ಕರ್ನಾಟಕ

karnataka

ಕುಮಾರಸ್ವಾಮಿ ಆರೋಪ ಕಪೋಲ ಕಲ್ಪಿತ: ಸಚಿವ ಈಶ್ವರ ಖಂಡ್ರೆ

By ETV Bharat Karnataka Team

Published : Jan 10, 2024, 10:47 PM IST

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.

HD Kumaraswamy  Ishwar Khandre  ಹೆಚ್ ಡಿ ಕುಮಾರಸ್ವಾಮಿ  ಸಚಿವ ಈಶ್ವರ ಖಂಡ್ರೆ
ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ''ಹಾಸನ ಡಿಎಫ್​​​​ಒ ನಿಯೋಜನೆಗೆ 1 ಕೋಟಿ ಡಿಮ್ಯಾಂಡ್ ಮಾಡಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪ ಕಪೋಲ ಕಲ್ಪಿತ'' ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ನಾಲ್ಕು ದಿನಗಳ ಹಿಂದೆ ಸುದ್ದಿಗೋಷ್ಠಿ ಮಾಡಿ ಹಾಸನದ ಡಿ.ಸಿ.ಎಫ್. ಮೋಹನ್ ಕುಮಾರ್ ಪ್ರಾಮಾಣಿಕ ಅಧಿಕಾರಿ ಅವರನ್ನು ಅಮಾನತು ಮಾಡಿದ್ದು ಸರಿಯಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಈಗ ಅವರೇ ಅದೇ ಡಿಸಿಎಫ್ 50 ಲಕ್ಷ ರೂ. ನೀಡಿ ಹಾಸನ ಪೋಸ್ಟಿಂಗ್ ಪಡೆದಿದ್ದಾರೆ ಎನ್ನುತ್ತಾರೆ. 50 ಲಕ್ಷ ಲಂಚ ಕೊಟ್ಟು ಪೋಸ್ಟಿಂಗ್ ಪಡೆದಿದ್ದೇ ನಿಜವಾದರೆ ಅವರು ಪ್ರಾಮಾಣಿಕ ಹೇಗೆ ಆಗ್ತಾರೆ'' ಎಂದು ಪ್ರಶ್ನಿಸಿದ್ದಾರೆ. ಇದು ಕುಮಾರಸ್ವಾಮಿ ಅವರ ಕಪೋಲ ಕಲ್ಪಿತ ದ್ವಂದ್ವ ಹೇಳಿಕೆಗೆ ಜ್ವಲಂತ ಸಾಕ್ಷಿ'' ಎಂದು ತೀವ್ರ ತಿರುಗೇಟು ನೀಡಿದ್ದಾರೆ.

''ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ನೂರಾರು ಮರಗಳನ್ನು ಅಕ್ರಮವಾಗಿ ಕಡಿಯುತ್ತಿದ್ದರೆ, ಅರಣ್ಯ ನಾಶ ಮಾಡುತ್ತಿದ್ದರೆ ಸಹಜವಾಗೇ ವನ್ಯಜೀವಿಗಳು ನಾಡಿಗೆ ಬರುತ್ತವೆ. ಪರಿಸರ ಕಾಳಜಿ ಇರುವ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯಲ್ಲಿ ಅದರಲ್ಲೂ ಬೇಲೂರು, ಸಕಲೇಶಪುರ ವಲಯದಲ್ಲಿ ಅರಣ್ಯ ಒತ್ತುವರಿ ತೆರವು ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸುವ ಬಗ್ಗೆ ಮಾತನಾಡಬೇಕು'' ಎಂದು ಅವರು ಗರಂ ಆದರು.

ಹಾಸನದ ಡಿಸಿಎಫ್ ಹೊಣೆಯನ್ನು ಮೈಸೂರಿನವರಿಗೆ ಪ್ರಭಾರ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಭಾರಿ ಇದ್ದವರನ್ನೇ ಹಾಸನ ಡಿ.ಸಿ.ಎಫ್. ಆಗಿ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನೂ ಪುನಾರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಕ್ರಮವಾಗಿ ಮರ ಕಡಿಯುವ, ಪ್ರಕೃತಿ, ಪರಿಸರ ನಾಶ ಮಾಡುವವರ ಪರವಾಗಿ ಯಾರೂ ಮಾತನಾಡಬಾರದು. ಮಾಜಿ ಮುಖ್ಯಮಂತ್ರಿ ನಂದಗೋಡನ ಹಳ್ಳಿಯ ಅಕ್ರಮ ಮರ ಕಡಿತಲೆ ಪ್ರಕರಣದಲ್ಲಿ ಪದೇ ಪದೆ ಮಾತನಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕ್ರಮ:''ಬೆಂಗಳೂರಿನಲ್ಲಿ 2,500 ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿದ್ದು, 403 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ. ಉಳಿದ ಒತ್ತುವರಿ ತೆರವುಗೊಳಿಸುವುದಕ್ಕೆ ಸರ್ಕಾರ ಕ್ರಮ ವಹಿಸುತ್ತಿದೆ'' ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಇತ್ತೀಚೆಗೆ ಹೇಳಿದ್ದರು.

''ಒತ್ತುವರಿ ತೆರವು ಕಾರ್ಯಕ್ಕೆ ಬೆಂಗಳೂರಿನ ಶಾಸಕರು ಸಹ ಸಹಕಾರ ನೀಡಬೇಕು. ಈಗಾಗಲೇ ಬೆಂಗಳೂರಿನಲ್ಲಿ 500 ಹೆಕ್ಟೇರ್ ಅರಣ್ಯ ಪ್ರದೇಶ ವ್ಯಾಪ್ತಿ ಕಡಿಮೆಯಾಗಿದೆ. ಮಾನವ - ವನ್ಯಜೀವಿ ಸಂಘರ್ಷ ಬೆಂಗಳೂರು ಮಹಾನಗರದಲ್ಲಿಯೂ ಕಂಡು ಬರುತ್ತಿದೆ'' ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ:ಗ್ಯಾರಂಟಿಗಳನ್ನು ಅಪಹಾಸ್ಯ ಮಾಡಿದವರೇ ಈಗ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details