ಕರ್ನಾಟಕ

karnataka

ಯಾರದೋ ಮದುವೆಯಲ್ಲಿ ಪ್ರತಿಪಕ್ಷ ನಾಯಕರು ಬಾಸಿಂಗ ಕಟ್ಟಿಕೊಂಡು ನಿಂತಿದ್ದಾರೆ: ಎಕ್ಸ್ ಪ್ರೆಸ್ ವೇ ಕ್ರೆಡಿಟ್ ವಾರ್ ಗೆ ಸಿಸಿಪಿ ವ್ಯಂಗ್ಯ..!

By

Published : Mar 11, 2023, 6:12 PM IST

ಬೆಂಗಳೂರು ಮೈಸೂರು ಎಕ್ಸ್​​ ಪ್ರೆಸ್ ವೇ​ ಕ್ರೆಡಿಟ್​ ವಾರ್​​ - ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ವ್ಯಂಗ್ಯ - ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿಸಿ ಪಾಟೀಲ್​ - ವಿಪಕ್ಷಗಳಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರ

minister-cc-patil-slams-opposite-leaders-on-bengaluru-mysore-express-highway-credit-war
ಎಕ್ಸ್ ಪ್ರೆಸ್ ವೇ ಕ್ರೆಡಿಟ್ ವಾರ್ ಗೆ ಸಿಸಿಪಿ ವ್ಯಂಗ್ಯ

ಬೆಂಗಳೂರು: ವಧು ನೋಡಲು ಹೋಗುವವರೆಲ್ಲ ಆ ಹುಡುಗಿಯನ್ನು ಮದುವೆಯಾಗಲು ಸಾಧ್ಯವಿಲ್ಲ. ಒಬ್ಬರು ಮಾತ್ರವೇ ಮದುವೆಯಾಗಲು ಸಾಧ್ಯ. ಅದರಂತೆ ಯೋಜನೆ ಬಗ್ಗೆ ಮಾತನಾಡಿದವರಿಗೆಲ್ಲ ಸಾಧಕರಲ್ಲ. ಹೆದ್ದಾರಿ ಮಾಡಿ ತೋರಿಸಿದವರೇ ಸಾಧಕರು. ಆದರೂ ವಧು ನೋಡಲು ಹೋಗಿದ್ದ ಪ್ರತಿಪಕ್ಷ ನಾಯಕರುಗಳು ಯಾರದ್ದೋ ಮದುವೆ ಸಮಯದಲ್ಲಿ ಬಾಸಿಂಗ ಕಟ್ಟಿಕೊಂಡು ನಿಂತಿರುವುದು ಹಾಸ್ಯಾಸ್ಪದವಾಗಿದೆ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ವಿಪಕ್ಷಗಳಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರ : ಪ್ರಸ್ತುತ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ವಿಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಈಗ ನಿದ್ದೆಯಿಂದ ಎಚ್ಚರಗೊಂಡಂತೆ ಬಿಜೆಪಿ ಸರ್ಕಾರ ನಿರ್ಮಿಸಿರುವ ಹೆದ್ದಾರಿಗಳ ಮೇಲೆ ತಮ್ಮ ಪಕ್ಷದ ಬಾವುಟ ಹಾರಿಸಿಕೊಳ್ಳಲು ಹುನ್ನಾರ ನಡೆಸಿರುವುದು ಹಾಸ್ಯಾಸ್ಪದವಾಗಿದೆ. ವಧು ನೋಡಲು ಆರೆಂಟು ಜನ ಹೋಗಬಹುದು. ಆದರೆ, ಮದುವೆ ಆಗುವವನು ಒಬ್ಬ ವರನೇ ಹೊರತು ಉಳಿದ ಆರೇಳು ಮಂದಿಯಲ್ಲ. ಹಾಗೆಯೇ ಈ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಈಗ ಕೈಗೂಡುತ್ತಿರುವ ಹೊತ್ತಿಗೆ ವಿರೋಧ ಪಕ್ಷಗಳ ಆರೆಂಟು ಮುಖಂಡರು ಭಾಸಿಂಗ ಕಟ್ಟಿಕೊಂಡು ಮುಂದೆ ಬಂದಿರುವುದು ವಿಚಿತ್ರ ಎಂದು ಪತ್ರಿಕಾ ಹೇಳಿಕೆ ಮೂಲಕ ಸಿಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ರಾಜ್ಯದ ಜನರಿಗೆ ಎಲ್ಲವೂ ಗೊತ್ತಿದೆ. ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ ಯಾರು ಕಾರಣ. ಯಾರ ಕಾಲದಲ್ಲಿ ಆಗಿದೆ ಎನ್ನುವುದು ಸೇರಿದಂತೆ ಇಡೀ ಯೋಜನೆಯ ಸಮಗ್ರ ಚಿತ್ರಣ ದಾಖಲೆಗಳಲ್ಲೂ ನಮೂದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರದ ಕೊಡುಗೆ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಈ ಎಕ್ಸ್ ಪ್ರೆಸ್ ಹೆದ್ದಾರಿಯ ಕನಸು ನನಸು ಮಾಡುವಲ್ಲಿ ನಮ್ಮ ಡಬ್ಬಲ್ ಇಂಜಿನ್ ಸರ್ಕಾರ ಹೇಗೆ ಕೆಲಸ ಮಾಡಿದೆ ಎಂದು ದಾಖಲೆಗಳೇ ತಿಳಿಸುತ್ತವೆ ಎಂದರು.

