ಕರ್ನಾಟಕ

karnataka

ಕರ್ನಾಟಕ ಸುವರ್ಣ ಮಹೋತ್ಸವ: ಕಾರ್ಯಕ್ರಮ ರೂಪಿಸಲು ಸಾಹಿತಿಗಳು, ಕಲಾವಿದರ ಸಲಹೆ ಪಡೆದ ಸಚಿವ ತಂಗಡಗಿ

By

Published : Aug 9, 2023, 9:48 PM IST

ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಸಾಹಿತಿಗಳು, ಕಲಾವಿದರೊಂದಿಗೆ ಸಚಿವ ಶಿವರಾಜ ತಂಗಡಗಿ ಸಭೆ ನಡೆಸಿದರು.

ಸಚಿವ ಶಿವರಾಜ ತಂಗಡಗಿ
ಸಚಿವ ಶಿವರಾಜ ತಂಗಡಗಿ

ಬೆಂಗಳೂರು : ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವರ್ಷವಿಡೀ ರಾಜ್ಯಾದ್ಯಂತ ಕನ್ನಡ ಸಾಂಸ್ಕೃತಿಕ ಹಾಗೂ ಪರಂಪರೆ ಬಿಂಬಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಹಿತಿ, ರಂಗಕರ್ಮಿ, ಕಲಾವಿದರೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದು, ಹಲವು ಉತ್ತಮ ಸಲಹೆಗಳು ಬಂದಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಇಂದು ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನವೆಂಬರ್​ 1ಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ನಡೆಸುವ ಬಗ್ಗೆ ಆಯವ್ಯಯದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗವಾರು ಸಾಹಿತಿಗಳ ಸಭೆ ಆಯೋಜನೆ ಮಾಡಲಾಗುವುದು. ಮೊದಲ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿ ಸಾಹಿತಿ, ರಂಗಕರ್ಮಿ ಹಾಗೂ ಹಿರಿಯ ಕಲಾವಿದರ ಸಭೆ ನಡೆಸಲಾಗಿದೆ. ಆ.22ಕ್ಕೆ ಬೆಳಗಾವಿ, ಆ.25 ಮೈಸೂರು ಹಾಗೂ 28ರಂದು ಕಲಬುರಗಿಯಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಸಾಹಿತಿಗಳು, ಕಲಾವಿದರೊಂದಿಗೆ ಸಭೆ

ಸಭೆಯಲ್ಲಿ ಕರ್ನಾಟಕದ ಪರಂಪರೆ, ಕನ್ನಡದ ಇತಿಹಾಸ ಹಾಗೂ ಸಂಸ್ಕೃತಿ ಬಿಂಬಿಸುವ ಹಿನ್ನೆಲೆಯಲ್ಲಿ ಕನ್ನಡರಥ ರಾಜ್ಯವಿಡೀ ಸಂಚಾರ ಮಾಡುವುದು, ಶಾಲಾ ಮತ್ತು ಕಾಲೇಜುಗಳಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ, ರಾಜ್ಯದ ಸಿದ್ಧಪುರದಲ್ಲಿರುವ ಏಕೈಕ ಭುವನೇಶ್ವರಿ ದೇವಾಲಯವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದು, ಕನ್ನಡದ ಮಾಹಿತಿಯನ್ನೊಳಗೊಂಡ ಸಂಚಾರಿ ವಾಹನ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗಿಯಾಗಿದ್ದ ಗಣ್ಯರ ಸನ್ಮಾನ ಸೇರಿದಂತೆ ಹೀಗೆ ಹಲವು ಸಲಹೆಗಳು ಬಂದಿವೆ.

ಸಾಹಿತಿಗಳಾದ ಪ್ರೊ.ಎಸ್.ಸಿದ್ದರಾಮಯ್ಯ, ಮುಖ್ಯಮಂತ್ರಿ ಚಂದ್ರು, ಮನು ಬಳಿಗಾರ್, ಹಂಸಲೇಖ, ಮಾಜಿ ಸಚಿವರಾದ ಉಮಾಶ್ರೀ, ಜಯಮಾಲಾ ಸೇರಿದಂತೆ ಪ್ರತಿಯೊಬ್ಬರು ಸಲಹೆ ನೀಡಿದ್ದಾರೆ. ಇನ್ನು ಉಳಿದ ಮೂರು ವಿಭಾಗಗಳಲ್ಲಿ ಸಭೆ ನಡೆಸಿ, ಎಲ್ಲರ ಸಲಹೆ ಕ್ರೋಢೀಕರಣ ಮಾಡಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ಇದೇ ವೇಳೆ ಇಂತಹ ಒಂದು ಕಾರ್ಯಕ್ರಮ ಆಯೋಜನೆಗೆ ಸಭೆ ಕರೆದ ಸಚಿವ ತಂಗಡಗಿ ಅವರ ನಡೆಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಚಂದ್ರಶೇಖರ್ ಕಂಬಾರ, ಪ್ರೊ.ಎಸ್.ಸಿದ್ದರಾಮಯ್ಯ, ಬಿ.ಟಿ.ಲಲಿತಾನಾಯಕ್, ಮನುಬಳಿಗಾರ್, ನರಹಳ್ಳಿ ಬಾಲಕೃಷ್ಣ, ಮುಖ್ಯಮಂತ್ರಿ ಚಂದ್ರು, ಮಾಜಿ ಸಚಿವೆ ಉಮಾಶ್ರೀ, ಜಯಮಾಲಾ, ಹಂಸಲೇಖ, ಚಿತ್ರ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ಟಿ.ಎನ್.ಸೀತಾರಾಮ್, ಕಸಪಾ ಅಧ್ಯಕ್ಷ ಮಹೇಶ್ ಜೋಶಿ, ರಂಗಕರ್ಮಿಗಳಾದ ಕಪ್ಪಣ್ಣ, ನಾಗರಾಜ್ ಮೂರ್ತಿ, ಪ್ರೊ.ಕೆ.ಇ.ರಾಧಾಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ್ ಹಿರೇಮಠ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿ ಇಲ್ಲ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮಂಡ್ಯದಲ್ಲಿ ನಡೆಸಲು ಯಾವುದೇ ಅಡೆತಡೆಗಳಿಲ್ಲ. ಎಲ್ಲರೊಂದಿಗೆ ಚರ್ಚೆ ಮಾಡಿ ಸಮ್ಮೇಳನದ ದಿನಾಂಕ ನಿಗದಿ ಮಾಡಲಾಗುವುದು. ಈ ಬಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರ ಬಳಿ ಮಾತನಾಡಿದ್ದೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಜೆಟ್​ನಲ್ಲಿ ಕಡಿಮೆ ಅನುದಾನ ನೀಡಿದ್ದು, ಕಾರ್ಯಕ್ರಮ ನಡೆಸಲು ಹಣಕಾಸಿನ ಕೊರತೆ ಇಲ್ಲ. ಹೆಚ್ಚಿನ ಅನುದಾನದ ಅಗತ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ನುಡಿದರು.

ಇದನ್ನೂ ಓದಿ :ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತೇನೆ : ತಂಗಡಗಿ

ABOUT THE AUTHOR

...view details