ಕರ್ನಾಟಕ

karnataka

ತರಕಾರಿ, ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್: ಹೋಟೆಲ್ ತಿಂಡಿ ದರ ಹೆಚ್ಚಳಕ್ಕೆ ನಿರ್ಧಾರ

By

Published : Jul 23, 2023, 8:13 AM IST

ತರಕಾರಿ, ಹಾಲು ದರ ಏರಿಕೆಯ ನಂತರ ಹೋಟೆಲ್​ ತಿಂಡಿ-ತಿನಿಸುಗಳ ಬೆಲೆಯಲ್ಲಿ ಶೇ. 10ರಷ್ಟು ಹೆಚ್ಚಿಸಲು ಹೋಟೆಲ್​ ಮಾಲೀಕರು ನಿರ್ಧರಿಸಿದ್ದಾರೆ. ಹೋಟೆಲ್ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ಹೋಟೆಲ್ ದರ ಏರಿಕೆ hotel bill rise
ಹೋಟೆಲ್ ದರ ಏರಿಕೆ hotel bill rise

ಬೆಂಗಳೂರು: ತರಕಾರಿ ದರ ಮತ್ತು ಹಾಲಿನ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್​ಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಕೂಡ ಹೆಚ್ಚಾಗಲಿದೆ. ಈ ಮೂಲಕ ಹೋಟೆಲ್​ ನೆಚ್ಚಿಕೊಂಡಿರುವ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.

ವಿದ್ಯುತ್ ಶುಲ್ಕ, ತರಕಾರಿ, ಬೇಳೆಕಾಳುಗಳ ದರ ಏರಿಕೆ ಬಿಸಿಯ ಮಧ್ಯೆ ಇದೀಗ ಹಾಲು ಬೆಲೆ ಹೆಚ್ಚಾಗಿರುವುದರಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿತ್ತು. ಆರ್ಥಿಕ ನಷ್ಟದಿಂದ ಹೊರಬರಲು ಶೇ.10ರಷ್ಟು ದರ ಏರಿಸಲು ಹೋಟೆಲ್ ಮಾಲೀಕರು ತೀರ್ಮಾನಿಸಿದ್ದಾರೆ. ಆದರೆ ಕಳೆದ ವಾರದಿಂದ ಬೆಂಗಳೂರಿನ ಹಲವು ಹೋಟೆಲ್‌ಗಳು ತಿನಿಸುಗಳ ಬೆಲೆಯನ್ನು ಈಗಾಗಲೇ ಏರಿಸಿವೆ.

ಜನಸಾಮಾನ್ಯರಿಗೆ ಬರೆ: ಬೆಲೆ ಏರಿಕೆ ಒತ್ತಡ ಎದುರಿಸುತ್ತಿರುವ ಹೋಟೆಲ್ ಉದ್ಯಮ ತನ್ನ ಮೇಲಿನ ಆರ್ಥಿಕ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಮುಂದಾಗಿದೆ. ಇದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಲಿದೆ. ಕಳೆದ ವರ್ಷ ಸಿಲಿಂಡರ್‌ಗೆ ನೀಡುತ್ತಿದ್ದ ರಿಯಾಯಿತಿ ರದ್ದುಗೊಳಿಸಲಾಗಿದೆ. ಕಳೆದ ಕೆಲವು ತಿಂಗಳಿನಿಂದ ತೊಗರಿ, ಉದ್ದು, ಹೆಸರು ಬೇಳೆ ಸೇರಿದಂತೆ ಬೇಳೆ ಕಾಳುಗಳ ದರ ಏರಿಕೆ ಕಂಡಿದ್ದು ನೇರವಾಗಿ ಹೋಟೆಲ್​​ಗಳ ಆರ್ಥಿಕ ಹೊರೆಗೆ ಕಾರಣವಾಗಿತ್ತು. ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಟೊಮೆಟೊ, ಕ್ಯಾರೆಟ್, ಬೀನ್ಸ್ ಬೆಲೆ ಶತಕ ದಾಟಿರುವುದು ಮತ್ತಷ್ಟು ಹೊಡೆತ ನೀಡಿದೆ. ಅಲ್ಲದೇ ಆಗಸ್ಟ್​ನಿಂದ ಪ್ರತಿ ಲೀಟರ್ ಹಾಲಿಗೆ 3 ರೂಪಾಯಿ ಬೆಲೆ ಹೆಚ್ಚಿಸುತ್ತಿರುವುದು ಉದ್ಯಮಕ್ಕೆ ಪೆಟ್ಟು ಕೊಟ್ಟಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಕೆಲವು ಹೋಟೆಲ್‌ ಮಾಲೀಕರು ಹೇಳಿದ್ದಾರೆ.