ಹೆದ್ದಾರಿ ನಿರ್ಮಾಣದ ರೂವಾರಿ ಪ್ರಧಾನಿ ಮೋದಿ :ಬೆಂಗಳೂರು ಮೈಸೂರು ನಡುವೆ ನಿರ್ಮಾಣಗೊಂಡು ಈಗ ಉದ್ಘಾಟನೆಗೆ ಸಿದ್ಧವಾಗಿರುವ ಈ ಎಕ್ಸ್ ಪ್ರೆಸ್ ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವಾಗ ಪ್ರತಿಪಕ್ಷ ನಾಯಕರಿಗೆ ಅಲ್ಲಿಗೆ ತೆರಳಿ ಪರಿಶೀಲಿಸುವುದಕ್ಕೂ ಪುರುಸೊತ್ತಿರಲಿಲ್ಲ. ಕಳೆದ ಬಾರಿ ಮಳೆಗಾಲದಲ್ಲಿ ಈ ಹೆದ್ದಾರಿಯಲ್ಲಿ ನೀರು ನಿಂತು ಸಮಸ್ಯೆಯಾದಾಗ ಎಲ್ಲರೂ ನಮಗೆ ಬಾಯಿಗೆ ಬಂದಂತೆ ನಿಂದಿಸಿದ್ದರು. ಇದಕ್ಕೆಲ್ಲಾ ಬಿಜೆಪಿ ಸರ್ಕಾರವೇ ಕಾರಣ, ಇದು ಬಿಜೆಪಿ ಕೊಡುಗೆ ಎಂದು ಟೀಕಿಸಿದ್ದರು. ಇದು ತಮ್ಮದೇ ಹೆದ್ದಾರಿಯೆಂದು ಆಗ ಯಾರೂ ಬಾಯಿ ಬಿಟ್ಟಿರಲಿಲ್ಲ.

