ಕರ್ನಾಟಕ

karnataka

ಮಾಣಿಕ್ ಷಾ ಮೈದಾನದಲ್ಲಿ ಅದ್ಧೂರಿ ಸ್ವಾತಂತ್ರ್ಯ ದಿನ; ಅಮೃತ ಘಳಿಗೆಗೆ ಆಕರ್ಷಕ ಪಥಸಂಚಲನ, ಸಾಂಸ್ಕೃತಿಕ ಮೆರಗು

By

Published : Aug 15, 2022, 2:10 PM IST

Updated : Aug 15, 2022, 2:58 PM IST

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಹು ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಪಥಸಂಚಲನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಸ ಪ್ರದರ್ಶನಗಳು ವೀಕ್ಷಕರ ಗಮನ ಸೆಳೆದವು.

independence-day-celebration-at-manik-shah-maidan
ಮಾಣಿಕ್ ಷಾ ಮೈದಾನದಲ್ಲಿ ಅದ್ಧೂರಿ ಸ್ವಾತಂತ್ರ ದಿನಾಚರಣೆ; ಅಮೃತ ಗಳಿಗೆಗೆ ಆಕರ್ಷಕ ಪಥಸಂಚಲನ, ಸಾಂಸ್ಕೃತಿಕ ಮೆರಗು

ಬೆಂಗಳೂರು: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 75ನೇ ಸ್ವಾತಂತ್ರೋತ್ಸವ ಬಹು ವಿಜೃಂಭಣೆಯಿಂದ ನಡೆಯಿತು. ಎರಡು ವರ್ಷಗಳ ಕಾಲ ಸರಳವಾಗಿ ನಡೆದ ಸ್ವಾತಂತ್ರ ದಿನಾಚರಣೆಯನ್ನು, ಇಂದು ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.

ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜದ ಬೊಮ್ಮಾಯಿ‌ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ಜೀಪ್‌ನಲ್ಲಿ ಪರೇಡ್ ಪರಿವೀಕ್ಷಣೆ ಮಾಡಿ, ಗೌರವ ರಕ್ಷೆ ಸ್ವೀಕರಿಸಿದರು.

ದೇಶಕ್ಕಾಗಿ ಎಲ್ಲರೂ ಕೊಡುಗೆ ನೀಡಿದ್ದಾರೆ: ಧ್ವಜಾರೋಹಣ ನೆರವೇರಿಸಿ ಬಳಿಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಸ್ವಾತಂತ್ರ್ಯ ಹೋರಾಟಗಾರರು, ಮಹನೀಯರನ್ನು ಸ್ಮರಿಸುತ್ತಾ, ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಸ್ವಾತಂತ್ರ್ಯೋತ್ಸವ ಸಮರ್ಪಣೆ ಮಾಡುತ್ತೇನೆ. ನಮ್ಮ ದೇಶಕ್ಕಾಗಿ ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ನಮ್ಮ ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಮೊದಲ ಹೋರಾಟಗಾರ್ತಿ ಆಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಯಣ್ಣರನ್ನು ಮರೆಯುವಂತಿಲ್ಲ ಎಂದು ಹೇಳಿದರು.

ದೇಶ ವಿಭಜನೆಯಾದದ್ದು ದುಃಖದ ಸಂಗತಿ : ದೇಶ ವಿಭಜನೆ ಅತ್ಯಂತ ದುಃಖದ ವಿಷಯ. ಆ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ತದ ನಂತರ ದೇಶದ ಮೊದಲ‌ ಪ್ರಧಾನಿ ಪಂಡಿತ್ ಜವಹಾರ್ ಲಾಲ್ ನೆಹರು, ಬಳಿಕ ಲಾಲ್ ಬಹಾದ್ದೂರ್ ಶಾಸ್ತ್ರಿ ಸೇರಿ ಹಲವರು ಈ ದೇಶವನ್ನು ಆಳಿದ್ದಾರೆ. ನಾವು ಯಾರನ್ನೂ ಮರೆಯುವಂತಿಲ್ಲ. ಎಲ್ಲರೂ ಅವರವರ ಕಾಲದಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ.

