲೇ ಗಮನಹರಿಸಬೇಕು" ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಸೇವಾ ಕ್ಷೇತ್ರ ಆಸ್ಪತ್ರೆಯ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು. ಆಸ್ಪತ್ರೆಯ ಮುಖ್ಯಸ್ಥ ಡಾ. ವಿಜಯ್, ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆವಾನಿ, ಮುಖಂಡರುಗಳಾದ ಡಾ. ರಮೇಶ್ ಬೆಳ್ಳಂಕೊಂಡ, ದರ್ಶನ್ ಜೈನ್, ಸುಷ್ಮಾ ವೀರ್ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತಿದ್ದರು.

ಸಿಎಂಗೆ ಪತ್ರ ಬರೆದಿದ್ದ ಕಸಾಪ ಅಧ್ಯಕ್ಷ:"ಕನ್ನಡದ ವೀರಸೇನಾನಿ, ಕನ್ನಡ ಬಾವುಟದ ನೇತಾರ ಹಾಗೂ ಮೊದಲ ಬಾರಿಗೆ ಸಾರ್ವಜನಿಕವಾಗಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಪ್ರಾರಂಭಿಸಿದ ಮ. ರಾಮಮೂರ್ತಿರ ಧರ್ಮಪತ್ನಿ ಕಮಲಮ್ಮ ಅವರಿಗೆ ಗೌರವ ಸಂಕೇತವಾಗಿ ಸರ್ಕಾರ ಅವರಿಗೆ ವೃದ್ಯಾಪ್ಯವೇತನ, ಜೀವನೋಪಾಯ ಹಾಗೂ ಶುಶ್ರೂಷೆಗಾಗಿ ಆರ್ಥಿಕ ನೆರವು ನೀಡಬೇಕು. ತೀರಾ ಕಷ್ಟದಲ್ಲಿ ಇರುವ ಕಮಲಮ್ಮನವರಿಗೆ ಈಗ 97 ವರ್ಷಗಳಾಗಿದ್ದು. ಅವರ ಜೀವನದ ಸಂಧ್ಯಾಕಾಲದಲ್ಲಿ ಸರ್ಕಾರ ಆರ್ಥಿಕ ನೆರವು ಒದಗಿಸುವ ಮೂಲಕ ಕನ್ನಡ ಸೇನಾನಿಗೆ ಗೌರವ ಸಲ್ಲಿಸಬೇಕು" ಎಂದು ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದರು.

"ನಾಡಿನಲ್ಲಿ ಕನ್ನಡ ಚಳುವಳಿಗೆ ನಾಂದಿ ಹಾಡಿ, ಕನ್ನಡಿಗರನ್ನು ಎಚ್ಚರಿಸಿ, ಕನ್ನಡಿಗರ ಹೃದಯದಲ್ಲಿ ಕನ್ನಡದ ಕಿಚ್ಚು- ಕೆಚ್ಚಿನ ಜ್ಯೋತಿಯನ್ನು ಬೆಳಗಿಸಿ, ಕ್ರಾಂತಿ ಮಂತ್ರವನ್ನು ಘೋಷಿಸಿದವರಲ್ಲಿ ಪ್ರಮುಖರಾದವರು “ಕನ್ನಡದ ವೀರಸೇನಾನಿ” ಎಂದೇ ಪ್ರಖ್ಯಾತರಾದ ಮ. ರಾಮಮೂರ್ತಿಯವರು. ಕನ್ನಡ ರಾಜ್ಯೋತ್ಸವ ಆಚರಣೆ ಪ್ರಾರಂಭದ ರೂವಾರಿಯಾಗಿ, ಕನ್ನಡ ಬಾವುಟದ ನೇತಾರರಾಗಿ ಕನ್ನಡ ನಾಡು-ನುಡಿಗೆ ಮ. ರಾಮಮೂರ್ತಿಯವರ ಸೇವೆ ಅನನ್ಯ ಹಾಗೂ ಅನುಪಮ".

"ಕೇವಲ ಕನ್ನಡ ಹೋರಾಟಗಾರಷ್ಟೇ ಅಲ್ಲದೇ, ಪತ್ರಕರ್ತರಾಗಿ, ಕಾದಂಬರಿಕಾರರಾಗಿ ಪ್ರಕಾಶಕರಾಗಿ, ಅಧ್ಯಯನಕಾರರಾಗಿ ಕನ್ನಡ ಸಾರಸ್ವತ ಲೋಕಕ್ಕೂ ತಮ್ಮ ವಿಶಿಷ್ಟವಾದ ಸೇವೆಯನ್ನು ನೀಡಿದ ರಾಮಮೂರ್ತಿ ಅವರು ಕನ್ನಡ ನಾಡಿನ ಪ್ರಾತಃ ಸ್ಮರಣಿಯರಲ್ಲಿ ಒಬ್ಬರು. ಇಂಥ ಭವ್ಯ ವ್ಯಕ್ತಿತ್ವದ ಕನ್ನಡದ ಅಪೂರ್ವ ಚಳುವಳಿಗಾರ ತನ್ನ ಇಬ್ಬರು ಚಿಕ್ಕ ಮಕ್ಕಳಾದ ದಿನಕರ ಹಾಗೂ ಮಂಜುನಾಥ ಇವರನ್ನು 1967ರ ಡಿಸಂಬರ್ 25ರಂದು ಅವರ ತೋಟದಲ್ಲಿ ತೋಡಿಸುತ್ತಿದ್ದ ಬಾವಿಯ ಕೆಲಸ ವೀಕ್ಷಿಸಲು ಹೋಗಿ ಮಣ್ಣು ಜಾರಿ ಒಂದೇ ಬಾವಿಯಲ್ಲಿ ಬಿದ್ದು ತಂದೆ ಮಕ್ಕಳು ಮೂವರು ಸಹ ವಿಧಿವಶರಾದುದು ಕನ್ನಡ ನಾಡು ಕಂಡ ಘೋರ ದುರಂತ ಇದಾಗಿದೆ".

"ಈ ಘಟನೆಯಿಂದ ಒಬ್ಬಂಟಿಯಾದ ಮ. ರಾಮಮೂರ್ತಿ ಅವರ ಧರ್ಮಪತ್ನಿ ಕಮಲಮ್ಮನವರು ತಮ್ಮ ಜೀವನದುದ್ದಕ್ಕೂ ಕಷ್ಟವನ್ನು ಎದುರಿಸಿದವರು. ಈಗ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. 97ರ ಹಿರಿಯ ಜೀವಕ್ಕೆ ಆರ್ಥಿಕ ಸಹಾಯವನ್ನು ಒದಗಿಸುವುದು ತೀರಾ ಜರೂರಾಗಿದೆ" ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ಇದನ್ನೂ ಓದಿ:ಕೆಲಸ ಮಾಡದೇ ನಕಲಿ ಬಿಲ್ ಮಾಡಿದವರಲ್ಲಿ ಬಹುತೇಕರು ಅಶ್ವತ್ಥ್ ನಾರಾಯಣ್, ಅಶೋಕ್ ಬೇನಾಮಿಗಳೇ: ಎಂ.ಲಕ್ಷ್ಮಣ್

ABOUT THE AUTHOR

...view details