ಆದರೆ, ಈಗ ಇದೇ ಹೆದ್ದಾರಿಯನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ವಿಶ್ವ ದರ್ಜೆಯಲ್ಲಿ ನಿರ್ಮಿಸಿ, ಬೆಂಗಳೂರು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಮೂರು ತಾಸಿನಿಂದ 90 ನಿಮಿಷಗಳಿಗೆ ಇಳಿಸಿರುವಾಗ ಈ ಸಾಧನೆ ತನ್ನದು, ತಮ್ಮ ಪಕ್ಷದ್ದು ಎಂದು ಕೆಲವರು ಕತೆ ಕಟ್ಟುತ್ತಾ ಎಕ್ಸ್ ಪ್ರೆಸ್ ವೇ ನಿರ್ಮಾಣದ ಹರಿಕಾರ ಪ್ರಧಾನಿ ನರೇಂದ್ರ ಮೋದಿಗೆ ಲೋಕಾರ್ಪಣೆ ಮಾಡಬಾರದು ಎಂದು ಖ್ಯಾತೆ ತೆಗೆದಿರುವುದು ಖಂಡನೀಯ ಎಂದಿದ್ದಾರೆ.

ಪ್ರತಿಪಕ್ಷದ ನಾಯಕರಿಗೆ ಈ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ : ಈ ಹೆದ್ದಾರಿ ನಿರ್ಮಾಣದ ರೂವಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೇ ಆಗಿರುವುದರಿಂದ ಈ ಬಗ್ಗೆ ಮಾತನಾಡಲು ಈ ಪ್ರತಿಪಕ್ಷದವರಿಗೆ ಯಾವ ನೈತಿಕತೆ ಇದೆ. ಇವರು ಮೊಸರಿನಲ್ಲಿ ಕಲ್ಲು ಹುಡುಕುವವರಷ್ಟೇ ಅಲ್ಲ, ಇವರು ಮೊಸರಿಗೇ ಕಲ್ಲು ಹಾಕುವವರು ಎಂಬುದು ಅವರ ಈ ನಡೆಯಿಂದ ಗೊತ್ತಾಗುತ್ತದೆ ಎಂದು ಟೀಕಿಸಿದರು.

2018 ಫೆಬ್ರವರಿ 12 ರಂದು ಮೋದಿ ಮೈಸೂರಿಗೆ ಆಗಮಿಸಿದಾಗ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣದ ಬಗ್ಗೆ ಮೊದಲ ಬಾರಿಗೆ ಸ್ವತಃ ಘೋಷಿಸಿದ್ದರು. ಇದರ ವಿಡಿಯೋ ಕೂಡ ದಾಖಲೆಯಾಗಿ ಇಂದಿಗೂ ಲಭ್ಯವಿದೆ. ತದನಂತರ ದೆಹಲಿಗೆ ವಾಪಸ್ ಆದ ಒಂದು ವಾರದಲ್ಲಿಯೇ ಪ್ರಧಾನಿ ಮೋದಿಜೀ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಎಕನಾಮಿಕ್ ಅಫೇರ್ಸ್ ಸಮಿತಿ ಸಭೆಯಲ್ಲಿ ಬೆಂಗಳೂರು ಮೈಸೂರು ನಿಡಘಟ್ಟ ಹೆದ್ದಾರಿ ನಿರ್ಮಾಣಕ್ಕೆ ಅನುಮತಿ ನೀಡಿದ್ದರಿಂದ ಈ ಯೋಜನೆ ಜಾರಿಗೆ ಬರುವಂತಾಯಿತು.

ಕೇಂದ್ರ ಸಚಿವ ನಿತಿನ್​ ಗಡ್ಕರಿಯಿಂದ ಶಂಕು ಸ್ಥಾಪನೆ :ಇದಾಗಿ ಕೇವಲ ಒಂದು ತಿಂಗಳಿನಲ್ಲಿಯೇ ಅಂದರೆ 2018 ಮಾರ್ಚ್ 24ರಂದು ಕೇಂದ್ರ ಸಚಿವರಾದ ಗಡ್ಕರಿಯವರು ಈ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ತರುವಾಯ ಕೇವಲ ಐದು ವರ್ಷಗಳ ಅವಧಿಯ ದಾಖಲೆ ಸಮಯದಲ್ಲೇ ಈಗ ಈ ಹೆದ್ದಾರಿಯು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಪೂರ್ಣಗೊಂಡಿರುವುದು, ಈ ಬಗ್ಗೆ ಗಡ್ಕರಿಯವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನೇಕ ಸಭೆ ನಡೆಸಿರುವುದು, ಗಡ್ಕರಿಯವರ ಜೊತೆ ನಾನು ಕೂಡಾ ಈ ಕಾಮಗಾರಿಗಳ ಪರಿಶೀಲನೆ ನಡೆಸಿರುವುದು ಇತಿಹಾಸವಾಗಿದೆ.