ಡಾ. ಬಿ.ಆರ್.ಅಂಬೇಡ್ಕರ್ ಕೊಡುಗೆಯನ್ನು ಮರೆಯುವಂತಿಲ್ಲ. ಅವರು ರಚಿಸಿದ ಸಂವಿಧಾನದಿಂದ ನಾವು ಇಂದು ಈ ಸ್ವಾತಂತ್ರ್ಯೋತ್ಸವ ಆಚರಿಸಲು ಸಾಧ್ಯವಾಗಿದೆ. ಆದರೆ, ಅವರ ಬಗ್ಗೆ ಮಾತನಾಡುವುದು ಕಡಿಮೆಯಾಗುತ್ತಿದೆ. ಅವರನ್ನು ಮರೆಸುವಂಥ ಕೆಲಸ ಆಗುತ್ತಿದೆ. ಜೈ ಜವಾನ್ ಜೈ ಕಿಸಾನ್ ಘೋಷ ವಾಕ್ಯ ಕೊಟ್ಟ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರನ್ನು ನಾವು ಮರೆಯಬೇಕಾ?. ಭಾರತ ಮತ್ತು ಪಾಕಿಸ್ತಾನ ಒಂದಾಗಬೇಕೆಂದಿದ್ದ ಅಬ್ದುಲ್ ಗಫೂರ್ ಖಾನ್ ರನ್ನು ನಾವು ಮರೆಯಬೇಕಾ? ಎಂದು ಪ್ರಶ್ನಿಸಿದರು.

ಮಾಣಿಕ್ ಷಾ ಮೈದಾನದಲ್ಲಿ ಅದ್ಧೂರಿ ಸ್ವಾತಂತ್ರ್ಯ ದಿನ

ದೇಶಕ್ಕಾಗಿ ಬದುಕುವ ಅಗತ್ಯ ಇದೆ : ಇಂದು ದೇಶಕ್ಕಾಗಿ ಪ್ರಾಣ ಕೊಡುವ ಅಗತ್ಯ ಇಲ್ಲ.‌ ದೇಶಕ್ಕಾಗಿ ನಿಮ್ಮ ಶ್ರಮ, ಶ್ರದ್ಧೆ, ಅಭಿಮಾನ, ಗೌರವ, ಬೆವರಿನ ಹನಿ ಮುಖ್ಯವಾಗಿದೆ. ಕರ್ನಾಟಕ ದೇಶದಲ್ಲಿಯೇ ವಿಶಿಷ್ಟವಾದ ರಾಜ್ಯವಾಗಿದೆ. ಎಲ್ಲ ತರಹದ ಸಂಪನ್ಮೂಲಗಳು ಇಲ್ಲಿ ಹೇರಳವಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಆಗಿದೆ. ದೇಶದ ಜಿ.ಡಿ.ಪಿ ಯಲ್ಲಿ ಶೇ.9ರಷ್ಟು ಕೊಡುಗೆ ನಮ್ಮದಾಗಿದೆ ಎಂದು ಹೇಳಿದರು.

ನಮ್ಮ ಸರ್ಕಾರ ನವ ಕರ್ನಾಟಕದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಅವರ ದಕ್ಷ ಮಾರ್ಗದರ್ಶನದಲ್ಲಿ ನಾವು ಇಂದು ಮುನ್ನಡೆಯುತ್ತಿದ್ದೇವೆ. ಕೋವಿಡ್ ನಿಂದಾದ ಆರ್ಥಿಕ ಸಂಕಷ್ಟವನ್ನು ಹಿಮ್ಮೆಟ್ಟಿದ್ದೇವೆ. ಇಂದು ನಾವು ಆರ್ಥಿಕ ಚೇತರಿಕೆ ಕಾಣುತ್ತಿದ್ದೇವೆ. ಒಂದು ವರ್ಷದಲ್ಲಿ ಏನು ಮಾಡುತ್ತೇವೆ ಎಂದಿದ್ದೆವು ಅದನ್ನು ಇಂದು ಮಾಡಿ ತೋರಿಸಿ ಇಲ್ಲಿ ನಿಂತಿದ್ದೇವೆ ಎಂದರು.

