ಕರ್ನಾಟಕ

karnataka

ಶೇ.85 ರಷ್ಟು ಯೋಜನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುತ್ತೇವೆ: ಸಿಎಂ ಉತ್ತರಕ್ಕೆ ತೃಪ್ತರಾಗದ ಕಾಂಗ್ರೆಸ್ ಸದಸ್ಯರ ಸಭಾತ್ಯಾಗ

By

Published : Feb 5, 2021, 3:44 PM IST

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಇಂದು ಉತ್ತರಿಸಿದ ಮುಖ್ಯಮಂತ್ರಿಗಳು, ಕೊರೊನಾ ಸಂಕಷ್ಟದ ನಡುವೆಯೂ ತಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

MLAs walkout after CM statement about development issues
ಶೇ.85 ರಷ್ಟು ಯೋಜನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುತ್ತೇವೆ

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ತಮ್ಮ ಸರ್ಕಾರ ಉತ್ತಮ ಆಡಳಿತ ನೀಡಿದ್ದು, ಬಜೆಟ್​​ನಲ್ಲಿ ಘೋಷಿಸಿದ ಶೇ. 85 ರಷ್ಟು ಯೋಜನೆಗಳನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಇಂದು ಭರವಸೆ ನೀಡಿದ್ದಾರೆ. ಆದರೆ, ಅವರ ಭರವಸೆಯನ್ನು ಒಪ್ಪದ ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದ್ದಲ್ಲದೇ ಸಭಾತ್ಯಾಗ ಮಾಡಿದ ಬೆಳವಣಿಗೆ ನಡೆದಿದೆ.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಇಂದು ಉತ್ತರಿಸಿದ ಮುಖ್ಯಮಂತ್ರಿಗಳು, ಕೊರೊನಾ ಸಂಕಷ್ಟದ ನಡುವೆಯೂ ತಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ ಎಂದು ಸಮರ್ಥಿಸಿಕೊಂಡರು.

ನಾವು ಅಧಿಕಾರಕ್ಕೆ ಬಂದಾಗಿನಿಂದ ಸತತ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದೇವೆ. ಶುರುವಿನಲ್ಲೇ ನೂರಾ ಇಪ್ಪತ್ತಾರು ತಾಲೂಕುಗಳಲ್ಲಿ ಬರಗಾಲ ಇತ್ತು. ಈ ಪರಿಸ್ಥಿತಿಯನ್ನು ನಿಭಾಯಿಸುವ ಕಾಲಕ್ಕೆ ಅತಿವೃಷ್ಟಿ ಶುರುವಾಗಿ ಲಕ್ಷಾಂತರ ಜನ ಬೀದಿಗೆ ಬಿದ್ದರು. ಅವತ್ತು ಕಾರಣಾಂತರಗಳಿಂದ ಮಂತ್ರಿಮಂಡಲ ರಚನೆ ಆಗಿರಲಿಲ್ಲ. ಹೀಗಾಗಿ ನಾನೇ ರಾಜ್ಯ ಪ್ರವಾಸ ಮಾಡಿ ಪರಿಸ್ಥಿತಿಯನ್ನು ನಿಭಾಯಿಸಿದೆ. ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಿದೆ ಎಂದರು.

