ಕರ್ನಾಟಕ

karnataka

ರಾಜ್ಯ ರಾಜಕಾರಣಕ್ಕೆ ಬರಲಿದ್ದಾರಾ ಸಂಸದೆ ಸುಮಲತಾ? ಬಿಜೆಪಿ ಪ್ಲ್ಯಾನ್ ಏನು?

By

Published : Apr 3, 2023, 1:01 PM IST

ಇತ್ತೀಚೆಗೆ ಪಕ್ಷ ಸೇರ್ಪಡೆಯಾಗಿರುವ ಸಂಸದೆ ಸುಮಲತಾ ಅವರನ್ನು ರಾಜ್ಯ ರಾಜಕಾರಣಕ್ಕೆ ಕರೆತರಲು ಬಿಜೆಪಿ ಪ್ರಯತ್ನಿಸುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಸುಮಲತಾ ಅವರು ಬಿಜೆಪಿ ಪರವಾಗಿ ಸ್ಟಾರ್ ಕ್ಯಾಂಪೇನರ್ ಆಗುವ ಸಾಧ್ಯತೆಗಳಿವೆ.

K'taka BJP mulls bringing MP Sumalatha to state politics
K'taka BJP mulls bringing MP Sumalatha to state politics

ಬೆಂಗಳೂರು :ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಬಿಜೆಪಿಯು ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಸಂಸದೆ ಸುಮಲತಾ ಅಂಬರೀಶ್ ಅವರನ್ನು ರಾಜ್ಯ ರಾಜಕಾರಣಕ್ಕೆ ಕರೆತರಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಮುಖವಾಗಿ ಜೆಡಿಎಸ್ ಭದ್ರಕೋಟೆ ಎಂದು ಪರಿಗಣಿಸಲಾದ ಮಂಡ್ಯ ಜಿಲ್ಲೆಯನ್ನು ವಶಪಡಿಸಿಕೊಳ್ಳಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ನಟಿ ಹಾಗೂ ರಾಜಕಾರಣಿ ಸುಮಲತಾರನ್ನು ಕಣಕ್ಕಿಳಿಸಲು ಕೇಸರಿ ಪಕ್ಷ ಮುಂದಾಗಿದೆ ಎಂದು ಬಿಜೆಪಿಯೊಳಗಿನ ಮೂಲಗಳು ತಿಳಿಸಿವೆ. ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಮಾತ್ರವಲ್ಲದೆ ಜಿಲ್ಲೆಯ ಇತರ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಸ್ಟಾರ್ ಪ್ರಚಾರಕಿಯಾಗಿಯೂ ಕೆಲಸ ಮಾಡಲಿದ್ದಾರೆ. ಸುಮಲತಾ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಇವರು 2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾರಿಗೆ ಬಿಜೆಪಿ ಬೆಂಬಲ ಘೋಷಿಸಿತ್ತು. 2019 ರ ಚುನಾವಣೆಯಲ್ಲಿ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು. ನಿಖಿಲ್ ವಿರುದ್ಧ ಅವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸುಮಲತಾ ಅವರು ಕನ್ನಡದ ದಿವಂಗತ ನಟ ಅಂಬರೀಶ್ ಪತ್ನಿ. ನಟ ಅಂಬರೀಷ್ ಒಕ್ಕಲಿಗ ಸಮುದಾಯದ ಪ್ರಭಾವಿ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿದ್ದರು. ಅಂಬರೀಶ್ ಅವರು ಸುಮಾರು ಮೂರು ದಶಕಗಳ ಕಾಲ ರಾಜಕೀಯ ವೃತ್ತಿಜೀವನದಲ್ಲಿದ್ದು, ಅಪಾರ ಸಂಖ್ಯೆಯ ಬೆಂಬಲಿಗರು ಮತ್ತು ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಅಂಬರೀಷ್ ಮೂಲತಃ ಮಂಡ್ಯದವರು ಎಂಬುದು ಗಮನಾರ್ಹ.

57 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಬೇಕೆಂಬುದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಯತ್ನವಾಗಿದೆ. ಇಲ್ಲಿಂದ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ಬಿಜೆಪಿ ಹೊಂದಿದೆ. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ತಲಾ ಏಳು ಸ್ಥಾನಗಳಿವೆ. ಈ ಜಿಲ್ಲೆಗಳಲ್ಲಿ ಬಿಜೆಪಿ ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದು, ಉಳಿದ ಸ್ಥಾನಗಳು ಜೆಡಿಎಸ್‌ ಪಾಲಾಗಿವೆ. ಈ ಜಿಲ್ಲೆಗಳು ಜೆಡಿಎಸ್​ನ ಭದ್ರಕೋಟೆಯಾಗಿವೆ. ಸುಮಲತಾ ಆಗಮನದಿಂದ ದಕ್ಷಿಣದ ಜಿಲ್ಲೆಗಳ ಲೆಕ್ಕಾಚಾರವೇ ಬದಲಾಗುವ ನಿರೀಕ್ಷೆ ಇದೆ. ಸುಮಲತಾ ಅವರು ತೀವ್ರವಾಗಿ ಪ್ರಚಾರ ನಡೆಸುತ್ತಿರುವುದು ಒಕ್ಕಲಿಗ ಮತಬ್ಯಾಂಕ್ ಕ್ರೋಢೀಕರಿಸಲು ಸಹಕಾರಿಯಾಗಲಿದೆ. ಇದೀಗ ಸುಮಲತಾ ಅವರನ್ನು ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಪ್ರಬಲ ಒಕ್ಕಲಿಗ ನಾಯಕಿಯಾಗಿ ಬಿಂಬಿಸಲು ಕೇಸರಿ ಪಕ್ಷ ಮುಂದಾಗಿದೆ.

ಸುಮಲತಾ ಅವರು 1.26 ಲಕ್ಷ ಮತಗಳಿಂದ ಗೆದ್ದು ಕರ್ನಾಟಕದಿಂದ ಲೋಕಸಭೆಗೆ ಪ್ರವೇಶಿಸಿದ ಮೊದಲ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ. ಆಗಿನ ಚುನಾವಣೆಯಲ್ಲಿ ಅವರ ವಿರೋಧಿಗಳು ಅಪಮಾನಕರ ಹೇಳಿಕೆ ನೀಡಿದ್ದರಿಂದ ಸುಮಲತಾ ಪರವಾಗಿ ಜನಾಭಿಪ್ರಾಯ ಸೃಷ್ಟಿಯಾಗಿತ್ತು. ಸುಮಲತಾ ಅವರ ಪತಿ ದಿವಂಗತ ಅಂಬರೀಷ್ ಮಂಡ್ಯದ ಗಂಡು ಎಂದು ಬಿರುದಾಂಕಿತರಾಗಿ ಸಾಕಷ್ಟು ಜನಾನುರಾಗಿಯಾಗಿದ್ದರು. ಮೂರು ಬಾರಿ ಮಂಡ್ಯ ಕ್ಷೇತ್ರದಲ್ಲಿ ಗೆದ್ದಿದ್ದ ಅಂಬರೀಶ್, ಒಮ್ಮೆ ಜೆಡಿಎಸ್ ಟಿಕೆಟ್‌ನಿಂದ ಮತ್ತು ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು.

ಇದನ್ನೂ ಓದಿ : ಜೆಡಿಎಸ್ ಭದ್ರಕೋಟೆ ಒಡೆದಿದೆ, ಛಿದ್ರ ಮಾಡೋದೊಂದೇ ಬಾಕಿ: ಸಂಸದೆ ಸುಮಲತಾ ಅಂಬರೀಶ್​

ABOUT THE AUTHOR

...view details