ನಾಲ್ಕು ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡುವ ಕೆಲಸ ಮಾಡಿದ್ದೇವೆ. ಐದು ಲಕ್ಷ ಯುವಕರಿಗೆ ಕೆಲಸ‌ ನೀಡಿದ್ದೇವೆ. ಈಗ ದುಡಿಮೆಯೇ ದೊಡ್ಡಪ್ಪ. ದುಡಿಮೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ. ಕಾರ್ಮಿಕರಿಗೆ 2,500 ಕೋಟಿ ರೂ. ಅನುದಾನದಲ್ಲಿ ವಿವಿಧ ಕಾರ್ಯಕ್ರಮ ರೂಪಿಸಿದ್ದೇವೆ.

ದೀನ ದಲಿತರ ಕಲ್ಯಾಣಕ್ಕಾಗಿ ಹಲವು ಯೋಜನೆ ರೂಪಿಸಿದ್ದೇವೆ. ದೀನ‌ದಲಿತರು, ಬಡವರು ತಮ್ಮ ಜೀವನಮಟ್ಟವನ್ನು ಹೆಚ್ಚಿಸಬೇಕು. ಇದಕ್ಕಾಗಿ ನಾವು ಕೆಲಸ‌ ಮಾಡುತ್ತಿದ್ದೇವೆ. 30 ಲಕ್ಷ ರೈತರಿಗೆ ಸಾಲ ಕೊಡುವ ಕೆಲಸ ಮಾಡಿದ್ದೇವೆ. ರೈತರಿಗೆ ವಿಶೇಷ ಯೋಜನೆಗಳನ್ನು ಕೊಡುತ್ತಿದ್ದೇವೆ. ಅತಿವೃಷ್ಟಿ ವೇಳೆ ರೈತರಿಗೆ, ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುತ್ತಿದ್ದೇವೆ. ಕಡಿಮೆ ಅವಧಿಯಲ್ಲಿ 18 ಲಕ್ಷ ರೈತರಿಗೆ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.

ಆಡಳಿತದಲ್ಲಿ ಸುಧಾರಣೆ ತಂದಿದ್ದೇವೆ: ತಮ್ಮ ಸರ್ಕಾರದ ಸಾಧನೆಗಳು, ಕೈಗೊಳ್ಳುತ್ತಿರುವ ಯೋಜನೆಗಳನ್ನು ವಿವರಿಸಿದ ಸಿಎಂ, ನಾವು ಆಡಳಿತದಲ್ಲಿ ಸುಧಾರಣೆಯನ್ನು ತಂದಿದ್ದೇವೆ. ನಾವು ಮೂರು 'ಇ' ಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಈ ಮೂರು 'ಇ' ಗಳ ಆಧಾರದ ಮೇಲೆ ಆಡಳಿತ ನಡೆಸುತ್ತಿದ್ದೇವೆ. ಅದು ಈಸ್ ಆಫ್‌ ಲಿವಿಂಗ್, ಈಸ್ ಆಫ್ ಅಪ್ ಬ್ರಿಗಿಂಗ್ ಮತ್ತು ಈಸ್ ಆಫ್ ಬಿಜಿನೆಸ್. ಜನ‌ಜೀವನ ಉತ್ತಮವಾಗಬೇಕು. ಮಕ್ಕಳು, ಮಹಿಳೆಯರ ಆರೋಗ್ಯ ಉತ್ತಮ ವಾಗಬೇಕು, ವ್ಯಾಪಾರ ವಹಿವಾಟು ಸುಲಭವಾಗಿ ಆಗಬೇಕು. ಈ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂದರು.

ಆಳವಾದ ಯೋಚನೆ, ದೂರ ದೃಷ್ಟಿಯಿಂದ ರಾಜ್ಯವನ್ನು ಮುನ್ನಡೆಸುತ್ತಿದ್ದೇವೆ. ಪ್ರಧಾನಿ ಮೋದಿ 2025ರ ವೇಳೆಗೆ ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವ ಗುರಿ ಹೊಂದಿದ್ದಾರೆ. ಅದರಂತೆ ನಮ್ಮ ರಾಜ್ಯವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಕತೆ ಮಾಡುವ ಉದ್ದೇಶ ಹೊಂದಿದ್ದೇವೆ. ಇದನ್ನು ಮಾಡೇ ಮಾಡುತ್ತೇವೆ.