ಅಷ್ಟೇ ಅಲ್ಲದೆ ಪ್ರಧಾನಿಯವರು 2018ರಲ್ಲಿ ಈ ಯೋಜನೆಯನ್ನು ಘೋಷಿಸಿದಾಗ ಈ ವಿಪಕ್ಷದ ನಾಯಕರಾರೂ ತಾವು ಆ ಕೆಲಸವನ್ನು ಆಗಲೇ ಮಾಡಿದ್ದೇವೆ ಎಂದು ಹೇಳಿರಲಿಲ್ಲವಲ್ಲ. ಈಗ ಈ ಮಹತ್ವಕಾಂಕ್ಷಿ ಯೋಜನೆ ಸಂಪೂರ್ಣ ಫಲ ಬಿಟ್ಟಿರುವಾಗ ಇದನ್ನು ತಾನು ಮಾಡಿದ್ದೇನೆ, ತಮ್ಮ ಪಕ್ಷ ಮಾಡಿದೆ ಎಂದೆಲ್ಲ ಬಿಂಬಿಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ ಎಂದು ತಿರುಗೇಟು ನೀಡಿದ್ದಾರೆ.

ಮೋದಿ ಅವರೇ 2018ರಲ್ಲಿ ಘೋಷಿಸಿ ಕೇವಲ ಐದು ವರ್ಷಗಳ ಅವಧಿಯಲ್ಲಿ ಅವರೇ ಈ ಕನಸನ್ನು ನನಸು ಮಾಡಿ ಈಗ ಅವರೇ ಇದನ್ನು ಲೋಕಾರ್ಪಣೆಗೊಳಿಸುವ ಮೂಲಕ ನುಡಿದಂತೆ ನಡೆಯುತ್ತಿರುವ ಸರ್ಕಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆದರೆ, ಇದನ್ನು ಸಹಿಸಲಾಗದ ವಿರೋಧ ಪಕ್ಷದವರು ಕೈಲಾಗದವ ಮೈ ಪರಚಿಕೊಂಡ ಎಂಬಂತೆ ಇದರಲ್ಲಿಯೂ ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಿರುವುದು ಅವರ ರಾಜಕೀಯ ವಾಂಛೆಗೆ ನಿದರ್ಶನವಾಗಿದೆ. ತಮಗೆ ಅಧಿಕಾರ ಸಿಕ್ಕಿದ ಕಾಲದಲ್ಲಿ ತೆಪ್ಪಗಿದ್ದ ಈ ವಿರೋಧ ಪಕ್ಷದವರಿಗೆ ಮುಂದಿನ ಚುನಾವಣೆಯ ನಂತರವೂ ತೆಪ್ಪಗಿರುವಂತೆ ಜನರೇ ಪಕ್ಕ ಪಾಠ ಕಲಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ :ಗೌಡರು ತಂದಿದ್ದು ನೈಸ್ ರೋಡ್​, ಎಕ್ಸ್​​ಪ್ರೆಸ್ ವೇ ಶ್ರೇಯ ಮೋದಿ ಸರ್ಕಾರಕ್ಕೆ ಸಲ್ಲಬೇಕು: ಶೋಭಾ ಕರಂದ್ಲಾಜೆ

ABOUT THE AUTHOR

...view details