ಕರ್ನಾಟಕ

karnataka

ಮಾವುತರು, ಕಾವಾಡಿಗರಿಗೆ ಉಪಾಹಾರ ಬಡಿಸಿದ ಸಚಿವ ಡಾ.ಹೆಚ್.ಸಿ. ಮಹದೇವಪ್ಪ..

By ETV Bharat Karnataka Team

Published : Sep 29, 2023, 2:42 PM IST

ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅರಮನೆಗೆ ಬಂದಿದ್ದ ಮಾವುತರು, ಕಾವಾಡಿಗರಿಗೆ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಉಪಾಹಾರ ಬಡಿಸಿದರು. ನಂತರ ಅವರೊಂದಿಗೆ ಕುಳಿತುಕೊಂಡು ಸಚಿವರು ಉಪಹಾರ ಸೇವನೆ ಮಾಡಿದರು.

Minister Dr. H. C. Mahadevappa
ಮಾವುತರು, ಕಾವಾಡಿಗರಿಗೆ ಉಪಹಾರ ಬಡಿಸಿದ ಸಚಿವ ಡಾ.ಹೆಚ್.ಸಿ. ಮಹದೇವಪ್ಪ

ಮೈಸೂರು:ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅರಮನೆಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗರ ಕುಟುಂಬದ ಸದಸ್ಯರಿಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಬೆಳಗಿನ ಉಪಹಾರ ಬಡಿಸಿದರು.

ಮಾವುತರು, ಕಾವಾಡಿಗರಿಗೆ ಉಪಹಾರ ಬಡಿಸಿದ ಸಚಿವ ಡಾ.ಹೆಚ್.ಸಿ. ಮಹದೇವಪ್ಪ

ಮೈಸೂರು ಅರಮನೆಯ ಮಂಡಳಿಯಿಂದ ಶುಕ್ರವಾರ ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಸಚಿವರು, ಹೋಳಿಗೆ, ತುಪ್ಪ, ತಟ್ಟೆ ಇಡ್ಲಿ, ಸಾಂಬಾರು ಚಟ್ನಿ, ಮಸಾಲೆ ದೋಸೆ, ಸಾಗು, ಉದ್ದಿನ ವಡೆ, ಟೊಮೆಟೊ ಬಾತ್, ಕೇಸರಿ ಬಾತ್ ಬಡಿಸಿದರು. ನಂತರ ಮಾವುತರ ಕುಟುಂಬದವರ ಜೊತೆಗೆ ಕುಳಿತು ತಾವೂ ಉಪಾಹಾರ ಸೇವನೆ ಮಾಡಿದರು.

ಮಾವುತರು, ಕಾವಾಡಿಗರ ಮಕ್ಕಳ ಜೊತೆಗೆ ಸಮಯ ಕಳೆದ ಸಚಿವ ಡಾ.ಹೆಚ್.ಸಿ. ಮಹದೇವಪ್ಪ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು, ''ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭಾಗವಹಿಸುವ ಮಾವುತ ಮತ್ತು ಕಾವಾಡಿಗರಿಗೆ ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ಉಪಾಹಾರ ಕೂಟ ಏರ್ಪಡಿಸಲಾಗಿದೆ. ಅದರಂತೆ ಈ ಬಾರಿಯೂ 250ಕ್ಕೂ ಹೆಚ್ಚಕ್ಕೂ ಮಾವುತ, ಕಾವಾಡಿಗರ ಕುಟುಂಬ ಸದಸ್ಯರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಮಾವುತರ ಯೋಗಕ್ಷೇಮ ವಿಚಾರಿಸಿದ ಸಚಿವ ಡಾ.ಹೆಚ್.ಸಿ. ಮಹದೇವಪ್ಪ

