ಬೆಂಗಳೂರು :ರಾಜ್ಯಾದ್ಯಂತ ದಸರಾ ಹಬ್ಬದ ಸಂಭ್ರಮ ಸಡಗರ ಮನೆಮಾಡಿದೆ. ರಾಜ್ಯದಲ್ಲಿ ದಸರಾ ಎಂದಾಕ್ಷಣ ನೆನಪಿಗೆ ಬರುವುದೇ ಮೈಸೂರಿನ ಜಂಬೂಸವಾರಿ. ಇದರ ಜೊತೆಗೆ ಗೊಂಬೆ ಅಲಂಕಾರವೂ ಒಂದು ಪ್ರಮುಖ ಆಕರ್ಷಣೆ ಆಗಿದೆ. ಈ ಗೊಂಬೆ ಪ್ರದರ್ಶನವು ನಮ್ಮ ಸಂಸ್ಕೃತಿ ಸಂಪ್ರದಾಯಗಳ ಪ್ರತಿಬಿಂಬವಾಗಿದೆ. ದಸರಾ ಸಂದರ್ಭದಲ್ಲಿ ನಾಡಿನ ಮನೆ ಮನೆಗಳಲ್ಲಿ ಗೊಂಬೆಗಳನ್ನು ಅಲಂಕರಿಸಿ ಪ್ರದರ್ಶಿಸುವ ಆಚರಣೆ ಇಂದಿಗೂ ನಡೆದುಕೊಂಡು ಬಂದಿದೆ.
ಮೈಸೂರಿನಲ್ಲಿ ದಸರಾ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಿಲಿಕಾನ್ ಸಿಟಿಯಲ್ಲಿ ವಿವಿಧ ಗೊಂಬೆಗಳನ್ನು ಮನೆ ಮನೆಯಲ್ಲಿ ಕೂರಿಸುವ ಮೂಲಕ ನವರಾತ್ರಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಇಲ್ಲಿನ ವಸಂತಪುರದ ಶಾರದಾ ನಗರದ ಸಂಗೀತಗಾರ್ತಿ ಸಿಂಧು ಸೀತಾರಾಮ ಅವರ ಮನೆಯ ಪ್ರಾಂಗಣದಲ್ಲಿ ಈ ಬಾರಿ ವಿಶೇಷವಾಗಿ ಮಹಾಭಾರತದ ಕಥೆಯನ್ನು ಬೊಂಬೆಗಳ ಮೂಲಕ ಬಿಂಬಿಸುವ ಪ್ರಯತ್ನ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಮುಖ್ಯವಾಗಿ ದ್ರೌಪದಿ ಸ್ವಯಂವರ ಮತ್ತು ವಸ್ತ್ರಾಪಹರಣ ಪ್ರಹಸನ, ಮಹಾಭಾರತದ ಯುದ್ಧ, ಕೃಷ್ಣ ದ್ರೌಪದಿಯ ಮಾನವನ್ನು ರಕ್ಷಿಸುತ್ತಿರುವ ದೃಶ್ಯಗಳನ್ನು ಗೊಂಬೆಗಳ ಮೂಲಕ ಮನೋಜ್ಞವಾಗಿ ಬಿಂಬಿಸಲಾಗಿರುವುದು ಕಣ್ಮನ ಸೆಳೆಯುತ್ತಿದೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಸಿಂಧು ಸೀತಾರಾಮ, ಕಳೆದ 5- 6 ವರ್ಷದಿಂದ ದೊಡ್ಡದಾಗಿ ಗೊಂಬೆಗಳ ಪ್ರದರ್ಶನವನ್ನು ನಡೆಸುತ್ತಿದ್ದೇನೆ. ಮೊದಲು ಕೇವಲ ಮಕ್ಕಳಿಗಾಗಿ ಗೊಂಬೆಗಳ ಪ್ರದರ್ಶನ ಮಾಡುತ್ತಿದ್ದೆ. ಅವರು ದೊಡ್ಡವರಾದಂತೆ ಮತ್ತಷ್ಟು ದೊಡ್ಡದಾಗಿ ಹೆಚ್ಚು ಗೊಂಬೆಗಳನ್ನು ಪ್ರದರ್ಶಿಸಲು ಮುಂದಾದೆ ಎಂದು ಹೇಳಿದರು.
ಪ್ರತಿ ಬಾರಿಯೂ ಹೊಸ ಹೊಸ ಥೀಮ್ನಲ್ಲಿ ಗೊಂಬೆಗಳನ್ನು ಜೋಡಿಸುತ್ತಾ ಬಂದಿದ್ದೇನೆ. ಈ ಹಿಂದೆ ದುಷ್ಯಂತ ಶಕುಂತಲೆ, ವಿಷ್ಣುವಿನ ಅವತಾರಗಳ ಬಗ್ಗೆ ಮಾಡಿದ್ದೆ. ಈ ಬಾರಿ ನಮ್ಮ ಸಂಸ್ಕೃತಿಯ ಮಹಾಕಾವ್ಯವನ್ನು ಮಕ್ಕಳಿಗೆ ಯುವಕರಿಗೆ ಗೊಂಬೆಗಳ ಮೂಲಕ ತಿಳಿ ಹೇಳುವ ಪ್ರಯತ್ನವನ್ನು ಮಾಡಿದ್ದೇನೆ. ಎಷ್ಟೋ ಜನರಿಗೆ ಮಹಾಭಾರತದ ಕಥೆ ಗೊತ್ತಿಲ್ಲ. ಈ ಮೂಲಕ ಸ್ವಲ್ಪ ಜನರಿಗೆ ಮಹಾಭಾರತದ ಬಗ್ಗೆ ತಿಳಿದರೆ ನನ್ನ ಪ್ರಯತ್ನ ಸಾರ್ಥಕವಾಗಲಿದೆ ಎಂದು ತಿಳಿಸಿದರು.