ಕರ್ನಾಟಕ

karnataka

ಕ್ಷೇತ್ರದ ಶಾಂತಿ, ಪ್ರಗತಿಗೆ ಕುಸುಮಾಗೆ ಮತ ನೀಡಿ: ಕಾಂಗ್ರೆಸ್​​ ಪರ ಡಿಕೆಶಿ ಭರ್ಜರಿ ಬ್ಯಾಟಿಂಗ್

By

Published : Oct 22, 2020, 10:07 PM IST

ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಸಿದ್ಧಾರ್ಥನಗರ, ಜಾಲಹಳ್ಳಿ, ಜ್ಞಾನಭಾರತಿ ವಾರ್ಡ್ ಮತ್ತಿತರ ಕಡೆ ಗುರುವಾರ ಅಭ್ಯರ್ಥಿ ಕುಸುಮಾ ಅವರ ಪರ ಡಿ.ಕೆ ಶಿವಕುಮಾರ್ ಬಿರುಸಿನ ಪ್ರಚಾರ ನಡೆಸಿದರು.

KPCC President DK Shivakuma
ಡಿ.ಕೆ ಶಿವಕುಮಾರ್

ಬೆಂಗಳೂರು: 'ರಾಜರಾಜೇಶ್ವರಿ ನಗರದಲ್ಲಿ ಉಂಟಾಗುತ್ತಿರುವ ಅಶಾಂತಿಗೆ ಅಂತ್ಯ ಹಾಡಿ, ಕ್ಷೇತ್ರವನ್ನು ಎಲ್ಲ ರಂಗದಲ್ಲೂ ಅಭಿವೃದ್ಧಿ ಮಾಡಲು ನಿಮ್ಮ ಸಹೋದರಿ ಕುಸುಮಾ ಅವರಿಗೆ ಮತ ನೀಡಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಸಿದ್ಧಾರ್ಥನಗರ, ಜಾಲಹಳ್ಳಿ, ಜ್ಞಾನಭಾರತಿ ವಾರ್ಡ್ ಮತ್ತಿತರ ಕಡೆ ಗುರುವಾರ ಅಭ್ಯರ್ಥಿ ಕುಸುಮಾ ಅವರ ಪರ ಪ್ರಚಾರ ನಡೆಸಿದ ಅವರಿಗೆ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಉಮಾಶ್ರೀ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ರಾಜಕುಮಾರ್, ಆನೇಕಲ್ ಶಾಸಕ ಶಿವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಮತ್ತಿತರರು ಸಾತ್ ನೀಡಿದರು. ಪಕ್ಷದ ಅಭ್ಯರ್ಥಿ ಕುಸುಮಾ ಅವರು ಭಾಗವಹಿಸಿದ್ದರು.

'ನನ್ನ ಹಾಗೂ ನಿಮ್ಮ ಸೋದರಿ ಕುಸುಮಾ ಅವರಿಗೆ ಆಶೀರ್ವಾದ ಮಾಡಿ ಎಂದು ಕೇಳಲು ಪಕ್ಷದ ನಾಯಕರು ಇಂದು ನಿಮ್ಮ ಮುಂದೆ ಬಂದಿದ್ದೇವೆ. ನೀವೆಲ್ಲರೂ ವಿದ್ಯಾವಂತರು, ಬುದ್ಧಿವಂತರಿದ್ದೀರಿ. ಈ ಚುನಾವಣೆ ಯಾಕೆ ಬಂತು ಅಂತಾ ಒಮ್ಮೆ ಆಲೋಚನೆ ಮಾಡಿ. ಐದು ವರ್ಷ ಕೆಲಸ ಮಾಡಲು ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿರಿ. ಆದರೆ, ಅವರು ಮಾಡಿದ್ದಾದರೂ ಏನು? ನಿಮ್ಮ ಮತವನ್ನು, ನಿಮ್ಮ ವಿಶ್ವಾಸವನ್ನು, ನಂಬಿಕೆಯನ್ನೇ ಅವರು ಮಾರಿಕೊಂಡರು ಎಂದರು.

ನೀವು ನಮಗೆ ಮತ ನೀಡುತ್ತೀರಿ ಅಂತ ನನಗೆ ವಿಶ್ವಾಸ ಇದೆ. ಅದಷ್ಟೇ ಸಾಲದು. ನೀವು ಬೇರೆ ಹತ್ತು ಜನರಿಂದ ಮತ ಹಾಕಿಸಬೇಕು. ಆ ಶಕ್ತಿ ನಿಮಗೆ ಬರಲಿ, ನಿಮಗದು ಇದೆ. ನಿಮ್ಮ ಕುಟುಂಬ, ಸ್ನೇಹಿತರು, ಅಕ್ಕ ಪಕ್ಕದವರೊಂದಿಗೆ ಚರ್ಚಿಸಿ. ನೀವು ನಿಮ್ಮ ಕ್ಷೇತ್ರದ ರಕ್ಷಣೆ, ಎಲ್ಲ ರಂಗದ ಅಭಿವೃದ್ಧಿಗೆ, ಈ ಕ್ಷೇತ್ರದಲ್ಲಿ ಮೂಡುತ್ತಿರುವ ಅಶಾಂತಿ ನಿಗ್ರಹಕ್ಕೆ, ನಿಮ್ಮ ಮತದಾರ ಗುರುತಿನ ಚೀಟಿ ಕಿತ್ತುಕೊಂಡು ಚುನಾವಣೆ ಮಾಡುತ್ತಿರುವುದಕ್ಕೆ ಇತೀಶ್ರೀ ಹಾಡಲು ನೀವು ಮತ ಹಾಕಬೇಕು. ಇಂತಹ ವ್ಯಕ್ತಿಗೆ ಟಿಕೆಟ್ ಕೊಟ್ಟು, ಬೆಳೆಸಿ ನಾವು ಕೂಡ ತಪ್ಪು ಮಾಡಿದ್ದೇವೆ. ನಮ್ಮದು ಮಹಾಪರಾಧ. ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇವೆ ಎಂದಿದ್ದಾರೆ.

ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಕಾರ್ಯಕರ್ತರ ರಕ್ಷಣೆಗೆ ನಾವು ಸದಾ ಬದ್ಧರಾಗಿದ್ದೇವೆ. ಕಾರ್ಯಕರ್ತರ ರಕ್ಷಣೆ ವಿಚಾರದಲ್ಲಿ ರಾಜಿ ಇಲ್ಲ.' ಎಂದೂ ಅವರು ಇದೇ ಸಂದರ್ಭ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details