ಕರ್ನಾಟಕ

karnataka

ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಕುರಿತು ಸಿಎಂ ಜೊತೆ ಸಭೆ: ಸಚಿವ ಮುರುಗೇಶ್ ನಿರಾಣಿ

By

Published : Sep 14, 2021, 3:57 PM IST

ಮೈಶುಗರ್ ಕಾರ್ಖಾನೆ ಉಳಿಸಲು ಸರ್ಕಾರ ಬದ್ದವಾಗಿದೆ. ಈ ಕುರಿತು ಸಿಎಂ ಜೊತೆ ಚರ್ಚೆ ನಡೆಸಲಾಗುವುದು ಎಂದು ಸಚಿವ ನಿರಾಣಿ ಪರಿಷತ್ ಪ್ರಶ್ನೋತ್ತರ ವೇಳೆ ಭರವಸೆ ನೀಡಿದ್ದಾರೆ.

Minister Murugesh Niranai
ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು: ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಡಬೇಕೋ ಅಥವಾ ಸರ್ಕಾರವೇ ಪುನಶ್ಚೇತನ ಮಾಡಿ ನಡೆಸಬೇಕೋ ಎನ್ನುವ ಕುರಿತು ಪ್ರಸಕ್ತ ಅಧಿವೇಶನದ ನಂತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಮೈಶುಗರ್ ಖಾಸಗೀಕರಣದ ಕುರಿತು ಪ್ರಶ್ನಿಸಿದ್ದಾರೆ. ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ ಜಿಲ್ಲೆಯ ಜನರ ಬದುಕಾಗಿತ್ತು. ಇಡೀ ರಾಜ್ಯದಲ್ಲಿ ಸರ್ಕಾರಿ ಸಾಮ್ಯದ ಕಾರ್ಖಾನೆ ನಷ್ಟದಲ್ಲಿದೆ, ರಾಜ್ಯ ಸರ್ಕಾರಕ್ಕೆ ಲಾಭದಾಯಕ ಮಾಡಲು ಸಾಧ್ಯವಾಗಿಲ್ಲ, ಕಳೆದ ಮೂರು ವರ್ಷದಿಂದ ಸಂಪೂರ್ಣ ಸ್ಥಗಿತವಾಗಿದೆ ಎಂದರು.

ಖಾಸಗಿ ಅವರಿಗೆ ಕೊಡುವುದು ಎಷ್ಟು ಸರಿ?

ಹಿಂದೆ ಪಾಂಡವಪುರ ಸಕ್ಕರೆ ಕಾರ್ಖಾನೆ ಲೀಸ್ ಕೊಟ್ಟಿತ್ತು ಕೇವಲ 4 ವರ್ಷವೂ ನಡೆಸಲಿಲ್ಲ. ಈಗ ಮತ್ತೊಂದು ಕಂಪನಿಗೆ ಕೊಟ್ಟಿದ್ದಾರೆ. ಶ್ರೀರಾಮ ಸಕ್ಕರೆ ಕಾರ್ಖಾನೆ ಕೂಡ ಖಾಸಗಿಯವರು ಆರಂಭಿಸಲೇ ಇಲ್ಲ, ಯಂತ್ರೋಪಕರಣಗಳೇ ಕಾಣೆಯಾಗಿವೆ, ಖಾಲಿ ಕಾರ್ಖಾನೆ ಉಳಿದುಕೊಂಡಿದೆ. ಹಾಗಾಗಿ ಅಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾಗ ಖಾಸಗಿಯವರಿಗೆ ಕೊಡಲ್ಲ ಎಂದಿದ್ದರು. ಆದರೆ ಈಗ ಖಾಸಗಿಯವರಿಗೆ ಕೊಡಲಾಗುತ್ತದೆ ಎನ್ನುತ್ತಿರುವುದು ಸರಿಯಲ್ಲ ಎಂದು ಮರಿತಿಬ್ಬೇಗೌಡ ಹೇಳಿದರು.

ಒಡೆಯರ್ ಕಾಲದ ಕಾರ್ಖಾನೆ ಉಳಿಸಬೇಕು. ಸರ್ಕಾರಕ್ಕೆ ಇದನ್ನ ನಡೆಸಲು ಆಗುತ್ತಿಲ್ಲ ಎನ್ನುವುದು ಜನಪ್ರತಿನಿಧಿಗಳೆಲ್ಲಾ ತಲೆ ತಗ್ಗಿಸುವ ಕೆಲಸ. ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದರು.

ಪುನಶ್ಚೇತನಕ್ಕೆ 520 ಕೋಟಿ ರೂ.

ಕೈಗಾರಿಕಾ ಸಚಿವ ನಿರಾಣಿ ಮಾತನಾಡಿ, ಮೈಶುಗರ್ ಏಷ್ಯಾದ ಮೊದಲ ಸಕ್ಕರೆ ಕಾರ್ಖಾನೆ, 2008ರಿಂದ ಮೂರು ಸರ್ಕಾರದಲ್ಲಿ ಒಟ್ಟು ಸೇರಿ 520 ಕೋಟಿಯಷ್ಟು ಪುನಶ್ಚೇತನಕ್ಕೆ ಹಣ ಕೊಡಲಾಗಿದೆ. ಆದರೂ 420 ಕೋಟಿ ನಷ್ಟದಲ್ಲೇ ಇದೆ, ಈಗಿನ ತಂತ್ರಜ್ಞಾನ ಬಳಸಿ ಹೊಸ ಕಾರ್ಖಾನೆ ತೆರೆಯಲು ಇಷ್ಟು ಹಣ ಬೇಕಿಲ್ಲ, ಜಾಗ ಕೊಟ್ಟರೆ ನಾನೇ ತೆರೆದು ತೋರಿಸಲು ಸಿದ್ದನಿದ್ದೇನೆ ಎಂದು ಕಾರ್ಖಾನೆ ಪುನಶ್ಚೇತನ ವ್ಯರ್ಥ ಎಂದರು.

ಎಸ್​​ ಆರ್​ ಪಾಟೀಲ್​​​​ ಆಕ್ಷೇಪ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಎಸ್​​​.ಆರ್ ಪಾಟೀಲ್, ಅಂದಿನ ಸಿಎಂ ಯಡಿಯೂರಪ್ಪ ಖಾಸಗಿಗೆ ಕೊಡಲ್ಲ, ಎಲ್ಲರೂ ಸೇರಿ ಸಭೆ ನಡೆಸಿ ನಿರ್ಧಾರ ಮಾಡೋಣ ಎಂದಿದ್ದರು. ಈಗ ಸಭೆ ಕರೆಯಿರಿ, ಚರ್ಚಿಸಿ ನಿರ್ಧರಿಸಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಫರ್ನಾಂಡಿಸ್​​​ ಅಂತಿಮ ದರ್ಶನ ಪಡೆಯಲಿದ್ದಾರೆ ರಾಹುಲ್​ ಗಾಂಧಿ: ಡಿ.ಕೆ ಶಿವಕುಮಾರ್

ABOUT THE AUTHOR

...view details