ಕರ್ನಾಟಕ

karnataka

ಗೋಧ್ರಾ ಘಟನೆ ಕುರಿತು ಬಿ ಕೆ ಹರಿಪ್ರಸಾದ್ ನೀಡಿರುವ ಹೇಳಿಕೆ ವಿರುದ್ಧ ಕಾನೂನು ಹೋರಾಟ: ಬಸವರಾಜ ಬೊಮ್ಮಾಯಿ

By ETV Bharat Karnataka Team

Published : Jan 3, 2024, 9:44 PM IST

Updated : Jan 3, 2024, 10:26 PM IST

ಹಿಂದೂ ಕಾರ್ಯಕರ್ತನ ಬಂಧನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Former CM Basavaraj Bommai spoke to the media.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮದವರ ಜೊತೆ ಮಾತನಾಡಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು:ಹಿಂದೂ ಕಾರ್ಯಕರ್ತರ ಕುರಿತು ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ನೀಡಿರುವ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ. ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ತೆರಳುವ ಜನರಲ್ಲಿ ಭಯ ಹುಟ್ಟಿಸಲು ಈ ರೀತಿಯ ಹೇಳಿಕೆ ನೀಡಿದ್ದು, ಅವರ ಹೇಳಿಕೆ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹರಿಪ್ರಸಾದರ ಹೇಳಿಕೆ ಶ್ರೀಕಾಂತ್​ ಪೂಜಾರಿ ಬಂಧನದ ಒಂದು ಭಾಗ: ಆರ್‌ ಟಿ ನಗರ ನಿವಾಸದಲ್ಲಿ ಬುಧವಾರ ಮಾದ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗ ರಾಮಮಂದಿರ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಇಡೀ ದೇಶದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದರಿಂದ ಅದನ್ನು ತಡೆದುಕೊಳ್ಳಲಾಗದೇ ಹತಾಶರಾಗಿ ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಕೇವಲ ಬಿ ಕೆ ಹರಿಪ್ರಸಾದ್ ಅವರ ಹೇಳಿಕೆಯಲ್ಲ. ಹರಿಪ್ರಸಾದ್ ಅವರ ಹೇಳಿಕೆ ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತ ಶ್ರೀಕಾಂತ್​ ಪೂಜಾರಿಯ ಬಂಧನದ ಒಂದು ಭಾಗವಾಗಿದೆ ಎಂದು ಆರೋಪಿಸಿದರು.

ರಾಮಮಂದಿರ ಹೋರಾಟದ ಸಂದರ್ಭದಲ್ಲಿ ಹುಬ್ಬಳ್ಳಿ ಪ್ರಮುಖ ಕೇಂದ್ರವಾಗಿತ್ತು. ಹೀಗಾಗಿ ಅಲ್ಲಿ ಅನೇಕರ ಮೇಲೆ ಪ್ರಕರಣಗಳಿದ್ದವು. ಅವರನ್ನು ಈ ಸಂದರ್ಭದಲ್ಲಿ ಬಂಧಿಸುವ ಅವಶ್ಯಕತೆ ಏನಿತ್ತು. ಅಪರಾಧಿಗಳನ್ನು ಹಿಡಿಯಬಾರದಾ ಎಂದು ಸಿಎಂ ಪ್ರಶ್ನಿಸಿದ್ದಾರೆ. ಅಪರಾಧಿಯನ್ನು ನಿಮಗೆ ಹಿಡಿಯಬೇಕೆಂದರೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡದಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿರುವ, ಸಾರಾಯಿ ಮಾರಾಟ ಮಾಡುತ್ತಿರುವ ಪ್ರಕರಣಗಳು ರಾಜಾರೋಷವಾಗಿ ಹಗಲಿನಲ್ಲಿಯೇ ನಡೆಯುತ್ತಿವೆ. ಅದೆಲ್ಲವೂ ನಿಮಗೆ ಕಣ್ಣಿಗೆ ಕಾಣಿಸುತ್ತಿಲ್ಲ. 32 ವರ್ಷದ ಹಿಂದಿನ ಪ್ರಕರಣ ಕಣ್ಣಿಗೆ ಕಂಡಿದೆ. ಕೋರ್ಟ್ನಲ್ಲಿ ಪ್ರಕರಣ ಇದ್ದರೆ ಶ್ರೀಕಾಂತ್ ಪೂಜಾರಿಯನ್ನು ಬಂಧಿಸುವ ಅಗತ್ಯವೇನಿತ್ತು. ಕರೆದು ವಿಚಾರಣೆ ಮಾಡಿ ಕಳುಹಿಸಬಹುದಿತ್ತು. ಇದರ ಬಗ್ಗೆ ಮುಖ್ಯಮಂತ್ರಿಯ ಬಳಿ ಉತ್ತರವಿಲ್ಲ ಎಂದು ಬೊಮ್ಮಾಯಿ ಟಾಂಗ್​ ಕೊಟ್ಟರು.

