ಕರ್ನಾಟಕ

karnataka

ಅಂಧತ್ವ ಮೆಟ್ಟಿ ನಿಂತ ಯುವತಿ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಬೆಂಗಳೂರಿನ ಮೇಘನಾ ಸಾಧನೆ ದಿವ್ಯಾಂಗರಿಗೆ ಸ್ಫೂರ್ತಿ

By

Published : Aug 4, 2020, 6:19 PM IST

Updated : Aug 4, 2020, 6:30 PM IST

ಸತತ ಪ್ರಯತ್ನ ಮತ್ತು ಛಲ ಇದ್ದರೆ ಸಾಧನೆ ಹಾದಿ ಸುಲಭ ಅಂತಾರೆ. ಹಾಗೆಯೇ ಬೆಂಗಳೂರಿನ ಯುವತಿವೊಬ್ಬರು ದೃಷ್ಟಿ ಇಲ್ಲದೇ ಇದ್ದರೂ ಯುಪಿಎಸ್​ಸಿ ಪರೀಕ್ಷೆಯಲ್ಲಿ ದೇಶದ ಗಮನ ಸೆಳೆದಿದ್ದಾರೆ. ಮೇಘನಾ ಕೆ.ಪಿ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 465ನೇ ಱಂಕ್​ ​ಗಳಿಸಿ ಹೆತ್ತವರಿಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Meghana.K.P
ಮೇಘನಾ.ಕೆ.ಪಿ

ಬೆಂಗಳೂರು: ಬಹುತೇಕರು ದೈಹಿಕ ನ್ಯೂನ್ಯತೆಯನ್ನೇ ನೆಪ ಮಾಡಿಕೊಂಡು ಸಾಧನೆ ಕಷ್ಟ ಕಷ್ಟ ಅಂತಾರೆ. ಆದರೆ ಕೆಲವರು ಸತತ ಪ್ರಯತ್ನ ಮತ್ತು ಛಲದಿಂದ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ಇಂಥವರ ಸಾಲಿಗೆ ಸೇರುತ್ತಾರೆ ಬೆಂಗಳೂರಿನ ಸಾಧಕಿ ಮೇಘನಾ ಕೆ.ಪಿ.

ಹೌದು, ಅಂಧೆ ಆಗಿದ್ದರೂ ಅದನ್ನು ದೌರ್ಬಲ್ಯ ಅಂದುಕೊಳ್ಳದೇ ಯುಪಿಎಸ್​​ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಮೇಘನಾ.ಕೆ.ಪಿ.

ಲೋಕವನ್ನೇ ನೋಡಲಾಗದೇ ಸಾಧನೆಯ ಮೂಲಕ ದೇಶವನ್ನೇ ತನ್ನತ್ತ ಸೆಳೆದಿರುವ ಮೇಘನಾ ಕೆ.ಪಿ. ಅವರು ಕಳೆದ ಮೂರು ತಿಂಗಳ ಹಿಂದೆಯಷ್ಟೇ ರಾಜ್ಯ ಖಜಾನೆ ಇಲಾಖೆಯ ಸಹಾಯಕ‌ ನಿರ್ದೇಶಕಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಮೇಘನಾ 465ನೇ ಱಂಕ್ ​​ಗಳಿಸಿರುವ ರಾಜ್ಯದ ಏಕೈಕ ವಿಶಿಷ್ಟ ಚೇತನರಾಗಿದ್ದಾರೆ. ಒಂದು ವರ್ಷ ನಿರಂತರ ಅಭ್ಯಾಸ ಇವರ ಸಾಧನೆಗೆ ಕಾರಣವಾಗಿದೆ.

ಹುಟ್ಟು ಕುರುಡುತನ ಹೊಂದಿರದ ಮೇಘನಾ 15 ನೇ ವಯಸ್ಸಿನಲ್ಲಿ ದೃಷ್ಟಿ‌ ಕಳೆದುಕೊಂಡರು. ಆದ್ರೆ ಜೀವನದಲ್ಲಿ ಹುಮ್ಮಸ್ಸು‌ ಕಳೆದುಕೊಳ್ಳದೇ ಜೀವನದಲ್ಲಿ ತನಗಷ್ಟೇ ಅಲ್ಲ, ಸಮಾಜಕ್ಕೂ ಏನಾದರೂ ಮಾಡಬೇಕೆಂಬ ಛಲದಿಂದ ಮೊದಲು ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ಉತ್ತಮ‌ ಱಂಕ್​ನೊಂದಿಗೆ ಸರ್ಕಾರಿ ಸೇವೆಗೆ ಸೇರಿದ್ದರು.

ಇದೀಗ ಲೋಕಸೇವಾ ಆಯೋಗದಲ್ಲೂ ಉತ್ತಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುವುದು ಅವರ ಸಂತಸ ಹೆಚ್ಚಿಸಿದೆ. ಆನ್​ಲೈನ್​ನಲ್ಲಿ ಆಡಿಯೋ ಪುಸ್ತಕಗಳ ಮೂಲಕ ದಿನಕ್ಕೆ ಕನಿಷ್ಠ 10-12 ಗಂಟೆಗಳ ಕಾಲ ಅಧ್ಯಯನ ನಡೆಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆ ದಿವ್ಯಾಂಗರಿಗೆ ಸ್ಫೂರ್ತಿಯಾಗಿದೆ.

Last Updated :Aug 4, 2020, 6:30 PM IST

ABOUT THE AUTHOR

...view details