''ದಸರಾ ಮಹೋತ್ಸವದ ಸಂದರ್ಭದಲ್ಲಿ ಕಾಡನ್ನು ಬಿಟ್ಟು ನಗರಕ್ಕೆ ಬಂದಿರುವ ಮಾವುತರು ಹಾಗೂ ಕಾವಾಡಿಗರ ಕುಟುಂಬಕ್ಕೆ ಅಗತ್ಯ ಇರುವ ಎಲ್ಲ ರೀತಿಯ ಸೌಲಭ್ಯ ನೀಡಲಾಗಿದೆ‌. ಮಕ್ಕಳಿಗೆ ವಿದ್ಯಾಭ್ಯಾಸದ ಸಮಸ್ಯೆ ಉಂಟಾಗಬಾರದು ಎಂದು ಅರಮನೆ ಆವರಣದಲ್ಲಿ ತಾತ್ಕಾಲಿಕವಾಗಿ ಟೆಂಟ್ ಶಾಲೆಯನ್ನು ತೆರೆದು, ಶಿಕ್ಷಕರನ್ನು ನೇಮಿಸಿ ಓದು, ಬರಹ ಕಲಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಅವರ ಆರೋಗ್ಯದ ಹಿತದೃಷ್ಟಿಯಿಂದಲೂ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಾವುತರ ಯೋಗಕ್ಷೇಮ ವಿಚಾರಿಸಿದ ಸಚಿವರು:ಉಪಹಾರ ಸೇವಿಸಿದ ಬಳಿಕ ದಸರಾ ಗಜಪಡೆ ಪೋಷಣೆ ಮಾಡುತ್ತಿರುವ ಮಾವುತರು ಹಾಗೂ ಕಾವಾಡಿಗರ ಯೋಗಕ್ಷೇಮ ವಿಚಾರಿಸಿದರು. ''ಕಾಡಿನ ಸಂಪತ್ತೇ ನಾಡಿನ ಸಂಪತ್ತು. ಕಾಡಿನ ಸಂರಕ್ಷಕರಾದ ನೀವು, ಅರಣ್ಯ ಸಂಪತ್ತಿನ ಭಾಗವೇ ಆಗಿದ್ದೀರಿ. ನಿಮಗೆ ಅಗತ್ಯವಿರುವ ಮೂಲ ಸೌಕರ್ಯವನ್ನು ಸರ್ಕಾರದಿಂದ ಒದಗಿಸಿಕೊಡಲಾವುದು'' ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮೈಸೂರು ಅರಮನೆ ಮಂಡಳಿ ಹಾಗೂ ಅಪೋಲೋ ಬಿಜಿಎಸ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಮಾವುತರು ಮತ್ತು ಕಾವಾಡಿಗರ ಕುಟುಂಬದವರಿಗೆ ಆಯೋಜಿಸಿದ್ದ ಉಚಿತ ತಪಾಸಣೆ ಶಿಬಿರಕ್ಕೆ ಸಚಿವರು ಚಾಲನೆ ನೀಡಿದರು.

ಮಾವುತರು, ಕಾವಾಡಿಗರ ಜೊತೆಗೆ ಕುಳಿತುಕೊಂಡು ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಉಪಹಾರ ಸೇವನೆ ಮಾಡಿದರು.

ಟೆಂಟ್ ಶಾಲೆ ಉದ್ಘಾಟನೆ:ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ, ಮೈಸೂರು ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಅರಮನೆ ಆವರಣದಲ್ಲಿ ಮಾವುತರು ಮತ್ತು ಕಾವಾಡಿರ ಮಕ್ಕಳಿಗೆ ತಾತ್ಕಾಲಿಕ ಶಾಲೆ ಉದ್ಘಾಟನೆ ಮಾಡಿದರು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ, ಅವರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಆಯುಷ್ ಇಲಾಖೆಯಿಂದ ಕಾವಾಡಿಗರು ಹಾಗೂ ಮಾವುತರಿಗೆ ಆಯೋಜಿಸಿರುವ ಪಂಚಕರ್ಮ ತೆರಿಪಿಗೂ ಚಾಲನೆ ನೀಡಿದರು‌.

ಉಪಾಹಾರ ಸೇವನೆಗೂ ಮುನ್ನ ಹಸಿರು ಕ್ರಾಂತಿಯ ಪಿತಾಮಹಾ, ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರ ನಿಧನದ ಹಿನ್ನೆಲೆ ಒಂದು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು. ಶಾಸಕ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ವಿಧಾನ ಪರಿದತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಸಂಸದ ಪ್ರತಾಪ ಸಿಂಹ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ. ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಅರಣ್ಯ ಸಂರಕ್ಷಾಣಾಧಿಕಾರಿ ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಾಣಾಧಿಕಾರಿ ಸೌರಭ್ ಕುಮಾರ್, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ, ಅರಮನೆ ಎಸಿಪಿ ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಜೆರೋಧಾ ಮಾರುಕಟ್ಟೆ ಮೌಲ್ಯ 30 ಸಾವಿರ ಕೋಟಿ; ಸಿಇಒ ನಿತಿನ್ ಕಾಮತ್

ABOUT THE AUTHOR

...view details