ಅಪರಾಧಿಗಳನ್ನು ಹಿಡಿದರೆ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂದು ಸಿಎಂ ಹೇಳುತ್ತಾರೆ. ಅಪರಾಧಿಗಳನ್ನು ಹಿಡಿಯುವ ತಾಕತ್ತು ನಿಮಗೆ ಇಲ್ಲ. ಪಿಎಫ್‌ಐನಂತಹ ದೇಶದ್ರೋಹಿ ಸಂಘಟನೆಗಳು, ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ಭಾಗಿಯಾದವರ ಪ್ರಕಣಗಳನ್ನು ವಾಪಸ್ ಪಡೆಯಲು ನಿಮ್ಮ ಶಾಸಕರು ಪತ್ರ ಬರೆಯುತ್ತಾರೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಇವರಿಗೆ ಮುಗ್ದರು. ಆದರೆ ಹಿಂದೂ ಕಾರ್ಯಕರ್ತರು ಅಪರಾಧಿಗಳಾಗಿ ಕಾಣುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಒಬ್ಬ ವ್ಯಕ್ತಿಯನ್ನು ಬಂಧಿಸಲು ಇವರಿಗೆ 31 ವರ್ಷ ಬೇಕಿತ್ತಾ. ಹುಬ್ಬಳ್ಳಿ ಧಾರವಾಡದಲ್ಲಿ ಅಕ್ರಮ ಇಸ್ಪೀಟ್ ದಂಧೆ ನಡೆಯುತ್ತಿದೆ. ಗೋವಾ, ಮಹಾರಾಷ್ಟ್ರದಿಂದ ಅಕ್ರಮ ಮದ್ಯ ಸರಬರಾಜಾಗುತ್ತಿದೆ. ಅದನ್ನು ತಡೆಯುವುದನ್ನು ಬಿಟ್ಟು ಹುಬ್ಬಳ್ಳಿ ಧಾರವಾಡ ಹಿಂದು ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಇವರಿಗೆ ಬೇರೆ ಕೆಲಸ ಇಲ್ಲವೇ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು ಯಾವಾಗಲೂ ಚುನಾವಣೆ ಸಂದರ್ಭದಲ್ಲಿ ಮಾತ್ರ ದೇವಸ್ಥಾನಕ್ಕೆ ಹೋಗುತ್ತಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಭಾರತ ಹಿಂದೂ ರಾಷ್ಟ್ರವಾದರೆ ಕಷ್ಟವಾಗಲಿದೆ ಎಂದು ಹೇಳಿದ್ದಾರೆ. ಹಿಂದುತ್ವ ಎನ್ನುವುದು ಜೀವನ ಪದ್ಧತಿ, ಭಾರತದಲ್ಲಿರುವ ಕ್ರಿಶ್ಚಿಯನ್, ಮುಸ್ಲಿಂರು ಸೇರಿದಂತೆ ಎಲ್ಲ ಧರ್ಮಿಯರೂ ನೆಮ್ಮದಿಯಾಗಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಇರಾಕ್ ಸೇರಿದಂತೆ ಮುಸ್ಲಿಂ ಆಡಳಿತ ಇರುವ ದೇಶಗಳಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿರುವ ಮುಸ್ಲಿಂರು ಅಲ್ಲಿಗೆ ಹೋಗಲೂ ಇಚ್ಛೆಪಡುವುದಿಲ್ಲ. ಅವರು ನಮ್ಮ ಸಹೋದರರು, ಭಾರತದಲ್ಲಿಯೇ ಇರಬೇಕು ಎಂದು ನಾವು ಬಯಸುತ್ತೇವೆ ಎಂದು ಹೇಳಿದರು.

ಇದನ್ನೂಓದಿ:ಶ್ರೀಕಾಂತ್ ಪೂಜಾರಿಯನ್ನು ಬಂಧಿಸದೇ ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ: ಸಿಎಂ ಸಿದ್ದರಾಮಯ್ಯ

Last Updated : Jan 3, 2024, 10:26 PM IST

ABOUT THE AUTHOR

...view details