ಬೆಂಗಳೂರು: 77ನೇ ಸ್ವಾತಂತ್ರ್ಯೋತ್ಸವ ದಿನದ ಪ್ರಯುಕ್ತ ನಗರದ ವಿಕ್ಟೋರಿಯಾ ಮತ್ತು ವಾಣಿ ವಿಲಾಸ ಆಸ್ಪತ್ರೆಗಳಿಗೆ ಎರಡು ಸುಸಜ್ಜಿತ ಆಂಬ್ಯುಲೆನ್ಸ್ಗಳನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಒದಗಿಸಿದರು. ಆಂಬ್ಯುಲೆನ್ಸ್ ಹಸ್ತಾಂತರ ಕಾರ್ಯವನ್ನು ಸಂಸದರ ಕಚೇರಿ ಸಿಬ್ಬಂದಿ ಇಂದು ನೆರವೇರಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.
ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಅಡಿಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ , ಶಿಕ್ಷಣ ಕ್ಷೇತ್ರದ ಕಾರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಆದ್ಯತೆಯ ಮೇರೆಗೆ ನಿಧಿ ಬಳಕೆ ಮಾಡಲಾಗಿದೆ.
ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ, ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆದ್ಯತೆಯಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಪೂರೈಸುವ ನಿಟ್ಟಿನಲ್ಲಿ, ಪ್ರತಿ ನಿತ್ಯ ಕಾರ್ಯ ನಿರ್ವಹಿಸುವ 2 ಮೊಬೈಲ್ ಕ್ಲಿನಿಕ್ಗಳು ಈಗಾಗಲೇ ಸೇವೆಯಲ್ಲಿ ನಿರತವಾಗಿದೆ.