ಕಳೆದ ವರ್ಷ ಕೊರೊನಾ ಸಮಸ್ಯೆ ಎದುರಾಯಿತು. ರಾಜ್ಯ ಲಾಕ್ ಡೌನ್ ಆಯಿತು. ಆದಾಯ ಕುಸಿಯಿತು. ಜನ ಕಷ್ಟಕ್ಕೆ ಸಿಲುಕಿಕೊಂಡರು. ಇಂತಹ ಪರಿಸ್ಥಿತಿಯಲ್ಲಿ ಎರಡು ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕೊರೊನಾ ಸಂಕಷ್ಟವನ್ನು ಎದುರಿಸಲು ಬಳಸಿದೆವು. ವಸತಿ, ಲೋಕೋಪಯೋಗಿ, ಕೈಗಾರಿಕೆ, ಸಮಾಜ ಕಲ್ಯಾಣ, ಪ್ರವಾಸೋದ್ಯಮ ಸೇರಿದಂತೆ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಪರಿಣಾಮಕಾರಿಯಾದ ಸಾಧನೆ ಮಾಡಿದೆವು. ಇಂಧನ ಕ್ಷೇತ್ರದಲ್ಲಿ ನಮ್ಮ ಸಾಧನೆ ಗಣನೀಯವಾಗಿದೆ. ಹೆಚ್ಚುವರಿ ವಿದ್ಯುತ್ ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುವ ಸ್ಥಿತಿಯಲ್ಲಿದ್ದೇವೆ. ನಮಗಿರುವ ಸಾಮರ್ಥ್ಯದಷ್ಟು ವಿದ್ಯುತ್ ಉತ್ಪಾದನೆ ಮಾಡದೇ ಇರಬಹುದು. ಆದರೆ, ಉತ್ಪಾದನೆ ಮಾಡಿದ ವಿದ್ಯುತ್ ನಲ್ಲೇ ಹೆಚ್ಚುವರಿಯಾದ ವಿದ್ಯುತ್ ಅನ್ನು ಮಾರಾಟ ಮಾಡುವ ಸ್ಥಿತಿಯಲ್ಲಿದ್ದೇವೆ ಎಂದು ತಿಳಿಸಿದರು.

ಕೈಗಾರಿಕೆಯಲ್ಲಿ ದೇಶದ ನಂಬರ್ ಟೂ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದು ಸಮರ್ಥಿಸಿಕೊಂಡ ಅವರು, ದೇಶದಲ್ಲಿ ಹೂಡಿಕೆಯಾಗುತ್ತಿರುವ ಕೈಗಾರಿಕಾ ಬಂಡವಾಳದ ಪೈಕಿ ಶೇಕಡ ನಲವತ್ತೊಂದರಷ್ಟು ಹಣ ಕರ್ನಾಟಕದಲ್ಲಿ ಹೂಡಿಕೆಯಾಗುತ್ತಿದೆ ಎಂದರು.

ಹಾಲಿನ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ. ಇದಕ್ಕೆ ನಾವು ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ರೈತರ ಹಾಲಿಗೆ ಪ್ರೋತ್ಸಾಹ ಧನ ನೀಡುವ ಕೆಲಸ ಆರಂಬಿಸಿದ್ದು ನಾನು. ಹೀಗಾಗಿ ಇಂದಿನ ಸಾಧನೆಗೆ ನಾನು ಕಾರಣ ಎಂದು ಹೇಳಿದರು.

ಪರಿಶಿಷ್ಟ ಜಾತಿ,ಪಂಗಡಕ್ಕೆ ನಮ್ಮ ಸರ್ಕಾರ ನ್ಯಾಯ ನೀಡಿದೆ. ಇದೇ ರೀತಿ ಕೊರೊನಾ ಸಂಕಷ್ಟದಲ್ಲಿದ್ದ ರಾಜ್ಯದ ವಿವಿಧ ಸಮುದಾಯಗಳಿಗೆ, ವೃತ್ತಿನಿರತರಿಗೆ ನೆರವು ನೀಡಿದೆ. ಮುಂದಿನ ದಿನಗಳಲ್ಲಿ ನಾವು, ನೀವೆಲ್ಲರೂ ಸೇರಿ ಈ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪರಿಣಾಕಾರಿಯಾಗಿ ಕೆಲಸ ಮಾಡೋಣ ಎಂದು ಅವರು ಹೇಳಿದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಈ ಉತ್ತರ ನನಗೆ ತೃಪ್ತಿ ತಂದಿಲ್ಲ ಎಂದರು.