"ಹೋಟೆಲ್​ಗಳು ಹಿಂದೆಂದಿಗಿಂತ ಈಗ ಹೆಚ್ಚಿನ ಸಂದಿಗ್ಧತೆ ಎದುರಿಸುತ್ತಿವೆ. ಕಳೆದೊಂದು ತಿಂಗಳಿಂದ ಲಾಭವನ್ನೇ ಕಂಡಿಲ್ಲ. ಕೆಲ ತಿನಿಸುಗಳನ್ನು ಮಾಡಿ ನಷ್ಟ ಅನುಭವಿಸಿದ್ದಾರೆ. ಸಾಮಾನ್ಯ ಜನರು ಬರುವುದೇ ದರ್ಶಿನಿಗಳಿಗೆ. ಆದ್ದರಿಂದ ನಮಗೆ ಏಕಾಏಕಿ ಬೆಲೆ ಹೆಚ್ಚಿಸಲೂ ಆಗುವುದಿಲ್ಲ. ಆದರೆ ಈಗ ಅನಿವಾರ್ಯತೆಗೆ ಸಿಲುಕಿದ್ದೇವೆ" ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಏರಲಿದೆ ಚಹಾ-ಕಾಫಿ ಬೆಲೆ: "ಒಂದೆಡೆ ಏರಿಕೆಯಾಗಿದ್ದ ಕಾಫಿಪುಡಿ ಬೆಲೆ ಇನ್ನೂ ಇಳಿದಿಲ್ಲ. ಇದೀಗ ಹಾಲಿನ ದರವೂ ಹೆಚ್ಚಾಗಿದೆ. ಹೀಗಾಗಿ ಚಹಾ-ಕಾಫಿ ಬೆಲೆ ಕೂಡ ಏರಿಕೆಯಾಗುತ್ತಿದೆ. ಸಾಮಾನ್ಯ ಹೋಟೆಲ್​​ಗಳಲ್ಲಿ 15 ರೂಪಾಯಿ ಇದ್ದ ಚಹಾ-ಕಾಫಿ 20 ರೂವರೆಗೂ ಏರಿಕೆಯಾಗುವ ಸಾಧ್ಯತೆ ಇದೆ. ಶೀಘ್ರವೇ ಈ ಬಗ್ಗೆ ಸಂಘ ಕೂಡ ನಿರ್ಧಾರ ಕೈಗೊಳ್ಳಲಿದೆ" ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ಹಾಲು ದರ ಏರಿಕೆ, ಬೇಕರಿ ತಿನಿಸುಗಳು ಮತ್ತಷ್ಟು ದುಬಾರಿ:ಹೋಟೆಲ್ ಉತ್ಪನ್ನಗಳ ಜೊತೆಗೆ ಬೇಕರಿ ಖಾದ್ಯಗಳ ಬೆಲೆಯೂ ಹೆಚ್ಚಾಗುತ್ತಿದೆ. ಕೇಕ್, ಪೇಡಾ, ಖೋವಾ, ಬ್ರೆಡ್, ಬನ್ ಸೇರಿದಂತೆ ಸಿಹಿ ತಿನಿಸುಗಳ ಬೆಲೆಯೂ ಹೆಚ್ಚಾಗಲಿದೆ. ಕಳೆದ ಆರು ತಿಂಗಳ ಹಿಂದೆ ಏರಿಕೆಯಾಗಿದ್ದ ಮೈದಾ ಹಿಟ್ಟು ಬೆಲೆ ಇಳಿದಿಲ್ಲ. ನಾವು ತಯಾರಿಸುವ ಎಲ್ಲ ಖಾದ್ಯಗಳಿಗೂ ಹಾಲು ಅತ್ಯವಶ್ಯ. ಹೀಗಾಗಿ ಬೇಕರಿ ತಿನಿಸುಗಳ ಬೆಲೆ ಏರಿಸಬೇಕಾಗುತ್ತದೆ ಎಂದು ಬೇಕರಿ ವರ್ತಕರು ತಿಳಿಸಿದ್ದಾರೆ. ಇದರಿಂದ ಬೇಕರಿ ತಿನಿಸುಗಳ ಬೆಲೆ ಕೂಡ ಶೀಘ್ರದಲ್ಲೇ ಏರಲಿದೆ.

ಇದನ್ನೂ ಓದಿ: ಗ್ರಾಹಕರಿಗೆ ಶಾಕ್​... Milk Price Hike: ಆಗಸ್ಟ್ 1ರಿಂದ ಪ್ರತಿ ಲೀಟರ್ ನಂದಿನಿ ಹಾಲಿನ ದರ 3 ರೂ. ಹೆಚ್ಚಳ

ABOUT THE AUTHOR

...view details