ಕರ್ನಾಟಕ

karnataka

ಜೆ.ಹೆಚ್.ಪಟೇಲರ ಚಿಂತನೆಗಳು ಕಾಲಾತೀತ: ಬಸವರಾಜ ಬೊಮ್ಮಾಯಿ

By ETV Bharat Karnataka Team

Published : Oct 1, 2023, 10:59 PM IST

ಮಾಜಿ ಸಿಎಂ ದಿ.ಜೆ.ಹೆಚ್.ಪಟೇಲ್ ಅವರು ಚಿಂತಕರ ವರ್ಗಕ್ಕೆ ಸೇರಿದ್ದರು ಎಂದು ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಜೆ.ಹೆಚ್.ಪಟೇಲರು ಸ್ಟೇಟ್ಸ್‌ಮನ್ ಆಗಿದ್ದರು. ಅವರು ಯಾವಾಗಲೂ ಜನ ಕಲ್ಯಾಣದ ವಿಚಾರ ಮಾಡುತ್ತಿದ್ದರು. ಅವರ ಆಲೋಚನೆಗಳು ಕಾಲಾತೀತವಾಗಿದ್ದು, ಅನುಷ್ಠಾನ ಮಾಡುವ ಮೂಲಕ ರಾಜಕಾರಣದಲ್ಲಿ ಪರಿವರ್ತನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಜೆ.ಹೆಚ್.ಪಟೇಲ್ ಪ್ರತಿಷ್ಠಾನದ ವತಿಯಿಂದ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಜೆ.ಹೆಚ್ ಪಟೇಲ್ ಅವರ 93 ನೇ ಜನ್ಮ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಬೊಮ್ಮಾಯಿ ಮಾತನಾಡಿದರು. ಪಟೇಲ್ ಹೀಗಳಿಕೆಗೆ ಹಿಗ್ಗದವರು ತೆಗಳಿಕೆಗೆ ಬಗ್ಗದವರು. ಸ್ವಂತ ಚಿಂತನೆ ಮಾಡುವ ಶಕ್ತಿ ಅವರಿಗೆ ಇತ್ತು. ಅವರು ಚಿಂತಕರ ವರ್ಗಕ್ಕೆ ಸೇರಿದ್ದರು. ಅವರಿಗೆ ಎಷ್ಟು ಸ್ಥಿತ ಪ್ರಜ್ಞೆ ಇತ್ತು. ಅವರು ಒಬ್ಬ ನಾಯಕನಾಗಿ ಕಾಡುತ್ತಾರೆ‌. ಮುಂದಾಲೋಚನೆಯಿಂದ ಇರುವವನು ಮಾತ್ರ ನಾಯಕ ಆಗುತ್ತಾನೆ. ನಾನು ಅದರಷ್ಟವಂತ‌ ರಾಜಕಾರಣಿ ನನ್ನ ಬಹಳ ಪ್ರೀತಿ ಮಾಡುತ್ತಿದ್ದರು. ನನ್ನ ಬಸವಣ್ಣ ಅಂತ ಕರೆಯುತ್ತಿದ್ದರು ಎಂದು ಪಟೇಲರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದರು.

ಅವರೊಂದಿಗೆ ಎಲ್ಲರೂ ಸಂತೋಷದಿಂದ ಕೆಲಸ ಮಾಡುತ್ತಿದ್ದರು. ಅವರು ರಾಜ್ಯದ ಹಿತದೃಷ್ಟಿಯಿಂದ ಯಾವುದನ್ನು ಮಾಡಬೇಕು ಅದನ್ನಷ್ಟೇ ತೆಗೆದುಕೊಳ್ಳುತ್ತಿದ್ದರು. ಯಾರಿಂದ ಏನು ಬರುತ್ತದೆಯೋ ಅದನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ಅವರು ಸಾಮಾಜಿಕ ವಿಜ್ಞಾನಿಯಾಗಿದ್ದರು. ಅವರೂ ಸಂತೋಷವಾಗಿರುತ್ತಿದ್ದರು ಎದುರಿಗಿನವರನ್ನೂ ಸಂತೋಷವಾಗಿರುವಂತೆ ನೋಡುತ್ತಿದ್ದರು.

ರಾಜಕಾರಣದಲ್ಲಿ ಅತ್ಯಂತ ಧೀಮಂತ ನಾಯಕ ದೇವರಾಜ ಅರಸು, ಅವರ ವಿರುದ್ಧ ಮಾತನಾಡವುದು ಕಷ್ಟ ಇತ್ತು. ದೇವರಾಜ ಅರಸರು ಪಟೇಲರ ಎದುರು ನಿಮ್ಮ ಸಿಬಿಐನವರು ನಮ್ಮ ತೋಟ, ಮನೆ ಎಲ್ಲ ಕಡೆ ಹುಡುಕಿದರು. ಆದರೂ ಅವರಿಗೆ ಏನೂ ಸಿಗಲಿಲ್ಲ ಅಂದರು. ಆಗ ಜೆ.ಎಚ್ ಪಟೇಲರು ಅವರು ದಡ್ಡರಿದ್ದಾರೆ. ನೀ ಎಲ್ಲಿ ಇಟ್ಟಿದ್ದೀಯಾ ಹೇಳಿಬಿಡು ಎಂದು ಪ್ರಶ್ನಿಸಿದ್ದರು.