ನಮ್ಮಲ್ಲಿ ಸಂಕಲ್ಪ ಇದೆ, ಛಲ‌ ಇದೆ. ದೂರದೃಷ್ಟಿ ಇದೆ. ನಿಮ್ಮೆಲ್ಲರ ಸಹಕಾರ ಇದೆ. ನಿಮ್ಮ ಸಹಕಾರದಲ್ಲಿ ದೊಡ್ಡ ಶಕ್ತಿ ಇದೆ. ಆ ಮೂಲಕ ನವ ಕರ್ನಾಟಕ‌ದ ನಿರ್ಮಾಣ ಗುರಿ ಹೊಂದಿದ್ದೇವೆ. ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲಾಗುತ್ತದೆ. ರಾಜ್ಯದ ಪ್ರತಿ ಹನಿ ನೀರಿನ‌ ಹಕ್ಕನ್ನು ಸಮರ್ಪಕವಾಗಿ ಬಳಸುವ ಸಂಕಲ್ಪ ಹೊಂದಿದ್ದೇವೆ ಎಂದು ಹೇಳಿದರು.

ಅಮೃತ ಘಳಿಗೆಗೆ ಸಾಂಸ್ಕೃತಿಕ ಮೆರಗು : 75ನೇ ಸ್ವಾತಂತ್ರದ ಅಮೃತ ಮಹೋತ್ಸವದ ದಿನಾಚರಣೆಯನ್ನು ಈ ಬಾರಿ ಅದ್ಧೂರಿಯಾಗಿ ನಡೆಸಲಾಯಿತು. ಸುಮಾರು 8,000 ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಕರ್ಷಕ‌ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕೆಎಸ್ ಆರ್ ಪಿ, ಸಿ ಎ ಆರ್ ಪಿಎಫ್, ಬಿಎಸ್ಎಫ್, ಸಿಎಆರ್, ಪೊಲೀಸ್ ಟ್ರಾಫಿಕ್, ಮಹಿಳಾ ಟ್ರಾಪಿಕ್, ಹೋಮ್ ಗಾರ್ಡ್ ಅಗ್ನಿಶಾಮಕ, ಶ್ವಾನದಳ ಸೇರಿದಂತೆ ಮತ್ತು ಬ್ಯಾಂಡ್ ನ ಒಟ್ಟು 36 ತುಕಡಿಗಳಲ್ಲಿ ಸುಮಾರು 1200 ಮಂದಿಯಿಂದ ಆಕರ್ಷಕ ಪಥಸಂಚಲನ ನಡೆಯಿತು. 800 ಮಕ್ಕಳಿಂದ ಅಮೃತ ಮಹೋತ್ಸವದ ಭಾರತ ಸಂಭ್ರಮ ನೃತ್ಯ ಪ್ರದರ್ಶನ ನಡೆಯಿತು. ಮಕ್ಕಳು ಈಸೂರು ಹೋರಾಟ ಹಾಗೂ ಜೈ ಜವಾನ್ ಮತ್ತು ಜೈ ಕಿಸಾನ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.

ಸೇನಾ ಪಡೆ ಸಿಬ್ಬಂದಿಗಳು ಕುದುರೆ ಮೂಲಕ ನವಿರೇಳಿಸುವ ಟೆಂಟ್ ಪೆಗ್ಗಿಂಗ್ ಕಸರತ್ತಿನಿಂದ ವೀಕ್ಷಕರ ಹುಬ್ಬೇರಿಸುವಂತೆ ಮಾಡಿದರು. ಯೋಧರಿಂದ ದೇಹದಾಡ್ಯ ಪ್ರದರ್ಶನ, ಪ್ಯಾರಾ ರೆಜಿಮೆಂಟ್‌ ಟ್ರೇನಿಂಗ್ ಸೆಂಟರ್ ನಿಂದ ಕಾಂಬ್ಯಾಟ್ ಫ್ರೀ ಫಾಲ್ ಪ್ರದರ್ಶನ ನೆರೆದಿದ್ದವರನ್ನು ರೋಂಮಾಂಚನ ಗೊಳಿಸಿತು.

ಇದನ್ನೂ ಓದಿ :ಶಕ್ತಿಧಾಮ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಿವ ರಾಜಕುಮಾರ್ ದಂಪತಿ ಭಾಗಿ

Last Updated : Aug 15, 2022, 2:58 PM IST

ABOUT THE AUTHOR

...view details