ಮಾತಿನ ವಾಗ್ವಾದ :

ನೀವು ಬಜೆಟ್​ನಲ್ಲಿ ಏನು ಭರವಸೆ ನೀಡಿದ್ದಿರೋ? ಅವುಗಳಲ್ಲಿ ಬಹುತೇಕ ಭರವಸೆಗಳು ಈಡೇರಿಲ್ಲ. ರೈತರ ಮಕ್ಕಳಿಗೆ ಓದಲು ಹಣ ಕೊಡುತ್ತೇವೆ ಎಂದಿದ್ದಿರಿ ಕೊಟ್ಟಿರಾ?ರೈತರನ್ನು ಅಧ್ಯಯನಕ್ಕಾಗಿ ಇಸ್ರೇಲ್, ಚೀನಾಗೆ ಕಳಿಸುವುದಾಗಿ ಹೇಳಿದ್ದಿರಿ.ಕಳಿಸಿದಿರಾ?ಪರಿಶಿಷ್ಟ ಜಾತಿ,ಪಂಗಡಗಳಿಗೆ ನಿಗದಿ ಮಾಡಿದಷ್ಟು ಹಣ ವೆಚ್ಚ ಮಾಡಿದ್ದೀರಾ?ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಎದ್ದು ನಿಂತು, ಈ ಹಿಂದಿನ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರ ಮಾಡದೇ ಇರುವಷ್ಟು ಕೆಲಸವನ್ನು ಪರಿಶಿಷ್ಟರಿಗಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿದೆ ಎಂದರು. ಆದರೆ, ಅವರಿಗೆ ಮೀಸಲಿಟ್ಟ ಹಣದ ಪೈಕಿ ಶೇ. 42 ರಷ್ಟು ಹಣವನ್ನು ಮಾತ್ರ ಖರ್ಚು ಮಾಡಿದ್ದೀರಿ ಎಂದು ವಿರೋಧ ಪಕ್ಷಗಳು ಆರೋಪಿಸಿದಾಗ ತಿರುಗೇಟು ನೀಡಿದ ಗೋವಿಂದ ಕಾರಜೋಳ ಅವರು, ನಿಮ್ಮ ಸರ್ಕಾರದ ಅವಧಿಯಲ್ಲಿ ನಿಗದಿಯಷ್ಟು ಹಣ ಖರ್ಚು ಮಾಡಿದ್ದಿರಾ? ಎಂದರು.

ನಾವು ಪರಿಶಿಷ್ಟರಿಗಾಗಿ ನಾಲ್ಕು ಸಾವಿರ ಎಕರೆಗಳಷ್ಟು ಭೂಮಿಯನ್ನು ಖರೀದಿಸಿ ಕೊಟ್ಟಿದ್ದೇವೆ.ಅವರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ನಿಮ್ಮ ಕಾಲಕ್ಕಿಂತ ಹೆಚ್ಚು ಕೆಲಸ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಈ ಮಧ್ಯೆ ಪುನಃ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಬಜೆಟ್ ನಲ್ಲಿ ನಾವು ಏನು ಭರವಸೆ ನೀಡಿದ್ದೆವೋ? ಅದರ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಮಾರ್ಚ್ ಕಳೆಯುವುದರ ಒಳಗೆ ಶೇ. 85 ರಷ್ಟು ಸಾಧನೆ ಮಾಡುತ್ತೇವೆ ಎಂದು ಹೇಳಿದರು. ಇದಕ್ಕೆ ಒಪ್ಪದ ಪ್ರತಿಪಕ್ಷಗಳ ಸದಸ್ಯರು, ಬಹುತೇಕ ಯೋಜನೆಗಳಿಗೆ ಸಂಬಂಧಿಸಿದಂತೆ ಇನ್ನೂ ಟೆಂಡರ್​ ಕರೆದಿಲ್ಲ. ಇನ್ನು ಹೇಗೆ ತಾನೇ ಶೇ. 85 ಶೇ. ರಷ್ಟು ಸಾಧನೆ ಮಾಡುತ್ತೀರಿ?ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಉತ್ತರವನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಪಕ್ಷದ ಶಾಸಕರೊಂದಿಗೆ ಹೊರನಡೆದರು. ಇತ್ತ ಬಿಜೆಪಿ ಸದಸ್ಯರು ಪಲಾಯನವಾದ ಎಂದು ಕೂಗಿದರು.

ABOUT THE AUTHOR

...view details