ಕರ್ನಾಟಕ

karnataka

ಬೆಂಗಳೂರಿನಲ್ಲಿ ʼಕನ್ನಡಾಂಬೆ ಭುವನೇಶ್ವರಿʼ ಕಂಚಿನ ಪ್ರತಿಮೆ: 2024 ನವೆಂಬರ್​ನಲ್ಲಿ ಪ್ರತಿಮೆ ಅನಾವರಣಕ್ಕೆ ತೀರ್ಮಾನ.. ಸಚಿವ ತಂಗಡಗಿ

By ETV Bharat Karnataka Team

Published : Sep 7, 2023, 7:12 PM IST

ಬೆಂಗಳೂರಿನ ಜೆ. ಸಿ ರಸ್ತೆಯಲ್ಲಿರುವ ಕನ್ನಡ ಭವನದ ಆವರಣದಲ್ಲಿ ಸುಮಾರು 25 ಅಡಿ ಎತ್ತರದ ಕನ್ನಡಾಂಬೆಯ ಕಂಚಿನ ಪ್ರತಿಮೆ ನಿರ್ಮಿಸುವ ನಿಟ್ಟಿನಲ್ಲಿ ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ಶಿಲ್ಪಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು : ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಡದೇವಿ ಭುವನೇಶ್ವರಿ ಪ್ರತಿಮೆ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೀರ್ಮಾನಿಸಿದ್ದು, ಇನ್ನು ಮುಂದೆ ನಾಡದೇವಿ “ಭುವನೇಶ್ವರಿ”ಗೆ ನಿತ್ಯ ಅರ್ಚನೆ ನೆರವೇರಲಿದೆ.

ಕನ್ನಡಾಂಬೆಯ ಪ್ರತಿಮೆ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿನೂತನ ಯೋಜನೆ ರೂಪಿಸಿದ್ದು, ಹದಿನಾಲ್ಕು ತಿಂಗಳಲ್ಲಿ ಪ್ರತಿಮೆಗೆ ಅಂತಿಮ ಸ್ಪರ್ಶ ದೊರಕಲಿದೆ. ಭುವನೇಶ್ವರಿ ತಾಯಿಯ ಕಂಚಿನ ಪ್ರತಿಮೆ ಸ್ಥಾಪಿಸುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಈಗಾಗಲೇ ತಿಂಗಳಲ್ಲಿ ಎರಡು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪ್ರತಿಮೆ ನಿರ್ಮಾಣ ಸಂಬಂಧ ತುರ್ತು ಕ್ರಮವಹಿಸುವಂತೆ ಸೂಚಿಸಿದ್ದಾರೆ.

25 ಅಡಿ ಕಂಚಿನ ಪ್ರತಿಮೆ : ಬೆಂಗಳೂರಿನ ಜೆ. ಸಿ ರಸ್ತೆಯಲ್ಲಿರುವ ಕನ್ನಡ ಭವನದ ಆವರಣದಲ್ಲಿ ಸುಮಾರು 25 ಅಡಿ ಎತ್ತರದ ಕನ್ನಡಾಂಬೆಯ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಆ ಸ್ಥಳದಲ್ಲಿ ಪ್ರವಾಸಿಗರನ್ನು ಸೆಳೆಯುವಂತಹ ನಿಟ್ಟಿನಲ್ಲಿ ಉದ್ಯಾನ ನಿರ್ಮಾಣ ಹಾಗೂ ವಿಗ್ರಹದೊಂದಿಗೆ ಕನ್ನಡ ನಾಡಿನ ಸಾಂಸ್ಕೃತಿಕ ವೈಭವ, ಗತಕಾಲದ ಹೆಮ್ಮೆಯ ವಿಷಯಗಳನ್ನು ಪ್ರತಿಬಿಂಬಿಸುವ ಚಿತ್ರಣ ಇಲ್ಲಿರಲಿದ್ದು, ಅವು ಜನರಿಗೆ ಮಾಹಿತಿ ನೀಡಲಿವೆ.

ಶಿಲ್ಪಿಗಳ ಜೊತೆ ಸಭೆ :ಈ ಸಂಬಂಧ ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಶಿಲ್ಪಿಗಳ ಜೊತೆ ಸಚಿವರು ಸಭೆ ನಡೆಸಿದರು. ಸಭೆಯಲ್ಲಿ ಒಂದು ವರ್ಷದಲ್ಲಿ ಪ್ರತಿಮೆ ಕಾರ್ಯ ಪೂರ್ಣಗೊಂಡು ಮುಂದಿನ 2024ರ ನವೆಂಬರ್ 1ಕ್ಕೆ ಅನಾವರಣಗೊಳ್ಳಬೇಕು. ಮೊದಲಿಗೆ ಎರಡು ಅಡಿಯ ಕನ್ನಡಾಂಬೆಯ ಮಾದರಿ ಪ್ರತಿಮೆ ನಿರ್ಮಿಸಿ ಕೊಡಬೇಕು. ನಂತರ ತ್ರಿಡಿ ಮಾದರಿಯ ಕನ್ನಡಾಂಬೆಯ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ತುರ್ತು ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಲಾವಿದ ಕೆ. ಸೋಮಶೇಖರ್ ಸಿದ್ಧಪಡಿಸಿರುವ ನಾಡದೇವಿಯ ಚಿತ್ರವನ್ನು ಅಧಿಕೃತಗೊಳಿಸುವಂತೆ ಲಲಿತಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಅಧ್ಯಕ್ಷತೆಯ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದೇ ಮಾದರಿಯ ನಾಡದೇವಿಯ ಸುಮಾರು 25 ಅಡಿಯ ಪ್ರತಿಮೆ ತಲೆ ಎತ್ತಲಿದೆ.

ಪ್ರತಿಮೆ ನಿರ್ಮಾಣ ಯೋಜನೆಗೆ ಸಿಎಂರಿಂದ ಚಾಲನೆ : ಕಂಚಿನ ಬೃಹತ್ ವಿಗ್ರಹ ನಿರ್ಮಾಣ ಕಾಮಗಾರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ ನವೆಂಬರ್ 1ಕ್ಕೆ ಮುಖ್ಯಮಂತ್ರಿಗಳಿಂದಲೇ ಪ್ರತಿಮೆ ಅನಾವರಣ ಮಾಡಿಸಬೇಕು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಮುಂದಿನ 2024ರ ನವೆಂಬರ್ ವೇಳೆಗೆ ಪ್ರತಿಮೆ ಕಾಮಗಾರಿ ಪೂರ್ಣಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರತಿಮೆ ಅನಾವರಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿಗೆ ಕಾಂಗ್ರೆಸ್​ ಶಾಸಕರು ಹೋಗುವ ಪ್ರಶ್ನೆಯೇ ಇಲ್ಲ: ಸಚಿವ ಶಿವರಾಜ್ ತಂಗಡಗಿ

ABOUT THE AUTHOR

...view details