ಅನೇಕ ಜನರು ಜಿಲ್ಲೆಗಳ ವಿಭಜನೆ ಮಾಡಲು ವಿರೋಧ ಮಾಡಿದರು. ಆದರೆ, ಆಡಳಿತದ ಅನುಕೂಲಕ್ಕೆ ಹೊಸ ಜಿಲ್ಲೆಗಳ ಅಗತ್ಯವಿದೆ ಎಂದು ಏಳು ಜಿಲ್ಲೆಗಳನ್ನು ಮಾಡಿದರು. ಅವರು ಯಾವುದನ್ನೂ ಹೆಚ್ಚು ಹಚ್ಚಿಕೊಳ್ಳುತ್ತಿರಲಿಲ್ಲ. ಅವರು ಸಿಎಂ ಆಗಿದ್ದಾಗ ಮೂವರು ಸಚಿವರು ತಮ್ಮ ಕೆಲಸ ಮಾಡುವಂತೆ ಒತ್ತಡ ಹಾಕಲು ಕೆಲಸ ಆಗದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದರು. ಆಗ ಪಟೇಲರು ರಾಜೀನಾಮೆ ತಂದಿದ್ದೀರೊ, ನಾನೇ ಲೆಟರ್ ಹೆಡ್ ಕೊಟ್ಟು ರಾಜೀನಾಮೆ ಪಡೆಯಬೇಕಾ ಎಂದು ಪ್ರಶ್ನಿಸಿದರು. ಅದರಿಂದ ಸಚಿವರು ದಿಗಿಲುಗೊಂಡರು ಎಂದು ಬೊಮ್ಮಾಯಿ ಹೇಳಿದರು.

ಒಂದು ಸಮೀಕ್ಷೆಯಾಗಿದೆ. ಇಡೀ ಮನುಕುಲದಲ್ಲಿ ವಿಜ್ಞಾನಿಗಳ ಮೆದಲು ಹೆಚ್ಚು ಬಳಕೆಯಾಗಿದೆ. ಆದರೆ, ಈಗ ನಾವು ಸೃಷ್ಠಿ ಮಾಡಿರುವ ಎಐ ನಮ್ಮೊಂದಿಗೆ ಸ್ಪರ್ಧೆ ಮಾಡುವ ಕಾಲ ಬಂದಿದೆ. ಮನುಷ್ಯನ ಚಿಂತನೆ ಯಾವಾಗ ನಿಲ್ಲುತ್ತದೆಯೋ ಆಗ ಮನುಕುಲದ ನಾಶವಾಗುತ್ತದೆ. ರಾಜಕಾರಣ ಬದಲಾಗಬೇಕಾದರೆ ಜನ ಬದಲಾಗಬೇಕು. ಜನರ ಆಸೆ ಆಕಾಂಕ್ಷೆಗಳು ಬದಲಾಗಬೇಕು.

ತತ್ವಜ್ಞಾನಿ ಸಾಕ್ರೆಟಿಸ್​ಗೆ ಎರಡರಲ್ಲಿ ಒಂದು ಆಯ್ಕೆ ನೀಡಲಾಗಿತ್ತು. ನೀನು ಸಾಯಬೇಕಾ ಅಥವಾ ನಿನ್ನ ವಿಚಾರಗಳು ಸಾಯಬೇಕಾ ಅಂತ ಕೇಳಿದರು. ಸಾಕ್ರಟೀಸ್ ತಾನು ಸತ್ತು ತನ್ನ ವಿಚಾರಗಳನ್ನು ಜೀವಂತ ಉಳಿಯುವಂತೆ ಮಾಡಿದರು. ಅದೇ ರೀತಿ ಜೆ.ಎಚ್ ಪಟೇಲರ ವಿಚಾರಗಳು ಜೀವಂತವಾಗಿವೆ. ಪಟೇಲರ ಚಿಂತನೆಗಳು ಕಾಲಾತೀತವಾಗಿವೆ. ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದರು. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ ಅಂತ ಹೇಳಿದ್ದರು. ಅಂತಹ ಸಾಧಕರು ಜೆ.ಎಚ್. ಪಟೇಲರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ಜೆ.ಎಚ್. ಪಟೇಲರ ಪುತ್ರರಾದ ಟಿ.ಜೆ ಪಟೇಲ್, ಮಹಿಮ ಪಟೇಲ್ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ :ಎಸ್​.ಎಂ.ಕೃಷ್ಣ ತಮಗೆ ಸಿಕ್ಕ ಅವಕಾಶದಲ್ಲಿ ಇತಿಹಾಸ ನಿರ್ಮಿಸಿದ್ದಾರೆ: ಡಿ.ಕೆ.ಶಿವಕುಮಾರ್

ABOUT THE AUTHOR

...view details