ಕರ್ನಾಟಕ

karnataka

ಆಭರಣಕ್ಕಾಗಿ ಹೈದರಾಬಾದ್ ಉದ್ಯಮಿ ಹತ್ಯೆ:  ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

By

Published : Oct 12, 2022, 3:21 PM IST

ಉದ್ಯಮಿ ಮನೋಜ್​ ಕುಮಾರ್ ಗ್ರಂಧಿ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನಗರದ ಸೆಷನ್ಸ್​ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಾಲಯ
ನ್ಯಾಯಾಲಯ

ಬೆಂಗಳೂರು: ಹೈದರಾಬಾದ್ ಉದ್ಯಮಿ ಮನೋಜ್ ಕುಮಾರ್ ಗ್ರಂಧಿ ಅವರನ್ನು ಆಭರಣ ದೋಚುವ ಸಲುವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನಗರದ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ನಿಗೂಢವಾಗಿ ನಡೆದ ಕೊಲೆ ಪ್ರಕರಣದ ವಿಚಾರಣೆ ನಡೆಸಿದ 52ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ
ನ್ಯಾಯಾಧೀಶ ಬಿ. ಜಿ ಪ್ರಮೋದ್, "ಸಾಕ್ಷ್ಯಗಳ ಆಧಾರದಡಿ ಕೊಲೆ ಆರೋಪ ಸಾಬೀತಾಗಿದೆ" ಎಂದು ಇತ್ತೀಚೆಗೆ ಮೂವರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಕುತೂಹಲಕಾರಿಯಾಗಿದ್ದ ಈ ಕೊಲೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಆಗಿ ಹಿರಿಯ ನ್ಯಾಯವಾದಿ ಸಿ ಹೆಚ್ ಹನುಮಂತರಾಯ ಅವರು ಮಂಡಿಸಿದ್ದ ವಾದವನ್ನು ನ್ಯಾಯಾಲಯ ಪರಿಗಣಿಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಹತ್ತು ವರ್ಷಗಳ ಹಿಂದೆ 2012 ರ ಫೆಬ್ರವರಿ 6 ರಂದು ಮನೋಜ್ ಕುಮಾರ್ ಗ್ರಂಧಿ (44) ಅವರು, ಇಂಡಿಗೊ ವಿಮಾನದಲ್ಲಿ ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದರು. ಕಾರ್ ಝೋನ್ ಕಂಪನಿಗೆ ಸೇರಿದ ಕಾರೊಂದನ್ನು ಬಾಡಿಗೆಗೆ ಪಡೆದಿದ್ದ ಅವರು ಪ್ರಕರಣದ ಒಂದನೇ ಆರೋಪಿ ರವಿಕುಮಾರ್ ಜೊತೆ ನಗರದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಮನೋಜ್ ಕುಮಾರ್ ತಮ್ಮ ಬ್ಯಾಗ್​ನಲ್ಲಿ ಇರಿಸಿಕೊಂಡಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ರವಿಕುಮಾರ್ ನೋಡಿದ್ದ. 2ನೇ ಆರೋಪಿ ಕೃಷ್ಣೇಗೌಡ ಮತ್ತು 3ನೇ ಆರೋಪಿ ಶಿವಲಿಂಗಯ್ಯ ಜೊತೆ ಸೇರಿ, ಮನೋಜ್ ಕುಮಾರ್ ಅವರನ್ನು ಕೊಂದು ಅವರಿಗೆ ಸೇರಿದ ಆಭರಣಗಳನ್ನು ದೋಚುವ ಸಂಚು ರೂಪಿಸಿದ್ದ.

ಮನೋಜ್ ಅವರನ್ನು ಸುತ್ತಾಡಿಸುತ್ತಿದ್ದ ವೇಳೆ ರವಿಕುಮಾರ್, "ಕಾರ್ ಗೇರ್ ಬೀಳುತ್ತಿಲ್ಲ" ಎಂದು ಗಾಡಿ ನಿಲ್ಲಿಸಿದ್ದ. ಈ ವೇಳೆ, ಮೊದಲೇ ರೂಪಿಸಿದ್ದ ಸಂಚಿನಂತೆ 2 ಮತ್ತು 3ನೇ ಆರೋಪಿಗಳು 2012ರ ಫೆಬ್ರುವರಿ 7ರಂದು ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಬಳಿ ನಿಂತಿದ್ದ ಕಾರಿನ ಬಳಿ ಬಂದು ಮನೋಜ್ ಕುಮಾರ್​ಗೆ ಚಾಕು ತೋರಿಸಿ, ಹೆದರಿಸಿ, ಕಾರಿನ ಸೀಟಿನ ಕೆಳಗೆ ಕೂರಿಸಿ, ಬಾಯಿಗೆ ಬಟ್ಟೆ ತುರುಕಿ, ಕತ್ತಿಗೆ ನೈಲಾನ್ ಹಗ್ಗ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ನಂತರ ಶವವನ್ನು ಚಾರ್ಮಾಡಿ ಘಾಟ್​ನಲ್ಲಿ ಬಿಸಾಡಿ, ಮೃತರ ಬಟ್ಟೆ ಮತ್ತು ಅವರೊಟ್ಟಿಗೆ ಇದ್ದ ಪುಸ್ತಕಗಳನ್ನು ಸುಟ್ಟು ಹಾಕಿ, ಕದ್ದ ಆಭರಣಗಳನ್ನು ಬಚ್ಚಿಟ್ಟಿದ್ದರು. ಈ ಸಂಬಂಧ ಮನೋಜ್ ಕುಮಾರ್ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ನಡೆಸಿದ್ದ ಶೇಷಾದ್ರಿಪುರಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ₹ 2 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡು, ಕೋರ್ಟ್​ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಓದಿ:ಎಫ್‌ಐಆರ್ ದಾಖಲಾದ 24 ಗಂಟೆಯಲ್ಲಿ ವೆಬ್​ಸೈಟ್​ನಲ್ಲಿ​ ಪ್ರಕಟಿಸುವಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ

ABOUT THE AUTHOR

...view details